ರಾಘವ ಶರ್ಮ ನಿಡ್ಲೆ, ನವದೆಹಲಿದೇಶ ಕಂಡ ಸರ್ವಶ್ರೇಷ್ಠ ನ್ಯಾಯವಾದಿಗಳಲ್ಲಿ ಪ್ರಮುಖರಾಗಿದ್ದ ಫಾಲಿ ಸ್ಯಾಮ್ ನಾರಿಮನ್, ಕರ್ನಾಟಕದ ಮಟ್ಟಿಗೆ ಎಂದೂ ಮರೆಯಲಾಗದ ಬೆಳ್ಳಿ ಬೆಳಕು. ರಾಜ್ಯಕ್ಕೆ ಹಲವು ಬಾರಿ ಎದುರಾಗಿದ್ದ ಜಲಸಂಕಷ್ಟಗಳಿಂದ ಪಾರು ಮಾಡಿ, ನದಿ ಕಣಿವೆ ಭಾಗದ ಜನರ ನೆರವಿಗೆ ಧಾವಿಸಿದಂಥ ನ್ಯಾಯಲೋಕದ ಮೇಧಾವಿ ಅವರು.
ಕಾವೇರಿ ಜಲವ್ಯಾಜ್ಯದಲ್ಲಂತೂ ತಮಿಳುನಾಡಿನ ಕುಟಿಲ ನೀತಿಗಳಿಗೆ ತಮ್ಮ ಹರಿತ, ಪಾಂಡಿತ್ಯಪೂರ್ಣ ವಾದಮಂಡನೆಗಳ ಮೂಲಕವೇ ಉತ್ತರ ನೀಡುತ್ತಿದ್ದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೂ ನಾರಿಮನ್ ಎಂದರೆ ಎಲ್ಲಿಲ್ಲದ ಅಭಿಮಾನ, ಗೌರವ. ಅವರು ವಾದಿಸುತ್ತಿದ್ದಾರೆ ಎಂದರೆ, ತಾಳ್ಮೆಯಿಂದ ಆಲಿಸುತ್ತಿದ್ದರು. ಇದೇ ಕಾರಣಕ್ಕೆ, ಕರ್ನಾಟಕ ಕೂಡ ದಶಕಗಳ ಕಾಲ ನಾರಿಮನ್ ಸೇವೆಯನ್ನೇ ಅವಲಂಬಿಸಿತು. ಕಾವೇರಿ, ಕೃಷ್ಣಾ, ಮಹದಾಯಿ ಜಲವ್ಯಾಜ್ಯಗಳಲ್ಲಿ ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್​ಗಳು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗದಂತೆ ತೀರ್ಪು ನೀಡಿದ್ದರೆ ಅದಕ್ಕೆ ನಾರಿಮನ್ ಪ್ರಭಾವವೇ ಕಾರಣ.
ಕೋರ್ಟ್ ಆದೇಶಗಳಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದಾಗ ನ್ಯಾಯಮೂರ್ತಿಗಳ ವಿರುದ್ಧವೇ ಸಿಡಿದೇಳಲೂ ನಾರಿಮನ್ ಹಿಂಜರಿದವರಲ್ಲ. ಇದಕ್ಕೆ ಪೂರಕವೆಂಬಂತೆ, 8 ವರ್ಷಗಳ ಹಿಂದೆ ಕಾವೇರಿ ನೀರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್​ನಲ್ಲಾಗಿದ್ದ ಘಟನಾವಳಿಗಳನ್ನು ನೆನಪಿಸಿಕೊಳ್ಳಬಹುದು. ಅದು 2016ರ ಸೆಪ್ಟೆಂಬರ್ ತಿಂಗಳು. ಬರದಿಂದಾಗಿ ಕಾವೇರಿ ಜಲಸಂಕಷ್ಟ ಎದುರಾಗಿತ್ತು. ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್​ನ
ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ನೀಡಿದ್ದ ಆದೇಶ ಪಾಲಿಸದ ಕಾರಣ ಕರ್ನಾಟಕಕ್ಕೆ ನ್ಯಾಯಾಂಗ ನಿಂದನೆಯ ಭೀತಿ ಎದುರಾಗಿತ್ತು. ಅಂದು ಕೋರ್ಟ್​ನ ಕೊಠಡಿ ಸಂಖ್ಯೆ 3 ಅದಾಗಲೇ ವಕೀಲರು, ಪತ್ರಕರ್ತರು, ಅಧಿಕಾರಿಗಳು, ರಾಜ್ಯದ ಸಂಸದರಿಂದ ಕಿಕ್ಕಿರಿದಿತ್ತು. ವಿಚಾರಣೆ ಶುರುವಾದಂತೆ, ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್ ಪುನರುಚ್ಚರಿಸಿತು. ಕೆಂಡಾಮಂಡಲಗೊಂಡು ಎದ್ದುನಿಂತ ನಾರಿಮನ್, ‘ನೀರು ಬಿಡಬೇಕು ಎಂಬ ನಿಮ್ಮ ತರ್ಕವಿಲ್ಲದ ಆದೇಶ ಪಾಲಿಸಲು ಸಾಧ್ಯವೇ ಇಲ್ಲ. ಮತ್ತೊಂದು ಮಹಾಬಿಕ್ಕಟ್ಟಿಗೆ ನೀವು ಎಡೆಮಾಡಿಕೊಡುತ್ತಿದ್ದೀರಿ’ ಎಂದು ನಿರ್ಭೀತಿಯಿಂದ ಹೇಳಿಬಿಟ್ಟರು.
ನಾರಿಮನ್ ಅಬ್ಬರಿಸಿದ್ದನ್ನು ಕಂಡು ನೆರೆದಿದ್ದ ವಕೀಲರೆಲ್ಲರೂ ಕಕ್ಕಾಬಿಕ್ಕಿಯಾಗಿದ್ದರು. ‘ನೀರು ಬಿಡಲಾಗದು ಎಂದು ವಿಧಾನಸಭೆ ನಿರ್ಣಯ ಮಾಡಿರುವಾಗ, ಅದನ್ನು ಧಿಕ್ಕರಿಸಲು ಹೇಗೆ ಸಾಧ್ಯ’ ಎಂದು ನ್ಯಾಯಪೀಠಕ್ಕೆ ನಾರಿಮನ್ ಸವಾಲು ಹಾಕಿದ್ದರು. ಇದರಿಂದ ತ.ನಾಡು ವಕೀಲರು ಆಕ್ರೋಶಗೊಂಡು, ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ, ತಾನೇ ಜಡ್ಜ್ ಎಂದುಕೊಂಡಿರುವ ಕರ್ನಾಟಕದ ವಾದ ಕೇಳಬೇಡಿ. ಇದೇ ರೀತಿಯಲ್ಲಿ ಆದೇಶ ನೀಡಬೇಕು ಎಂದು ಒತ್ತಡ ಹೇರಲು ಕರ್ನಾಟಕಕ್ಕೇನು ಅಧಿಕಾರ ಇದೆ ಎಂದು ತಿರುಗೇಟು ನೀಡಿದರು. ಸುಮ್ಮನಾಗದ ನಾರಿಮನ್, ‘ಹೌದು ನಾನು ಹೀಗೆಯೇ ವಾದಿಸುತ್ತೇನೆ. ನೀರು ಬಿಡಲು ಸಾಧ್ಯವಿಲ್ಲ. ನೀವು ಬೇಕಾದ್ದನ್ನು ಹೇಳಿಕೊಳ್ಳಿ’ ಮತ್ತೆ ಬಾಂಬ್ ಸಿಡಿಸಿದರು.
ಮುಂದುವರಿದು, ‘ಮೈ ಲಾರ್ಡ್ ನೀವು ಶೇಖರ ನಾಫಡೆ (ತಮಿಳುನಾಡು ವಕೀಲ) ಅವರ ವಾದವನ್ನೇ ಒಪ್ಪಿಕೊಳ್ಳಿ. ನಮ್ಮ ವಾದ ಕೇಳುವುದೇ ಬೇಡ. ನವೆಂಬರ್ ಅಂತ್ಯದವರೆಗೆ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ’ ಎಂದು ನೀರು ಬಿಡಲಾಗದ ರಾಜ್ಯದ ಪರಿಸ್ಥಿತಿ ಬಗ್ಗೆ ಮನದಟ್ಟು ಮಾಡುವ ಯತ್ನ ಮಾಡಿದ್ದರು. ಎಂದಿಗೂ ತಾಳ್ಮೆ ಕಳೆದುಕೊಳ್ಳದ ನಾರಿಮನ್, ಅಂದು ಅಬ್ಬರಿಸಿದ ಪರಿ ವಕೀಲರು ಮಾತ್ರವಲ್ಲ, ನ್ಯಾಯಮೂರ್ತಿಗಳಿಗೂ ಅಚ್ಚರಿ ತಂದಿತ್ತು.
ಸುಪ್ರೀಂಕೋರ್ಟ್ ಆದೇಶ, ತೀರ್ಪಗಳನ್ನು ಧಿಕ್ಕರಿಸುವ ಮಾನಸಿಕತೆ ನಾರಿಮನ್​ರದ್ದಾಗಿರಲಿಲ್ಲ್ಲ ಆದರೆ, ಜಲಬಿಕ್ಕಟ್ಟಿನ ಸಂದರ್ಭದಲ್ಲಿ ವಾಸ್ತವ ಅರಿಯದೆ ಆದೇಶ ನೀಡುತ್ತಿದ್ದುದಕ್ಕೆ ನ್ಯಾಯಾಂಗದ ಮೇಲೆ ಬಹಿರಂಗವಾಗಿ ಆಕ್ರೋಶ ಹೊರಹಾಕುವ ದಿಟ್ಟತನ ಅವರಲ್ಲಿತ್ತು. ಅಂದು ಸುಪ್ರೀಂಕೋರ್ಟ್ ತನ್ನ ಆದೇಶ ಪುನರುಚ್ಚರಿಸಿದ್ದರಿಂದ ನ್ಯಾಯಮೂರ್ತಿಗಳ ಮೇಲಿನ ಗೌರವ ಮತ್ತು ನ್ಯಾಯಾಂಗದ ಘನತೆ ಕಾಪಾಡುವ ಸಲುವಾಗಿ, ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರವನ್ನು ನಾರಿಮನ್ ಕೇಳಿಕೊಂಡರು. ಆದರೆ, ತಮಿಳುನಾಡಿಗೆ 18000 ಕ್ಯೂಸೆಕ್ ನೀರು ಹರಿಸಲು ಸಾಧ್ಯವಿಲ್ಲ ಎಂಬುದು ಕರ್ನಾಟಕದ ಸರ್ಕಾರದ ಸ್ಪಷ್ಟ ನಿಲುವಾಗಿತ್ತು. ಹೀಗಾಗಿ, ನ್ಯಾಯಾಲಯದಲ್ಲಿ ಕರ್ನಾಟಕದ ಪರ ವಾದ ಮಂಡನೆ ಮಾಡಲು ಸಾಧ್ಯವಿಲ್ಲ. ಹೇಳಿಕೊಳ್ಳಲು ತಮ್ಮಲ್ಲಿ ಏನೂ ಇಲ್ಲ ಎಂದು ಫಾಲಿ ನಾರಿಮನ್ ನಿರ್ಧರಿಸಿದ್ದರು.
‘ನಾವು ಕೇವಲ ವಕೀಲರಲ್ಲ. ಕೋರ್ಟ್ ಅಧಿಕಾರಿಗಳ ಹಾಗೆಯೂ ಕರ್ತವ್ಯ ನಿಭಾಯಿಸುತ್ತೇವೆ. ಹೀಗಾಗಿ, ವಿಧಾನಸಭೆ ನಿರ್ಣಯ ಏನೇ ಇರಲಿ, ನೀರು ಬಿಡುಗಡೆ ಮಾಡಲೇಬೇಕು ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಗೌರವ ನೀಡಿ ಪಾಲಿಸುವುದು ನಮ್ಮ ಕರ್ತವ್ಯ. ಆದರೆ, ರಾಜ್ಯ ಸರ್ಕಾರ ನೀರು ಬಿಡದಿರಲು ತೀರ್ವನಿಸಿದೆ. ಸರ್ಕಾರದ ಪರ ವಾದ ಮಂಡನೆ ನಮ್ಮಿಂದ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೇನೆ’ ಎಂದು ನಾರಿಮನ್, ನ್ಯಾಯಪೀಠಕ್ಕೆ ತಿಳಿಸಿದ್ದರು. ಅಂದರೆ, ಏನೇ ಅಸಮಾಧಾನ, ಆಕ್ರೋಶವಿದ್ದರೂ, ನ್ಯಾಯಾಂಗಕ್ಕೆ ತಲೆಬಾಗಲೇಬೇಕು ಎನ್ನುವುದು ಅವರ ಸಿದ್ಧಾಂತವಾಗಿತ್ತು.
ಅಂದು ನಾರಿಮನ್ ಧೋರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನ್ಯಾ. ದೀಪಕ್ ಮಿಶ್ರಾ, ‘ಸುಪ್ರೀಂಕೋರ್ಟ್ ಬಾರ್​ನ ಹಿರಿಮೆ, ಘನತೆ ಎತ್ತಿಹಿಡಿಯುವ ನಿಮ್ಮ ನಿಲುವು ಶ್ಲಾಘನಾರ್ಹ. ಈ ರೀತಿ ಹೇಳಲು ನಮಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ಹೆಮ್ಮೆಪಟ್ಟಿದ್ದರು. ಹಾಗೆ ನೋಡಿದರೆ, ನೀರು ಬಿಡುಗಡೆ ಸಾಧ್ಯವಿಲ್ಲ ಎಂಬ ವಿಧಾನಸಭೆ ನಿರ್ಣಯ, ಮುಖ್ಯಮಂತ್ರಿಗಳ ಪ್ರತಿಪಾದನೆ, ತಾವು ಸಿಎಂಗೆ ಬರೆದಿದ್ದ ಪತ್ರ ಎಲ್ಲವನ್ನೂ ಸುಪ್ರೀಂಕೋರ್ಟ್​ಗೆ ನೀಡುವ ಮೂಲಕ ರಾಜ್ಯದ ಕಾನೂನು ತಂಡವನ್ನೂ ಅವರು ಬೀಸುವ ದೊಣ್ಣೆಯಿಂದ ಅಂದು ಪಾರು ಮಾಡಿದ್ದರು.
ನಮ್ಮ ವಾದಗಳ ಹೊರತಾಗಿಯೂ, ಕೋರ್ಟ್ ಆದೇಶ ನೀಡಿದ್ದರಿಂದ ಸರ್ಕಾರಕ್ಕೆ ‘ನೀರು ಬಿಡಬೇಕು’ ಎಂಬ ನಾರಿಮನ್ ಸಲಹೆ ಬಗ್ಗೆ ವಿಪಕ್ಷದಲ್ಲಿದ್ದ ಬಿಜೆಪಿ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದರು. ಇದನ್ನು ರಾಷ್ಟ್ರೀಯ ಮಾಧ್ಯಮಗಳಲ್ಲಿ ಗಮನಿಸಿದ್ದ ನಾರಿಮನ್, ‘ಮುಂದೆಂದಿಗೂ ಕರ್ನಾಟಕದ ಪರ ವಾದಿಸುವುದಿಲ್ಲ. ಇದು ಇಲ್ಲಿಗೆ ಕೊನೆ’ ಎಂಬ ತೀರ್ಮಾನ ಮಾಡಿದ್ದರು. ಇದನ್ನು ಕಾನೂನು ತಂಡದ ಸದಸ್ಯ, ಹಿರಿಯ ವಕೀಲ ಮೋಹನ್ ಕಾತರಕಿಯವರಿಗೆ ತಿಳಿಸಿದ್ದ ಅವರು, ‘ರಾಜ್ಯದ ಪರ ವಕಾಲತ್ತು ವಹಿಸಿ ಎಂದು ನನ್ನ ಮನೆಗೆ ಯಾರೂ ಬರುವ ಅಗತ್ಯವಿಲ್ಲ. ನಾನು ವಾದಿಸುವುದು ಬೇಡ ಎಂಬುದನ್ನು ಮೊದಲೇ ಹೇಳಬಹುದಿತ್ತಲ್ಲ’ ಎಂದು ಬೇಸರದಿಂದ ನುಡಿದಿದ್ದರು.
ನಾರಿಮನ್ ಸಾಮರ್ಥ್ಯ ಹಾಗೂ ಪಾಂಡಿತ್ಯದ ಬಗ್ಗೆ ತಿಳಿದಿದ್ದ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ತಕ್ಷಣವೇ ದೆಹಲಿಗೆ ದೌಡಾಯಿಸಿ, ನಾರಿಮನ್ ನಿವಾಸದ ಮುಂದೆ ಬಂದು ನಿಂತಿದ್ದರು. ‘ನನ್ನ ಮನೆ ಗೇಟ್ ಬಳಿಯೂ ಬರುವುದು ಬೇಡ’ ಎಂದಿದ್ದರಿಂದ ಎಂ.ಬಿ. ಪಾಟೀಲ್ ಗೇಟ್ ಎದುರೇ ಕೆಲ ಹೊತ್ತು ನಿಂತಿದ್ದರು. ನಂತರ ಒಳಪ್ರವೇಶಿಸಿ, ‘ನಮ್ಮ ಕೆಲ ಜನಪ್ರತಿನಿಧಿಗಳ ಆರೋಪಕ್ಕೆ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ನಮ್ಮ ಕೈಬಿಡಬೇಡಿ. ಭಾವಾವೇಶದಲ್ಲಿ ಏನೇನೋ ಮಾತನಾಡಿದ್ದಾರೆ. ಅದನ್ನು ಕಿವಿಗೆ ಹಾಕಿಕೊಳ್ಳಬೇಡಿ ’ ಎಂದು ವಿನಮ್ರವಾಗಿ ಕೇಳಿಕೊಂಡರು.
ಸಮಾಧಾನದಿಂದಲೇ ಉತ್ತರಿಸಿದ್ದ ನಾರಿಮನ್, ‘ಕಳೆದ 30 ವರ್ಷಗಳಿಂದ ಕರ್ನಾಟಕದ ಪರ ವಾದಿಸುತ್ತಿದ್ದೇನೆ. ಒಂದೇ ಒಂದು ಬಾರಿ ಕೂಡ ನನಗೆ ನೀಡುವ ಫೀಸನ್ನು ಹೆಚ್ಚಿಗೆ ಮಾಡಿ ಎಂದು ಕೇಳಿಲ್ಲ. ಬೇರೆ ಕಕ್ಷಿದಾರರಿಂದ ತೆಗೆದುಕೊಳ್ಳುವ ಪ್ರಮಾಣದ ಮೂರನೇ ಒಂದು ಭಾಗದಷ್ಟು ಫೀಸನ್ನು ಮಾತ್ರ ನಿಮ್ಮಿಂದ ಪಡೆಯುತ್ತಿದ್ದೇನೆ. ಹಣಕ್ಕಾಗಿ ಕೆಲಸ ಮಾಡಿದವನಲ್ಲ. ನನಗೆ ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ ಇದೆ. ನಾನು ವಾದಿಸುವುದು ಬೇಡ ಎಂದರೆ ಗೌರವಪೂರ್ವಕವಾಗಿಯೇ ತೆಗೆದುಹಾಕಿ. ದಯವಿಟ್ಟು ಮಾಧ್ಯಮ, ಸದನದಲ್ಲಿ ಈ ಬಗ್ಗೆ ಮಾತನಾಡಿ ಅವಮಾನಿಸಬೇಡಿ. ನನ್ನ ಕೆಲಸಕ್ಕೆ ಕೊಟ್ಟ ಎಲ್ಲ ಹಣವನ್ನು ಹಿಂತಿರುಗಿಸುತ್ತೇನೆ’ ಎಂದಿದ್ದರು. ನಾರಿಮನ್ ಮಾತುಗಳನ್ನು ಕೈಕಟ್ಟಿಕೊಂಡೇ ಕೇಳಿದ್ದ ಸಚಿವ ಪಾಟಿಲ್, ತಕ್ಷಣವೇ ಸಿಎಂ ಸಿದ್ದರಾಮಯ್ಯರಿಗೆ ಕರೆ ಮಾಡಿ, ನಾರಿಮನ್ ಜತೆ ಮಾತನಾಡುವಂತೆ ಕೋರಿದರು. ಸಿದ್ದರಾಮಯ್ಯನವರೂ ನಾರಿಮನ್​ರನ್ನು ಸಮಾಧಾನಪಡಿಸಿ, ‘ಎಲ್ಲರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನಮ್ಮಿಂದ ದೂರವಾಗಬೇಡಿ’ ಎಂದು ವಿನಂತಿಸಿಕೊಂಡರು. ಅಂದು ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಕೂಡ ನಾರಿಮನ್ ಜತೆ ದೂರವಾಣಿಯಲ್ಲಿ ಮಾತನಾಡಿ, ‘ನೀವೇ ನಮ್ಮ ಮಾರ್ಗದರ್ಶಕರು. ನಮ್ಮ ಪಕ್ಷದ ಮುಖಂಡರ ಹೇಳಿಕೆಗಳಿಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಸಂತೈಸುವ ಯತ್ನ ಮಾಡಿದ್ದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕೂಡ ನಾರಿಮನ್​ಗೆ ಫೋನಾಯಿಸಿ, ‘ನೀವು ದುಡುಕಿನ ತೀರ್ಮಾನ ಕೈಗೊಳ್ಳಬೇಡಿ. ನೀವು ದೂರವಾದರೆ, ಕಾವೇರಿ ಕಣಿವೆಯ 10,000 ರೈತರನ್ನು ಕರೆದುಕೊಂಡು ಬಂದು ನಿಮ್ಮ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎಂದರು. ಕೊನೆಗೂ ಸಡಿಲಗೊಂಡ ನಾರಿಮನ್, ಕರ್ನಾಟಕದೊಂದಿಗೇ ಇರುತ್ತೇನೆ ಎಂದು ಒಪ್ಪಿಕೊಂಡಿದ್ದರು. ನಾರಿಮನ್ ಅವರಿಗೆ ಕರ್ನಾಟಕದ ನೆಲ-ಜಲದ ಬಗ್ಗೆ ಅಪಾರ ಪ್ರೀತಿಯಿತ್ತು. ನ್ಯಾಯಾಧಿಕರಣ, ಸುಪ್ರೀಂಕೋರ್ಟ್ ಆವರಣದಲ್ಲಿ ಕನ್ನಡದ ಪತ್ರಕರ್ತರು, ‘ಸರ್, ನಾವು ಕರ್ನಾಟಕದವರು’ ಎಂದು ಪರಿಚಯ ಮಾಡಿಕೊಳ್ಳುವಾಗ, ‘ನಾನೂ ಕರ್ನಾಟಕದವನೇ’ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
