ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ಪ್ರಕರಣದಿಂದ ರಾಜ್ಯಪಾಲರ ನಡೆ ಹಾಗೂ ಅವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದಂತಾಗಿದೆ. ಈ ಪ್ರಕರಣದ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್​ ಖರ್ಗೆ, ರಾಜ್ಯಪಾಲರ ಕಾರ್ಯಭಾರಗಳ ಮೇಲೆ ಅನೇಕ ಬಾರಿ ಚರ್ಚೆಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆರ್ಟಿಕಲ್ 163ರ ಅಡಿಯಲ್ಲಿ ರಾಜ್ಯಪಾಲರು ಮಂತ್ರಿಗಳ ಕೌನ್ಸಿಲ್ ಮೂಲಕ ಸಲಹೆಗಳನ್ನು ಪಡೆಯಬೇಕು ಎಂದು ಹೇಳಿದ್ದಾರೆ. ವಿ.ಜಿ.ಖೇರ್ ಅವರು ಬಾಂಬೆಯ ಮೊದಲ ರಾಜ್ಯಪಾಲರು. ರಾಜ್ಯಪಾಲರು ತಮಗೆ ಇರುವ ಅಲ್ಪಶಕ್ತಿಯಲ್ಲಿ ಹೆಚ್ಚು ಕೆಲಸ ಮಾಡಬಹುದು. ಅಲ್ಲದೆ, ದುರಾಡಳಿತ ಮಾಡಬೇಕು ಎಂದು ಸಂವಿಧಾನವನ್ನು ತಿರುಚಿ ಕೆಲಸ ಮಾಡಲು ತೊಡಗಿದರೆ ಅದನ್ನು ಕೂಡ ಮಾಡಬಹುದು ಎಂದು ಹೇಳಿದ್ದರು. ಇದೇ ರೀತಿಯ ಘಟನೆ ಕರ್ನಾಟಕದಲ್ಲಿ ನಡೆಯುತ್ತಿದೆ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರಾಡಳಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾವು ಸುಮ್ಮನೆ ರಾಜ್ಯಪಾಲರ ಮೇಲೆ ಆರೋಪವನ್ನು ಮಾಡುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಐಟಿ, ಇಡಿ, ಸಿಬಿಐ ಹಾಗೂ ರಾಜ್ಯಪಾಲರನ್ನು ಬಳಸಿ ತಮ್ಮ ಮಾತು ಕೇಳದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದೆ ಎಂದರು.
2019ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯುವುದಿಲ್ಲ. ಆದರೆ ಅಲ್ಲಿನ ರಾಜ್ಯಪಾಲರು ದೇವೇಂದ್ರ ಫಡ್ನವಿಸ್ ಅವರಿಗೆ ಬೆಳಗಿನ ಜಾವ ಐದು ಗಂಟೆಗೆ ಪ್ರಮಾಣವಚನ ಬೋಧಿಸುತ್ತಾರೆ. ಈ ಸರ್ಕಾರ ಕೇವಲ 80 ಗಂಟೆಗಳಲ್ಲಿ ಬಿದ್ದು ಹೋಗುತ್ತದೆ. ಉದ್ದವ್ ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಅವರನ್ನು ಮೇಲ್ಮನೆಗೆ ಕಳಿಸಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಇದಕ್ಕೆ ರಾಜ್ಯಪಾಲರು ಆರು ತಿಂಗಳ ಕಾಲ ಅನುಮೋದನೆಯನ್ನೇ ನೀಡುವುದಿಲ್ಲ. ಆನಂತರ ಉದ್ದವ್ ಠಾಕ್ರೆ ಅವರು ದೆಹಲಿಗೆ ತೆರಳಿ ರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳ ಗಮನಕ್ಕೆ ತಂದು ಇದು ಅಸಾಂವಿಧಾನಿಕ ನಡೆ ಎಂದಾಗ ಠಾಕ್ರೆ ಅವರಿಗೆ ಅವಕಾಶ ಸಿಗುತ್ತದೆ.
ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರ ರಾಜಕೀಯ ಹಸ್ತಕ್ಷೇಪದಿಂದ ಕಾನೂನು ಸಂಘರ್ಷ ಉಂಟಾಗಿತ್ತು. ಕೇರಳದ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸರ್ಕಾರವು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕರಾಳ ಕಾಯ್ದೆಗಳ ವಿರುದ್ಧ ವಿಶೇಷ ಅಧಿವೇಶನ ನಡೆಸಲು ಅನುಮತಿ ನೀಡಬೇಕೆಂದು ಪತ್ರ ಬರೆಯುತ್ತದೆ. ಆದರೆ ರಾಜ್ಯಪಾಲರು ಅಧಿವೇಶನ ನಡೆಸಲು ಅನುಮತಿಯನ್ನೇ ನೀಡುವುದಿಲ್ಲ.
2018ರಲ್ಲಿ ಕರ್ನಾಟಕದಲ್ಲಿ ರಾಜ್ಯಪಾಲರಾಗಿದ್ದ ವಾಜುಬಾಯಿ ವಾಲಾ ಅವರು ಯಡಿಯೂರಪ್ಪನವರಿಗೆ ಬಹುಮತ ಇಲ್ಲದಿದ್ದರೂ ಸಹ ಪ್ರಮಾಣ ವಚನ ಬೋಧಿಸಿ 15 ದಿನಗಳ ಒಳಗೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಿದ್ದರು. ಆಗ ಕಾಂಗ್ರೆಸ್ ಪಕ್ಷವು ಸುಪ್ರೀಂಕೋರ್ಟ್​ಗೆ ಹೋದಾಗ ನ್ಯಾಯಾಲಯವು 15 ದಿನ ಅಲ್ಲ ಕೇವಲ ಮೂರು ದಿನದಲ್ಲಿ ಸಾಬೀತು ಪಡಿಸುವಂತೆ ಹೇಳಿತು. ಆನಂತರ ಸರ್ಕಾರ ಬಿದ್ದುಹೋಯಿತು. ನವೆಂಬರ್ 2023ರಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿನ ರಾಜಭವನ ಸೂಕ್ಷ್ಮವಾಗಿ ಪರಿಶೀಲಿಸಿತ್ತು. ಚುನಾಯಿತ ಸರ್ಕಾರ ಚರ್ಚೆ ನಡೆಸಿ ಅನುಮೋದನೆ ಮಾಡಿದ್ದ 10 ಬಿಲ್​ಗಳನ್ನು ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿದ್ದರು.
ಜನವರಿ 2023ರಲ್ಲಿ ಇದೆ ತಮಿಳುನಾಡಿನ ರಾಜ್ಯಪಾಲರು ರಾಜ್ಯಪಾಲರ ಭಾಷಣವನ್ನೇ ಧಿಕ್ಕರಿಸಿ ಹೊರ ನಡೆದಿದ್ದರು. ದೆಹಲಿಯಲ್ಲಿ ಕಳೆದ 9 ವರ್ಷಗಳಿಂದ ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಒಂದೊಂದು ಬಿಲ್ಲನ್ನು ಸುಮಾರು ಎರಡು ವರ್ಷಗಳ ಕಾಲ ಸಹಿ ಮಾಡದೆ ಬಾಕಿ ಇಟ್ಟಿದ್ದರು. ಆನಂತರ ಕೇರಳ ಸರ್ಕಾರ ನ್ಯಾಯಾಲಯದ ಮೊರೆ ಹೋಯಿತು. ಬಿಲ್ ಗಳನ್ನು ಹೀಗೆ ರಾಜ್ಯಪಾಲರು ಇಟ್ಟುಕೊಳ್ಳಬಾರದು ಎಂದು ನ್ಯಾಯಾಲಯದಿಂದ ಆದೇಶ ತಂದರು. ಕೇರಳ ಪಶ್ಚಿಮ ಬಂಗಾಳ ತಮಿಳುನಾಡು ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆಯುತ್ತಿರುವ ಜಟಾಪಟಿಯೇ ಇಂದು ಕರ್ನಾಟಕದಲ್ಲಿ ನಡೆಯುತ್ತಿದೆ.
ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಒಂದಷ್ಟು ನಿಲುವುಗಳನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರ ಹಾಗೂ ಪಕ್ಷದ ಎಲ್ಲಾ ಪದಾಧಿಕಾರಿಗಳು ಮುಖ್ಯಮಂತ್ರಿಯ ಜೊತೆ ನಿಲ್ಲುತ್ತಾರೆ. ಸಚಿವ ಸಂಪುಟ ಸಲಹೆಯನ್ನ ಆರ್ಟಿಕಲ್ 163 ಅಡಿಯಲ್ಲಿ ತಿರಸ್ಕಾರ ಮಾಡಿರುವುದನ್ನು ಸರ್ಕಾರ ಖಂಡಿಸಿದೆ. ರಾಜ್ಯಪಾಲರು ಒಂದಷ್ಟು ತೀರ್ಪುಗಳನ್ನು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಅವರು ಇಡೀ ಆದೇಶವನ್ನೇ ತಿಳಿದುಕೊಳ್ಳದೆ ಅದರಲ್ಲಿ ಕೆಲವೊಂದಷ್ಟು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಟಿಕಲ್ 17 ಎ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಖಂಡಿಸಲಾಗಿದೆ.
ರಾಜ್ಯಪಾಲರು ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಆದರೆ ಅವರಿಂದಲೇ ಕಗ್ಗೊಲೆ ನಡೆಯುತ್ತಿದೆ. ಸಂವಿಧಾನವನ್ನು ಮೀರಿ ರಾಜಕೀಯದ ಕೈಗೊಂಬೆಯಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಸಚಿವ ಸಂಪುಟದಿಂದ ಕಳುಹಿಸಿದ 70 ಪುಟಗಳ ಸಲಹೆಗೆ ಕೇವಲ ಎರಡು ಪುಟದಲ್ಲಿ ಉತ್ತರಿಸಿದ್ದಾರೆ. ಅದರಲ್ಲಿ ಎಲ್ಲಿಯೂ ಸಹ ಸರ್ಕಾರದ ಸಲಹೆ ಹೀಗೆ ತಪ್ಪಾಗಿದೆ ಎಂದು ಕಿಂಚಿತ್ತು ಉಲ್ಲೇಖಿಸಿಲ್ಲ. ತಮ್ಮ ಪ್ರಾಸಿಕ್ಯೂಷನ್ ವರದಿಯಲ್ಲಿ ಎಲ್ಲಿಯೂ ಸಹ ಕಾನೂನಾತ್ಮಕವಾಗಿ ಉತ್ತರಿಸಿಲ್ಲ. ಕೇವಲ ನೀವೇ ಕದ್ದಿದ್ದೀರಿ, ಅಕ್ರಮ ನಡೆದಿದೆ, ನೀವೇ ಅದನ್ನು ರಕ್ಷಣೆ ಮಾಡುತ್ತಿದ್ದೀರಿ ಎಂದು ರಾಜಕೀಯವಾಗಿ ಮಾತನಾಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಆದ ತೀರ್ಮಾನಗಳನ್ನು ಜಾರಿಗೆ ತರಲು ರಾಜ್ಯಪಾಲರು ಒಪ್ಪಿಗೆ ಸೂಚಿಸಬೇಕು. ಇದಕ್ಕೆ ರಾಜ್ಯಪಾಲರು ಅಡಚಣೆ ಉಂಟುಮಾಡಬಾರದು. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಸಚಿವ ಸಂಪುಟದ ಸಲಹೆಗಳು ನಿಮಗೆ ಒಪ್ಪಿತವಾಗದಿದ್ದಲ್ಲಿ ಅದಕ್ಕೆ ಕಾರಣಗಳನ್ನು ನೀಡಿ ಎಂದು ರಾಜ್ಯಪಾಲರಿಗೆ ಹೇಳಲಾಗಿತ್ತು. ಪ್ರಾಸಿಕ್ಯೂಷನ್​ಗೆ ನೀಡುವಾಗ ಅಗತ್ಯ ಸಾಕ್ಷಿಗಳು ಹಾಗೂ ದಾಖಲೆಗಳು ಇರಬೇಕು. ಸಿದ್ದರಾಮಯ್ಯನವರ ವಿರುದ್ಧ ಯಾವ ಸಾಕ್ಷಿ ಇದೆ ಎಂದು ರಾಜ್ಯಪಾಲರನ್ನು ನಾವು ಪ್ರಶ್ನಿಸುತ್ತೇವೆ. 2016ರ ಅರುಣಾಚಲ ಪ್ರದೇಶ ಪ್ರಕರಣದಲ್ಲಿ ನ್ಯಾಯಾಲಯವು ಹೀಗೆ ಹೇಳಿತ್ತು. ಸರ್ಕಾರ ತನಿಖೆಗೆ ಸಹಕರಿಸುತ್ತಿಲ್ಲ, ತನಿಖೆಗೆ ಆದೇಶ ನೀಡಿಲ್ಲ, ಪುರಾವೆಗಳನ್ನು ನೀಡುತ್ತಿಲ್ಲ, ವರದಿಗಳನ್ನು ಪರಿಶೀಲಿಸಲು ಆಗುತ್ತಿಲ್ಲ, ರಾಜ್ಯಪಾಲರು ಸಮನ್ಸ್ ನೀಡಿದಾಗ ಬರುತ್ತಿಲ್ಲ ಹೀಗಿದ್ದಾಗ ಮಾತ್ರ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬಹುದು ಎಂದು ಹೇಳಲಾಗಿದೆ. ಪ್ರಸ್ತುತ ರಾಜ್ಯಪಾಲರು ಅನುಮತಿ ನೀಡಿರುವುದು ಸಂಪೂರ್ಣ ಕಾನೂನುಬಾಹಿರ. ಇತ್ತೀಚಿಗೆ ಜಸ್ಟಿಸ್ ನಾಗರತ್ನ ಅವರು ರಾಜ್ಯಪಾಲರು ಕೇವಲ ಒಂದು ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಮಾತನಾಡಿ, ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎಂದರೆ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಪಾಸಿಕ್ಯೂಷನ್​ಗೆ ಅನುಮತಿ ನೀಡಿದ ದಿನ. ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸೇರಿದಂತೆ ಅನೇಕ ಸಂಸ್ಥೆಗಳನ್ನು ಬಳಸಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ವಿರೋಧ ಪಕ್ಷದ ನಾಯಕರ ಮೇಲೆ ಹಾಗೂ ಸರ್ಕಾರಗಳ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇದರ ಪ್ರತ್ಯಕ್ಷ ದರ್ಶನ ಕರ್ನಾಟಕದಲ್ಲಿ ಆಗಿದ್ದು. ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಪಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಸುಸ್ಥಿರ ಜನಪರ ಸರ್ಕಾರವನ್ನು ಅಸ್ಥಿರಗೊಳಿಸಲು ತಂತ್ರ ಹೂಡಲಾಗಿದೆ ಎಂದರು.
ದುರುದ್ದೇಶಪೂರಿತವಾಗಿ ಕೂಡಿರುವ ರಾಜ್ಯಪಾಲರ ಪಾಸಿಕ್ಯೂಷನ್ ಆದೇಶದಲ್ಲಿ ಸಾಕಷ್ಟು ಲೋಪಗಳಿವೆ. ಸರ್ಕಾರವು ಸಚಿವ ಸಂಪುಟ ಸಭೆಯ ಮೂಲಕ ನೀಡಿದಂತಹ ಸುದೀರ್ಘ ಸಲಹೆಗೆ ರಾಜ್ಯಪಾಲರ ಕಚೇರಿಯಿಂದ ಬಂದಿದ್ದು ಕೇವಲ ಎರಡು ಪುಟಗಳ ಉತ್ತರ. ಯಾರ ಮೇಲೆ ದೂರು ಬಂದಿದೆಯೋ ಅವರು ಸಮಿತಿ ರಚನೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ ಈ ಮಾತು ಸತ್ಯಕ್ಕೆ ದೂರವಾದುದು. ಯಡಿಯೂರಪ್ಪನವರ ವಿರುದ್ಧ ಇದೇ ರೀತಿಯ ಪ್ರಾಸಿಕ್ಯೂಷನ್ ತನಿಖೆಗೆ ನೀಡಿದಾಗ ತನಿಖಾ ಸಮಿತಿಯು ಸಂಪೂರ್ಣವಾಗಿ ವರದಿ ನೀಡುವ ತನಕ ರಾಜ್ಯಪಾಲರು ಕಾಯಬೇಕು ಹಾಗೂ ಕೂಲಂಕುಶವಾಗಿ ಅಧ್ಯಯನ ಮಾಡಬೇಕು ಎಂದು ತಿಳಿಸಲಾಗಿತ್ತು. ರಾಜ್ಯಪಾಲರು ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತ್ತು.
ಮೂಡ ಅಕ್ರಮದಲ್ಲಿ ಮುಖ್ಯಮಂತ್ರಿ ಅವರ ಎಳ್ಳಷ್ಟು ಕೂಡ ಲೋಪವಿಲ್ಲ. ಆದರೂ ಅವರನ್ನು ಗುರಿ ಮಾಡಿ ಮಾಡಲಾಗುತ್ತಿದೆ. ಈ ಹಿಂದೆ ಅನೇಕ ಮುಖ್ಯಮಂತ್ರಿಗಳು ತಮ್ಮ ಮೇಲೆ ಆರೋಪ ಬಂದಾಗ ಸ್ವತಃ ಅವರೇ ತನಿಖಾ ಆಯೋಗಗಳನ್ನು ರಚನೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಕಾರ್ಯದಲ್ಲಿ ಪಿಎಸ್ಐ ಹಗರಣ ನಡೆದಾಗ ಅವರೇ ಸ್ವತಹ ತನಿಖಾ ಆಯೋಗ ರಚನೆ ಮಾಡಿದ್ದರು. ತನಿಖಾ ಆಯೋಗ ರಚನೆ ಮಾಡಿದ ತಕ್ಷಣ ಮುಖ್ಯಮಂತ್ರಿಗಳು ಆರೋಪಿ ಅಥವಾ ತಪ್ಪಿತಸ್ಥ ಎಂದಾಗುವುದಿಲ್ಲ. ರಾಜ್ಯಪಾಲರು ನೀಡಿರುವ ಆರು ಪುಟಗಳ ಉತ್ತರದಲ್ಲಿ ಯಾವ ತನಿಖಾ ಸಂಸ್ಥೆಯು ಸಾಕ್ಷಿಗಳನ್ನು ಒದಗಿಸಿದೆ ಎನ್ನುವುದರ ಬಗ್ಗೆ ಸ್ಪಷ್ಟವಾದ ನಿಲುವಿಲ್ಲ. ಇದೇ ಉತ್ತರದಲ್ಲಿ ಯಾವ ಆರೋಪ ಗಂಭೀರವಾಗಿದೆ ಎಂದು ರಾಜ್ಯಪಾಲರು ತೋರಿಸಬೇಕಿತ್ತು. ಆದರೆ ಅವರು ಯಾವುದನ್ನು ಕೂಡ ಎತ್ತಿ ಹಿಡಿದಿಲ್ಲ. ಮುಡಾ ಅಕ್ರಮ ವಿಚಾರದಲ್ಲಿ ಕೇವಲ ಮುಖ್ಯಮಂತ್ರಿಗಳನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಮುಡಾ ಕಾನೂನು ಹೇಗೆ ಇವೆ? ಇದರಲ್ಲಿ ಅಧಿಕಾರಿಗಳ ಪಾತ್ರವೇನು? ಇದರ ಹಿಂದೆ ಬೇರೆಯವರು ಯಾರಿದ್ದಾರೆ ಎನ್ನುವ ಬಗ್ಗೆ ರಾಜ್ಯಪಾಲರು ಚಿಂತನೆಯೇ ನಡೆಸಿಲ್ಲ. ರಾಜ್ಯದ ಯಾವೊಂದು ತನಿಖಾ ಸಂಸ್ಥೆಯು ಈ ಪ್ರಕರಣದಲ್ಲಿ ತಪ್ಪು ನಡೆದಿದೆ ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂಬುದಕ್ಕೆ ಸಾಕ್ಷಿಗಳನ್ನು ಒದಗಿಸಿಲ್ಲ. ರಾಜ್ಯಪಾಲರು ಕೇಂದ್ರ ಬಿಜೆಪಿ ಸರ್ಕಾರದ ಕೈ ಗೊಂಬೆಯಾಗಿ ಸುಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದ್ದಾರೆ. ಕಟ್ಟಕಡೆಯ ಕಾಂಗ್ರೆಸ್ ಕಾರ್ಯಕರ್ತ, ಸಚಿವರು ಮುಖಂಡರು, ಎಲ್ಲರೂ ಸಹ ಮುಖ್ಯಮಂತ್ರಿಗಳು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ಕಾನೂನು ಹೋರಾಟವನ್ನು ಮಾಡುತ್ತೇವೆ. ರಾಜ್ಯ ಜನತೆ ನಮ್ಮ ಜೊತೆ ನಿಲ್ಲಬೇಕು ಎಂದು ಮನವಿ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯಪಾಲರ ನಡೆ ವಿರುದ್ಧ ರಾಜ್ಯಾದ್ಯಂತ ನಾಳೆ ಕಾಂಗ್ರೆಸ್ ಪ್ರತಿಭಟನೆ: ಡಿಸಿಎಂ ಡಿ.ಕೆ. ಶಿವಕುಮಾರ್

9 ಐಷಾರಾಮಿ ಕಾರುಗಳ ಮಾಲೀಕ ಈ ಪೌರ ಕಾರ್ಮಿಕ! ಈತನ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 + three =
Remember me
