|ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸು
ಭಾರತ ಉಪಖಂಡದಲ್ಲಿದ್ದ ಐನೂರಕ್ಕೂ ಹೆಚ್ಚು ರಾಜ ಸಂಸ್ಥಾನಗಳ ಪೈಕಿ ಮೈಸೂರು ಸಂಸ್ಥಾನದ 23ನೇ ದೊರೆ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರು ಪ್ರಜಾಪ್ರತಿನಿಧಿ ಸಭೆಯನ್ನು ಜಾರಿಗೆ ತಂದರು. ಈ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಜಾರಿಗೆ ತಂದ ಮೊದಲ ರಾಜ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 1894ರಲ್ಲಿ ಕೊಲ್ಕತ್ತ ಪ್ರವಾಸದಲ್ಲಿದ್ದಾಗ ಗಂಟಲು ಬೇನೆಗೆ ತುತ್ತಾಗಿ ಕೊನೆಯುಸಿರೆಳೆದರು. ಅಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹಾಗಾಗಿ, ಹತ್ತು ವರ್ಷದ ಬಾಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು. ಈ ಕಾರಣವಾಗಿ ಅವರ ತಾಯಿ ಕೆಂಪು ನಂಜಮ್ಮಣ್ಣಿ ಶ್ರೀ ವಾಣಿವಿಲಾಸ ಸನ್ನಿಧಾನ ಅವರು ರಾಜಪ್ರತಿನಿಧಿಯಾಗಿ ರಾಜ್ಯಾಡಳಿತ ನಡೆಸಿದರು.
ರಾಜಮಾತೆ ಅಧಿಕಾರಾವಧಿಯಲ್ಲಿ ರಾಜ್ಯವು ಸರ್ವತೋಮುಖ ಅಭಿವೃದ್ಧಿ ಸಾಧಿಸಿತು. ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ರಾಜ್ಯಾಡಳಿತ ನೀತಿ ಹಾಗೂ ದೂರದೃಷ್ಟಿಯ ಜನಪರ ಯೋಜನೆಗಳು ಮುಂದುವರಿದವು. ಕೃಷಿ ಕ್ಷೇತ್ರದಲ್ಲಿ ಸುಧಾರಿತ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು. ಚಿನ್ನದ ಗಣಿ ಉದ್ಯಮ ಸ್ಥಾಪಿಸಲಾಯಿತು. ಶಿಂಷಾ ಬಳಿ ಕಾವೇರಿ ನದಿ ನೀರಿನ ಮೂಲಕ ಏಷ್ಯಾದಲ್ಲಿ ಪ್ರಪ್ರಥಮ ಜಲವಿದ್ಯುತ್ ಘಟಕ ಸ್ಥಾಪನೆಯಾಯಿತು. ಬೆಂಗಳೂರು, ಮೈಸೂರು ನಗರಗಳಿಗೆ ಸ್ವಚ್ಚ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ರೂಪಿಸಲಾಯಿತು. ಮೊಟ್ಟಮೊದಲ ಬಾಲಕಿಯರ ಶಾಲೆಯನ್ನು ಮೈಸೂರು ಅರಮನೆ ಆವರಣದ ವರಾಹ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಾರಂಭಿಸಲಾಯಿತು. ಇಲ್ಲಿ ಎಲ್ಲ ಜಾತಿ, ಧರ್ಮದ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಯಿತು.
ತಾಯಿಯ ಮಾರ್ಗದರ್ಶನದಲ್ಲಿ ಪಕ್ವಗೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಎಲ್ಲ ನಗರ, ಪಟ್ಟಣ, ಚಿಕ್ಕ ಗ್ರಾಮಗಳಿಗೆ ಭೇಟಿ ನೀಡಿ, ಸಾಮಾನ್ಯ ಜನರ ಕಷ್ಟ ಸುಖಗಳನ್ನು ಪ್ರತ್ಯೇಕವಾಗಿ ಅರಿತುಕೊಂಡು, ಎಲ್ಲ ವರ್ಗದ ಅಭಿವೃದ್ಧಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದರು. ಶಿಂಷಾದಲ್ಲಿ ಉತ್ಪಾದನೆಯಾದ ಜಲ ವಿದ್ಯುತ್ತನ್ನು ಮೊದಲಿಗೆ ಬ್ರಿಟಿಷ್ ಸರ್ಕಾರದ ಒಪ್ಪಂದದಂತೆ ಕೋಲಾರದ ಚಿನ್ನದ ಗಣಿಗೆ ಪ್ರತಿದಿನ 15000 ಹಾರ್ಸ್ ಪವರ್​ನಂತೆ ಸರಬರಾಜು ಮಾಡಲಾಗುತ್ತಿತ್ತು. ನಂತರ 1905ರ ಆಗಸ್ಟ್ 3ರಂದು ಬೆಂಗಳೂರು ನಗರಕ್ಕೆ ಮತ್ತು 1906ರಲ್ಲಿ ಮೈಸೂರು ನಗರಕ್ಕೆ ವಿದ್ಯುತ್ ಸರಬರಾಜು ಮಾಡಲಾಯಿತು. ಒಪ್ಪಂದದಂತೆ ಪ್ರತಿ ದಿನ 15000 ಎಚ್​ಪಿ ವಿದ್ಯುತ್ತನ್ನು ಕೋಲಾರಕ್ಕೆ ಸರಬರಾಜು ಮಾಡಲು ವಿಫಲವಾದರೆ ಬ್ರಿಟಿಷ್ ಸರ್ಕಾರಕ್ಕೆ ದಂಡ ತೆರಬೇಕಾಗಿತ್ತು. ಇದನ್ನು ತಪ್ಪಿಸಲು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಟ್ಟೆಪುರದಲ್ಲಿ ಚೆಕ್ ಡ್ಯಾಂ ನಿರ್ವಿುಸಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಂಡ್ಯ ಜಿಲ್ಲೆ ಮತ್ತು ಬೆಂಗಳೂರು ಜಿಲ್ಲೆಯ ಕೃಷಿ, ನೀರಾವರಿ ಮತ್ತು ಕುಡಿಯುವ ನೀರಿನ ಅವಶ್ಯಕತೆ ಅರಿತಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ವಿುಸಲು ಉದ್ದೇಶಿಸಿ ಅಂದಿನ ಮುಖ್ಯ ಇಂಜಿನಿಯರ್ ಕ್ಯಾಪ್ಟನ್ ಡಾಸ್ ಅವರಿಗೆ ನೀಲಿನಕ್ಷೆ ಸಿದ್ಧಪಡಿಸಲು ಸೂಚಿಸಿದರು. ಡಾಸ್ ಪ್ರಕಾರ 70 ರಿಂದ 105 ಅಡಿ ಎತ್ತರದ ಅಣೆಕಟ್ಟು ನೀಲಿನಕ್ಷೆ ಸಿದ್ಧಗೊಂಡರೆ, ಸರ್ ಎಂ. ವಿಶ್ವೇಶ್ವರಯ್ಯ ಪ್ರಕಾರ 80 ರಿಂದ 124 ಅಡಿ ಎತ್ತರದ ಅಣೆಕಟ್ಟಿನ ನೀಲಿನಕ್ಷೆ ಸಿದ್ಧಪಡಿಸಲಾಯಿತು.
ಈ ಯೋಜನೆಗೆ ಡಾಸ್ 168 ಲಕ್ಷ ರೂ. ವೆಚ್ಚ ಅಂದಾಜಿಸಿದ್ದರೆ, ವಿಶ್ವೇಶ್ವರಯ್ಯ ಅವರು 132 ಲಕ್ಷ ರೂ. ಎಂದು ಅಂದಾಜಿಸಿದ್ದರು. ಮೈಸೂರು ರಾಜ್ಯದ ವಾರ್ಷಿಕ ಬಜೆಟ್​ನ ಶೇ. 80 ಭಾಗವು ನೀರಾವರಿ ಯೋಜನೆಯ ವೆಚ್ಚವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮುಂಬೈ ಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಆ ಹಣದಿಂದ ಕನ್ನಂಬಾಡಿ ಬಳಿ ಅಣೆಕಟ್ಟೆ ನಿರ್ವಿುಸಿದರು. ತಂದೆ ಚಾಮರಾಜೇಂದ್ರ ಒಡೆಯರ್ ಅವರು ಜಾರಿಗೆ ತಂದಿದ್ದ ಪ್ರಜಾಪ್ರತಿನಿಧಿ ಸಭೆಗೆ ಸಾಂವಿಧಾನಿಕ ಸ್ಥಾನಮಾನ ನೀಡಿದರು. ಮತದಾನ ಪದ್ಧತಿಯಲ್ಲಿ ಹಲವಾರು ಮಾರ್ಪಾಡುಗಳನ್ನು ಜಾರಿಗೆ ತಂದರು. 1907ರಲ್ಲಿ ನ್ಯಾಯವಿಧಾಯಕ ಪರಿಷತ್ ಸ್ಥಾಪಿಸಲ್ಪಟ್ಟಿತು. ಮಹಿಳೆಯರಿಗೂ ಮತದಾನದ ಹಕ್ಕು ನೀಡಲಾಯಿತು. ಇದು ಈಗಿನ ವಿಧಾನ ಪರಿಷತ್ ರೀತಿಯಲ್ಲಿ ಹಿರಿಯರ ಸದನವಾಗಿತ್ತು. ಶಿಕ್ಷಣ ತಜ್ಞರು, ಕಲಾವಿದರು, ವಿವಿಧ ಕ್ಷೇತ್ರಗಳ ತಜ್ಞರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮೈಸೂರಿನ ಸಂಗಮ್ ಚಿತ್ರಮಂದಿರದ ಬಳಿ ಹಳ್ಳಿಕೇರಿಯಲ್ಲಿ ಜೈನ ಧರ್ಮದವರಿಗೆ ಬಸದಿ, ಕ್ರೖೆಸ್ತ ಧರ್ಮದವರಿಗೆ ಪ್ರಸಿದ್ಧ ಸೇಂಟ್ ಫಿಲೋಮಿನಾ ಚರ್ಚ್, ಕೇರಳದಿಂದ ಬಂದ ಅನ್ಯಧರ್ಮದವರಿಗೆ ಇರ್ವಿನ್ ರಸ್ತೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಯಿತು. ಹಿಂದು ಬ್ರಾಹ್ಮಣರಿಗೆ ಕೃಷ್ಣಾಶ್ರಮ ನಿರ್ವಣಕ್ಕೆ ನೆರವು ಒದಗಿಸಲಾಯಿತು. ಹೀಗೆ ನಾಲ್ವಡಿಯವರು ಸರ್ವಧರ್ಮ ಸಮಾನತೆಗೆ ಒತ್ತು ಕೊಟ್ಟಿದ್ದರು. 1916ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಅನ್ನೂ ಸ್ಥಾಪಿಸಿದರು. ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರನ್ನು ನೇಮಕ ಮಾಡಿದ್ದು ವಿಶೇಷ.
ಇದನ್ನೆಲ್ಲ ಕಂಡೇ ಮಹಾತ್ಮ ಗಾಂಧೀಜಿಯವರು ಮೈಸೂರನ್ನು ‘ರಾಮರಾಜ್ಯ’ ಎಂದು ಕರೆದರು. ನಾಲ್ವಡಿ ಕೃಷ್ಣರಾಜ ಒಡೆಯರ್​ರನ್ನು ‘ರಾಜರ್ಷಿ’ ಎಂದು ಶ್ಲಾಘಿಸಿದರು. ನಾಲ್ವಡಿಯವರಿಗೆ 1940ರ ಜುಲೈ 31ರಂದು ಹೃದಯಾಘಾತವಾಯಿತು, ಅವರು ಆಗಸ್ಟ್ 3ರಂದು ಬೆಂಗಳೂರಿನಲ್ಲಿ ನಿಧನರಾದರು. ಗಾಂಧೀಜಿಯವರು ಶೋಕ ಸಂದೇಶ ಕಳುಹಿಸಿ, ‘ಇಂದು ಭಾರತವು ಒಬ್ಬ ವಿವೇಕಿ ಅರಸನನ್ನು ಕಳೆದುಕೊಂಡಿದೆ’ ಎಂದು ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಮಾಜದ ನಿಮ್ನ ವರ್ಗದವರ ಏಳಿಗೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ, ಹಿಂದುಳಿದವರಿಗೆ, ದಲಿತರಿಗೆ ಸಮಾಜದಲ್ಲಿ ಅಧಿಕಾರಾವಕಾಶ ಕಲ್ಪಿಸುವ ದೃಷ್ಟಿಯಿಂದ ಸೂಕ್ತ ಸಲಹೆ ನೀಡಲು ಮುಖ್ಯ ನ್ಯಾಯಮೂರ್ತಿ ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು 1918ರಲ್ಲಿ ನೇಮಿಸಿದರು. ಈ ಸಮಿತಿಯು 10 ತಿಂಗಳು ಅಧ್ಯಯನ ಮಾಡಿ ವರದಿ ನೀಡಿತು. ಸಮಿತಿಯ ಸಲಹೆಗಳನ್ನು ಯಥಾವತ್ತಾಗಿ ಜಾರಿಗೆ ತರಲಾಯಿತು. ಇದು ಇಡೀ ಭಾರತದಲ್ಲೇ ಕ್ರಾಂತಿಕಾರಕ ಐತಿಹಾಸಿಕ ಮೆಲಿಗಲ್ಲು. ಈ ಸಮಿತಿ ರಚನೆ ವಿರೋಧಿಸಿ ದಿವಾನ ಹುದ್ದೆಗೆ ಸರ್ ಎಂ. ವಿಶ್ವೇಶ್ವರಯ್ಯ ರಾಜೀನಾಮೆ ನೀಡಿದ್ದು ಮಾತ್ರ ವಿಪರ್ಯಾಸ. ಪ್ರತಿಭೆಯೇ ಮಾನದಂಡವಾಗಬೇಕು ಎಂಬ ವಾದ ವಿಶ್ವೇಶ್ವರಯ್ಯ ಅವರದ್ದಾಗಿತ್ತು. ನಾಲ್ವಡಿಯವರು ಸಾಮಾಜಿಕ ಸಮಾನತೆಯು ಒಂದು ಅರ್ಹತೆಯಾಗಬೇಕು ಎಂದು ಹೇಳಿ, ಸಾಮಾಜಿಕ ನ್ಯಾಯದ ಬಗ್ಗೆ ಒತ್ತು ನೀಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಹೊಂದಿದವರಾಗಿದ್ದರು. ಕೃಷಿ ಮತ್ತು ಕೈಗಾರಿಕೆಗೆ ಒತ್ತು ನೀಡಿದರು. ಇವರ ಕಾಲದಲ್ಲಿ ಹತ್ತಕ್ಕೂ ಹೆಚ್ಚು ಅಣೆಕಟ್ಟುಗಳು, ಅನೇಕ ಕೆರೆಗಳನ್ನು ನಿರ್ವಿುಸಿ ಕೃಷಿಗೆ ಆದ್ಯತೆ ನೀಡಲಾಯಿತು. 1921ರಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕಾಗದ ಕಾರ್ಖಾನೆ, ಮೈಸೂರಿನಲ್ಲಿ ಸಿಲ್ಕ್ ಫ್ಯಾಕ್ಟರಿ, ಗಂಧದ ಎಣ್ಣೆ ಮತ್ತು ಸೋಪ್ ಕಾರ್ಖಾನೆ, ಬಣ್ಣ ಮತ್ತು ಅರಗು ಕಾರ್ಖಾನೆ ಸ್ಥಾಪಿಸುವುದರ ಮೂಲಕ ಸ್ಥಳೀಯ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಯಿತು. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಸ್ಥಾಪಿಸಲಾಯಿತು. ಆರೋಗ್ಯ ಕ್ಷೇತ್ರಕ್ಕೂ ಒತ್ತು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ತೆರೆದರು. ಇದಲ್ಲದೆ, ರಾಷ್ಟ್ರದಲ್ಲೇ ಪ್ರಪ್ರಥಮ ಕ್ಷಯರೋಗ ಆಸ್ಪತ್ರೆ ತೆರೆದ ಕೀರ್ತಿ ಕೂಡ ಇವರದ್ದಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
