ಬಾಗಲಕೋಟೆ:ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೆಸರು ಹೇಳದೇ ಅವರನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ. ‘‘2ಎ ನೀಡದಿದ್ರೆ ಬಾರಕೋಲ್ ಚಳವಳಿ ಮಾಡ್ತೀನಿ ಅಂದಿದ್ದಾರೆ. ನಿಮ್ಮ ತಂದೆಯವರೇ ಮಂತ್ರಿ ಆಗಿದ್ದರು, ಸಮಾಜದ ರಾಜ್ಯಾಧ್ಯಕ್ಷರೂ ಆಗಿದ್ದರು. ಆ ಟೈಮ್ನಲ್ಲಿ ನೀನು ಯಾಕೆ ಮಾಡ್ಲಿಲ್ಲಪ್ಪ? ಆಗ ನಿಮ್ಮದೇ ಸರ್ಕಾರ ಇತ್ತು, ಮಂತ್ರಿನೂ ಇದ್ರು. 3ಬಿ, 2ಎ ಗೆ ಯಾಕೆ ಸೇರಿಸಲಿಲ್ಲ? ಅವಾಗ ಎಲ್ಲಿತ್ತು ನಿನ್ನ ಬಾರ್ಕೋಲ್?’’ ಎಂದು ಪ್ರಶ್ನಿಸಿದರು.
ಬಾಗಲಕೋಟೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ನನ್ನನ್ನ ಸೋಲಿಸಿಯೇ ತೀರ್ತೀನಿ ಅಂತ ಸವಾಲು ಹಾಕಿದ್ದಾರೆ, ನನ್ನ ಸೋಲಿಸುವುದು, ಗೆಲ್ಲಿಸುವುದು ನನ್ನ ಬೀಳಗಿ ವಿಧಾನಸಭಾ ಕ್ಷೇತ್ರದ ಜನ. ಬೀಳಗಿ ಮತದಾರರ ಆಶೀರ್ವಾದದಿಂದ ನಾನು ಗೆದ್ದಿದ್ದೀನಿ. ನಾನು ಮಂತ್ರಿ ಆಗಿದ್ದು ಪಕ್ಷದ ಹಿರಿಯರಿಂದ. ಎಂಎಲ್ಎ ಆಗಿದ್ದು ಬೀಳಗಿ ವಿಧಾನಸಭಾ ಮತದಾರರಿಂದ. ನನ್ನ ಸೋಲಿಸುವುದು ಮತದಾರರ ಕೈಯಲ್ಲಿ ಇದೆ. ಬಾಯಿ ಚಪಲಕ್ಕೆ ಮಾತನಾಡುವವರ ಕೈಯಲ್ಲಿ ಇಲ್ಲ. ನೀನು ಕಾಂಗ್ರೆಸ್ನಲ್ಲಿದಿಯಾ, ನಾನು ಬಿಜೆಪಿಯಲ್ಲಿದೀನಿ. ಪಕ್ಷ ಅಂತ ಬಂದಾಗ ನೀನು ನನಗೆ ವಿರೋಧಿಯೇ. ನೀನು ನನ್ನ ಸೋಲಿಸಬಹುದು, ನಾನು ನಿನ್ನ ಸೋಲಿಸಬಹುದು. ಅದನ್ನ ನಾನು ಚಾಲೆಂಜ್ ಅಗಿ ತಗೊಳ್ತೀನಿ’’ ಎಂದು ನಿರಾಣಿ ಹೇಳಿದರು.
‘‘ಕಡಿಮೆ ಅವಧಿಯಲ್ಲಿ (ಯತ್ನಾಳ) ವಿಧಾನಸೌಧದ 3ನೇ ಮಹಡಿಯಲ್ಲಿ ಕೂರ್ತಾರೆ ಅಂತಾ ಹೇಳ್ತಿಯಾ. ಹಾಗಾದ್ರೆ ನೀನು ನಿಮ್ಮ ಪಕ್ಷದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಏನ್ ಹೇಳ್ತಿಯಾ? ನಿಮ್ಮ ಪಕ್ಷದ ಮುಂದಿನ ಸಿಎಂಗೆ ಏನ್ ಉತ್ತರ ಕೊಡ್ತಿಯಾ? ನೀನು ಮತ್ತೊಬ್ಬರನ್ನು 3ನೇ ಮಹಡಿಯಲ್ಲಿ ಕೂರಿಸುವಷ್ಟು ಶಕ್ತಿವಂತನಾಗಿದ್ರೆ ನೀನ್ಯಾಕೆ ಬಂದು ಕೂರಲಿಲ್ಲ ಇಷ್ಟು ದಿನ? ಎಂಪಿನೂ ಮಾಡಲಿಕ್ಕಾಗಲಿಲ್ಲ (ವಿಜಯಾನಂದ ಪತ್ನಿ ವೀಣಾ ಕಾಶಪ್ಪನವರ ಲೋಕಸಭೆಯಲ್ಲಿ ಸೋತಿದ್ದು), ನೀನು ಎಂಎಲ್ಎನೂ ಆಗಲಿಲ್ಲ. ನೀನು ಮೊದಲು ನಿನ್ನ ಬಾಡಿ ಲ್ಯಾಂಗ್ವೇಜ್ ಬದಲಾವಣೆ ಮಾಡಿಕೋ. ಎಲ್ಲ ಕಡೆ ಲೂಸ್ ಟಾಕ್ ಆಗಬಾರದು’’ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘‘ಬಿಜೆಪಿಯಲ್ಲಿದ್ದಾಗ ಹಿಂದುತ್ವದ ಬಣ್ಣ ಹಚ್ಚಿಕೊಳ್ಳೋದು, ಜೆಡಿಎಸ್‌ನಲ್ಲಿದ್ದಾಗ ಟೋಪಿ ಹಾಕೊಂಡು ಟಿಪ್ಪು ಸುಲ್ತಾನ್ನನ್ನು ಹೊಗಳುವುದು… ಇನ್ನೊಂದೆಡೆ ಇದ್ದಾಗ ಎರಡೂ ಪಕ್ಷಗಳನ್ನು ಬೈಯೋದು… ಹೊತ್ತು ಬಂದಂಗ ಛತ್ರಿ ಹಿಡಿಯೋದು…’’ ಎಂದು ಹೇಳಿದರು.
‘‘ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಒಬ್ರು ಡೈಲಾಗ್ ಶುರು ಮಾಡಿದ್ದಾರೆ. ಮರಾಠಿಗರಿಗೆ, ಕುರುಬರಿಗೆ, ವಾಲ್ಮೀಕಿ ಜನಾಂಗದವ್ರಿಗೆ ಮೀಸಲಾತಿ ಸಿಗಬೇಕು ಅಂತ ಹೇಳತೊಡಗಿದ್ದಾರೆ. ಇವರೇನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಆ ಸಮಾಜದವರು ಯಾರೂ ಇಲ್ವಾ…? ನಾವು ಮನಸ್ಸು ಮಾಡಿದ್ರೆ ಸರ್ಕಾರ ತರ್ತೀವಿ, ಬೇಡವಾದರೆ ಸರ್ಕಾರ ಕೆಡವುತ್ತೀವಿ ಅಂತಾರೆ. ಈ ರೀತಿಯ ಉದ್ಧಟತನದ ಮಾತುಗಳು ಯಾರ ಬಾಯಲ್ಲೂ ಬರಬಾರದು’’ ಎಂದರು.
‘‘ನಾನು ಬಿಜೆಪಿಯಲ್ಲೇ ಹುಟ್ಟಿದ್ದು, ಬಿಜೆಪಿಯಲ್ಲೇ ಸಾಯೋದು. ಆ ಕಡೆ ಈ ಕಡೆ ಹೋಗುವಂಥದ್ದಿಲ್ಲ. ನಾನು ಕೂಡ ಬಿಜೆಪಿನೇ, ಹಿಂದೂತ್ವನೇ. ಪಕ್ಷಕ್ಕೆ, ಸಮಾಜಕ್ಕೆ ನಿಷ್ಠನಾಗಿರುತ್ತೇನೆ. ನನಗೆ ಸಮಾಜ ಮತ್ತು ಪಕ್ಷ ತಾಯಿ ಇದ್ದ ಹಾಗೆ. ತಾಯಿಗೆ ಎಂದೂ ದ್ರೋಹ ಮಾಡೋದಿಲ್ಲ. ಈ ರೀತಿ ನೀಚ ಹೇಳಿಕೆಗಳನ್ನು ಬಿಡಬೇಕು’’ ಎಂದು ಒತ್ತಾಯಿಸಿದರು.
ಇನ್ನೂ 2 ಪೀಠ ಮಾಡ್ತೀನಿ: ‘‘ಪಂಚಮಸಾಲಿ ಸಮಾಜದ ಮೂರು ಪೀಠ ಮಾಡಿದ್ದೇ ನಾನು. ಇನ್ನು ಎರಡು ಪೀಠ ಮಾಡ್ತೇನೆ. ನಾನು ಬೀಳಗಿ ಕ್ಷೇತ್ರದಲ್ಲಿ ಗೆಲ್ಲಲು ಸ್ವಾಮೀಜಿ (ಬಸವಜಯ ಮೃತ್ಯುಂಜಯ ಸ್ವಾಮೀಜಿ) ಮೇಲೆ ಅವಲಂಬಿತನಾಗಿರಲಿಲ್ಲ. ಯಾವ ಸ್ವಾಮೀಜಿಗಳನ್ನು ಕೂಡ ಓಟು ಹಾಕಿಸಿಕೊಳ್ಳಲು ಕರೆಸಿಲ್ಲ’’ ಎಂದು ಹೇಳಿದರು.
‘‘ವೀರಶೈವ ಲಿಂಗಾಯತ ಪಂಚಮಸಾಲಿಗಳು 80 ಲಕ್ಷ ಜನ ಇದ್ದಾರೆ. ಸಮಾಜದಲ್ಲಿ ಮದುವೆ, ಮುಂಜಿ ಇನ್ನಿತರ ಕಾರ್ಯಗಳು ಒಂದೇ ಪೀಠದಿಂದ ಆಗಲ್ಲ. ಐದು ಪೀಠ ಮಾಡಿದರೆ ಎಲ್ಲರೂ ಅಣ್ಣತಮ್ಮಂದಿರಂತೆ ಇರಬೇಕು. ಈ ರೀತಿ ಜಗಳ ಹಚ್ಚೋದು ಆಗಬಾರದು. 2008ರಿಂದ 2021ರವರೆಗೆ ನಿಮ್ಮ ಪೀಠಕ್ಕೆ (ಕೂಡಲಸಂಗಮ ಪಂಚಮಸಾಲಿ) ಯಾರು ಹತ್ತಿರ ಇದ್ದರು? ಅದರ ಆಗುಹೋಗುಗಳನ್ನು ಯಾರು ನೋಡಿಕೊಳ್ತಾ ಇದ್ರು? ಇದು ಇಡೀ ಸಮಾಜಕ್ಕೆ ಮತ್ತು ನಾಡಿನ ಜನರಿಗೆ ಗೊತ್ತಿದೆ. ಪೀಠ ಹುಟ್ಟುವ ಮೊದಲೇ ನಾನು ಮಂತ್ರಿ, ಎಂಎಲ್ಎ ಇದ್ದೆ ಎಂಬುದು ನೆನಪಿರಲಿ’’ ಎಂದರು.
Sign in to your account
Please enter an answer in digits:1 × five =
Remember me
