ಸಂಗೀತಕ್ಕೂ ಅಧ್ಯಾತ್ಮಕ್ಕೂ ಬಿಡಿಸಲಾಗದ ನಂಟಿದೆ. ಅಂಥ ನಂಟನ್ನು ಗಟ್ಟಿಗೊಳಿಸಿದ ಮಹಾನ್ ಸಂತರಲ್ಲಿ ಸಂತ ತ್ಯಾಗರಾಜರೂ ಒಬ್ಬರು. ಕರ್ನಾಟಕ ಸಂಗೀತ ಪದ್ಧತಿಯ ಪ್ರಮುಖ ವಾಗ್ಗೇಯಕಾರರಾದ ಅವರು ಶ್ರೀರಾಮನ ಪರಮ ಭಕ್ತರು. ಪ್ರತಿವರ್ಷವೂ ದೇಶದ ನಾನಾ ಭಾಗಗಳಲ್ಲಿ ಪುಷ್ಯಮಾಸ ಕೃಷ್ಣಪಕ್ಷದ ಪಂಚಮಿ ದಿನ ತ್ಯಾಗರಾಜರ ಆರಾಧನೆಯನ್ನು ಆಚರಿಸಲಾಗುತ್ತದೆ.
ತ್ಯಾಗರಾಜರು ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮನವರ ಪುತ್ರರಾಗಿ 1767ರ ಮೇ 4ರಂದು ಜನಿಸಿದರು. ಅವರ ಅಜ್ಜ ಗಿರಿರಾಜ ಕವಿ ತಂಜಾವೂರಿನ ಆಸ್ಥಾನದಲ್ಲಿ ಕವಿ-ಸಂಗೀತಗಾರರಾಗಿದ್ದರು. ಸೊಂಟಿ ವೆಂಕಟರಮಣಯ್ಯನವರಿಂದ ಸಂಗೀತದ ಮೊದಲ ಶಿಕ್ಷಣ ಪಡೆದ ತ್ಯಾಗರಾಜರು ರಾಗ-ತಾಳಬದ್ಧ ಸಂಗೀತಕ್ಕಿಂತ ಭಾವಪೂರ್ಣ ಸಂಗೀತಕ್ಕೇ ಪ್ರಾಮುಖ್ಯತೆ ನೀಡಿದರು. ತ್ಯಾಗರಾಜರ ‘ಎಂದರೋ ಮಹಾನುಭಾವುಲು…’ ಕೃತಿಯನ್ನು ಕೇಳಿದ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಅವರ ಕುರಿತು ತಿಳಿಸಿದರು. ಆಸ್ಥಾನ ಸಂಗೀತಗಾರರಾಗುವ ಮಹಾರಾಜರ ಆಹ್ವಾನವನ್ನು ಕೂಡ ತ್ಯಾಗರಾಜರು ನಿರಾಕರಿಸಿದರು.
ತ್ಯಾಗರಾಜರ ಮಾತೃಭಾಷೆ ತೆಲುಗು. ಅವರ ಬಹುಪಾಲು ರಚನೆಗಳೂ ತೆಲುಗಿನಲ್ಲಿವೆ. ಸಂಸ್ಕೃತದಲ್ಲಿಯೂ ಪ್ರಗಲ್ಭ ಪಾಂಡಿತ್ಯ ಹೊಂದಿದ್ದ ಅವರು ಅನೇಕ ಸಂಸ್ಕೃತ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಕಾಲದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ ತ್ಯಾಗರಾಜರು; ಖರಹರಪ್ರಿಯ, ಹರಿಕಾಂಭೋಜಿ ಮೊದಲಾದ ಕೆಲವು ಮೇಳಕರ್ತರಾಗಗಳನ್ನು ಪ್ರಸಿದ್ಧಿಗೆ ತಂದವರು. ತ್ಯಾಗರಾಜರು ಚಿಕ್ಕಂದಿನಲ್ಲಿ ತಾಯಿ ಹಾಡುತ್ತಿದ್ದ ಪುರಂದರದಾಸರ ದೇವರನಾಮಗಳಿಂದ ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ. ಪುರಂದರದಾಸರ ಕೆಲವು ಪದಗಳಲ್ಲಿರುವ ಭಾವನೆಯನ್ನೇ ತ್ಯಾಗರಾಜರ ಹಲವು ಕೃತಿಗಳು ಅಭಿವ್ಯಕ್ತಿಸಿರುವುದು ಗಮನಾರ್ಹ. ತ್ಯಾಗರಾಜರು ಪ್ರಹ್ಲಾದ ಭಕ್ತಿವಿಜಯದ ಮಂಗಳಶ್ಲೋಕದಲ್ಲಿ ಪುರಂದರದಾಸರನ್ನು ಸ್ಮರಿಸಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ದೇವಸ್ಥಾನಗಳ ದರ್ಶನ ಪಡೆದಿದ್ದ ತ್ಯಾಗರಾಜರು ಅಲ್ಲಿನ ದೇವಾನುದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ನಾದೋಪಾಸನೆಯಿಂದಲೂ ಮುಕ್ತಿಯನ್ನು ಗಳಿಸಬಹುದೆಂಬ ನಿಶ್ಚಲ ನಂಬಿಕೆಯನ್ನು ತ್ಯಾಗರಾಜರು ಅನೇಕ ರಚನೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಲೇ ಇದ್ದ ತ್ಯಾಗರಾಜರು ಜೀವನದ ಕಡೆಯ ಹತ್ತು ದಿನಗಳಲ್ಲಿ ಮನೋಹರಿ ರಾಗದ ಪರಿತಾಪಮುಕನಿಯಾಡಿನ, ಶಹಾನ ರಾಗದ ಗಿರಿಪೈನೆಲಕೊನ್ನ, ಮತ್ತು ವಾಗಧೀಶ್ವರಿ ರಾಗದ ಪರಮಾತ್ಮುಡು ವೆಲಿಗೇ ಎಂಬ ಕೃತಿಗಳನ್ನು ರಚಿಸಿದರು ಎನ್ನಲಾಗುತ್ತದೆ.
ತಮ್ಮ ನಿರ್ಯಾಣಸಮಯ ಸಮೀಪಿಸುತ್ತಿರುವುದನ್ನು ಅರಿತ ಅವರು ನಾದಬ್ರಹ್ಮಾನಂದ ಎಂಬ ಆಶ್ರಮನಾಮದಿಂದ ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಿದರು. ಪರಾಭವ ಸಂವತ್ಸರದ ಪುಷ್ಯಮಾಸ ಕೃಷ್ಣಪಕ್ಷದ ಪಂಚಮಿಯಂದು (06 ಜನವರಿ 1847) ಭೌತಿಕ ಶರೀರವನ್ನು ತ್ಯಜಿಸಿದರು. ಅವರ ಸಮಾಧಿಸ್ಥಳ ಸಮೀಪದಲ್ಲಿಯೇ ಶ್ರೀರಾಮ ದೇವಾಲಯ ನಿರ್ವಿುಸಲಾಗಿದೆ.
ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಕೊಡುಗೆಯ ಸ್ಮರಣಾರ್ಥ ಪ್ರತಿವರ್ಷ ತಿರುವಯ್ಯಾರಿನಲ್ಲಿ ‘ತ್ಯಾಗರಾಜ ಆರಾಧನೆ’ ಹಾಗೂ ಐದು ದಿನಗಳ ಕಾಲ ಸಂಗೀತೋತ್ಸವವು ನಡೆಯುತ್ತದೆ.
| ಪವನ್ ವಸಿಷ್ಠ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
