| ಸಂತೋಷ್ ಪಾವಗಡಶತಮಾನಗಳ ಹೋರಾಟದ ನಂತರ 1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತ ದೇಶ 1952ರಲ್ಲಿ ಭಾರತೀಯ ವನ್ಯಜೀವಿ ಮಂಡಳಿ ಸ್ಥಾಪಿಸಿತು. ಅಷ್ಟು ವರ್ಷಗಳ ನಂತರ ಸ್ವಾತಂತ್ರ್ಯ ಪಡೆದ ಒಂದು ದೇಶದ ಮುಂದೆ, ಗಮನಹರಿಸಲು ಸಾಕಷ್ಟು ವಿಷಯಗಳಿದ್ದರೂ ಸರ್ಕಾರ ರಚನೆಯಾದ ನಾಲ್ಕನೇ ವರ್ಷದಲ್ಲಿಯೇ ನಶಿಸುತ್ತಿರುವ ವನ್ಯಜೀವಿಗಳನ್ನು ಉಳಿಸುವ ಸಲುವಾಗಿ ಒಂದು ಮಂಡಳಿ ಸ್ಥಾಪಿಸುವುದಕ್ಕೆ ಆದ್ಯತೆ ನೀಡಿದ್ದ ಅಂದಿನ ಹಿರಿಯರ ದೂರದೃಷ್ಟಿಗೆ ವಂದಿಸಲೇಬೇಕು. ಅಲ್ಲದೆ, ಆ ಮಂಡಳಿಯನ್ನು ಹೆಸರಿಗಷ್ಟೇ ಮಾಡದೆ, ಅದನ್ನು ಮುನ್ನಡೆಸಲು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅನುಭವ ಹಾಗೂ ಆಸಕ್ತಿ ಇದ್ದ ನಮ್ಮ ಮೈಸೂರು ಸಂಸ್ಥಾನದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಅದರ ಪ್ರಥಮ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಮುಂದೆ ಇದೇ ಮಂಡಳಿಯು ಶುರು ಮಾಡಿಸಿದ್ದು ನಾವು ಪ್ರತಿ ವರ್ಷ ಆಚರಿಸುವ ‘ವನ್ಯಜೀವಿ ಸಪ್ತಾಹ’ ಕಾರ್ಯಕ್ರಮ. ಜನರಲ್ಲಿ ವನ್ಯಜೀವಿಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ, ಸೂಕ್ಷ್ಮತೆ ಮೂಡಿಸುವಲ್ಲಿ ವನ್ಯಜೀವಿ ಸಪ್ತಾಹವು ಪ್ರಮುಖ ಪಾತ್ರ ವಹಿಸಿತ್ತು.
ವನ್ಯಜೀವಿ ಸಪ್ತಾಹ ಶುರುವಾಗುವುದಕ್ಕೂ ಮುಂಚೆಯೇ ವನ ಮಹೋತ್ಸವವನ್ನು ರಾಷ್ಟ್ರೀಯ ಚಟುವಟಿಕೆಯಾಗಿ ನಡೆಸಲಾಗುತ್ತಿತ್ತು. ಹಾಗೇಯೇ ವನ್ಯಜೀವಿಗಳನ್ನು ಕೇಂದ್ರವಾಗಿಸಿಕೊಂಡು ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಹಾಗೂ ಅವುಗಳ ಸಂರಕ್ಷಣೆಗೆ ಜನರ ಬೆಂಬಲ ಗಳಿಸುವ ಉದ್ದೇಶಕ್ಕಾಗಿ ಶುರುವಾಗಿದ್ದು ವನ್ಯಜೀವಿ ಸಪ್ತಾಹ. 1952ರಲ್ಲಿ ರಚನೆಯಾದ ವನ್ಯಜೀವಿ ಮಂಡಳಿಯು ಅದೇ ವರ್ಷ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಬಗ್ಗೆ ರ್ಚಚಿಸಿತ್ತು. 1954ರಲ್ಲಿ ಮೊದಲ ವನ್ಯಜೀವಿ ಸಪ್ತಾಹಕ್ಕೆ ಚಾಲನೆ ನೀಡಿತು. ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರ ಅಂದರೆ ಅಕ್ಟೋಬರ್ 2 ರಿಂದ 8 ರವರೆಗೆ ಈ ಸಪ್ತಾಹ ನಡೆಸಲಾಗುತ್ತಿದ್ದು, ಇದರಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ವತಿಯಿಂದ, ಅರಣ್ಯ ಇಲಾಖೆಯ ವಿವಿಧ ಮಟ್ಟದಲ್ಲಿ ಹಾಗೂ ಹಲವು ಸಂಘ, ಸಂಸ್ಥೆಗಳಿಂದ ನಾನಾ ರೀತಿಯ ಚಟುವಟಿಕೆಗಳನ್ನು ಸಪ್ತಾಹದ ವೇಳೆ ನಡೆಸಲಾಗುತ್ತದೆ. ಮುಖ್ಯವಾಗಿ, ಶಾಲಾ ಮಕ್ಕಳನ್ನು ಕೇಂದ್ರವಾಗಿಸಿಕೊಂಡು ಚಟುವಟಿಕೆಗಳನ್ನು (ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚರ್ಚೆ ಸೇರಿ ಹಲವು) ಒಂದೆಡೆಯಾದರೆ ಜನರನ್ನು ಆಕರ್ಷಿಸಲು ವಿಂಟೇಜ್ ಕಾರ್ ರ್ಯಾಲಿ, ವಾಕಥಾನ್ ತರಹದ ಚಟುವಟಿಕೆಗಳನ್ನೂ (ವನ್ಯಜೀವಿಗಳಿಗೆ ನೇರವಾಗಿ ಸಂಬಂಧಿಸದ) ನಡೆಸಲಾಗುತ್ತಿದೆ.
ಜೀವವೈವಿಧ್ಯತೆಯ ದೇಶ ಭಾರತ:ಅತಿ ಹೆಚ್ಚು ಜೀವವೈವಿಧ್ಯತೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಪ್ರಪಂಚದ ಒಟ್ಟು ಭೂ ಪ್ರದೇಶದಲ್ಲಿ ಭಾರತವು ಶೇ. 2.4 ರಷ್ಟು ಹೊಂದಿದ್ದರೂ ಅದು ಜಾಗತಿಕವಾಗಿ ಗುರುತಿಸಲ್ಪಟ್ಟ ಒಟ್ಟು ಜೀವಿಗಳ ಪ್ರಭೇದಗಳಲ್ಲಿ ಶೇ. 7-8ಕ್ಕೆ ಆಶ್ರಯ ನೀಡಿದೆ. 91 ಸಾವಿರಕ್ಕೂ ಅಧಿಕ ಪ್ರಾಣಿ ಪ್ರಭೇದಗಳು ಹಾಗೂ 45 ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ಭಾರತದಲ್ಲಿ ಗುರುತಿಸಲಾಗಿದೆ. ಇದರೊಂದಿಗೆ ನಮ್ಮ ದೇಶದಲ್ಲಿ ಹಲವಾರು ಬಗೆಯ ಪರಿಸರ ವ್ಯವಸ್ಥೆಗಳು, ವನ್ಯಜೀವಿ ವಾಸಸ್ಥಾನಗಳು ಇದ್ದು, ಇವುಗಳ ವೈವಿಧ್ಯತೆಯ ಕಾರಣದಿಂದಲೂ ನಾವು ಇಷ್ಟು ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿಗಳನ್ನು ನೋಡಲು ಸಾಧ್ಯವಾಗಿರುವುದು. ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡá-ಗಳು, ಶೋಲಾ ಹುಲ್ಲುಗಾವಲುಗಳು, ಒಣ ಹುಲ್ಲುಗಾವಲುಗಳು, ನದಿಗಳು, ಮರುಭೂಮಿ, ಕುರá-ಚಲು ಕಾಡು, ಹಿಮಾಚ್ಛಾದಿತ ಪರ್ವತಗಳು, ಸಮುದ್ರಗಳು, ಸಣ್ಣ ದ್ವೀಪಗಳು… ಹೀಗೆ ವೈವಿಧ್ಯಮಯ ಭೂಪ್ರದೇಶಗಳನ್ನು ಹೊಂದಿರುವ ನಾವು, ಪ್ರತಿಯೊಂದು ಭೂಪ್ರದೇಶದಲ್ಲೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ವಿಕಸನಗೊಂಡಿರುವ ವಿವಿಧ ಸಸ್ಯ-ಪ್ರಾಣಿ ಪ್ರಭೇದಗಳಿವೆ. ಇಂತಹ ವೈವಿಧ್ಯ ಜೀವಿಗಳನ್ನು, ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಖಂಡಿತವಾಗಿಯೂ ವೈವಿಧ್ಯಮಯ ಚಟುವಟಿಕೆಗಳು ಹಾಗೂ ವಿಧಾನಗಳ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ವನ್ಯಜೀವಿ ಸಪ್ತಾಹದಂತಹ ಕಾರ್ಯಕ್ರಮ ಅಗತ್ಯವಾಗಿ ಸಹಾಯವಾಗಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗುವ ಅವಶ್ಯಕತೆಯಿದೆ.
ಏಳು ದಶಕಗಳಲ್ಲಿ ಅಪಾರ ನಾಶ:ಅಂದಾಜು ಏಳು ದಶಕಗಳ ಹಿಂದೆ ಶುರುವಾದ ಈ ಉತ್ತಮ ಕಾರ್ಯಕ್ರಮವನ್ನು ಹಾಗೆಯೇ ಮುಂದುವರಿಸುವ ಮುಂಚೆ ನಾವು ಅದರ ಮೂಲ ಉದ್ದೇಶವನ್ನು ಈಡೇರಿಸುತ್ತಿದ್ದೇವೆಯೇ ಎಂಬುದನ್ನು ಪರಾಮಶಿಸಬೇಕಾಗಿದೆ. ಸರ್ಕಾರವೇ ಹೊರ ತಂದಿರುವ ಹಲವಾರು ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಈ ಏಳು ದಶಕಗಳಲ್ಲಿ ಸಾಕಷ್ಟು ಕಾಡು ನಾಶವಾಗಿದೆ, ಹಲವು ವನ್ಯಜೀವಿಗಳು ಅಳಿವಿನಂಚಿಗೆ ಬಂದಿವೆ. ಅದೇ ರೀತಿ, ವನ್ಯಜೀವಿ ವಿಜ್ಞಾನವು ಸಹ ಹಲವು ಪ್ರಭೇದಗಳ ಹಾಗೂ ಅವುಗಳ ವಾಸಸ್ಥಾನಗಳ ಬಗ್ಗೆ ಹೊಸ ವಿಷಯಗಳನ್ನು ಹಾಗೂ ನಮಗೆ ಅಲ್ಲಿಯವರೆಗೂ ಇದ್ದ ತಪ್ಪು ತಿಳಿವಳಿಕೆಗಳನ್ನು ಹೊರತೆಗೆದಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ ಸಿಕ್ಕ ಸಿಕ್ಕಲ್ಲಿ ಮರ ನೆಡುವುದರಿಂದ ಉಪಯೋಗಕ್ಕಿಂತ ತೊಂದರೆಗಳೇ ಹೆಚ್ಚು ಎಂಬುದನ್ನು. ಅದಲ್ಲದೆ, ನಾವು ಕಾಡು ಹಾಗು ಕೆಲವು ದೊಡ್ಡ, ಆಕರ್ಷಕ ಪ್ರಾಣಿಗಳ ರಕ್ಷಣೆಯ ಬಗ್ಗೆಯಷ್ಟೇ ಪ್ರಯತ್ನಗಳನ್ನು ಮಾಡಿರುವ ಕಾರಣ ಇತರ ಪರಿಸರ ವ್ಯವಸ್ಥೆಗಳು ಹಾಗೂ ಅವುಗಳನ್ನು ಅವಲಂಬಿಸಿರುವ ವನ್ಯಜೀವಿಗಳು ನಶಿಸಿಹೋಗುತ್ತಿವೆ. ಉದಾಹರಣೆಗೆ- ಹುಲ್ಲುಗಾವಲುಗಳು ಹಾಗೂ ಅವುಗಳನ್ನು ಅವಲಂಬಿಸಿರುವ ಹೆಬ್ಬಕ, ತೋಳ, ಕತ್ತೆ ಕಿರುಬ, ಕೃಷ್ಣಮೃಗಗಳ ಸದ್ಯದ ಪರಿಸ್ಥಿತಿ. ಇದೇ ರೀತಿ, ಸಾಕಷ್ಟು ವಿಷಯಗಳು ಅಂದಿಗಿಂತ ಇಂದಿಗೆ ಬದಲಾಗಿವೆ ಅಥವಾ ಹೊಸದಾಗಿ ಬೆಳಕಿಗೆ ಬಂದಿವೆ. ಈ ರೀತಿಯ ಹೊಸ ವಿಷಯಗಳನ್ನು ತಿಳಿಯುವ, ತಿದ್ದಿಕೊಳ್ಳುವ ಪ್ರಯತ್ನಗಳು ನಮ್ಮ ವನ್ಯಜೀವಿ ಸಪ್ತಾಹಗಳಲ್ಲಿ ಆಗಬೇಕಿದೆ. ಕೇವಲ ಕಾರ್ಯಕ್ರಮ ಹೆಸರಿಗಷ್ಟೇ, ಅದೇ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ.
ಅಂದು ಇದ್ದ ಹಲವು ಸಮಸ್ಯೆಗಳ ನಡುವೆ ವನ್ಯಜೀವಿಗಳ ಪರಿಸ್ಥಿತಿಯ ಬಗ್ಗೆ ಆಲೋಚಿಸಿದ್ದ ಹಿರಿಯರು ಅವುಗಳ ಉಳಿವಿಗಾಗಿ ಯೋಜನೆಗಳು, ಕಾನೂನುಗಳು ಹಾಗೂ ಸಪ್ತಾಹದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಹಾಗಿದ್ದರೆ, ಇಂದು ಸಾಕಷ್ಟು ಅಭಿವೃದ್ಧಿ ಹೊಂದಿರುವ ನಮ್ಮ ದೇಶ, ವನ್ಯಜೀವಿಗಳ ಹಾಗೂ ಅವುಗಳ ಸಂರಕ್ಷಣೆಯ ಬಗ್ಗೆ ಎಷ್ಟು ಕಾಳಜಿ ವಹಿಸಬೇಕಿತ್ತು, ಎಷ್ಟು ವಹಿಸುತ್ತಿದ್ದೇವೆ ಎಂಬುದನ್ನು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ. ವನ್ಯಜೀವಿಗಳು ಹಾಗೂ ಅವುಗಳ ಆವಾಸಸ್ಥಾನಗಳ ಸದ್ಯದ ಪರಿಸ್ಥಿತಿಯನ್ನು ಹೆಚ್ಚಾಗಿ ವಿವರಿಸಬೇಕಿಲ್ಲ. ವನ್ಯಜೀವಿ ಸಪ್ತಾಹದಂತಹ ಕಾರ್ಯಕ್ರಮಗಳು ಇಂತಹ ಆತ್ಮಾವಲೋಕನಕ್ಕೆ ದಾರಿಯಾಗಬೇಕು.
ಒತ್ತಡ, ತೊಂದರೆಗಳೂ ಇವೆ:ಈ ವೈವಿಧ್ಯಮಯ ವನ್ಯಜೀವಿಗಳು ಹಾಗೂ ಅವುಗಳ ಆವಾಸಸ್ಥಾನಗಳಿಗೆ ಅಷ್ಟೇ ವೈವಿಧ್ಯಮಯ ತೊಂದರೆಗಳು ಹಾಗೂ ಒತ್ತಡಗಳಿವೆ. ಕಳ್ಳ ಬೇಟೆ, ಮರ ಕಡೆಯುವುದು ಅಥವಾ ಇತರ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ತೆಗೆಯುವಿಕೆ, ಕೃಷಿ, ಮನೆ ಮತ್ತು ನಾನಾ ಉದ್ದೇಶಗಳಿಗಾಗಿ ಕಾಡು ಕಡಿಯುವುದು ಒಂದು ಕಡೆಯಾದರೆ, ಕೈಗಾರಿಕೆಗಳು, ಗಣಿಗಳು, ವಿವಿಧ ವಾಣಿಜ್ಯ ಯೋಜನೆಗಳು, ರಸ್ತೆ, ರೈಲು, ವಿದ್ಯುತ್ ತರದ ಅಭಿವೃದ್ಧಿ ಯೋಜನೆಗಳು ಮತ್ತೊಂದು ಕಡೆ. ಇಂತಹ ಒತ್ತಡಗಳನ್ನು ತಡೆಯಲು ಸರ್ಕಾರಗಳು ನಾನಾ ರೀತಿಯ ಕಾನೂನುಗಳನ್ನು, ನಿಯಂತ್ರಣಗಳನ್ನು ತಂದಿದ್ದರು ಸಹ ಇವುಗಳನ್ನು ನಿಯಂತ್ರಿಸಲು ಜನರ ಸಹಕಾರ ಮುಖ್ಯವಾಗಿರುತ್ತದೆ. ಇದೇ ಕಾರಣಕ್ಕಾಗಿ, ಅಂದಿನ ವನ್ಯಜೀವಿ ಮಂಡಳಿಯು ತನ್ನ ಮೊದಲ ಹಲವು ಸಭೆಗಳಲ್ಲಿ ಸಂರಕ್ಷಣೆಯ ಬಗ್ಗೆ ವಿಸõತ ಚರ್ಚೆ ನಡೆಸಿ ಹಲವು ನಿಯಂತ್ರಣಗಳ ಬಗ್ಗೆ ಯೋಚಿಸಲಾಗಿತ್ತು. ಅವುಗಳ ಜತೆಗೆ ವನ್ಯಜೀವಿ ಸಪ್ತಾಹದಂತಹ ಕಾರ್ಯಕ್ರಮದ ಅವಶ್ಯಕತೆ ಬಗೆಗೂ ಚಿಂತಿಸಲಾಗಿತ್ತು.
(ಲೇಖಕರು ವನ್ಯಜೀವಿ ಸಂರಕ್ಷಕ, ವನ್ಯಜೀವಿ ಪರಿಪಾಲಕ)
ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

ಎಲಾನ್​ ಮಸ್ಕ್​ನ ಒಂದು ಸೆಕೆಂಡ್​ನ ಆದಾಯ ಎಷ್ಟು?; ಒಂದು ರಾತ್ರಿಯ ಸಂಪಾದನೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − four =
Remember me
