ಬೆಂಗಳೂರು: ಕೌಟುಂಬಿಕ ಕಲಹದಿಂದ 2ನೇ ಪತಿ ಜತೆ ಸೇರಿ ಮೊದಲ ಪತಿಯ ಹತ್ಯೆಗೆ ಯತ್ನಿಸಿದ ಪತ್ನಿ ಹಾಗೂ ಆಕೆಯ ಸಹಚರರು ಸೇರಿದಂತೆ ಮೂವರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ದೇವರಜೀವನಹಳ್ಳಿಯ ರೌಡಿ ಸಜ್ಜಾದ್ (32), ಲಕ್ಷ್ಮೀನಗರದ ಶಾಜೀಯಾ ಅಲಿಯಾಸ್ ಅಲ್ಮಾಸ್ (22) ಹಾಗೂ ಫಹಿಮಾ (27) ಬಂಧಿತರು. ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಮೊದಲನೇ ಪತಿ ಹಿದಾಯತ್ ಮೇಲೆ ಶಾಜೀಯಾ, ತನ್ನ 2ನೇ ಪತಿ ಮೆಹೆರಾಜ್ ಮತ್ತು ಇನ್ನೊಬ್ಬಳ ಮೂಲಕ ಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ದರೋಡೆ ಕೃತ್ಯಗಳು ಬೆಳಕಿಗೆ
ಈ ಕೊಲೆ ಯತ್ನ ಪ್ರಕರಣದ ವಿಚಾರಣೆ ವೇಳೆ ರೌಡಿ ಸಜ್ಜಾದ್, ತನ್ನ ಸಹಚರರ ಜತೆ ನಗರದ ವಿವಿಧೆಡೆ ನಡೆಸಿದ್ದ ದರೋಡೆ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಜನರಿಗೆ ಬೆದರಿಸಿ ಆರೋಪಿಗಳು ಸುಲಿಗೆ ಮಾಡಿದ್ದರು. ಈ ಕೃತ್ಯಗಳ ಒಡವೆಗಳನ್ನು ಫಾಹಿಮಾ ವಿಲೇವಾರಿ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನಾಭರಣ ಜಪ್ತಿಯಾಗಿದೆ. ಕೃತ್ಯ ಎಸಗಿ ಪರಾರಿಯಾಗಿರುವ ಶಾಜೀಯಾ 2ನೇ ಪತಿ ಮೆಹೆರಾಜ್ ಖಾನ್ ಸೇರಿ ಮತ್ತಿರರ ಪತ್ತೆಗೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಹಿದಾಯತ್ ಜತೆ ವಿವಾಹವಾಗಿದ್ದ ಶಾಜೀಯಾ, ಲಕ್ಷ್ಮೀನಗರದಲ್ಲಿ ನೆಲೆಸಿದ್ದಳು. ಸಜ್ಜಾದ್, ಹಿದಾಯತ್ ಹಾಗೂ ಮೆಹೆರಾಜ್ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಅಪರಾಧ ಪ್ರಕರಣದಲ್ಲಿ ಹಿದಾಯತ್ ಬಂಧಿತನಾಗಿ ಕೇಂದ್ರ ಕಾರಾಗೃಹ ಸೇರಿದ್ದ. ಆಗ ಪತಿಯ ಭೇಟಿಗೆ ತೆರಳುತ್ತಿದ್ದ ಶಾಜೀಯಾಳಿಗೆ ಅದೇ ವೇಳೆ ಜೈಲಿನಲ್ಲಿದ್ದ ಮೆಹೆರಾಜ್ ಪರಿಚಯವಾಯಿತು. ಜಾಮೀನು ಪಡೆದು ಮೆಹರಾಜ್ ಹೊರಬಂದು ಶಾಜೀಯಾ ಜತೆಗೆ 2ನೇ ಮದುವೆ ಮಾಡಿಕೊಂಡಿದ್ದ. ಈ ವಿಚಾರ ತಿಳಿದು ಜೈಲಿನಲ್ಲಿದ್ದ ಹಿದಾಯತ್ ಆಕ್ರೋಶಗೊಂಡಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಹಿದಾಯತ್, ಶಾಜೀಯಾ ಮೇಲೆ ಗಲಾಟೆ ಮಾಡಿದ್ದ. ಇದರಿಂದ ಕೆರಳಿದ ಶಾಜೀಯಾ, ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಳು. ಮೆಹೆರಾಜ್ ಸಹ ಸಿಟ್ಟಿಗೆದ್ದು ತನ್ನ ಸ್ನೇಹಿತ ರೌಡಿ ಸಜ್ಜಾದ್​ವುತ್ತು ಆತನ ಸಹಚರರ ಜತೆ ಸೇರಿ ಹಿದಾಯತ್ ಕೊಲೆಗೆ ಸಂಚು ಮಾಡಿದ್ದ.
ಇದನ್ನೂ ಓದಿ:ಗುಜರಾತ್​ನಲ್ಲಿ ರೆಸಾರ್ಟ್​ ಪಾಲಿಟಿಕ್ಸ್ ಶುರು: ಗರಿಗೆದರಿದೆ ರಾಜ್ಯಸಭಾ ಚುನಾವಣಾ ರಾಜಕೀಯ
ಮೇ 26ರಂದು ಲಕ್ಷ್ಮೀನಗರದಲ್ಲಿನ ಹಿದಾಯತ್ ಮನೆಗೆ ನುಗ್ಗಿ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹಿದಾಯತ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಣಾಪಾಯದಿಂದ ಪಾರಾದ ಹಿದಾಯತ್, ತನ್ನ ಕೊಲೆಗೆ ಪತ್ನಿ ಕೈವಾಡದ ಶಂಕೆ ವ್ಯಕ್ತಪಡಿಸಿದ್ದ. ಈ ಸುಳಿವಿನ ಮೇಲೆ ಪೊಲೀಸರು, ಶಾಜೀಯಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾಳೆ.
ಕರೆ ಮಾಡಿ ಮನೆಗೆ ಕರೆಸಿದ್ದ ಮಡದಿ: ಮೇ 26ರ ಸಂಜೆ ಮನೆಯಲ್ಲಿ ಹಿದಾಯತ್ ಒಬ್ಬನೇ ಇದ್ದಾಗ ಶಾಜೀಯಾ, ಮೆಹೆರಾಜ್​ಗೆ ಕರೆ ಮಾಡಿ ‘ಮನೆಯಲ್ಲಿ ಒಬ್ಬನೇ ಇದ್ದಾನೆ. ಏರಿಯಾದಲ್ಲಿಯೂ ಜನ ಕಡಿಮೆ ಇದ್ದಾರೆ. ಹತ್ಯೆ ಮಾಡುವುದಾದರೇ ಈಗಲೇ ಬಂದು ಮಾಡಿ’ ಎಂದಿದ್ದಳು. ಆಗ ಆರೋಪಿಗಳು ಮನೆಗೆ ನುಗ್ಗಿದಾಗ ಮಲಗುವ ಕೊಠಡಿಯ ಬಾಗಿಲು ಲಾಕ್ ಮಾಡಿಕೊಂಡು ಶಾಜೀಯಾ ಒಳಗೆ ಸೇರಿದ್ದಳು. ಹಾಲ್​ನಲ್ಲಿ ಕುಳಿತಿದ್ದ ಹಿದಾಯತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಓಡಿದ ಮೇಲೆ ಹೊರಬಂದು, ‘ಹಳೇ ದ್ವೇಷಕ್ಕೆ ಹಲ್ಲೆ ನಡೆಸಿದ್ದಾರೆ. ಯಾರಾದರೂ ಬಂದು ಕಾಪಾಡಿ’ ಎಂದು ಶಾಜೀಯಾ ಕಿರುಚಿಕೊಂಡಿದ್ದಳು. ಸ್ಥಳೀಯ ಜನರು ಬಂದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶಾಜೀಯಾ ಪೊಲೀಸರಿಗೆ ದೂರು ಕೊಟ್ಟಿದ್ದಳು.
ಮೇಲ್ಸೇತುವೆಯಿಂದ ಜಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
