ನವೆಂಬರ್ 11, 2006ರ ರಾತ್ರಿ ಸುಮಾರು 9.30ಕ್ಕೆ ಮುಂಬೈನ ಪೊಲೀಸ್ ಇನ್ಸ್​ಪೆಕ್ಟರ್ ಪ್ರದೀಪ್ ಸೂರ್ಯವಂಶಿ ವೆಸೋವಾ ಪೊಲೀಸ್ ಠಾಣೆಗೆ ಹೋಗಿ ಈ ಕೆಳಕಂಡ ದೂರನ್ನು ನೀಡಿದರು: ‘‘ಕುಖ್ಯಾತ ಅಂಡರ್​ವರ್ಲ್ಡ್ ಕ್ರಿಮಿನಲ್ ರಾಮನಾರಾಯಣ್ ಅಲಿಯಾಸ್ ಲಖನ್ ಭಯ್ಯಾ ‘ನಾನಾ ನಾನಿ ಉದ್ಯಾನ’ಕ್ಕೆ ಈ ಸಂಜೆ ಬರುತ್ತಾನೆಂದು ನನ್ನ ಮಾಹಿತಿದಾರರಿಂದ ಬಂದ ಮಾಹಿತಿಯನ್ನು ನಾನು ನನ್ನ ಹಿರಿಯ ಅಧಿಕಾರಿಗಳಿಗೆ ತಿಳಿಸಿದೆ. ಅವರ ಸೂಚನೆಯ ಮೇರೆಗೆ ನಾನು ನನ್ನ ತಂಡವನ್ನು ಕರೆಸಿಕೊಂಡೆ. ತಂಡದ ಸದಸ್ಯರಿಗೆ ರಾಮನಾರಾಯಣ್​ನನ್ನು ಬಂಧಿಸಲು ನಾವು ಹೋಗುತ್ತಿರುವುದಾಗಿ ತಿಳಿಸಿದೆ. ನಂತರ ನಾವೆಲ್ಲರೂ ನಮ್ಮ ವಾಹನಗಳಲ್ಲಿ ಗುಪ್ತ ಮಾಹಿತಿದಾರನ ಜತೆ ಇಂದು ರಾತ್ರಿ ಸುಮಾರು 7.10ಕ್ಕೆ ನಾನಾ ನಾನಿ ಪಾರ್ಕ್ ತಲುಪಿದೆವು. ನಾವು ಎರಡು ಗುಂಪುಗಳನ್ನಾಗಿ ಮಾಡಿಕೊಂಡು ಗಿಡ ಮರಗಳ ಹಿಂದೆ ಅಡಗಿಕೊಂಡೆವು. ರಾತ್ರಿ 8 ಗಂಟೆ 10 ನಿಮಿಷಕ್ಕೆ ವೆಸೋವಾ ಕಡೆಯಿಂದ ಒಂದು ಆಟೋರಿಕ್ಷಾ ಬಂದು ರಸ್ತೆ ಪಕ್ಕದ ಒಂದು ದೀಪದ ಕಂಬದ ಹತ್ತಿರ ನಿಂತಿತು. ಅದರಿಂದ ಒಬ್ಬ ವ್ಯಕ್ತಿ ಕೆಳಗಿಳಿದು ಅಲ್ಲಿಯೇ ಓಡಾಡುತ್ತಿದ್ದ. ನಮ್ಮೊಡನೆ ಇದ್ದ ಮಾಹಿತಿದಾರ ಅವನನ್ನು ಲಖನ್ ಭಯ್ಯಾ ಎಂದು ಗುರುತಿಸಿದ. ಕೂಡಲೇ ನಾನು ನನ್ನ ಜತೆ ಇದ್ದ ಅಧಿಕಾರಿಗಳಿಗೆ ಸಾವಧಾನವಾಗಿ ಅವನತ್ತ ಹೋಗಿ ಅವನನ್ನು ಬಂಧಿಸಬೇಕೆಂದು ಆದೇಶಿಸಿದೆ. ಅಂತೆಯೇ ನಾವು ಮೆಲ್ಲಮೆಲ್ಲನೆ ರಾಮನಾರಾಯಣ್​ನ ಸಮೀಪ ಹೋದಾಗ ಆತ ತನ್ನ ಜೇಬಿನಲ್ಲಿದ್ದ ಪಿಸ್ತೂಲನ್ನು ಹೊರಗೆ ತೆಗೆದು ನನ್ನತ್ತ ಗುರಿ ಮಾಡಿದ. ‘ನಾವೆಲ್ಲರೂ ಪೊಲೀಸರು, ನಿನ್ನನ್ನು ಸುತ್ತುವರೆದಿದ್ದೇವೆ, ನೀನು ಶರಣಾಗು, ನಮ್ಮ ಮೇಲೆ ಗುಂಡು ಹಾರಿಸಬೇಡ’ ಎಂದು ನಾನು ಅವನಿಗೆ ಎಚ್ಚರಿಕೆಯಿತ್ತೆ. ಆದರೆ ರಾಮನಾರಾಯಣ್ ನನ್ನ ಮಾತನ್ನು ಲೆಕ್ಕಿಸದೆ ನನ್ನತ್ತಲೇ ಒಂದು ಸುತ್ತು ಗುಂಡು ಹಾರಿಸಿದ. ನಾನು ಕೂದಲೆಳೆ ಅಂತರದಲ್ಲಿ ಗುಂಡೇಟಿನಿಂದ ತಪ್ಪಿಸಿಕೊಂಡೆ. ನನ್ನ ಮೇಲೆ ರಾಮನಾರಾಯಣ್ ಗುಂಡು ಹಾರಿಸಿದ್ದನ್ನು ಕಂಡ ನನ್ನ ಸಹೋದ್ಯೋಗಿ ಅಡಿಷನಲ್ ಪೊಲೀಸ್ ಇನ್ಸ್​ಪೆಕ್ಟರ್ ಸರ್ವಾಂಕರ್ ಅವನಿಗೆ ಗುಂಡು ಹಾರಿಸದಂತೆ ಎಚ್ಚರಿಸುತ್ತಿರುವಾಗಲೇ ನಮ್ಮ ತಂಡದ ಇತರ ಪೊಲೀಸರು ರಾಮನಾರಾಯಣನತ್ತ ಗುಂಡು ಹಾರಿಸತೊಡಗಿದರು. ಒಟ್ಟು ಐದು ಗುಂಡುಗಳು ಅವನಿಗೆ ತಗುಲಿ ಆತ ಕೆಳಕ್ಕೆ ಬಿದ್ದ. ಕೂಡಲೇ ನಾವು ಅವನ ಬಳಿಗೆ ಧಾವಿಸಿದೆವು. ಅವನಿಗೆ ಜೀವವಿದ್ದ ಕಾರಣ ನಾನು ಈ ಘಟನೆಯ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ಕೊಟ್ಟು ಒಂದು ವೈರ್​ಲೆಸ್ ವಾಹನವನ್ನು ಕೂಡಲೇ ಸ್ಥಳಕ್ಕೆ ಕಳುಹಿಸಲು ಕೋರಿದೆ. ಕೆಲವೇ ನಿಮಿಷಗಳ ನಂತರ ಬಂದ ವಾಹನದಲ್ಲಿ ನಾವು ರಾಮನಾರಾಯಣನನ್ನು ಹತ್ತಿರದಲ್ಲಿದ್ದ ಕೂಪರ್ ಆಸ್ಪತ್ರೆಗೆ ಕರೆತಂದೆವು. ಅವನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವನೆಂದು ತಿಳಿಸಿದರು. ನನ್ನನ್ನು ಕೊಲೆ ಮಾಡುವ ಪ್ರಯತ್ನ ಮಾಡಿರುವ ಆರೋಪದ ಮೇರೆಗೆ ರಾಮನಾರಾಯಣ್ ವಿರುದ್ಧ ಪ್ರಕರಣವೊಂದನ್ನು ದಾಖಲಿಸಲು ಕೋರುತ್ತೇನೆ. ರಾಮನಾರಾಯಣ್ ನಮ್ಮ ಮೇಲೆ ಗುಂಡು ಹಾರಿಸಿದ್ದ ಜಪಾನ್ ಮೇಕ್ ರಿವಾಲ್ವರ್ ಮತ್ತು ಗುಂಡು ಕೃತ್ಯ ನಡೆದ ಸ್ಥಳದಲ್ಲಿಯೇ ಬಿದ್ದಿವೆ.’
ಈ ಮಾಹಿತಿಯ ಮೇರೆಗೆ ಅದೇ ರಾತ್ರಿ 9.50ಕ್ಕೆ ವೆಸೋವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಹಾಗೂ ಕೊಲೆಯ ಪ್ರಯತ್ನದ ಆರೋಪದ ಮೇರೆಗೆ ಮೃತ ರಾಮನಾರಾಯಣ್ ವಿರುದ್ಧ ಪ್ರಥಮ ವರ್ತಮಾನ ವರದಿಯೊಂದು ದಾಖಲಾಯಿತು. ಇಷ್ಟರಲ್ಲಾಗಲೇ ಈ ಎನ್​ಕೌಂಟರ್ ಅನ್ನು ವರದಿ ಮಾಡಿದ ದೃಶ್ಯಮಾಧ್ಯಮಗಳು ಮೃತ ಲಖನ್ ಭಯ್ಯಾ ಕುಖ್ಯಾತ ಡಾನ್ ಛೋಟಾ ರಾಜನ್​ನ ಸಹಚರ ಎಂದು ತಿಳಿಸಿ, ಇತ್ತೀಚಿನ ದಿನಗಳಲ್ಲಿ ಮುಂಬೈ ಪೊಲೀಸರು ಕುಖ್ಯಾತ ಹಂತಕರನ್ನು, ರೌಡಿಗಳನ್ನು ಎನ್​ಕೌಂಟರ್​ನಲ್ಲಿ ಕೊಲ್ಲುತ್ತಿರುವುದನ್ನು ಪ್ರಶಂಶಿಸಿದವು. ಮುಂಬೈ ನಗರವನ್ನು ಭೂಗತ ಪಾತಕಿಗಳ ಕಪಿಮುಷ್ಟಿಯಿಂದ ಬಿಡಿಸಲು ಪೊಲೀಸರು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವುದು ಸಾರ್ವಜನಿಕರಿಗೆ ನೆಮ್ಮದಿಯನ್ನು ತರಿಸಿದೆ ಎಂದೂ ಅವು ಹೇಳಿದವು.
***
ಅದೇ ಸಂಜೆ ಸಂಜೆ ಮುಂಬೈನ ವಾಶಿ ಪೊಲೀಸ್ ಠಾಣೆಗೆ ಅರುಣಾ ಭೇಡಾ ಎನ್ನುವ ಮಧ್ಯವಯಸ್ಕ ಮಹಿಳೆ ಹಾಜರಾಗಿ ಕೆಳಕಂಡ ಲಿಖಿತ ದೂರನ್ನು ಪೊಲೀಸರಿಗೆ ನೀಡಿದರು:
‘‘ಇಂದು ಬೆಳಗ್ಗೆ ನನ್ನ ಪತಿ ಅನಿಲ್ ತನ್ನ ಸ್ನೇಹಿತ ರಾಮನಾರಾಯಣ್ ಜತೆ ನಮ್ಮ ಮನೆಯನ್ನು 10.45ಕ್ಕೆ ಬಿಟ್ಟರು. ಮಧ್ಯಾಹ್ನ ಸುಮಾರು 2.30ಕ್ಕೆ ನನ್ನ ಪತಿಯ ಸ್ನೇಹಿತ ಧೀರಜ್ ಮೆಹ್ತಾ ನನ್ನ ಮನೆಗೆ ಬಂದು ಅದೇ ಮಧ್ಯಾಹ್ನ 12.30ರಿಂದ 12.37ರ ವೇಳೆಯಲ್ಲಿ ನನ್ನ ಪತಿ ಮತ್ತು ರಾಮನಾರಾಯಣ್ ಇವರಿಬ್ಬರನ್ನು ಯಾರೋ ಐದಾರು ಜನರು ತಾವು ತಂದಿದ್ದ ಕ್ವಾಲಿಸ್ ವಾಹನದಲ್ಲಿ ಅಪಹರಿಸಿಕೊಂಡು ಹೋದರು ಎಂದು ತಿಳಿಸಿದರು. ನನ್ನ ಪತಿ ಮತ್ತು ಪಾಂಡೇಜಿ (ರಾಮನಾರಾಯಣ್) ಇವರ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಕೆಲವು ನಂಬರ್​ಗಳಿಗೆ ದೂರನ್ನು ಕೂಡಲೇ ಫ್ಯಾಕ್ಸ್ ಮಾಡಲು ನನಗೆ ಹೇಳಿದರು. ಫ್ಯಾಕ್ಸ್ ಮಾಡಲು ಬರುವುದಿಲ್ಲ ಎಂದಾಗ ನನ್ನ ಪತಿಯ ಸ್ನೇಹಿತರೇ ನನ್ನ ಹೆಸರಿನಲ್ಲಿ ಮುಖ್ಯಮಂತ್ರಿಗೆ, ಗೃಹಮಂತ್ರಿಗೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಫ್ಯಾಕ್ಸ್ ಸಂದೇಶಗಳನ್ನು ಕಳಿಸಿದರು. ನನ್ನ ಪತಿ ಮನೆಗೆ ಬರುವರೆಂದು ನಾನು ಸಂಜೆಯವರೆಗೆ ಕಾದು ನೋಡಿದೆ. ಅವರು ಬರಲಿಲ್ಲ. ಆನಂತರ ರಾಮನಾರಾಯಣ್​ರ ಸೋದರ ಹಾಗೂ ವಕೀಲ ರಾಮ್್ರಸಾದ್ ನನಗೆ ಫೋನ್ ಮಾಡಿ ಅಪಹರಣದ ಬಗ್ಗೆ ಪೊಲೀಸರಿಗೆ ದೂರು ಕೊಡಲು ತಿಳಿಸಿದರು. ಆ ಮೇರೆಗೆ ನಾನು ನಿಮಗೆ ದೂರನ್ನು ನೀಡುತ್ತಿರುವೆ.’ ವಾಶಿ ಪೊಲೀಸ್ ಠಾಣೆಯಲ್ಲಿ ಅರುಣಾ ನೀಡಿದ ದೂರನ್ನು ಅಪಹರಣವೆಂದು ದಾಖಲಿಸದೆ ‘ವ್ಯಕ್ತಿ ಕಾಣೆಯಾಗಿದ್ದಾನೆ’ ಎಂದೇ ದಾಖಲಿಸಲಾಯಿತು.
***
ನವೆಂಬರ್ 11ರ ಪೂರ್ವಾಹ್ನವೇ ತಮ್ಮ ಸೋದರ ರಾಮನಾರಾಯಣ್​ನನ್ನು ಆತನ ಸ್ನೇಹಿತ ಅನಿಲ್ ಭೇಡಾ ಎನ್ನುವವನೊಡನೆ ಯಾರೋ ಐದಾರು ಮಂದಿ ಕ್ವಾಲಿಸ್ ವಾಹನದಲ್ಲಿ ಎತ್ತಿಹಾಕಿಕೊಂಡು ಹೋದರೆಂದು ಸುದ್ದಿ ತಿಳಿದ ವಕೀಲ ರಾಮಪ್ರಸಾದ್ ಗುಪ್ತಾ ಈ ಮಾಹಿತಿಯನ್ನು ತನ್ನ ಇನ್ನೊಬ್ಬ ಸೋದರ ಶ್ಯಾಮಸುಂದರ್ ಗುಪ್ತಾಗೆ ತಿಳಿಸಿದರು. ಆನಂತರ ಅವರಿಬ್ಬರೂ ತಮ್ಮ ಸೋದರನಿಗಾಗಿ ಅಲ್ಲಲ್ಲಿ ಹುಡುಕಾಡಿ ಆತ ಸಿಗದಿದ್ದಾಗ ಕಿಡ್ನಾಪಿಂಗ್ ಆಗಿರುವ ಬಗ್ಗೆ ಮಧ್ಯಾಹ್ನ 4 ಗಂಟೆಗೆ ಮುಂಬೈ, ನವಿ ಮುಂಬೈ ಹಾಗೂ ಠಾಣೆ ನಗರಗಳ ಪೊಲೀಸ್ ಕಮಿಷನರ್​ಗಳಿಗೆ ಟೆಲಿಗ್ರಾಂ ಮೂಲಕ ದೂರನ್ನು ಸಲ್ಲಿಸಿದರು. ಮುಂದೆ ಅವರಿಬ್ಬರೂ ತಮ್ಮ ಸೋದರನ ಬಗ್ಗೆ ತಮಗೆ ತಿಳಿದ ಎಲ್ಲ ಪೊಲೀಸ್ ಅಧಿಕಾರಿಗಳನ್ನೂ ವಿಚಾರಿಸಿದರು. ಯಾವುದೇ ಮಾಹಿತಿಯೂ ಬರಲಿಲ್ಲ.
ರಾತ್ರಿ ಸುಮಾರು 8 ಗಂಟೆಗೆ ವಕೀಲ ರಾಮ್್ರಸಾದ್ ನವಿ ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಬಂದು ಅಲ್ಲಿನ ಕ್ರೈಂ ಬ್ರಾಂಚ್​ನಲ್ಲಿ ತಮ್ಮ ಸೋದರನ ಬಗ್ಗೆ ವಿಚಾರಣೆ ಮಾಡತೊಡಗಿದರು. ಅವರು ಅಲ್ಲಿದ್ದಾಗಲೇ ಅವರ ಸೋದರ ಶ್ಯಾಮಸುಂದರ್ ಗುಪ್ತಾ ಅವರಿಗೆ ಫೋನ್ ಮಾಡಿ ತಮ್ಮ ಸೋದರ ರಾಮ್ಾರಾಯಣ್​ನನ್ನು ಪೊಲೀಸ್ ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿದೆಯೆಂದು ವಿವಿಧ ಟಿ.ವಿ. ಛಾನೆಲ್​ಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತಿದೆಯೆಂದು ತಿಳಿಸಿದರು. ಕೂಡಲೇ ರಾಮ್್ರಸಾದ್ ತಮ್ಮ ಇಬ್ಬರು ವಕೀಲ ಮಿತ್ರರನ್ನು ತಮ್ಮೊಡನೆ ಕರೆದುಕೊಂಡು ಅಲ್ಲಿಂದಲೇ ವೆಸೋವಾ ಪೊಲೀಸ್ ಠಾಣೆಗೆ ಧಾವಿಸಿದರು. ಆಗ ಗಂಟೆ ರಾತ್ರಿ ಹತ್ತಾಗಿತ್ತು. ಅಲ್ಲಿಂದ ಅವರೆಲ್ಲರೂ ನಾನಾ ನಾನಿ ರ್ಪಾಗೆ ಬಂದು ಕೃತ್ಯ ನಡೆದ ಸ್ಥಳವನ್ನು ವೀಕ್ಷಿಸಿದರು. ಅಲ್ಲಿನ ದೃಶ್ಯಗಳನ್ನು ವಿವಿಧ ಕೋನಗಳಿಂದ ತಮ್ಮ ಮೊಬೈಲ್ ಫೋನ್​ಗಳಲ್ಲಿ ವಿಡಿಯೋ ಮಾಡಿಕೊಂಡರು. ಮೃತ ರಾಮನಾರಾಯಣ್​ರ ರಕ್ತ ಬಿದ್ದಿತ್ತೆನ್ನಲಾದ ಜಾಗದಲ್ಲಿ ಪೊಲೀಸರು ಒಂದು ಹಳೆಯ ವೃತ್ತಪತ್ರಿಕೆಯನ್ನಿಟ್ಟು ಅದರ ಮೇಲೆ ಕಲ್ಲೊಂದನ್ನು ಇಟ್ಟಿದ್ದನ್ನು ಕಂಡ ಅವರು ಅದನ್ನೂ ಚಿತ್ರೀಕರಣ ಮಾಡಿಕೊಂಡರು. ಆನಂತರ ಅವರು ಆಸ್ಪತ್ರೆಗೆ ಹೋಗಿ ರಾಮನಾರಾಯಣ್ ಶವವನ್ನು ಕಂಡರು. ಅವರೆಲ್ಲರಿಗೂ ಈ ಸಾವು ಸಂಶಯವನ್ನು ತರಿಸಿತ್ತು.
ಇದಾದ ನಾಲ್ಕು ದಿನಗಳ ನಂತರ, ನವೆಂಬರ್ 15 ರಂದು, ರಾಮಪ್ರಸಾದ್ ಗುಪ್ತಾ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಒಂದು ರಿಟ್ ಅರ್ಜಿಯನ್ನು ಸಲ್ಲಿಸಿ ತನ್ನ ಹಿರಿಯ ಸೋದರನನ್ನು ಪೊಲೀಸರು ಅಪಹರಿಸಿ ಅವನನ್ನು ಕೊಂದು ಆ ಕೊಲೆಯನ್ನು ಎನ್​ಕೌಂಟರ್ ಡೆತ್ ಎಂದು ಹೇಳಿರುವ ಬಗ್ಗೆ ತಮಗೆ ಸಂಶಯವಿದ್ದು ಈ ಪ್ರಕರಣದ ಕುರಿತು ನ್ಯಾಯಾಂಗ ವಿಚಾರಣೆ ನಡೆಸಬೇಕೆಂದು ಕೋರಿದರು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಸುಮಾರು ಒಂದೂವರೆ ವರ್ಷಗಳ ನಂತರ, 2008ರ ಫೆಬ್ರವರಿ 13ರಂದು, ರೈಲ್ವೆ ಮೊಬೈಲ್ ಕೋರ್ಟ್​ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಈ ಬಗ್ಗೆ ತನಿಖೆ ನಡೆಸಿ ತನಗೆ ವರದಿ ಸಲ್ಲಿಸಬೇಕೆಂದು ಆದೇಶಿಸಿತು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿವರವಾದ ತನಿಖೆ ನಡೆಸಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ತಮ್ಮ ವರದಿಯಲ್ಲಿ 2006ರ ನವೆಂಬರ್ 11ರಂದು ನಾನಾ ನಾನಿ ಉದ್ಯಾನವನದಲ್ಲಿ ನಡೆಯಿತೆನ್ನಲಾದ ‘ರಾಮನಾರಾಯಣ್​ನ ಎನ್​ಕೌಂಟರ್ ನಕಲಿ’ ಎಂದು ತಿಳಿಸಿದರು. ತನ್ನ ಸಾವಾದಾಗ ರಾಮ್ ನಾರಾಯಣ್ ಪೊಲೀಸರ ವಶದಲ್ಲಿಯೇ ಇದ್ದನೆಂದೂ, ಆತನನ್ನು ಪೊಲೀಸರು ಅಪಹರಣ ಮಾಡಿದ್ದರೆಂದೂ ಅವರು ಅಭಿಪ್ರಾಯಪಟ್ಟರು. ರಾಮ್ಾರಾಯಣ್​ನ ಸಾವು ನಾನಾ ನಾನಿ ಉದ್ಯಾನದಲ್ಲಿ ಆಗಲೇ ಇಲ್ಲವೆಂದೂ ಅವರು ತಿಳಿಸಿದರು.
ಇದರ ಮೇರೆಗೆ ಮುಂಬೈ ಉಚ್ಚ ನ್ಯಾಯಾಲಯವು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾದಳವನ್ನು 2009ರ ಆಗಸ್ಟ್ 13ರಂದು ರಚಿಸಿತು. ಈ ತನಿಖಾ ದಳದ ಮುಂದೆ ತನ್ನ ದೂರನ್ನು ದಾಖಲಿಸಲು ಅದು ವಕೀಲ ರಾಮಪ್ರಸಾದ್ ಗುಪ್ತ್ತಾರಿಗೆ ಆದೇಶಿಸಿತು. ಆ ದೂರಿನನ್ವಯ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತಿತರರ ವಿರುದ್ಧ ಸಂಬಂಧಿಸಿದ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲು ತನಿಖಾದಳಕ್ಕೆ ಆದೇಶಿಸಿತು. ಈ ತನಿಖಾ ದಳದ ನೇತೃತ್ವವನ್ನು ವಹಿಸಿಕೊಳ್ಳುವಂತೆ ಅಂದಿನ ಮುಂಬೈನ ಡಿಸಿಪಿ ಡಾ. ಕೆ.ಎನ್.ಎಂ.ಪ್ರಸನ್ನ (ಇವರು ಕರ್ನಾಟಕ ಮೂಲದವರು) ಇವರಿಗೆ ಆದೇಶಿಸಿತು. ತಮಗೆ ಬೇಕಾದ ಸದಸ್ಯರನ್ನು ತಮ್ಮ ತಂಡಕ್ಕೆ ನೇಮಿಸಿಕೊಳ್ಳಲು ಪ್ರಸನ್ನ ಅವರಿಗೆ ಸೂಚಿಸಿತು.
(ಮುಂದುವರೆಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ; ಅ.5ಕ್ಕೆ ಮತದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 12 =
Remember me
