ಹುಬ್ಬಳ್ಳಿ:ವೀರಶೈವ ಸಮುದಾಯದ ಪ್ರತಿಷ್ಠಿತ ಮೂರುಸಾವಿರ ಮಠ ಈಗ ಉತ್ತರಾಧಿಕಾರಿ ವಿವಾದದ ಹಿನ್ನೆಲೆಯಲ್ಲಿ ಫೆ. 23ರಂದು ಸತ್ಯದರ್ಶನ ಸಭೆಗೆ ವೇದಿಕೆಯಾಗಿದೆ.
ಕೋಟ್ಯಂತರ ಭಕ್ತರ ಮತ್ತು ಸಮುದಾಯದ ಚಿತ್ತ ಈಗ ಮಠದ ವಿದ್ಯಮಾನದತ್ತ ಕೇಂದ್ರೀಕೃತವಾಗಿದೆ. ಉತ್ತರಾಧಿಕಾರ ಮುಚ್ಚಳಿಕೆ ಬರೆದುಕೊಟ್ಟ ಮೂರುಸಾವಿರ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ (ಮೂಜಗು) ಸ್ವಾಮೀಜಿ ಹಾಗೂ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿದ 52 ಗಣ್ಯರನ್ನು ದಿಂಗಾಲೇಶ್ವರ ಸ್ವಾಮೀಜಿ ಸತ್ಯದರ್ಶನ ಸಭೆಗೆ ಆಹ್ವಾನಿಸಿದ್ದಾರೆ. ಗುರುಸಿದ್ಧೇಶ್ವರರ ಕರ್ತೃ ಗದ್ದುಗೆ ಮೇಲೆ ಪ್ರಮಾಣ ಮಾಡಿ ಎಲ್ಲ ವಿದ್ಯಮಾನಗಳ ಬಹಿರಂಗ ಚರ್ಚೆ ನಡೆದು ಇತ್ಯರ್ಥವಾಗಲಿ ಎಂದು ಸವಾಲು ಹಾಕಿದ್ದರಿಂದ ಕುತೂಹಲ ಇಮ್ಮಡಿಸಿದೆ.
ಸದ್ಯದ ವಿದ್ಯಮಾನಗಳ ಪ್ರಕಾರ ದಿಂಗಾಲೇಶ್ವರರ ಸವಾಲು ಸ್ವೀಕರಿಸಲು ಮೂಜಗು ಹಾಗೂ ಉನ್ನತಾಧಿಕಾರ ಸಮಿತಿ ಸದಸ್ಯರು ಹಿಂದೇಟು ಹಾಕಿದಂತಿದ್ದು, ನ್ಯಾಯಾಲಯದಲ್ಲಿಯೇ ತೀರ್ವನವಾಗಲಿ ಎಂಬ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.
ಇದು ನನ್ನ ಮರ್ಯಾದೆ ಪ್ರಶ್ನೆ. ಉತ್ತರಾಧಿಕಾರಿಯಾಗಲು ಆಸೆ ಪಟ್ಟಿರಲಿಲ್ಲ. 2014ರಲ್ಲಿ ನನಗೆ ಗಂಟುಬಿದ್ದು ಉತ್ತರಾಧಿಕಾರಿಯಾಗಲು ಒಪ್ಪಿಸಿದವರು ಮೂಜಗು ಹಾಗೂ ಗಣ್ಯ ಭಕ್ತರು. ನೇಮಣೂಕಿ ಪತ್ರ ಸಿದ್ಧಪಡಿಸಿ ಅದಕ್ಕೆ ಮೂಜಗು, ಕೆಲವು ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು, ಗಣ್ಯರು ಸೇರಿ 52 ಜನ ಸಹಿ ಹಾಕಿದ್ದಾರೆ. ಕೆಲವರು ಆಗ ವಿವಾದ ಎಬ್ಬಿಸಿದರು. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು. ಈ ಎಲ್ಲವನ್ನೂ ಇತ್ಯರ್ಥಪಡಿಸಿ ಎಂದು 6 ವರ್ಷದಿಂದ ಮೂಜಗು ಹಾಗೂ ಗಣ್ಯರನ್ನು ಕೇಳಿಕೊಳ್ಳುತ್ತ ಬಂದಿದ್ದೇನೆ. ಆದರೆ, ಜಗದ್ಗುರುಗಳನ್ನು ಕೆಲವರು ಕಟ್ಟಿಹಾಕುತ್ತಿದ್ದಾರೆ. ಹೀಗಾಗಿ, ಸತ್ಯ ಏನೆಂದು ಸಾರಿ ಹೇಳಲು ಸಭೆ ನಿಗದಿಪಡಿಸಿದ್ದೇನೆ. ಮೂಜಗು ಸೇರಿ ಸಹಿ ಮಾಡಿದ 52 ಗಣ್ಯರು, ಭಕ್ತರು ಎಲ್ಲರೂ ಬನ್ನಿ. ವಿರೋಧ ಮಾಡುವವರು, ಆರೋಪ ಮಾಡಿದವರೂ ಬಹಿರಂಗ ಚರ್ಚೆಗೆ ಬನ್ನಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ.
ಸಭೆಗೆ ಯಾವುದೇ ಅಡೆತಡೆ ಇಲ್ಲ ಎಂದು ಗೃಹ ಸಚಿವ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ಆದರೆ, ಸಭೆಗೆ ಮೂಜಗು, ಇತರರು ಹಾಜರಾಗುವ ಸಾಧ್ಯತೆ ಕಂಡುಬಂದಿಲ್ಲ. ಸತ್ಯದರ್ಶನ ಸಭೆಯೂ ಬಹಿರಂಗವಾಗಿ ನಡೆಯಲು ಮಠದ ಪರವಾನಗಿ ಪಡೆದಿಲ್ಲ ಎಂದು ಪೊಲೀಸರು ತಡೆ ಒಡ್ಡುವ ಸಾಧ್ಯತೆ ಹೆಚ್ಚಿದೆ. ಒಂದುವೇಳೆ ಸತ್ಯದರ್ಶನ ಸಭೆಗೆ ಅಡ್ಡಿ ಆತಂಕ ಒಡ್ಡಿದರೆ, ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರು ತೀವ್ರ ಅಸಮಾಧಾನಗೊಳ್ಳುವ ಮತ್ತು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ.
ಈ ಮಧ್ಯೆ ಚಿತ್ರದುರ್ಗದ ಮುರುಘಾ ಶರಣರು ಶನಿವಾರ ಸಂಜೆ ಮೂರುಸಾವಿರ ಮಠಕ್ಕೆ ಭೇಟಿ ನೀಡಿದರು. ಖಿನ್ನತೆಗೀಡಾಗಿರುವ ಮೂಜಗು ಅವರಿಗೆ ಧೈರ್ಯ ನೀಡಲು ಬಂದಿದ್ದೇನೆ ಎಂದು ತಿಳಿಸಿದರು. ಉನ್ನತಾಧಿಕಾರ ಸಮಿತಿಯ ಶಂಕರಣ್ಣ ಮುನವಳ್ಳಿ, ಪಾಲಿಕೆ ಮಾಜಿ ಸದಸ್ಯರಾದ ಶಿವು ಮೆಣಸಿನಕಾಯಿ, ಅಜ್ಜಪ್ಪ ಬೆಂಡಿಗೇರಿ ಮತ್ತಿತರರು ಮೂಜಗು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಆಹ್ವಾನ ಬಂದಿಲ್ಲ
ಉತ್ತರಾಧಿಕಾರಿ ವಿವಾದಕ್ಕೆ ಸಂಬಂಧಿಸಿ ಸತ್ಯದರ್ಶನ ಸಭೆಗೆ ನನಗೆ ಆಹ್ವಾನ ಬಂದಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು. ಮೂರು ಸಾವಿರ ಮಠ ವಿವಾದದ ಕೇಂದ್ರ ಆಗಬಾರದು. ವಿವಾದ ಮಾಡಲಾರದೆ ಸಮಾಜದ ಮುಖಂಡರು ಒಟ್ಟಿಗೆ ಕುಳಿತು ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು. ನ್ಯಾಯಾಲಯದಲ್ಲಿದೆ: ಅದೇ ರೀತಿ ಜಗದೀಶ ಶೆಟ್ಟರ್ ಸಹ ನಾಳೆಯ ಸತ್ಯದರ್ಶನ ಸಭೆಗೆ ನನಗೆ ಆಹ್ವಾನವಿಲ್ಲ. ಉತ್ತರಾಧಿಕಾರಿ ವಿವಾದ ಈಗಾಗಲೇ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಠಕ್ಕೆ ಪೊಲೀಸ್ ಆಯುಕ್ತ ಭೇಟಿ
ಪೊಲೀಸ್ ಆಯುಕ್ತ ಆರ್. ದಿಲೀಪ್ ಶನಿವಾರ ಸಂಜೆ ಮಠಕ್ಕೆ ತೆರಳಿ ಮೂಜಗು ಹಾಗೂ ಉನ್ನತಾಧಿಕಾರಿ ಸಮಿತಿಯ ಕೆಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಠದ ಆವರಣದಲ್ಲಿ ಸಭೆ ನಡೆಸಲು ಅನುಮತಿ ನೀಡಿಲ್ಲ. ಐದೈದು ಜನರಂತೆ ಬಂದು ಗದ್ದುಗೆ ದರ್ಶನ ಪಡೆಯಲು ಅವಕಾಶ ನೀಡಲಾಗುವುದು ಎಂದು ಮೂಜಗು ಹೇಳಿದರೆನ್ನಲಾಗಿದೆ.
ಎಲ್ಲ ಚಟುವಟಿಕೆ ಸ್ಥಗಿತಗೊಳಿಸಿ
ಉತ್ತರಾಧಿಕಾರಿ ವಿವಾದ ಕೋರ್ಟ್​ನಲ್ಲಿ ಇರುವುದರಿಂದ ಪರ-ವಿರೋಧ ಚಟುವಟಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸುವುದು ಒಳ್ಳೆಯದು ಎಂದು ಮಠದ ಪೀಠಾಧ್ಯಕ್ಷ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಸಮಾಜದ ಹಿತದೃಷ್ಟಿಯಿಂದ ಹಾಗೂ ಮಠದ ಗೌರವದ ದೃಷ್ಟಿಯಿಂದ ನ್ಯಾಯಾಲಯದ ಆದೇಶ ಬರುವವರೆಗೂ ಎರಡೂ ಕಡೆಯವರು ಕಾಯಬೇಕು ಎಂದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + ten =
Remember me
