ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಬಂಧನ ಇನ್ನಷ್ಟು ಖಚಿತವಾಗಿದೆ. 40 ಗಂಟೆಗಳ ನಿರಂತರ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಶುಕ್ರವಾರ ಬೆಳಗ್ಗೆ ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಂಧನ ವಿಚಾರವನ್ನು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಿದೆ.
ನಾಗೇಂದ್ರ ಬಂಧನ ವಾದಲ್ಲಿ ಅವರು ಎರಡನೇ ಬಾರಿಗೆ ಜೈಲು ಸೇರಿದಂತಾಗುತ್ತದೆ. ಈ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತ ರಾಗಿದ್ದರು. ಇನ್ನೊಂದೆಡೆ ಶಾಸಕ ಬಸನಗೌಡ ದದ್ದಲ್​ಗೂ ಬಂಧನ ಭೀತಿ ಶುರುವಾಗಿದ್ದು, ಇಡಿ ಕೈಗೆ ಕೊಡಬೇಡಿ ನೀವೇ ಬಂಧಿಸಿ ಎಂದು ಸಿಐಡಿ ಎಸ್​ಐಟಿ ಅಧಿಕಾರಿಗಳ ಮುಂದೆ ಅಂಗಲಾಚಿದ್ದಾರೆ. ನಿಗಮದ 94 ಕೋಟಿ ರೂ. ಅಕ್ರಮ ಸಂಬಂಧ ಸಿಬಿಐ ಮತ್ತು ಎಸ್​ಐಟಿ ಅಧಿಕಾರಿಗಳು ಪ್ರತ್ಯೇಕ ಎಫ್​ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಎಸ್​ಐಟಿ ಅಧಿಕಾರಿಗಳು 11 ಆರೋಪಿಗಳನ್ನು ಬಂಧಿಸಿ 33 ಕೋಟಿ ರೂ. ಜಪ್ತಿ ಮಾಡಿದ್ದರು. ಬಳಿಕ ಬಿ. ನಾಗೇಂದ್ರ ಮತ್ತು ಬಸನಗೌಡ ದದ್ದಲ್ ವಿಚಾರಣೆ ನಡೆಸಿದ್ದರು.
ಈ ತನಿಖೆ ವೇಳೆ ಅಕ್ರಮ ಹಣಕಾಸು ವಹಿವಾಟು ಮತ್ತು ಹವಾಲ ದಂಧೆ ನಡೆದಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದರು. ವಿಚಾರಣೆ ವೇಳೆ ಅಕ್ರಮ ಎಸಗಿರುವುದಕ್ಕೆ ಮಹತ್ವದ ದಾಖಲೆ ಸಿಕ್ಕಿರುವುದರಿಂದ ವಶಕ್ಕೆ ಪಡೆದಿದ್ದಾರೆ.
ದಾಖಲೆ ಮುಂದಿಟ್ಟು ಪ್ರಶ್ನೆ:ಶುಕ್ರವಾರ ಬೆಳಗ್ಗೆ ನಾಗೇಂದ್ರ ಅವರನ್ನು ವಶಕ್ಕೆ ಪಡೆದು ಶಾಂತಿನಗರದಲ್ಲಿರುವ ಇಡಿ ಪ್ರಾದೇಶಿಕ ಕಚೇರಿಗೆ ಕರೆತಂದ ತನಿಖಾಧಿಕಾರಿಗಳು, ಅಕ್ರಮಕ್ಕೆ ಸಂಬಂಧಪಟ್ಟ ಕೆಲವೊಂದು ದಾಖಲೆ ಮುಂದಿಟ್ಟು ವಿಚಾರಣೆ ನಡೆಸಿದರು. ಇದಕ್ಕೂ ಮುನ್ನ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರಡಿ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ಆರಂಭಿಸಿತ್ತು. ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ರಾಯಚೂರು, ಬಳ್ಳಾರಿ ಮತ್ತು ಹೈದರಾಬಾದ್​ನಲ್ಲಿ 18 ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಶಾಕ್ ನೀಡಿದ್ದರು. ಬಿ. ನಾಗೇಂದ್ರಗೆ ಸೇರಿದ ಬಳ್ಳಾರಿ, ಬೆಂಗಳೂರಿನ ಮನೆ, ಕಚೇರಿಗಳ ಜಾಲಾಡಿದ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ಜತೆ ಜತೆಗೆ ವಿಚಾರಣೆ ನಡೆಸಿದ್ದರು. ಬುಧವಾರ ಮತ್ತು ಗುರುವಾರ ಸದಾಶಿವನಗರದ ಮನೆಯಲ್ಲಿ ಬಿ. ನಾಗೇಂದ್ರ ಅವರನ್ನು ವಿಚಾರಣೆ ನಡೆಸಿದ್ದರು.
ಅಂಗಲಾಚಿದ ದದ್ದಲ್ :2 ದಿನಗಳ ಇಡಿ ವಿಚಾರಣೆಯಿಂದ ಸುಸ್ತಾಗಿದ್ದ ಶಾಸಕ ಬಸನಗೌಡ ದದ್ದಲ್, ಎಸ್​ಐಟಿ ನೋಟಿಸ್ ಜಾರಿ ಮಾಡಿದ್ದ ನೆಪ ಮಾಡಿಕೊಂಡು ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು. ಎಸ್​ಐಟಿ ಅಧಿಕಾರಿಗಳ ಮುಂದೆ ಬೆಳಗೆಯೇ ಹಾಜರಾಗಿ ‘ನನ್ನ ನೀವೇ ಬಂಧಿಸಿ. ಇಡಿ ಕೈಗೆ ಕೊಡಬೇಡಿ’ ಎಂದು ಅಂಗಲಾಚಿದ್ದಾರೆ ಎನ್ನಲಾಗುತ್ತಿದೆ. ರಾತ್ರಿ ವರೆಗೂ ವಿಚಾರಣೆ ನಡೆಸಿದ ಎಸ್​ಐಟಿ ಆನಂತರ ಬಿಟ್ಟು ಕಳುಹಿಸಿದೆ. ನಾಗೇಂದ್ರನನ್ನು ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ದದ್ದಲ್​ನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.
40 ಗಂಟೆ ಡ್ರಿಲ್!:40 ಗಂಟೆಗಳ ಕಾಲ ನಾಗೇಂದ್ರ ಮತ್ತು ಕುಟುಂಬ ಸದಸ್ಯರು, ಆಪ್ತರನ್ನು ಇಡಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂ. ಹಗರಣದ ಬಗ್ಗೆ ಯಾವುದೇ ತಪು್ಪ ಮಾಡಿಲ್ಲ ಎಂದೇ ನಾಗೇಂದ್ರ ವಾದಿಸಿದ್ದರು. ಬುಧವಾರ ಕಾರ್ಯಾಚರಣೆ ನಡೆಸಿದಾಗ ನಾಗೇಂದ್ರ ಆಪ್ತ ಸಹಾಯಕ ಹರೀಶ್​ನನ್ನು ವಶಕ್ಕೆ ಪಡೆದು ಶಾಂತಿನಗರದ ಇಡಿ ಪ್ರಾದೇಶಿಕ ಕಚೇರಿಗೆ ಕರೆತಂದು ರಾತ್ರಿವರೆಗೂ ವಿಚಾರಣೆ ನಡೆಸಿ, ಬಳಿ ಬಿಟ್ಟು ಕಳುಹಿಸಿದ್ದರು. ಇದರ ನಡುವೆಯೇ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್​ನ್ನು ಮತ್ತು ಆಪ್ತ ಸಹಾಯಕ ಪಂಪ್ಪಣ್ಣನನ್ನು ತೀವ್ರ ವಿಚಾರಣೆ ನಡೆಸಿ ಸಾಕಷ್ಟು ವಿಷಯ ಕಲೆ ಹಾಕಿದ್ದರು.
2ನೇ ಬಾರಿ ಜೈಲಿಗೆ?:ಇಡಿಯಿಂದ ಬಂಧನವಾಗಿ ನಾಗೇಂದ್ರ ಜೈಲು ಸೇರಿದರೆ ಇದು 2ನೇ ಬಾರಿಯಾಗುತ್ತದೆ. ಈ ಮೊದಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯದೇ ಮತ್ತು ಸರ್ಕಾರಕ್ಕೆ ರಾಜಸ್ವ ಮತ್ತು ಇತರೆ ಶುಲ್ಕ ಪಾವತಿಸದೆ 22.282 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಮಾರಾಟ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದರು.
. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 187 ಕೋಟಿ ರೂ. ವರ್ಗಾವಣೆ
. 187 ಕೋಟಿಯಲ್ಲಿ 84 ಕೋಟಿ ತೆಲಂಗಾಣದ ವಿವಿಧ ಕಂಪನಿಗಳಿಗೆ ವರ್ಗ, ಡ್ರಾ
. ನಾಗೇಂದ್ರ ಪಿಎಸ್ ಹರೀಶ್, ನೆಕ್ಕುಂಟಿ ನಾಗರಾಜು, ನಾಗೇಶ್ವರ ರಾವ್ ಕೈವಾಡ
. ನಾಗೇಂದ್ರ ಸೂಚನೆಯಂತೆ ಹೊಸ ಖಾತೆ ಓಪನ್ ಎಂದ ನಿಗಮದ ಎಂಡಿ ಪದ್ಮನಾಭ್
. ಶಾಂಗ್ರಿಲಾ ಹೋಟೆಲ್​ನಲ್ಲಿ ನಾಗೇಂದ್ರ ಮೀಟಿಂಗ್ ನಡೆಸಿದ್ದ ಸಿಸಿ ಕ್ಯಾಮರಾ ದೃಶ್ಯ ಲಭ್ಯ
. ಸಚಿವರ ಸೂಚನೆಯಂತೆ ಕೋಟ್ಯಂತರ ರೂ. ವರ್ಗಾವಣೆ ಎಂದು ಹೇಳಿದ ಬಂಧಿತರು
. ಮೃತ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್​ನಲ್ಲಿ ಸಚಿವ ಎಂದು ಉಲ್ಲೇಖ
. ನಾಗೇಂದ್ರ ಆಪ್ತ ಹರೀಶ್​ಗೆ 25 ಲಕ್ಷ ರೂ. ಅನ್ನು ಎಂಡಿ ಪದ್ಮನಾಭ್ ನೀಡಿರುವುದಕ್ಕೂ ಸಾಕ್ಷ್ಯ
. ಅಕ್ರಮಕ್ಕೆ ಸಾಕ್ಷ್ಯ ಸಿಕ್ಕಿರುವುದರಿಂದ ಬಂಧನದ ಬಗ್ಗೆ ಶೀಘ್ರ ಅಧಿಕೃತ ಘೋಷಣೆ
. ಕೋರ್ಟ್ ಮುಂದೆ ಹಾಜರುಪಡಿಸಿ ಇ.ಡಿ. ಮತ್ತೆ ವಿಚಾರಣೆಗೆ ಪಡೆಯಬಹುದು
. ಎಸ್​ಐಟಿ, ಸಿಬಿಐ ಪ್ರತ್ಯೇಕ ಎಫ್​ಐಆರ್ ಆಗಿರುವುದರಿಂದ ಅವರೂ ಕಸ್ಟಡಿಗೆ ಕೇಳಬಹುದು
. ಎಲ್ಲ ತನಿಖಾ ಸಂಸ್ಥೆಗಳಿಂದ ವಿಚಾರಣೆ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಒಪ್ಪಿಕೊಂಡು ಬಿಡಬೇಕು. ಒಂದು ಸುಳ್ಳು ಮುಚ್ಚಿಡುವುದಕ್ಕೆ ಮತ್ತಷ್ಟು ಸುಳ್ಳು ಹೇಳುವುದು ಸರಿ ಅಲ್ಲ. ಇದು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ವಿಷಯ
| ಸತೀಶ್ ಜಾರಕಿಹೊಳಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + fifteen =
Remember me
