ಮಹಾನಗರದಲ್ಲಿ ಕರೊನಾ ನಿಯಂತ್ರಣ, ತೆರಿಗೆದಾರರಿಗೆ ಹೊರೆಯಾಗದಂತೆ ಬಿಬಿಎಂಪಿ ಆಡಳಿತ ನಿರ್ವಹಣೆ ಸೇರಿ ಹಲವು ಕ್ರಮಗಳಿಗೆ ಪಾಲಿಕೆ ಮುಂದಾಗಿರುವ ಬಗ್ಗೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಆಶಯಗಳನ್ನು ತೆರೆದಿಟ್ಟು, ನಾಗರಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಕರೊನಾ ನಿರ್ವಹಣೆಯಲ್ಲಿನ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು:ನಗರದಲ್ಲಿ ಕರೊನಾ ಸೋಂಕು ಹರಡುವ ಎಲ್ಲ ಸಾಧ್ಯತೆಗಳು ಕ್ಷೀಣಿಸಿದ್ದು, ಚಳಿಗಾಲದಲ್ಲಿ 2ನೇ ಅಲೆ ಕಾಣಿಸಿಕೊಂಡರೂ ಪರಿಸ್ಥಿತಿ ಕೈಮೀರದಂತೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ವಿಜಯವಾಣಿ- ದಿಗ್ವಿಜಯ ನ್ಯೂಸ್ 247 ಫೋನ್​ಇನ್ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಈಗಾಗಲೇ ಆರೋಗ್ಯ ತಜ್ಞರು ಮಾಹಿತಿ ನೀಡಿರುವಂತೆ ಡಿಸೆಂಬರ್ ವೇಳೆಗೆ ಚಳಿಗಾಲ ತೀವ್ರಗೊಂಡಾಗ ಕರೊನಾ ಸೋಂಕಿನ ಜೀವಿತಾವಧಿ ಹೆಚ್ಚಾಗಲಿದೆ. ಶೀತ, ಕೆಮ್ಮು ಸೇರಿ ಸಾಮಾನ್ಯ ಕಾಯಿಲೆ ಸೇರಿ ಉಸಿರಾಟ ತೊಂದರೆ ಇರುವವರಿಗೆ ಸೋಂಕು ಹರಡುವ ಸಾಧ್ಯತೆಗಳಿವೆ. ಜತೆಗೆ, ಡಿಸೆಂಬರ್​ನಿಂದ ಮದುವೆ ಸಮಾರಂಭಗಳು, ಹಬ್ಬ-ಹರಿದಿನಗಳು, ಜಾತ್ರೆ ಆರಂಭ, ಕಾಲೇಜು ಆರಂಭ, ಚುನಾವಣೆಗಳು ಸೇರಿ ಎಲ್ಲೆಡೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದ ಸೋಂಕಿತರ ಸಂಖ್ಯೆ 1 ಸಾವಿರ ಸಂಖ್ಯೆಯ ಸರಾಸರಿಯಲ್ಲಿದ್ದು, ಹೆಚ್ಚಳವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ಚುರುಕಿನ ಸೋಂಕು ಪರೀಕ್ಷೆ:ಒಬ್ಬ ಕರೊನಾ ಸೋಂಕಿತ ವ್ಯಕ್ತಿ ಪತ್ತೆ ಯಾದರೆ ಆತನ ಪ್ರಾಥಮಿಕ ಸಂಪರ್ಕದ 4, ದ್ವಿತೀಯ ಸಂಪರ್ಕದ 3 ಹಾಗೂ ಕೆಲಸ ಅಥವಾ ಸಂಚಾರದ ವೇಳೆ ಅರಿವಿಲ್ಲದಂತೆ 3 ಜನರು ಸೇರಿ ಕನಿಷ್ಠ 10 ಮಂದಿ ಸಂಪರ್ಕಕ್ಕೆ ಬಂದಿರುತ್ತಾರೆ.ಆದ್ದರಿಂದ ಕರೊನಾ ಸೋಂಕು ಸರಪಳಿ ಕಡಿತ ಮಾಡಲು ಕನಿಷ್ಠ 10 ಪಟ್ಟು ಹೆಚ್ಚಾಗಿ (ಶೇ.10) ಕೋವಿಡ್ ಪರೀಕ್ಷೆ ಮಾಡಬೇಕು. ಆದರೆ, ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಸರಾಸರಿ 1 ಸಾವಿರ ಸೋಂಕು ದೃಢಪಡುತ್ತಿದೆ. ಆದರೂ, 50 ಸಾವಿರ ಸ್ಯಾಂಪಲ್ ಪರೀಕ್ಷೆ ಮಾಡುತ್ತಿದ್ದೇವೆ. ಚುರುಕಿನ ಕೋವಿಡ್ ಪರೀಕ್ಷೆಯಿಂದ ಹರಡುವಿಕೆ ನಿಯಂತ್ರಣ ಸಾಧ್ಯವಾಗಿದೆ ಎಂದರು.
ಯುಪಿಐ ಆಧಾರಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಗೆ ಕ್ರಮ
ಆಸ್ತಿತೆರಿಗೆ ಪಾವತಿಗೆ ಆನ್​ಲೈನ್​ನಲ್ಲಿ ವ್ಯವಸ್ಥೆಯಿದ್ದರೂ ಅದು ಸಂಕೀರ್ಣವಾಗಿದೆ, ಯುಪಿಐ ಆಧರಿತ ಪಾವತಿ ವ್ಯವಸ್ಥೆ ಬಳಸುವಂತೆ ಸರಳೀಕರಿಸಬೇಕು ಎಂಬ ‘ವಿಜಯವಾಣಿ’ ಸಲಹೆಯನ್ನು ಮಂಜುನಾಥ ಪ್ರಸಾದ್ ಸ್ವಾಗತಿಸಿದರು.
ಆನ್​ಲೈನ್​ನಲ್ಲಿ ತೆರಿಗೆ ಪಾವತಿಸುವಾಗ ಹತ್ತಾರು ಮಾಹಿತಿ ಗಳನ್ನು ನಮೂದಿಸಬೇಕಾಗುತ್ತದೆ. ಆಸ್ತಿ ಸಂಖ್ಯೆಯನ್ನು ನಮೂದಿಸಿದರೆ ಭೀಮ್ ಫೋನ್ ಪೇ, ಜೀಪೇ, ಪೇಟಿಎಂನಂತಹ ಆಪ್​ಗಳ ಮೂಲಕವೇ ಆಸ್ತಿ ತೆರಿಗೆ ಪಾವತಿ ಮಾಡಿದರೆ ತೆರಿಗೆ ಸಂಗ್ರಹವೂ ಹೆಚ್ಚುತ್ತದೆ ಎಂಬ ಸಲಹೆ ನೀಡಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಈ ನಿಟ್ಟಿನಲ್ಲಿ ಸರಳೀಕರಣಕ್ಕೆ ಮುಂದಾಗುತ್ತಿದ್ದೇವೆ. ಸಲಹೆಯನ್ನೂ ಪರಿಶೀಲಿಸಲಾಗುತ್ತದೆ ಎಂದರು.
ಕೋರ್ಟ್ ಆದೇಶ ಉಪಯುಕ್ತ ಬಿಬಿಎಂಪಿ ಮಾಡಬೇಕಾದ ಅನೇಕ ಕೆಲಸ ಗಳನ್ನು ನ್ಯಾಯಾಲಯದ ಆದೇಶದ ನಂತರವಷ್ಟೇ ಮಾಡಲಾಗುತ್ತದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತರು, ಅನೇಕ ಕೆಲಸಗಳನ್ನು ಬಿಬಿಎಂಪಿ ವತಿಯಿಂದ ಮಾಡಬಹುದಾಗಿದೆ. ಬೆಂಗಳೂರಿನಾದ್ಯಂತ ಕಂಡಕಂಡಲ್ಲಿ ಫ್ಲೆಕ್ಸ್ ಹಾವಳಿ ಇತ್ತು. ತೆರವುಗೊಳಿಸಲು ಜನ ಮನವಿ ಮಾಡುತ್ತಿದ್ದರಾದರೂ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿ ಅದಕ್ಕೆ ಅನೇಕರು ಅವಕಾಶ ನೀಡುತ್ತಿರಲಿಲ್ಲ. ಕೋರ್ಟ್ ಆದೇಶದ ನಂತರ ಕಟ್ಟುನಿಟ್ಟಾಗಿ ಜಾರಿ ಮಾಡಿದ್ದರಿಂದ ನಗರ ಸೌಂದರ್ಯ ಮರುಕಳಿಸಿದೆ. ಕೋರ್ಟ್ ಆದೇಶಗಳಿಂದ ಅನುಕೂಲಗಳಾಗಿವೆ ಎಂದು ಹೇಳಿದರು.
ಸುಪ್ರೀಂನಲ್ಲಿ ಅಕ್ರಮ-ಸಕ್ರಮ
ಬೆಂಗಳೂರಿನಲ್ಲಿ ಪಾಲಿಕೆ ಅನುಮತಿಯಿಲ್ಲದೆ ಹಾಗೂ ಕಂದಾಯ ಭೂಮಿಯಲ್ಲಿ ನಿರ್ವಣವಾಗಿರುವ ಆಸ್ತಿಗಳನ್ನು ಸಕ್ರಮಗೊಳಿಸುವ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಪ್ರಯತ್ನ ನಡೆಸಲಾ ಗುತ್ತಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಯೋಜನೆ ಜಾರಿ ಮಾಡಬಾರದೆಂದು ನ್ಯಾಯಾ ಲಯದಲ್ಲಿ ದಾವೆ ಹೂಡಿರುವ ಅರ್ಜಿದಾರರ ಜತೆಗೆ ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಪ್ರಯತ್ನ ನಡೆದಿದೆ ಎಂದು ಆಯುಕ್ತರು ಹೇಳಿದರು.
ಕೋವಿಡ್ ನಿಯಮ ಪಾಲನೆ ಅಗತ್ಯ
ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಎಲ್ಲರೂ ಕಡ್ಡಾಯವಾಗಿ ವ್ಯಕ್ತಿಗತ ಅಂತರ (ವ್ಯಕ್ತಿಗಳ ನಡುವೆ 6 ಅಡಿ) ಪಾಲಿಸಬೇಕು. ಕಡ್ಡಾಯ ಮಾಸ್ಕ್ ಧರಿಸಬೇಕು. ಆಗಿಂದಾಗ್ಗೆ ಕೈಗಳನ್ನು ಸ್ವಚ್ಛಗೊಳಿಸಬೇಕು. ಈ ಎಲ್ಲ ನಿಯಮಗಳನ್ನು ಪಾಲನೆ ಮಾಡಿದಲ್ಲಿ ಮಾತ್ರ ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಾಗಲಿದೆ. ಲಸಿಕೆ ಬರುವುದಕ್ಕೆ ಮುಂಚಿತವಾಗಿ ಸೋಂಕು ಲಕ್ಷಣವಿರುವ ಯಾವುದೇ ಅನಾರೋಗ್ಯ ಕಂಡುಬಂದರೂ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ಆಯುಕ್ತರು ಮನವಿ ಮಾಡಿದರು.
ಮೊದಲ 10 ದಿನ ನಿದ್ದೆಯೇ ಇರಲಿಲ್ಲ
ಕರೊನಾ ಸೋಂಕು ಅತಿ ಹೆಚ್ಚು ಪ್ರಮಾಣದಲ್ಲಿದ್ದ ಸಮಯದಲ್ಲಿ ಬಿಬಿಎಂಪಿ ಆಯುಕ್ತನನ್ನಾಗಿ ಸರ್ಕಾರ ನೇಮಕ ಮಾಡಿತು. ಸೋಂಕಿತರ ಸಂಖ್ಯೆ, ಆಂಬುಲೆನ್ಸ್ ಸಮಸ್ಯೆ, ಆಸ್ಪತ್ರೆ ಸಮಸ್ಯೆಗಳಿಂದಾಗಿ ಪ್ರಾರಂಭದ 10 ದಿನ ನಿದ್ದೆಯೇ ಬಂದಿರಲಿಲ್ಲ ಎಂದು ಕರೊನಾ ನಿರ್ವಹಣೆಯ ಕುರಿತು ತಮ್ಮ ಅನುಭವವನ್ನು ಬಿಚ್ಚಿಟ್ಟರು.
ಕರೊನಾ ಪ್ರಕರಣ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿತ್ತು. ಪ್ರತಿನಿತ್ಯ 3-4 ಸಾವಿರಕ್ಕೆ ಕಡಿಮೆ ಇಲ್ಲದಂತೆ ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದರು. ಪರೀಕ್ಷೆ ಪ್ರಮಾಣ 5-10 ಸಾವಿರ ಇರುತ್ತಿತ್ತು. ಆಂಬುಲೆನ್ಸ್​ಗಳು ಸಿಗದೆ ಸೋಂಕಿತರು ನರಳುತ್ತಿದ್ದರು. ರಸ್ತೆಗಳಲ್ಲೆ ಜನರು ಪ್ರಾಣ ಬಿಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದವು.
ಇವೆಲ್ಲದಕ್ಕೆ ಪರಿಹಾರವೆಂಬಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ದೇಶನ ದಂತೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿರ್ಧಾರ ಮಾಡಲಾ ಯಿತು. ಸ್ವಾಬ್ ಸಂಗ್ರಹ ಕಾರ್ಯಕ್ಕೆ 1,500 ಜನರನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಯಿತು. ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ಪರಿಶ್ರಮದ ಫಲವಾಗಿ ಕೆಲ ದಿನಗಳಲ್ಲಿ ಪರಿಸ್ಥಿತಿ ತಹಬಂದಿಗೆ ಬಂದಿತು.
ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿದ ಪ್ರಧಾನಮಂತ್ರಿ ನಾಲ್ಕು ಗುರಿ ನೀಡಿದ್ದರು. ಕರೊನಾ ಹರಡುವಿಕೆಯ ಕೊಂಡಿ ತುಂಡರಿಸಬೇಕು, ಶೇ.24 ಇರುವ ಪಾಸಿಟಿವಿಟಿ ದರವನ್ನು (ಪರೀಕ್ಷೆಯಲ್ಲಿ ಪತ್ತೆಯಾಗುವ ಸೋಂಕಿತರ ಸಂಖ್ಯೆ) ಶೇ.5ಕ್ಕೆ ಇಳಿಸಬೇಕು, ಶೇ.1.85 ಸಾವಿನ ಪ್ರಮಾಣವನ್ನು ಶೇ.1.3ಕ್ಕೆ ಇಳಿಸಬೇಕು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದರು. ಬಿಬಿಎಂಪಿ ಸಿಬ್ಬಂದಿಯ ಪರಿಶ್ರಮದಿಂದಾಗಿ ಕರೊನಾ ಸರಪಳಿ ತುಂಡಾಯಿತು. ಒಬ್ಬ ಸೋಂಕಿತನಿಗೆ ರಾಜ್ಯದ ಇತರೆಡೆ ನೂರಕ್ಕೂ ಹೆಚ್ಚು ಸಂರ್ಪತ ಸೋಂಕಿತರು ಹೊರಗುಳಿದಿದ್ದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಸಂಖ್ಯೆ ಕೇವಲ 10 ಇದೆ. ಪಾಸಿಟಿವಿಟಿ ದರ ಶೇ.2ಕ್ಕೆ ಇಳಿದಿದೆ. ಮರಣ ಪ್ರಮಾಣ ಶೇ.0.8 ಕ್ಕಿಂತ ಕಡಿಮೆ ಆಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಆಶಯದಂತೆ ಸಾರ್ವ ಜನಿಕರಿಗೆ ಮಾಸ್ಕ್ ಧಾರಣೆ, ವ್ಯಕ್ತಿಗತ ಅಂತರ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.
ಕರೊನಾ ಲಸಿಕೆ ಪಡೆಯುವ 95 ಸಾವಿರ ಮಂದಿಯ ಪಟ್ಟಿ ಸಿದ್ಧ
ಬೆಂಗಳೂರು: ಮೊದಲ ಹಂತದ ಕೋವಿಡ್ ಲಸಿಕೆ ಪಡೆಯುವ 95 ಸಾವಿರ ಕರೊನಾ ಯೋಧರ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಅವಧಿಯನ್ನು ನ.30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ದೇಶದಲ್ಲಿ ಆಂತರಿಕವಾಗಿ ಎರಡು ಹಾಗೂ ಜಾಗತಿಕವಾಗಿ ಏಳು ಸೇರಿ ಒಟ್ಟು 9 ಕೋವಿಡ್ ಲಸಿಕೆಗಳ ಸಂಶೋಧನೆ ಅಂತಿಮ ಹಂತದಲ್ಲಿವೆೆ. ಶೀಘ್ರದಲ್ಲಿ ಸೋಂಕಿಗೆ ಲಸಿಕೆ ಬರುವ ಸಾಧ್ಯತೆಯಿದ್ದು, ಮೊದಲ ಹಂತದಲ್ಲಿ ವಾರಿಯರ್ಸ್​ಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವ 95 ಸಾವಿರ ವಾರಿಯರ್​ಗಳ ಹೆೆಸರು, ವೃತ್ತಿ, ವಿಳಾಸದ ಮಾಹಿತಿ ಸಂಗ್ರಹಿಸಲಾಗಿದೆ. ಈಗ ಪಟ್ಟಿ ಕಳುಹಿಸಲು ನ.30ರವರೆಗೆ ಅವಕಾಶವಿದ್ದು ಮತ್ತೊಮ್ಮೆ ಪಟ್ಟಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಲಸಿಕೆ ಹಾಕುವವರ ನಿಯೋಜನೆ
ಲಸಿಕೆ ಸಂಗ್ರಹಕ್ಕೆ ದಾಸಪ್ಪ ಆಸ್ಪತ್ರೆಯಲ್ಲಿ ಕೋಲ್ಡ್ ಸ್ಟೋರೇಜ್ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸ್​ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಅಂಗನವಾಡಿ ಮತ್ತು ಆಶಾ ಕಾಯರ್åಕರ್ತರು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪಲ್ಸ್ ಪೋಲಿಯೋ ಮಾದರಿಯಲ್ಲಿ ಬಾಕ್ಸ್ ಸಿದ್ಧಪಡಿಸಿ ಲಸಿಕೆ ಸರಬರಾಜು ಮಾಡಲಾಗುವುದು. ಜತೆಗೆ, ಲಸಿಕೆ ಹಾಕು ವವರನ್ನೂ ಗುರುತಿಸಲಾಗಿದೆ. ಸಮರ್ಪಕ ವಿತರಣೆಗೆ ಪಾಲಿಕೆ ಸಿದ್ಧವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋಮಾರ್ಬಿಡ್​ಗಳಿಗೆ ಲಸಿಕೆ
ಮೊಲದ ಹಂತದಲ್ಲಿ ಕೇಂದ್ರ ಸರ್ಕಾರ 95 ಸಾವಿರ ಕೋವಿಡ್ ಲಸಿಕೆ ನೀಡುವುದಾಗಿ ತಿಳಿಸಿದೆ. ಒಂದು ವೇಳೆ ಹೆಚ್ಚುವರಿ ಲಸಿಕೆಗಳನ್ನು ಸರಬರಾಜು ಮಾಡಿದಲ್ಲಿ ದೀರ್ಘಕಾಲಿಕವಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ (ಕೋಮಾರ್ಬಿಡ್) ಮತ್ತು ವೃದ್ಧರಿಗೆ ಕರೊನಾ ಲಸಿಕೆ ಹಾಕಲಾಗುತ್ತದೆ. ಇಲ್ಲವಾದಲ್ಲಿ 2ನೇ ಹಂತದಲ್ಲಿ ಅವರಿಗೆ ಲಸಿಕೆ ನೀಡಲಾಗುತ್ತದೆ ಎಂದರು.
ಪತ್ರಕರ್ತರಿಗೆ ನೀಡಲು ಪ್ರಸ್ತಾವನೆ
ಮುದ್ರಣ ಮತ್ತು ದೃಶ್ಯ ಮಾಧ್ಯಮದ ವರದಿಗಾರರು ಕರೊನಾ ವಾರಿಯರ್ಸ್ ಆಗಿದ್ದು, ಅವರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಕೇಂದ್ರ ನೀಡಿದ ಸೂಚನೆಗೆ ಅನುಗುಣವಾಗಿ ಪಟ್ಟಿಯನ್ನು ಸಿದ್ಧಪಡಿಸಿ ಕಳಿಸಲಾಗುತ್ತದೆ. ಪತ್ರಕರ್ತರಿಗೂ ಲಸಿಕೆ ನೀಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಫೆಬ್ರವರಿ ಅಂತ್ಯದೊಳಗೆ ರಸ್ತೆ ಗುಂಡಿಗಳಿಗೆ ಮುಕ್ತಿ
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳು ಹಾಗೂ ವಿವಿಧ ಕಾರಣಗಳಿಗೆ ರಸ್ತೆ ಅಗೆದಿರುವುದನ್ನು ಮುಚ್ಚಲು 1 ಸಾವಿರ ಕೋಟಿ ರೂ. ಮೀಸಲಾಗಿದೆ. ಶೀಘ್ರ ಟೆಂಡರ್ ಕರೆದು ಫೆಬ್ರವರಿ ಅಂತ್ಯದೊಳಗೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥಪ್ರಸಾದ್ ತಿಳಿಸಿದ್ದಾರೆ.
ಪಾಲಿಕೆಯಲ್ಲಿ ರಸ್ತೆಗಳ ನಿರ್ವಹಣೆ ಮತ್ತು ಗುಂಡಿ ಮುಚ್ಚಲು 2020-21ನೇ ಆಯವ್ಯಯದಲ್ಲಿ ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಬಿಡಬ್ಲ್ಯುಎಸ್​ಎಸ್​ಬಿ ವತಿಯಿಂದ ಕುಡಿಯುವ ನೀರಿನ ಪೈಪ್ ಮತ್ತು ಸ್ಯಾನಿಟರಿ ಲೈನ್ ಅಳವಡಿಕೆಗೆ 3 ಸಾವಿರ ಕಿ.ಮೀ.ಗಿಂತ ಅಧಿಕ ಉದ್ದದ ರಸ್ತೆ ಅಗೆಯಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳುವವರೆಗೂ ಪೂರ್ಣ ರಸ್ತೆ ದುರಸ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಕನಿಷ್ಟ ಸಾರ್ವಜನಿಕ ಸಂಚಾರಕ್ಕೆ ಸಾಧ್ಯವಾಗುವ ಮಟ್ಟಿಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದರು.
21 ತಂಡಗಳು ಕಾರ್ಯ ನಿರ್ವಹಣೆ:ನಗರದಲ್ಲಿ ಮಳೆ ಹಾಗೂ ವಾಹನ ಸಂಚಾರದಿಂದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ತಲಾ 25 ಕಾರ್ವಿುಕರನ್ನು ಒಳಗೊಂಡ 31 ತಂಡಗಳನ್ನು ಸಿದ್ಧಗೊಳಿಸಬೇಕಿದೆ. ಆದರೆ, ಉತ್ತರ ಕರ್ನಾಟಕ ಮೂಲದ ರಸ್ತೆ ನಿರ್ಮಾಣ ಕಾರ್ವಿುಕರು ಲಾಕ್​ಡೌನ್ ವೇಳೆ ಊರುಗಳಿಗೆ ತೆರಳಿದ್ದು, ಕಾರ್ವಿುಕರ ಕೊರತೆ ಎದುರಾಗಿದೆ. ಗುಂಡಿ ಮುಚ್ಚಲು 21 ತಂಡ ಕಾರ್ಯ ನಿರ್ವಹಿಸುತ್ತಿದ್ದು, ಬಿಸಿ ಡಾಂಬರು ಘಟಕದಿಂದ ಸರಬರಾಜು ಮಾಡಲಾಗುತ್ತಿದೆ. ಇದರಿಂದ ರಸ್ತೆ ಗುಂಡಿ ಮುಚ್ಚುವ ಗುಣಮಟ್ಟದ ಕಾಮಗಾರಿ ನಡೆಯುತ್ತಿ್ತೆ ಎಂದು ತಿಳಿಸಿದರು.
ಕಾಮಗಾರಿ ಪೂರ್ಣ ಭರವಸೆ
ಒಳಚರಂಡಿ ಸರಿಪಡಿಸುವ ನಿಟ್ಟಿನಲ್ಲಿ ಜಲ ಮಂಡಳಿಯು ಕೋರಮಂಗಲ 6ನೇ ಬ್ಲಾಕ್​ನ 17ನೇ ಇ ಮೈನ್ ರಸ್ತೆಯಲ್ಲಿ ನಡೆಸಿದ್ದ ಕಾಮಗಾರಿ ಪೂರ್ಣಗೊಳಿಸಿದರೂ, ರಸ್ತೆಗೆ ಡಾಂಬರ್ ಅಳವಡಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಸದಾ ಧೂಳಿನಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಂಜುನಾಥ ಪ್ರಸಾದ್, ಅಧಿಕಾರಿಗಳಿಗೆ ಸೂಚಿಸಿ ಈ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು. ರಸ್ತೆಗೆ ಡಾಂಬರು ಹಾಕಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಆಶ್ವಾಸನೆ ನೀಡಿದರು.
ಸಣ್ಣ ನಿವೇಶನಕ್ಕೆ ಪ್ಲಾ್ಯನ್ ಅಪ್ರೂವಲ್ ಬೇಕಿಲ್ಲ
4060 ನಿವೇಶನಕ್ಕೆ ಪ್ಲಾ್ಯನ್ ಅಪ್ರೂವಲ್ ಅವಶ್ಯಕತೆಯಿಲ್ಲ. ಅದನ್ನು 5080ಗೂ ತರಬೇಕು ಎಂಬ ಚಿಂತನೆ ನಡೆಸಲಾಗಿದೆ. 4 ಸಾವಿರ ಚದರ ಅಡಿವರೆಗೆ ಯಾವುದೇ ಪ್ಲಾ್ಯನ್ ಅಪ್ರೂವಲ್​ಗೆ ಬಿಬಿಎಂಪಿಯಿಂದ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ ಎಂದರು.
ಡಿಸೆಂಬರ್​ನಲ್ಲಿ ರಾಜಕಾಲುವೆ ಒತ್ತುವರಿ ತೆರವು ಶುರು
ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನಲ್ಲಿ ತಗ್ಗುಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಲು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿನ ವಿಳಂಬವೇ ಕಾರಣವಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜುನಾಥ ಪ್ರಸಾದ್, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆಗೆ ಕರೊನಾ ಸಮಸ್ಯೆ ಎದುರಾಯಿತು. ಕರೊನಾ ಕಾರಣಕ್ಕೆ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವಾದ ಮಂಡಿಸಲು ಯಾವುದೇ ಕಕ್ಷಿದಾರರಿಗೆ ಸಾಧ್ಯವಾಗದಿದ್ದರೆ ಈ ಬಗ್ಗೆ ತೀರ್ಪು ನೀಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು. ನವೆಂಬರ್ ಅಂತ್ಯದವರೆಗೆ ಯಾವುದೇ ರಾಜಕಾಲುವೆ ಒತ್ತುವರಿ ತೆರವು ಮಾಡದಂತೆ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ಅವಧಿ ಮುಗಿದ ನಂತರ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 3 =
Remember me
