ಬೆಂಗಳೂರು:ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಪ್ರಕಟಗೊಂಡಿದ್ದ ಪ್ರಶಸ್ತಿ ಪಟ್ಟಿಯನ್ನೇ ಅಸಿಂಧುಗೊಳಿಸಿ ಹೊಸ ಪುರಸ್ಕೃತರ ಪಟ್ಟಿ ಪ್ರಕಟಿಸಿದ ನಾಟಕ ಅಕಾಡೆಮಿಯ ನಡೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಪ್ರತಿವರ್ಷ ಡಿಸೆಂಬರ್-ಜನವರಿಯಲ್ಲಿ ಎಲ್ಲ ಅಕಾಡೆಮಿಗಳೂ ಪ್ರಶಸ್ತಿ ಘೊಷಣೆ ಮಾಡುತ್ತವೆ. ನಾಟಕ ಅಕಾಡೆಮಿ ಕೂಡ 2018ನೇ ಸಾಲಿನ ಪ್ರಶಸ್ತಿಗಳನ್ನು ಕಳೆದ ಡಿಸೆಂಬರ್​ನಲ್ಲಿ ಘೋಷಿಸಿತ್ತು. ಆದರೆ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಸಮಿತಿ ವಿಸರ್ಜನೆ ಆಗುತ್ತದೆ ಎಂಬ ಕಾರಣಕ್ಕೆ 2019ನೇ ಸಾಲಿನ ಪ್ರಶಸ್ತಿಗಳನ್ನು ತರಾತುರಿಯಲ್ಲಿ ಜುಲೈನಲ್ಲೇ ಘೋಷಿಸಲಾಯಿತು. ಜೆ.ಲೋಕೇಶ್ ಅವರನ್ನು ಅಕಾಡೆಮಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದ ಅಂದಿನ ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೇ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ಮುಂದಾಗಿದ್ದರು. ಉಮಾಶ್ರೀ ಉತ್ತಮ ಕಲಾವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ರೀತಿ ಎಲ್ಲ ಅಕಾಡೆಮಿಗಳೂ ಅಂತಿಮ ದಿನಗಳಲ್ಲಿ ಯದ್ವಾತದ್ವಾ ನಿರ್ಧಾರ ಕೈಗೊಂಡರೆ, ಅಕಾಡೆಮಿಗಳ ಕಾರ್ಯಕ್ಕೆ ಧಕ್ಕೆ ಆಗುತ್ತದೆ. ಇಂತಹ ಕೆಟ್ಟ ನಡವಳಿಕೆ ಮುಂದುವರಿಯಬಾರದು ಎಂಬ ಹಿನ್ನೆಲೆಯಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಾಟಕ ಅಕಾಡೆಮಿ ಮೂಲಗಳು ಸಮರ್ಥಿಸಿಕೊಂಡಿವೆ.
ಇತ್ತ ಹಿಂದಿನ ಅಧ್ಯಕ್ಷ ಜೆ. ಲೋಕೇಶ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅಕಾಡೆಮಿ ಅಧ್ಯಕ್ಷ ಭೀಮಸೇನ್ ಪತ್ರಿಕೆಗಳಿಗೆ ತಪ್ಪು ಹೇಳಿಕೆಯನ್ನು ಕೊಟ್ಟು ತಪ್ಪನ್ನು ಸಮರ್ಥಿಸಿಕೊಂಡಿದ್ದಾರೆ. ಅಕಾಡೆಮಿಯ ಸರ್ವಸದಸ್ಯರ ಸಭೆಗೆ ಎರಡು ವಾರಗಳ ಮುನ್ನವೇ ಎಲ್ಲ ಸದಸ್ಯರಿಗೂ ಪತ್ರದ ಮೂಲಕ ಸಭೆಗೆ ಬರಲು ತಿಳಿಸಲಾಗಿತ್ತು. ನಿಯಮಗಳ ಪ್ರಕಾರವೇ ಸರ್ವಾನುಮತದಿಂದ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಆಯ್ಕೆ ಮಾಡಲಾದ ನಡಾವಳಿಗಳಿಗೆ ಅಕಾಡೆಮಿ ಅಧ್ಯಕ್ಷರ ಜೊತೆಗೆ ರೆಜಿಸ್ಟ್ರಾರ್ ಅವರೂ ಸಹಿ ಹಾಕಿದ್ದಾರೆ. ಸತ್ಯ ಮುಚ್ಚಿಟ್ಟು ಸುಳ್ಳು ಸಮರ್ಥನೆಗಳನ್ನು ಕೊಡುತ್ತಿರುವ ನಾಟಕ ಅಕಾಡೆಮಿ ಅಧ್ಯಕ್ಷರ ಹೇಳಿಕೆಗಳನ್ನು ಖಂಡಿಸುತ್ತೇನೆ ಮತ್ತು ಪ್ರಶಸ್ತಿಗೆ ಆಯ್ಕೆಯಾದ ರಂಗಸಾಧಕರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಇದೊಂದು ಅಸಹ್ಯ ಎಂದ ಉಮಾಶ್ರೀ:ಘೊಷಣೆಯಾದ ಪ್ರಶಸ್ತಿ ರದ್ದುಮಾಡುವುದು ಅಸಹ್ಯ ಎಂದು ಕಲಾವಿದೆ ಹಾಗೂ ಮಾಜಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಅವರು, ನನಗೆ ಈಗಾಗಲೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಆದರೆ ಎಲೆಮರೆಕಾಯಿಯಂತೆ ಕಲಾಸೇವೆ ಮಾಡುತ್ತಿರುವ ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ನೀಡಿದೆ ಎಂಬ ಅಭಿಮಾನ ಇರುತ್ತಿತ್ತು. ತಂತಮ್ಮ ಕ್ಷೇತ್ರದಲ್ಲಿ ಅವಿರತ ಶ್ರಮದಿಂದ ದುಡಿಯುತ್ತಿರುವ ಕಲಾವಿದರಿಗೆ ಅಕಾಡೆಮಿಯ ಸಣ್ಣ ಪ್ರಶಸ್ತಿಗೂ ಯೋಗ್ಯತೆ ಇಲ್ಲವೇ? ನಮ್ಮ ಸರ್ಕಾರ ಬರುವ ಮೊದಲು ಬಿಜೆಪಿ ಸರ್ಕಾರದಲ್ಲಿದ್ದ ಅಕಾಡೆಮಿಗಳ ಘೋಷಣೆ ಮಾಡಿದ್ದ ಪ್ರಶಸ್ತಿಯನ್ನು ಒಂದೂ ಬದಲಾವಣೆ ಇಲ್ಲದಂತೆ ಪ್ರದಾನ ಮಾಡಿರಲಿಲ್ಲವೇ? ಕಲಾ ಕ್ಷೇತ್ರದಲ್ಲಿ ರಾಜಕೀಯ ಏಕೆ ಮಾಡುತ್ತಿದ್ದಾರೆ? ನನ್ನ ಮೇಲೆ ಇದ್ದ ಸಿಟ್ಟಿಗೆ ನನ್ನ ಹೆಸರನ್ನು ತೆಗೆದುಹಾಕಬಹುದಿತ್ತಲ್ಲ? ಎಲ್ಲರಿಗೂ ಅವಮಾನ ಮಾಡುವ ಕಾರ್ಯ ಬೇಕಿರಲಿಲ್ಲ. ಯಡಿಯೂರಪ್ಪನವರು ಕಲಾವಿದರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರುವವರು. ಅವರ ಸರ್ಕಾರದಲ್ಲಿ ಇಂಥ ಕೆಲಸ ಆಗಬಾರದಿತ್ತು. ಮಂತ್ರಿಗಳು ಇದನ್ನೆಲ್ಲ ನೋಡುತ್ತ ಸುಮ್ಮನಿರುವ ಬದಲು ಮಾರ್ಗದರ್ಶನ ಮಾಡಬಹುದಿತ್ತಲ್ಲ? ಕಲಾವಿದರು ಎಂಬುದು ಒಂದು ಕುಟುಂಬವಿದ್ದಂತೆ. ಅಕಾಡೆಮಿ ಅಧ್ಯಕ್ಷರು, ಸದಸ್ಯರು ನಿಜವಾಗಲೂ ನಾಟಕ ಕ್ಷೇತ್ರದಲ್ಲಿ ದುಡಿದಿದ್ದರೆ ಕುಟುಂಬದ ನೋವು ಅರ್ಥವಾಗುತ್ತಿತ್ತು ಎಂದಿದ್ದಾರೆ.
ಸರ್ಕಾರದಿಂದ ನಿರ್ದೇಶನವಿಲ್ಲ
ಪ್ರಶಸ್ತಿ ರದ್ದುಪಡಿಸಿದ್ದು ಸಂಪೂರ್ಣವಾಗಿ ಅಕಾಡೆಮಿಯ ನಿರ್ಧಾರ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ. ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿ, ಉಮಾಶ್ರೀ ಸಚಿವರಾಗಿದ್ದಾಗಲೇ ನೇಮಕವಾಗಿದ್ದ ಅಕಾಡೆಮಿ, ಅವರಿಗೇ ಪ್ರಶಸ್ತಿ ನೀಡಿದೆ. ಜತೆಗೆ ಅಧಿಕಾರಾವಧಿ ಮುಕ್ತಾಯವಾದ ನಂತರ ಆದೇಶಿಸಿದ್ದು, ರಿಜಿಸ್ಟ್ರಾರ್ ಸಹಿಯೂ ಇಲ್ಲ. ಈ ಘೊಷಣೆಗೆ ಯಾವುದೇ ಸಿಂಧುತ್ವ ಇಲ್ಲ ಎಂದು ಅಕಾಡೆಮಿಯಿಂದ ನನಗೆ ಮಾಹಿತಿ ನೀಡಲಾಯಿತು. ತಾಂತ್ರಿಕ ಕಾರಣ ಏನೇ ಇದ್ದರೂ ಉಮಾಶ್ರೀಯವರೂ ಕಲಾವಿದೆಯಲ್ಲವೇ, ಮುಂದುವರಿಸಬಹುದೇ ನೋಡಿ ಎಂದು ತಿಳಿಸಿದ್ದೆ. ಆದರೆ ಸರ್ವಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
