ನಾಟಕ, ಕಥೆ, ಕಾದಂಬರಿ, ವಿಮರ್ಶೆ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗಳ ಮೂಲಕ ಕುವೆಂಪು ಹೊಸದೊಂದು ವಿಕ್ರಮವನ್ನೇ ಮಾಡಿದ್ದಾರೆ. ಕುವೆಂಪು ಬದುಕು ಸರಳತೆಯೆಂಬ ಸಿರಿಯಲ್ಲಿ ವಿರಾಜಮಾನವಾದದ್ದು. ಸರಳತೆ ಅವರ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಅವರ ಬದುಕು ವಿವೇಕಾನಂದ-ಪರಮಹಂಸರ ಪರಿಧಿಯಲ್ಲಿ ವಿಕಸಿತವಾಗಿತ್ತು.
ಸರ್ವಕಾಲಕ್ಕೂ ಪ್ರಸ್ತುತ ಶ್ರೀರಾಮಾಯಣದರ್ಶನಂ
ಡಾ.ಪ್ರಧಾನ್ ಗುರುದತ್ತಆಧುನಿಕ ಯುಗದ ಮಹೋನ್ನತ ಕಾವ್ಯಸಾಧನೆಯ ಪ್ರತೀಕವಾಗಿರುವ ಕುವೆಂಪು ಅವರ ‘ಶ್ರೀರಾಮಾ ಯಣದರ್ಶನಂ’ ಜಾಗತಿಕ ಸಾಹಿತ್ಯಕ್ಕೆ ಕನ್ನಡದ ವಿಶಿಷ್ಟ ಕೊಡುಗೆಯೂ ಆಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ 1955ರ ಮೊದಲ ವರ್ಷದಲ್ಲಿಯೇ ಅದರ ಪ್ರಶಸ್ತಿ ಪುರಸ್ಕೃತವಾದ ಮೊದಲ ಕೃತಿ ಇದಾಗಿದೆ. ಅಲ್ಲದೆ, ‘ಭಾರತೀಯ ಜ್ಞಾನಪೀಠ ಪ್ರಶಸ್ತಿ’ (1968) ಮತ್ತು ‘ಪಂಪ ಪ್ರಶಸ್ತಿ’ (1988)ಗಳೂ ಕನ್ನಡದಲ್ಲಿ ಮೊದಲ ಬಾರಿಗೆ ಈ ಮಹಾಕಾವ್ಯಕ್ಕೆ ಲಭಿಸಿದವು.
‘ಸವೋದಯ’, ‘ಸಮನ್ವಯ’ ಮತ್ತು ‘ಪೂರ್ಣದೃಷ್ಟಿ’ಗಳ ಪ್ರತೀಕವಾಗಿರುವ ಈ ಕಾವ್ಯದ ಆವಿರ್ಭಾವ ಭಾರತೀಯ ಕಾವ್ಯಕ್ಷೇತ್ರದಲ್ಲಿ ಮಾತ್ರವಲ್ಲದೆ, ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿಯೇ ಒಂದು ವಿಸ್ಮಯಕಾರಿ ವಿಷಯವಾಗಿದೆ. ವಾಸ್ತವವಾಗಿ, ಈ ಮೂರು ಮಾತುಗಳು ಈ ಮಹಾಕಾವ್ಯದ ದರ್ಶನಲೋಕವನ್ನು ತೆರೆದುತೋರುವ ಕೀಲಿಕೈಗಳೇ ಆಗಿವೆ.
ಅಯೋಧ್ಯಾ, ಕಿಂಧಾ, ಲಂಕಾ ಮತ್ತು ಶ್ರೀ ಸಂಪುಟಗಳೆಂಬ ನಾಲ್ಕು ಸಂಪುಟಗಳಲ್ಲಿ, 22,290 ಪಂಕ್ತಿಗಳಲ್ಲಿ ಈ ಮಹಾಕಾವ್ಯ ಮೈದಳೆದಿದೆ. ಭಾಷಿಕ-ಸಾಹಿತ್ಯದ ಸಿದ್ಧಿಯ ಉತ್ತುಂಗ ಶಿಖರವನ್ನೇ ಇದು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲ, ಮಹಾಕಾವ್ಯದ ಕಾಲ ಮುಗಿದು ಹೋಯಿತು ಎನ್ನುವವರಿಗೆ ಒಂದು ಸವಾಲಾಗಿ, ಮಹತ್ತಾದುದುಕ್ಕೆ ಕಾಲದ ಕಟ್ಟಿಲ್ಲವೆನ್ನುವುದಕ್ಕೆ ಒಂದು ಸಾಕ್ಷಿಯಾಗಿ ಶ್ರೀರಾಮಾಯಣದರ್ಶನಂ ಸೃಷ್ಟಿಯಾಗಿದೆ.
ಹಳೆಯ ಕಥೆ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರಮಟ್ಟಿಗೆ ಹೊಸದಾಗಬಹುದು ಎಂಬುದಕ್ಕೆ ಈ ಕಾವ್ಯ ಉಜ್ವಲ ಉದಾಹರಣೆ. ‘ಅಂತೆಯೇ ವೈಜ್ಞಾನಿಕ ಯುಗದ ಪ್ರತಿಭೆಯ ಮೂಸೆಯಲ್ಲಿ ಕರಗಿ ಹೊರಬರುವಾಗ, ಹೊಸ ರೂಪ, ಸೌಂದರ್ಯಗಳಿಂದ ಪ್ರಕಾಶಿಸುತ್ತಿರುವುದು ಮಾತ್ರವಲ್ಲದೆ, ಕಾಲವಶರಾದ ಪಂಪ ನಾರಣಪ್ಪಾದಿಗಳಿಗೆ ಅಲಭ್ಯವಾಗಿದ್ದ ವಿಜ್ಞಾನ ಯುಗದ ಅನುಭವಾಲೋಚನೆಗಳಿಂದ ಸಮನ್ವಿತವಾಗಿ ಪ್ರಾಗ್-ವರ್ತಮಾನ್- ಭವಿಷ್ಯದ್ ವ್ಯಾಪಿಯಾದ ‘ದರ್ಶನ’ವನ್ನೊಳಗೊಂಡು, ಈ ಯುಗದ ವ್ಯಕ್ತಾವ್ಯಕ್ತ ಅಭೀಪ್ಸೆಗಳಿಗೆ ನುಡಿಗೊಟ್ಟಿರುವ’ ಮಹತ್ತರ ಕೃತಿಯೂ ಆಗಿದೆ.
ಇದರ ಬೃಹದ್ಗರ್ಭದಲ್ಲಿ ಅಡಗಿರುವ ಕಲ್ಪಾಂತಸ್ಥಾಯಿಯೂ ಲೋಕಾತೀತವೂ ಅತೀಂದ್ರಿಯಗಮ್ಯವೂ ಆದ ರಹಸ್ಯಗಳನ್ನು ಕೆದಕಿ ಬೆದಕಿ ನೋಡಿ ಇದರ ಗುಟ್ಟು ಇಷ್ಟೇ ಎಂದು ಹೇಳಲು ಎಂಟೆರ್ದೆಯಲ್ಲ ಹದಿನಾರೆರ್ದೆಯಿದ್ದರೂ ಸಾಲದು. ಇಲ್ಲಿಯ ಬಹಿರ್ಘಟನೆಗಳು ಯಾರಿಗಾದರೂ ಅರ್ಥವಾಗುತ್ತವೆ. ಆದರೆ, ಇಂದ್ರಿಯಾತೀತವಾದ ಅಲೌಕಿಕ ಘಟನೆಗಳು ರಸಋಷಿಯ ದಿವ್ಯ ಪ್ರತಿಭೆಗೆ ಮಾತ್ರ ಗೋಚರವಾಗುತ್ತವೆ. ಪೂರ್ಣದೃಷ್ಟಿಯಿಂದ ನೋಡುವವರಿಗೆ ಮಾತ್ರ ತುಷ್ಟಿಪುಷ್ಟಿಗಳೆರಡೂ ಲಭಿಸಿ, ಅವರ ಚೇತನ ಬೆಳಗುತ್ತದೆ. ಹೀಗಾಗಿ ಕುವೆಂಪು ಅವರೇ ಹೇಳಿರುವಂತೆ, ‘ಕಾವ್ಯ ಬೇಕಾದವರಿಗೆ ಇಲ್ಲಿ ಕಾವ್ಯ ಸಿಗುತ್ತದೆ; ಕಥೆ ಬೇಕಾದವರಿಗೆ ಕಥೆ ಸಿಗುತ್ತದೆ; ದರ್ಶನ ಬೇಕಾದವರಿಗೆ ದರ್ಶನ ಸಿಗುತ್ತದೆ’.
ಮಹಾಕವಿಗಳೆಲ್ಲ ತಮ್ಮ ಕಾವ್ಯವಸ್ತುವಿಗಾಗಿ ತಮ್ಮದೇ ಆದ ಭಾಷಾಮಾಧ್ಯಮವನ್ನೂ ಸೃಷ್ಟಿಸಿಕೊಂಡಿದ್ದರು. ಕುವೆಂಪು ಅವರೂ ತಮ್ಮದೇ ಆದ ವಿಶಿಷ್ಟ ಭಾಷಾ ಮಾಧ್ಯಮವನ್ನು ಸೃಷ್ಟಿಸಿಕೊಂಡಿದ್ದಾರೆ. ಕುವೆಂಪು ಅವರ ವ್ಯಾಪಕ, ಆಳವಾದ ಅಧ್ಯಯನ ಪರಿಣಾಮವಾಗಿ ಪಾಶ್ಚಾತ್ಯ ಕಾವ್ಯಲೋಕದ ಅನೇಕ ಭಾವನೆ, ಕಲ್ಪನೆ, ನುಡಿಗಟ್ಟುಗಳು ಅರಿವಿದ್ದೋ, ಇಲ್ಲದೆಯೋ ಕಾವ್ಯದಲ್ಲಿ ಅಳವಟ್ಟಿದ್ದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಅವುಗಳನ್ನು ಅವರು ಸ್ವೀಕರಿಸಿ ಅರಗಿಸಿಕೊಂಡು ಹೊಸ ಚೈತನ್ಯಯುಕ್ತವಾಗಿಸಿ ಪ್ರತಿಭಾಪೂರ್ಣವಾಗಿ ಬಳಸಿಕೊಂಡಿದ್ದಾರೆ. ಯಾವುದನ್ನೂ ‘ಹರಣ’ವಾಗಿಸಿಕೊಂಡಿಲ್ಲ ಎಂಬುದನ್ನು ತೌಲನಿಕ ಅಧ್ಯಯನ ಸ್ಪಷ್ಟಪಡಿಸಬಲ್ಲದು.
ಯಾವುದೇ ಜಾಗತಿಕ ಸಾಹಿತ್ಯಿಕ ಪ್ರತಿಭೆಯ ಎದುರೂ ಕುವೆಂಪು ಮಂಕಾಗಿ ನಿಲ್ಲುವುದಿಲ್ಲ. ಕೈಯೊಡ್ಡಿ ಕೀಳಾಗುವುದಿಲ್ಲ ಎಂಬುದಕ್ಕೆ ಹೋಮರನಂಥ ಪಾಶ್ಚಾತ್ಯ ಸಾಹಿತ್ಯಲೋಕದ ದೈತ್ಯ ಪ್ರತಿಭೆಯ ಚೇತನವನ್ನೂ ತಮ್ಮ ಒರೆಗಲ್ಲಿನಲ್ಲಿ ಉಜ್ಜಿ ನೋಡುವ ಕುವೆಂಪು ಅವರ ನೈಕಷ ಮನೋಧರ್ಮವೇ ಸಾಕ್ಷಿಯಾಗಿದೆ.
ಕುವೆಂಪು ಅವರ ಕಾವ್ಯ, ವಾಲ್ಮೀಕಿಯ ಶ್ರೀರಾಮಾಯಣವನ್ನು ಅನೇಕ ವಿವರಗಳಲ್ಲಿ ಮೀರಿ ನಿಲ್ಲುತ್ತದೆ ಎನ್ನುವುದಕ್ಕೆ ಅನೇಕ ಪ್ರಸಂಗಗಳು ಉದಾಹಣೆಗಳಿವೆ. ಈ ಕಾವ್ಯದ ಅಧಿನಾಯಕ ಪಾತ್ರವಾಗಿರುವ ಶ್ರೀರಾಮನ ಬಗೆಗಿನ ಅವರ ದೃಷ್ಟಿಕೋನ ವನ್ನೇ ತೆಗೆದುಕೊಳ್ಳಬಹುದು. ವಾಲ್ಮೀಕಿ ಯಾದರೂ ರಾವಣನ ವಧೆಯನ್ನು ಚಿತ್ರಿಸುವುದನ್ನೇ ತನ್ನ ಕಾವ್ಯದ ಪರಮಗುರಿಯಾಗಿಸಿಕೊಂಡಿದ್ದರೆ, ಕುವೆಂಪು ಮೂಲದ ಆ ಚೌಕಟ್ಟನ್ನು ಅನುಸರಿಸಿ, ರಾವಣವದಾರ್ಥಮೀ ನರತನು ವನಾಶ್ರಯಿಸಿ ಬಂದ ಲೀಲಾವತಾರಿಯೆ (ಪುಟ 837) ಎಂದು ರಾಮನನ್ನು ಸ್ತುತಿಸಿದ್ದಾರಾದರೂ ‘ರಾವಣ ಕಂಸರನ್ನು ವ್ಯಕ್ತಿಶಃ ಕೊಲ್ಲುವುದಕ್ಕೆ ಮಾತ್ರವೇ ಭಗವಂತ ಅವತರಿಸುತ್ತಾನೆ ಎಂಬುದು ಅಯೋಗಮತಿಗಳಿಗಾಗಿ ಇರುವ ಕವಿಕಲ್ಪನೆ’ ಎಂದು ದೃಢವಾಗಿ ನಂಬಿದ್ದಾರೆ. ಆದ್ದರಿಂದಲೇ ಅವರ ಯೋಗಮತಿ ನಾವು ಒಮ್ಮೆಗೆ ಬೆಚ್ಚಿಬೀಳುವಂಥ ಮಾತುಗಳನ್ನಾಡುತ್ತದೆ.
ಸಂಪ್ರದಾಯವನ್ನು ಮೀರಿ ನಿಲ್ಲುವ ಈ ಧೈರ್ಯವನ್ನು ಇದು ವರೆಗೆ ಯಾರೂ ತೋರಿರಲಿಲ್ಲವೆಂಬುದು ಗಮನಾರ್ಹವಾದ ಸಂಗತಿ. ಆದರೆ ಹಾಗೇ ಮಾಡುವಲ್ಲಿಯೂ ಮೂಲದ ಚೌಕಟ್ಟಿಗಾಗಲೀ, ಆಶಯಕ್ಕಾಗಲೀ ಭಂಗ ತಂದಿಲ್ಲದಿರುವುದು ಕುವೆಂಪು ಅವರ ಜಾಣ್ಮೆಯನ್ನೇ ತೋರುತ್ತದೆ. ಹಾಗಾಗಿ ಕುವೆಂಪು ಅವರ ಶ್ರೀರಾಮಾಯಣದರ್ಶನಂ ಸರ್ವಕಾಲಕ್ಕೂ ಪ್ರಸ್ತುತ ಎನ್ನಬಹುದು.
(ಲೇಖಕರು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
