ಹುಬ್ಬಳ್ಳಿ:ಶುಕ್ರವಾರ ನಡೆಯುತ್ತದೆಂದು ಹೇಳಲಾಗಿದ್ದ ಇಲ್ಲಿಯ ಮೂರುಸಾವಿರ ಮಠದ ಉನ್ನತಾಧಿಕಾರ ಸಮಿತಿ ಸಭೆ ನಡೆಯಲಿಲ್ಲ. ಇದರಿಂದಾಗಿ, ಫೆ. 23ರಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನಿಗದಿ ಮಾಡಿರುವ ಸತ್ಯದರ್ಶನ ಸಭೆ ಮತ್ತಷ್ಟು ಕುತೂಹಲ ಕೆರಳಿಸಿದೆ.
ಈ ಮಧ್ಯೆ, ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (ಮೂಜಗು) ಅವರು ಸತ್ಯದರ್ಶನ ಸಭೆ ಕುರಿತಾಗಲೀ, ಉನ್ನತಾಧಿಕಾರ ಸಮಿತಿ ಸಭೆ ಕುರಿತಾಗಲೀ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಲು ಶುಕ್ರವಾರವೂ ನಿರಾಕರಿಸಿದರು. ಗುರುವಾರ ಮಠಕ್ಕೆ ಬಂದಿದ್ದ ದಿಂಗಾಲೇಶ್ವರ ಸ್ವಾಮೀಜಿಗೆ ಮೂಜಗು ಅವರು (ಮಠದಲ್ಲೇ ಇದ್ದರೂ) ದರ್ಶನಾವಕಾಶ ನೀಡಿರಲಿಲ್ಲ. ಶುಕ್ರವಾರ ಶಿವರಾತ್ರಿ ನಿಮಿತ್ತ ಮಠಕ್ಕೆ ಬಂದಿದ್ದ ಭಕ್ತರಿಗೆ ದರ್ಶನ ನೀಡಿದರು. ಆದರೆ, ಯಾರ ಜೊತೆಗೂ ಹೆಚ್ಚು ಮಾತನಾಡಲಿಲ್ಲ. ಉನ್ನತಾಧಿಕಾರ ಸಮಿತಿ ಸದಸ್ಯರು, ಪ್ರಮುಖ ಭಕ್ತರು ಬಂದಾಗ ಪ್ರತ್ಯೇಕ ಕೊಠಡಿಗೆ ತೆರಳಿ ಮಾತನಾಡಿದರು. ಮಧ್ಯಾಹ್ನದ ನಂತರ ಸ್ವಾಮೀಜಿ ದರ್ಶನ ನೀಡಲಿಲ್ಲ. ಮಠಕ್ಕೆ ಬಂದ ಭಕ್ತರು ಶ್ರೀಗಳ ಪೀಠಕ್ಕೆ ನಮಿಸಿ ತೆರಳಿದರು. ಶುಕ್ರವಾರ ಉನ್ನತಾಧಿಕಾರ ಸಮಿತಿ ಸಭೆ ಸೇರಿ ರ್ಚಚಿಸಲಿದೆ ಎಂದು ಹೇಳಲಾಗಿದ್ದರಿಂದ, ಸತ್ಯದರ್ಶನ ಸಭೆಗೆ ಪೂರ್ವದಲ್ಲೇ ಯಾವುದೋ ಒಂದು ತೀರ್ಮಾನ ಆಗಬಹುದು ಎಂಬ ನಿರೀಕ್ಷೆ ಮೂಡಿಸಿತ್ತು.
ಆಹ್ವಾನ ಬಂದಿಲ್ಲ ಎಂದ ಶೆಟ್ಟರ್: ಸಮಿತಿ ಪ್ರಮುಖರಲ್ಲಿ ಒಬ್ಬರಾಗಿರುವ ಸಚಿವ ಜಗದೀಶ ಶೆಟ್ಟರ್ ಅವರು, 23ರ ಸತ್ಯದರ್ಶನ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲಿ ಬಗೆಹರಿಯಲಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಉತ್ತರಾಧಿಕಾರಿ ವಿಷಯ ಸಾರ್ವಜನಿಕವಾಗಿ ಚರ್ಚೆಯಾಗಬಾರದು. ಕೋರ್ಟ್​ನಲ್ಲಿ ತೀರ್ವನವಾಗಬೇಕು. ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಮಗೆ ಇಲ್ಲ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಉನ್ನತಾಧಿಕಾರ ಸಮಿತಿ ಸದಸ್ಯರು ಒಂದಿಲ್ಲೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದುದರಿಂದ ಸಂಜೆವರೆಗೂ ಸಭೆ ನಡೆಯಲಿಲ್ಲ. ಈ ಎಲ್ಲ ಕಾರಣಗಳಿಂದ, ದಿಂಗಾಲೇಶ್ವರ ಸ್ವಾಮೀಜಿ ಕರೆದಿರುವ ಫೆ. 23ರ ಸಭೆ ಕುತೂಹಲ ಹೆಚ್ಚಿಸಿದೆ.
ಲಿಂಬಿಕಾಯಿಗೆ ಸ್ವಾಮೀಜಿ ಸವಾಲು: ನನ್ನನ್ನು ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ಮಾಡುವ ಸಭೆಯಲ್ಲಿ ಮೋಹನ ಲಿಂಬಿಕಾಯಿ ಸಹ ಇದ್ದರು. ಅವರು ನನ್ನನ್ನು ಉತ್ತರಾಧಿಕಾರಿ ಮಾಡಿದ್ದ ವಿಷಯ ಗೊತ್ತಿಲ್ಲವೆಂದು ಪ್ರಮಾಣ ಮಾಡುವುದಾದರೆ ಸ್ನಾನ ಮಾಡಿಕೊಂಡು ಮಠದಲ್ಲಿನ ಕರ್ತೃ ಗದ್ದುಗೆ ಮುಟ್ಟಿ ಹೇಳಲಿ ಎಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ. ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆ ಕರೆಯಲು ದಿಂಗಾಲೇಶ್ವರ ಸ್ವಾಮೀಜಿ ಯಾರು ಎಂದು ಮಠದ ಉನ್ನತಾಧಿಕಾರಿ ಸಮಿತಿ ಸದಸ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಮೋಹನ ಲಿಂಬಿಕಾಯಿ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸುತ್ತ ಈ ಸವಾಲು ಹಾಕಿದರು.
ಉದ್ಯಮಿ ಡಾ. ವಿಜಯ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಿರಹಟ್ಟಿ ಮಠಾಧೀಶರು ಸೇರಿ ಅನೇಕರು ನೇಮಣೂಕಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಆ ಸಭೆಯಲ್ಲಿ ಲಿಂಬಿಕಾಯಿಯವರೂ ಉಪಸ್ಥಿತರಿದ್ದರು. ಅವರು ಸಹಿ ಹಾಕಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ ಎಂದರು. ಫೆ. 23ರಂದು ಸತ್ಯದರ್ಶನ ಸಭೆಗೆ ಅವಕಾಶ ಕೊಡುವುದಿಲ್ಲವೆಂದು ಹೇಳಲು ಮೋಹನ ಲಿಂಬಿಕಾಯಿ ಯಾರು? ಮೂಜಗು ಪರವಾಗಿ ಮಾತನಾಡುತ್ತಿರುವುದಾಗಿಯೂ ಲಿಂಬಿಕಾಯಿ ಹೇಳಿಕೊಳ್ಳುತ್ತಿದ್ದಾರೆ. ಈ ಕುರಿತು ಮೂಜಗು ಅವರೇನಾದರೂ ಲಿಂಬಿಕಾಯಿಗೆ ಹಕ್ಕುಪತ್ರ ಬರೆದುಕೊಟ್ಟಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಮಠದ ಉತ್ತರಾಧಿಕಾರಿ ನೇಮಕದ ದಾಖಲೆ ನನ್ನ ಬಳಿ ಇದೆ. ಮೂರು ಪಕ್ಷದ ರಾಜಕಾರಣಿಗಳು, ಮಠಾಧೀಶರು, ಸಮಾಜದ ಗಣ್ಯರು ಅದಕ್ಕೆ ಸಹಿ ಮಾಡಿದ್ದಾರೆ. ಹೀಗಾಗಿ ನಾನು ಸತ್ಯದರ್ಶನ ಸಭೆ ಮಾಡುವುದು ಖಚಿತ ಎಂದು ಹೇಳಿದರು.
ಛಬ್ಬಿ ಬೆಂಬಲ: ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕದ ವಿವಾದದಲ್ಲಿ ಉನ್ನತಾಧಿಕಾರಿ ಸಮಿತಿ ಸದಸ್ಯರೆಂದು ಕಿರೀಟ ತೊಟ್ಟವರು ಮೌನ ವಹಿಸಿರುವುದಕ್ಕೆ ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಠ ನಿಸ್ತೇಜವಾಗಿರುವಾಗ ಸಮಾಜದ ಮರ್ಯಾದೆ ಹೋಗುತ್ತಿರುವ ಈ ಸಂದರ್ಭದಲ್ಲಿ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಸವರಾಜ ಹೊರಟ್ಟಿ ಅವರೆಲ್ಲ ಮುಂದೆ ನಿಂತು ಇತ್ಯರ್ಥಪಡಿಸಬೇಕಿತ್ತು. ಅವರು ಈಗ ಎಲ್ಲಿದ್ದಾರೆ? ತಮಗೆ ಸಂಬಂಧ ಇಲ್ಲ ಎಂಬಂತೆ ಇರುವುದು ಆಘಾತಕಾರಿ ಎಂದಿದ್ದಾರೆ. ಈ ಹಿಂದೆ ನಾನು ಸಹ ಮೂಜಗು ಪರವಾಗಿ ಇದ್ದೆ. ಈಗ ವಾಸ್ತವ ಅರಿವಾಗಿದೆ. ಮಠದ ಹಿಂದಿನ ವೈಭವ ಮರುಕಳಿಸಬೇಕಾದರೆ ದಿಂಗಾಲೇಶ್ವರ ಸ್ವಾಮಿಗಳನ್ನೇ, ಈ ಹಿಂದೆ ಸಹಿ ಹಾಕಿದವರೆಲ್ಲ ಮುಂದೆ ನಿಂತು ಉತ್ತರಾಧಿಕಾರಿಯಾಗಿ ಪ್ರತಿಷ್ಠಾಪಿಸಲಿ. ಮೂಜಗು ಅವರು ಸಹ ಮಠದಲ್ಲೇ ಇದ್ದು ಮಾರ್ಗದರ್ಶನ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ವಿಎಚ್​ಪಿ ಮನವಿ: ಮಠದಲ್ಲಿ ಆಗುತ್ತಿರುವ ಪ್ರಸ್ತುತ ಬೆಳವಣಿಗೆಗಳು ಭಕ್ತರಲ್ಲಿ ಗೊಂದಲ, ಕಳವಳ ಉಂಟುಮಾಡುತ್ತಿದೆ. ಆದ್ದರಿಂದ ನಾಲ್ಕು ಗೋಡೆಯೊಳಗೆ ಚರ್ಚೆಯ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ವಿಭಾಗ ಮನವಿ ಮಾಡಿದೆ.
ಶಾಸಕ ಓಲೆಕಾರ ಬೆಂಬಲ: ಮೂರುಸಾವಿರ ಮಠಕ್ಕೆ ಶ್ರೀ ದಿಂಗಾಲೇಶ್ವರರನ್ನೇ ಉತ್ತರಾಧಿಕಾರಿಯಾಗಿ ನೇಮಿಸಬೇಕು ಎಂದು ಹಾವೇರಿ ಶಾಸಕ ನೆಹರು ಓಲೆಕಾರ ಒತ್ತಾಯಿಸಿದ್ದಾರೆ. 23ರ ಸತ್ಯದರ್ಶನ ಸಭೆಗೆ ನಾನು ಹೋಗುತ್ತೇನೆ. ಹಾವೇರಿ ಭಾಗದ ಭಕ್ತರು ತೆರಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಿಂಗಾಲೇಶ್ವರ ಶ್ರೀಗಳಿಗೆ ಕುಂಟೋಜಿ ಶ್ರೀ ಬೆಂಬಲ
ಮುದ್ದೇಬಿಹಾಳ: ದಿಂಗಾಲೇಶ್ವರ ಶ್ರೀಗಳ ಹೋರಾಟಕ್ಕೆ ತಾಲೂಕಿನ ಕುಂಟೋಜಿ ಹಿರೇಮಠದ ಚೆನ್ನವೀರ ದೇವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ದಿಂಗಾಲೇಶ್ವರ ಶ್ರೀಗಳ ಜತೆಗೆ ಇದ್ದುಕೊಂಡು ಅವರ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಅವರ ವಿರುದ್ಧ ಕೆಲವರು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದು, ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ. ಇದೀಗ ಸತ್ಯಕ್ಕೆ ಕಷ್ಟದ ಕಾಲ ಎದುರಾಗಿದೆ. ವಾಸ್ತವ ಸ್ಥಿತಿ ಏನೆಂಬುದು ಎಲ್ಲರಿಗೂ ತಿಳಿಯಲಿದೆ. ಬಹುದೊಡ್ಡ ಇತಿಹಾಸ ಹೊಂದಿರುವ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ಶೀಘ್ರ ಬಗೆಹರಿಯುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಕಳೆದ 20 ವರ್ಷಗಳಿಂದ ದಿಂಗಾಲೇಶ್ವರ ಶ್ರೀಗಳೊಂದಿಗೆ ಚನ್ನವೀರ ದೇವರು ನಿಕಟ ಸಂಬಂಧ ಇರಿಸಿಕೊಂಡಿದ್ದು, ಹುಬ್ಬಳ್ಳಿಯಲ್ಲಿ ಮೂಜಗು ಭೇಟಿಗಾಗಿ ಧರಣಿ ನಡೆಸಿದ್ದ ದಿಂಗಾಲೇಶ್ವರ ಶ್ರೀಗಳೊಂದಿಗೆ ಕುಂಟೋಜಿ ಚೆನ್ನವೀರ ದೇವರು ಭಾಗಿಯಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fifteen =
Remember me
