ಹುಬ್ಬಳ್ಳಿ: ಫೆ. 23ರಂದು ಕರೆದಿರುವ ಸತ್ಯದರ್ಶನ ಸಭೆ ನಡೆದೇ ನಡೆಯುತ್ತದೆ. ಯಾರು ಏನೇ ಮಾಡಿದರೂ ಸಭೆ ನಿಶ್ಚಿತ ಎಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 10-15 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ ಬಸವೇಶ್ವರರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, 10.30ಕ್ಕೆ ನೆಹರು ಮೈದಾನದಿಂದ ಭಕ್ತರೊಂದಿಗೆ ಶಾಂತಿಯುತ ಮೆರವಣಿಗೆಯಲ್ಲಿ ಮಠಕ್ಕೆ ತೆರಳುತ್ತೇನೆ. ಮಠದ ಕರ್ತೃ ಗದ್ದುಗೆ ದರ್ಶನ ಪಡೆಯಲು ಅಡ್ಡಿಪಡಿಸುವ ಹಕ್ಕು ಯಾರಿಗೂ ಇಲ್ಲ. ಅದಕ್ಕೆ ತಡೆ ಮಾಡಿದರೆ ಪರಮಾಪರಾಧ ವಾಗುತ್ತದೆ. ನಾನಂತೂ ಅಲ್ಲೇ ಓದಿ ಬೆಳೆದವನು. ನನ್ನ ಗುರುಗಳು ಅಲ್ಲಿದ್ದಾರೆ. ಮಠ ಪ್ರವೇಶಿಸಲು ಬಿಡದೇ ಇದ್ದರೆ ಸಮಾಜವನ್ನು ರೊಚ್ಚಿಗೆಬ್ಬಿಸಿ ದಂತಾಗುತ್ತದೆ ಎಂದು ಎಚ್ಚರಿಸಿದರು.
ನಾವು ಸತ್ಯವನ್ನು ಸಾಬೀತುಪಡಿಸಲು ಹೋಗುವುದು. ಆದ್ದರಿಂದ ಅತ್ಯಂತ ಶಿಸ್ತು, ಶಾಂತಿಯಿಂದ ನಡೆದುಕೊಳ್ಳುವಂತೆ ಭಕ್ತರಿಗೆ ತಿಳಿಸಲಾಗಿದೆ. ಬಂದವರಿಗೆ ನೀರು, ಆಹಾರದ ವ್ಯವಸ್ಥೆಯೂ ಇರುತ್ತದೆ. ಬೇರೆಯವರಿಂದ ತೊಂದರೆ ಆಗಬಹುದೆಂಬ ಕಾರಣಕ್ಕೆ ಪೊಲೀಸ್ ಭದ್ರತೆ ಕೇಳಿದ್ದೇವೆ. ವಿವಾದವನ್ನು ಬಗೆಹರಿಸಬೇಕಾದವರು ಮೂಜಗು, ಭಕ್ತರು ಮತ್ತು ದಿಂಗಾಲೇಶ್ವರರು. ನಾನು ಹೋಗುತ್ತಿದ್ದೇನೆ. ಉಳಿದವರಿಗೆ ಆಹ್ವಾನಿಸಿದ್ದೇನೆ. ಅವರೆಲ್ಲ ಬರುತ್ತಾರೆಂಬ ವಿಶ್ವಾಸ ಇದೆ ಎಂದರು.
ನಾನು ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದರೆ ಕೆಲವರಿಗೆ ಸಮಸ್ಯೆಯಾಗುತ್ತದೆ. ಅಂಥವರು ವಿರೋಧ ಮಾಡುತ್ತಿದ್ದಾರೆ. ಅಂಥವರೇ ಮೂಜಗು ಅವರನ್ನು ಬಂಧನದಲ್ಲಿ ಇರುವಂತೆ ಮಾಡಿದ್ದಾರೆ. ಕೆಲವು ಕಾವಿಧಾರಿಗಳೂ ಸಭೆ ನಡೆಯದಂತೆ ಆಡಳಿತ ಯಂತ್ರದ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು.
ಸತ್ಯದರ್ಶನ ಸಭೆಗೆ ಮೂಜಗು ಅವರಿಗೆ ಮಾತ್ರ ಅಧಿಕೃತವಾದ ಲಿಖಿತ ಬಿನ್ನಹಪತ್ರ ಕಳುಹಿಸಿದ್ದೇನೆ. ನೇಮಣೂಕಿ ಪತ್ರಕ್ಕೆ ಸಹಿ ಹಾಕಿದ ಇತರ 51 ಗಣ್ಯರಿಗೆ ಮಾಧ್ಯಮದ ಮೂಲಕವೇ ಆಹ್ವಾನ ನೀಡಿದ್ದೇನೆ. ಗದ್ದುಗೆ ದರ್ಶನದ ನಂತರ ಮೊನ್ನೆ ದಿನ ಮಠದ ಹಜಾರದಲ್ಲಿ ಕುಳಿತಲ್ಲೇ ಕುಳಿತು ಸತ್ಯದರ್ಶನ ಸಭೆಯಲ್ಲಿ ದಾಖಲೆ ಸಮೇತ ಹೇಳುತ್ತೇನೆ. ವಿರೋಧಿಸುವವರು, ಆರೋಪ ಮಾಡಿದವರೆಲ್ಲ ಬರಲಿ ಎಂದರು.
ಗೃಹ ಸಚಿವರ ಭರವಸೆ
ಸುದ್ದಿಗೋಷ್ಠಿಯಲ್ಲಿದ್ದಾಗಲೇ ಗೃಹ ಸಚಿವ ಫೋನ್ ಕರೆ ಬಂದು, ಪಕ್ಕಕ್ಕೆ ಹೋಗಿ ಮಾತನಾಡಿ ವಾಪಸಾದ ದಿಂಗಾಲೇಶ್ವರರು, ಅಧಿಕಾರಿಗಳೊಂದಿಗೆ ಮಾತನಾಡಿ ಶಾಂತಿಯುತ ಚಟುವಟಿಕೆಗೆ ಅನುಕೂಲ ಮಾಡಿಕೊಡಲು ಸೂಚಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.
ನಡೆಯದ ಸಮಿತಿ ಸಭೆ
ಶನಿವಾರ ಸಹ ಉನ್ನತಾಧಿಕಾರಿ ಸಮಿತಿ ಸಭೆಯೇ ನಡೆಯಲಿಲ್ಲ. ಇವತ್ತು ಅಥವಾ ನಾಳೆ ಉನ್ನತಾಧಿಕಾರಿ ಸಮಿತಿ ಸಭೆ ನಡೆಸುತ್ತೇವೆ ಎಂದು ಹೇಳಿಕೊಳ್ಳುತ್ತ ಬರಲಾಗಿತ್ತು. ಆದರೆ, ಸಮಿತಿಯಲ್ಲಿರುವ ಹಿರಿಯರು, ಸದಸ್ಯರೂ ಬರಲಿಲ್ಲ. ಸಭೆ ನಡೆಸುವ ಸೂಚನೆಯೂ ದೊರೆಯಲಿಲ್ಲ.
ಬೇಡಿ ತಂದು ಕಟ್ಟುತ್ತೇನೆ
ಮೂರುಸಾವಿರ ಮಠಕ್ಕೆ ಮೊದಲಿನ ವೈಭವ ಬರಬೇಕು. ಸದ್ಯ ನಾವೆಲ್ಲ ನಿರೀಕ್ಷಿಸಿದಂತೆ ಇಲ್ಲ. ಮಠದ ಸಂಪತ್ತಿನ ಮೇಲೆ ನಾನು ಕಣ್ಣಿಟ್ಟಿಲ್ಲ. ಸಮಾಜ ಒಪ್ಪಿ, ಮಠದ ಉತ್ತರಾಧಿಕಾರ ವಿವಾದ ಭಾನುವಾರ ಇತ್ಯರ್ಥವಾದರೆ, ಭಕ್ತರಿಂದ ಬೇಡಿ ತಂದು ಶೈಕ್ಷಣಿಕ, ಸಾಮಾಜಿಕ, ಧಾರ್ವಿುಕ ಕೇಂದ್ರವಾಗಿಸುತ್ತೇನೆ. ಬರುವ ಜೂನ್ ತಿಂಗಳಲ್ಲೇ 500 ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ ಆರಂಭಿಸುತ್ತೇನೆ ಎಂದು ಘೊಷಿಸಿದರು. ಹಿಂದೆ ಲಿಂಗರಾಜ ಉಚಿತ ಪ್ರಸಾದ ನಿಲಯ ಇತ್ತು. ನಿತ್ಯ ಬೆಳಗ್ಗೆ ಪ್ರಾರ್ಥನೆ, ಸಂಜೆ ಪ್ರವಚನ ನಡೆಯುತ್ತಿತ್ತು. ಈಗ ಪ್ರಸಾದ ನಿಲಯ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
