|ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ವಸ್ತ್ರಧಾರಣೆ ಎಂಬುವದು ಕೇವಲ ದೇಹವನ್ನು ಮರೆಮಾಚುವ ಸಾಧನವಲ್ಲ. ಇದು ಮನಸ್ಸಿಗೆ ಮತ್ತು ನೋಡುವ ಕಣ್ಣುಗಳಿಗೆ ಸಕಾರಾತ್ಮಕವಾದ ನಿಲುವನ್ನು ನೀಡಬೇಕು. ಆವಾಗಲೇ ಆ ವಸ್ತ್ರಧಾರಣೆ ಸಾರ್ಥಕ. ಬಣ್ಣಕ್ಕೆ ಸೋಲದ ಮನಸ್ಸೇ ಇಲ್ಲ. ಬಣ್ಣಗಳಿಂದ ಕೂಡಿದ ಬದುಕು ಎಲ್ಲರಿಗೂ ಮುದವನ್ನು ನೀಡುತ್ತದೆ. ಬಣ್ಣಗಳು ವ್ಯಕ್ತಿಯ ಮನಸ್ಥಿತಿ ಮತ್ತು ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಮನೋವಿಜ್ಞಾನವು ತಿಳಿಸಿಕೊಡುತ್ತದೆ. ಹೀಗೆ ದೇಹಕ್ಕೆ ಹಿತವಾದ ಹಗುರವಾದ ಬಣ್ಣ ಬಣ್ಣದ ವಸ್ತ್ರಧಾರಣೆಯನ್ನು ಈ ನವರಾತ್ರಿಯಲ್ಲಿ ಮಾಡಬಹುದು.
ಬಿಳಿಯ ಬಣ್ಣವು ಎಂದಿಗೂ ಶಾಂತಿಯ ಮತ್ತು ಸ್ಥಿರತೆಯ ಪ್ರತೀಕವಾಗಿದೆ. ಹುಣ್ಣಿಮೆಯೇ ಬರಲಿ, ಅಮಾವಾಸ್ಯೆಯೇ ಬರಲಿ ಶ್ವೇತವರ್ಣದ ಚಂದ್ರನಂತೆ ಕಷ್ಟದಲ್ಲಿ ಕುಗ್ಗಬಾರದು ಸುಖದಲ್ಲಿ ಹಿಗ್ಗಬಾರದು ಎಂಬ ಸಂದೇಶ. ಶಾಸ್ತ್ರಗಳಲ್ಲಿ ಕೀರ್ತಿಯನ್ನು ಬಿಳಿಯ ಬಣ್ಣಕ್ಕೆ ಹೋಲಿಸಿದ್ದಾರೆ. ಮನುಷ್ಯನ ಕೀರ್ತಿ ಎಂದಿಗೂ ಶುಭ್ರವಾಗಿರಬೇಕು. ನಮ್ಮ ಜೀವನದ ಗುರಿ ಬಿಳಿಯ ಹಿಮದಿಂದ ಕೂಡಿದ ಹಿಮಾಲಯದಂತೆ ದೃಢವಾಗಿರಬೇಕು. ಶುಭ್ರವಾದ ಬಿಳಿಯ ನೀರಿನಿಂದ ಕೂಡಿ ಭೋರ್ಗರೆಯುವ ಗಂಗೆಯಂತೆ ಇರಬೇಕು. ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ ಹೆದರದೆ ಗಂಗೆಯ ರಭಸದಂತೆ ಮುನ್ನುಗ್ಗಬೇಕು. ಸಾವಿರಾರು ವರ್ಷಗಳಾದರೂ ಬೆಳ್ಳಗಿನ ಅಸ್ಥಿಗಳಿಗೆ ಗಟ್ಟಿತನ ಹಾಗೆಯೇ ಇರುತ್ತದೆ. ನಾವು ಗಳಿಸಿದ ಕೀರ್ತಿ ಆ ಅಸ್ಥಿಗಳಂತೆ ಶಾಶ್ವತವಾಗಿರಬೇಕು. ಬೆಳ್ಳಗಿನ ಸಕ್ಕರೆ ಯಾವ ಪದಾರ್ಥದೊಡನೆ ಸೇರಿಕೊಳ್ಳುತ್ತದೆಯೋ ಅದರೊಂದಿಗೆ ತನ್ನ ಸಿಹಿಯನ್ನು ಹಂಚಿಕೊಳ್ಳುತ್ತದೆ. ಹೀಗೆ ಅನೇಕ ಬಿಳಿಯ ಪದಾರ್ಥಗಳ ಸಾಂಕೇತಿಕ ಅರ್ಥಗಳನ್ನು ತಿಳಿದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ, ದೇವಿಯಲ್ಲಿ ಪ್ರಾರ್ಥಿಸಿ ಮೊದಲ ದಿನ ಶುದ್ಧವಾದ ಬಿಳಿಯ ವಸ್ತ್ರಗಳನ್ನು ಧರಿಸಬೇಕು.
ಕೆಂಪು ಬಣ್ಣವು ಕಣ್ಣು ಮತ್ತು ಮನಸ್ಸನ್ನು ಬಲವಾಗಿ ಆಕರ್ಷಿಸುವ ಬಣ್ಣ. ಇದು ಧೈರ್ಯದ ಮತ್ತು ಬಲದ ಪ್ರತೀಕ. ಭೂಮಿಯ ಅಂಧಕಾರವನ್ನು ಕಳೆದು ಪ್ರಕಾಶದೆಡೆಗೊಯ್ಯುವ ಸೂರ್ಯೋದಯದ ಬಣ್ಣವೂ ಕೆಂಪು. ಅಂತೆಯೇ ನಾವು ನಮ್ಮವರ ಜೀವನದಲ್ಲಿ ಸದಾ ಭರವಸೆಯ ಬಣ್ಣ ತುಂಬೋಣ ಎಂಬ ಸಂದೇಶ. ನವರತ್ನಗಳಲ್ಲಿ ಒಂದಾದ ಮಾಣಿಕ್ಯವು ಹೊಳೆಯುವ ಕೆಂಪು ಬಣ್ಣದಿಂದ ಕೂಡಿದೆ. ಈ ಕೆಂಪು ಮಾಣಿಕ್ಯವು ಧರಿಸಿದವರಿಗೆ ಅದೃಷ್ಟವನ್ನು ತರುವಂತೆ ನಾವು ನಮ್ಮವರ ಜೀವನದಲ್ಲಿ ಒಳ್ಳೆಯದನ್ನೇ ಮಾಡೋಣ ಎಂಬುದರ ಸಂಕೇತ. ಕೆಂಪು ಬಣ್ಣದ ರಕ್ತ ಹೇಗೆ ಮನುಷ್ಯನ ಜೀವನಧಾರೆಯಾಗಿದೆಯೋ ಹಾಗೆಯೇ ನಮ್ಮಿಂದ ಎಲ್ಲರಿಗೂ ಸಕಾರಾತ್ಮಕವಾದ ಪ್ರಭಾವ ಬೀರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿ ಎರಡನೇ ದಿನ ಕೆಂಪು ವಸ್ತ್ರಗಳನ್ನು ಧರಿಸಬೇಕು.
ನೀಲಿ ಬಣ್ಣವು ಯಾವುದೇ ಮಿಶ್ರಣವಿಲ್ಲದ ಸ್ವತಂತ್ರ ಶುದ್ಧ ಬಣ್ಣ. ಮಿತಿಯಿಲ್ಲದ ಆಳವನ್ನು ಹೊಂದಿದ ಸಮುದ್ರ ನೀಲಿ ಬಣ್ಣದಿಂದ ಕೂಡಿದೆ. ಸಮುದ್ರಕ್ಕಿರುವ ಗಾಂಭೀರ್ಯವು ಸುಖ-ದುಃಖ ಎರಡರಲ್ಲೂ ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳಬೇಕು ಎಂಬುದರ ಸಾಂಕೇತಿಕ ಅರ್ಥ. ಪಾಪ ರಹಿತವಾದ ಪರಿಶುದ್ಧವಾದ ವಿಶಾಲ ಆಕಾಶ ನೀಲಿ ಬಣ್ಣದಿಂದ ಕೂಡಿದೆ. ಹೀಗೆಯೇ ನಾವು ಪಾಪದಿಂದ ದೂರವಿದ್ದು ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳುವಂತೆ ದೇವಿಯಲ್ಲಿ ಪ್ರಾರ್ಥಿಸಿ ಮೂರನೆಯ ದಿನದಂದು ನೀಲಿ ವಸ್ತ್ರಧಾರಣೆಯನ್ನು ಮಾಡಬೇಕು.

ಹಳದಿ ಬಣ್ಣ ಅತಿ ಶುಭಕರವಾದ ಬಣ್ಣವಾದ್ದರಿಂದ ಮದುವೆ ಮೊದಲಾದ ಶುಭ ಸಮಾರಂಭಗಳಲ್ಲಿ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸುವುದು ಆಚರಣೆಯಲ್ಲಿದೆ. ಸಾಕ್ಷಾತ್ ಶ್ರೀಲಕ್ಷ್ಮಿನಾರಾಯಣರೂ ಸಹ ಪೀತಾಂಬರವನ್ನು ಧರಿಸಿದ್ದಾರೆ ಎಂಬ ವರ್ಣನೆ ಇದೆ. ಹಳದಿ ಬಣ್ಣವನ್ನು ಗುರು ಗ್ರಹದ ಬಣ್ಣವೆಂದು ಉಲ್ಲೇಖಿಸಿದ್ದಾರೆ. ಆದ್ದರಿಂದ ಈ ಹಳದಿ ಬಣ್ಣವು ಮನೋಬಲವನ್ನು ಹೆಚ್ಚಿಸಿ ನಕಾರಾತ್ಮಕ ಆಲೋಚನೆಗಳನ್ನು ದೂರ ಮಾಡುತ್ತದೆ. ಮನುಷ್ಯನ ವ್ಯಕ್ತಿತ್ವವನ್ನು ಬಿಂಬಿಸುವುದು ಅವನ ಚಾರಿತ್ರ್ಯ. ಅಂತೆಯೇ ಹಳದಿ ಬಣ್ಣದ ಚಿನ್ನದಂತೆ ನಮ್ಮ ವ್ಯಕ್ತಿತ್ವ ಚಾರಿತ್ರ್ಯ ಶುದ್ಧ ಚಿನ್ನದಂತಿರಲಿ ಎಂಬ ಸಂಕೇತ. ಮಂಗಳ ದ್ರವ್ಯವಾದ ಅರಿಷಿಣವೂ ಕೂಡ ಹಳದಿ ಬಣ್ಣದ್ದು. ಈ ಅರಿಷಿಣವೇ ಕುಂಕುಮಕ್ಕೆ ಜನ್ಮ ನೀಡುತ್ತದೆ. ಒಂದು ಮಂಗಳದ್ರವ್ಯದಿಂದ ಮತ್ತೊಂದು ಮಂಗಳದ್ರವ್ಯಕ್ಕೆ ಜನ್ಮ ನೀಡಿದಂತೆ ನಮ್ಮ ಜೀವನದಲ್ಲಿಯೂ ಮತ್ತು ನಮ್ಮಿಂದ ಇನ್ನೊಬ್ಬರ ಜೀವನಕ್ಕೂ ಎಲ್ಲ ಮಂಗಳಕರವಾಗಲಿ ಎಂದು ದೇವಿಗೆ ಪ್ರಾರ್ಥಿಸಿ ನಾಲ್ಕನೇ ದಿನ ಹಳದಿ ಬಣ್ಣದ ವಸ್ತ್ರಧಾರಣೆಯನ್ನು ಮಾಡಬೇಕು.
ಹಸಿರು ಬಣ್ಣವು ಪ್ರಕೃತಿಯ ಸೌಂದರ್ಯವನ್ನು ಬಿಂಬಿಸುವ ಪ್ರತೀಕ. ಸಕಾರಾತ್ಮಕ ಶಕ್ತಿಯನ್ನು ಹೊಂದಿದ ಬಣ್ಣ. ಇದು ವಸಂತ ಕಾಲದ ಸೌಂದರ್ಯವನ್ನು ಪ್ರತಿಬಿಂಬಿಸುವ ವರ್ಣ. ಪ್ರಕೃತಿಯ ಬೆಳವಣಿಗೆಯ, ಅಭಿವೃದ್ಧಿಯ, ಫಲವತ್ತತೆಯ ಸಂಕೇತ ಹಸಿರು. ಒಟ್ಟಾರೆ ಭೂದೇವಿಯ ಸೌಂದರ್ಯದ ವರ್ಣನೆಯ ಸಂಕೇತ ಈ ಹಸಿರು ಬಣ್ಣ. ಹಿಂದೂ ಸಂಪ್ರದಾಯದಲ್ಲಿ ಸ್ತ್ರೀಯರಿಗೆ ಹಸಿರು ಸೀರೆ, ಹಸಿರು ಬಳೆಗಳು ಮಂಗಳ ಸೂಚಕಗಳಾಗಿವೆ. ಗರ್ಭಿಣಿ ಸ್ತ್ರೀಗೆ ಹಸಿರು ರವಿಕೆಯನ್ನು ತೊಡೆಸುವುದು ಒಂದು ಪ್ರಾಚೀನ ಸಂಪ್ರದಾಯವಾಗಿದೆ. ಹೀಗೆ ಹಸಿರು ಬಣ್ಣ ಮಂಗಳಕರವಾದ ಹಾಗೂ ಸಕಾರಾತ್ಮಕ ಮನೋಭಾವದ ಪ್ರತೀಕವಾಗಿದೆ. ಆಂಗ್ಲ ಭಾಷೆಯ ಎವರ್ಗ್ರೀನ್ (Evergreen)ಎಂಬ ಶಬ್ದವು ನಿತ್ಯ ನೂತನತೆ ಹಾಗೂ ಕ್ರಿಯಾಶೀಲತೆಯ ಅರ್ಥವನ್ನು ಬಿಂಬಿಸುತ್ತದೆ. ಹೀಗೆ ನಮ್ಮ ಜೀವನವು ಕ್ರಿಯಾಶೀಲತೆಯಿಂದ ಅಭಿವೃದ್ಧಿಯಿಂದ ಕೂಡಿರಲಿ ಎಂದು ದೇವಿಗೆ ಪ್ರಾರ್ಥಿಸಿ ಐದನೆಯ ದಿನದಂದು ಹಸಿರು ವಸ್ತ್ರಧಾರಣೆಯನ್ನು ಮಾಡಬೇಕು.

ಶಬ್ದವೇ ಸೂಚಿಸುವಂತೆ ಬೂದು ಅಥವಾ ಬೂದಿ ಎನ್ನುವುದು ಎಲ್ಲವೂ ನಾಶವಾಗಿ ಕೊನೆಗೆ ಉಳಿದ ಒಂದು ದ್ರವ್ಯ. ಅಥವಾ ಇದುವೇ ಸತ್ಯ ಎಂದು ತೋರಿಸುವುದರ ಸಂಕೇತ. ಪ್ರಕೃತಿಯಲ್ಲಿ ಏನೇ ನಾಶವಾದರೂ ಆ ನಾಶದಿಂದಲೂ ಪುನಃ ಹುಟ್ಟಿ ಬರುವುದು ಈ ಬೂದಿ. ಹೀಗೆ ಜೀವನದಲ್ಲಿ ನಾವು ಎಷ್ಟೇ ಸೋತರೂ ಕಷ್ಟದಲ್ಲಿ ಬೆಂದರೂ ಬೂದಿಯಂತೆ ಮತ್ತೆ ಹೊಸ ಚೈತನ್ಯದಿಂದ ಹುಟ್ಟಿ ಮೇಲೆ ಬರಬೇಕು ಎಂಬುದರ ಸಂಕೇತ. ಹೋಮಗಳಿಂದ ಬಂದ ಭಸ್ಮವನ್ನು ರಕ್ಷೆ ಎಂದು ಧಾರಣೆ ಮಾಡುತ್ತಾರೆ. ಎಲ್ಲ ಆಪತ್ತುಗಳಿಂದ ಈ ಹೋಮದ ಬೂದಿ ರಕ್ಷಿಸುತ್ತದೆ. ಹಿರಿಯರಿಗೆ ಪ್ರಾಚೀನ ಬುದ್ಧಿವಂತರಿಗೆ ಆಂಗ್ಲದಲ್ಲಿ ಓಲ್ಡ್ ಗ್ರೇ ಹೆಡ್ಸ್ (Old Gray Heads) ಎಂದು ಕರೆಯುತ್ತಾರೆ. ಈ ಬಣ್ಣವು ಅನುಭವಿಗಳ ಅನುಭವದ ಪ್ರತೀಕವಾಗಿದೆ. ಈ ಬೂದು ಬಣ್ಣ ಕಪ್ಪು ಮತ್ತು ಬಿಳಿಯ ಬಣ್ಣದ ಮಧ್ಯದ ಬಣ್ಣ. ಇದು ತಟಸ್ಥ ಮತ್ತು ನಿಷ್ಪಕ್ಷಪಾತದ ಮನಸ್ಸನ್ನು ಬಿಂಬಿಸುತ್ತದೆ. ಎರಡು ಬಣ್ಣಗಳ ಮಧ್ಯದಲ್ಲಿ ಸಂಧಾನದಂತಿರುವ ಈ ಬೂದು ಬಣ್ಣದಂತೆ ನಾವು ಇರಬೇಕು ಎಂಬುದರ ಸಂಕೇತ. ನಾವು ಕೂಡ ಸದಾ ಸತ್ಯಪರರಾಗಿ ನಿಷ್ಪಕ್ಷಪಾತಿಗಳಾಗಿ ಜೀವನವನ್ನು ನಡೆಸುವಂತೆ ದೇವಿಯನ್ನು ಪ್ರಾರ್ಥಿಸಿ, ಆರನೇಯನೇಯ ದಿನ ಬೂದು ಬಣ್ಣದ ವಸ್ತ್ರಧಾರಣೆ ಮಾಡಬೇಕು.
ಕೇಸರಿ ಬಣ್ಣವು ಹಿಂದೂ ಧರ್ಮದಲ್ಲಿ ಪರಮ ಪವಿತ್ರವಾದ ಬಣ್ಣವೆಂದು ಪರಿಗಣಿಸಲಾಗಿದೆ. ಈ ಬಣ್ಣವೂ ಪ್ರಕೃತಿಯ ಸಮತೋಲನೆಯನ್ನು ಕಾಪಾಡುವ ಸೂರ್ಯನನ್ನು ಬಿಂಬಿಸುವ ಬಣ್ಣವಾಗಿದೆ. ಸೂರ್ಯನ ಪ್ರಖರತೆಯು ನಮ್ಮ ಊಹೆಗೂ ಮೀರಿದ್ದು. ಆದರೂ ಪ್ರಕೃತಿಯ ಜೀವನಕ್ಕೆ ಬೇಕಾದಷ್ಟೇ ಪ್ರಕಾಶವನ್ನು ಸೂರ್ಯ ನೀಡುವನು. ಅಂತೆಯೇ ನಾವು ಎಷ್ಟೇ ದೊಡ್ಡವರಾಗಿದ್ದರೂ, ಎಷ್ಟೇ ಸಾಮರ್ಥ್ಯ ಹೊಂದಿದ್ದರೂ ಎಲ್ಲರೊಂದಿಗೆ ಸಾಮಾನ್ಯರಂತೆ ಬಾಳಬೇಕು ಎಂಬುದರ ಸಂಕೇತವೇ ಈ ಸೂರ್ಯನ ಕೇಸರಿ ಬಣ್ಣ. ಭಾರತೀಯ ಸಂಸ್ಕೃತಿಯಲ್ಲಿ ಕೇಸರಿ ವೈರಾಗ್ಯದ ಸಂಕೇತ. ಧರ್ಮಕ್ಕಾಗಿ ಎಲ್ಲವನ್ನೂ ತ್ಯಜಿಸಿ ಸಮಾಜದ ಉದ್ಧಾರಕ್ಕಾಗಿ ಜೀವನವನ್ನು ಅರ್ಪಿಸುವ ಪವಿತ್ರ ಕಾವಿಯ ಬಣ್ಣವೇ ಕೇಸರಿ. ಈ ಕೇಸರಿ ಬಣ್ಣ ಧೈರ್ಯ ಮತ್ತು ತ್ಯಾಗದ ಪ್ರತೀಕ. ಜೀವನ ಹಾಗೂ ಮೋಕ್ಷದ ಅನ್ವೇಷಣೆಯ ಸೂಚಕವಾಗಿದೆ ಕೇಸರಿ. ಕೇಸರಿ ಬಣ್ಣದಿಂದ ಕೂಡಿದ ಅಗ್ನಿಯ ಜ್ವಾಲೆಯು ಪರಮ ಪವಿತ್ರತೆಯ ಸಂಕೇತವಾಗಿದೆ. ಕತ್ತಲೆಯನ್ನು ಅಳಿಸಿ ಬೆಳಕನ್ನು ತರುವ ಸೂರ್ಯೋದಯದ ಪ್ರತೀಕ ಈ ಕೇಸರಿ ಬಣ್ಣ. ದೇವರ ತೀರ್ಥದೊಂದಿಗೂ ಮಿಶ್ರಣವಾಗುವುದು “ಕೇಸರ”ದ ಕೇಸರಿ ಬಣ್ಣ. ಹೀಗೆ ನಮ್ಮ ಜೀವನವು ಧೈರ್ಯ ಮತ್ತು ತ್ಯಾಗದಿಂದ ಕೂಡಿರಲಿ ಎಂದು ದೇವಿಗೆ ಪ್ರಾರ್ಥಿಸಿ ಏಳನೆಯ ದಿನ ಕೇಸರಿ ವಸ್ತ್ರದ ಧಾರಣೆಯನ್ನು ಮಾಡಬೇಕು.
ಈ ಬಣ್ಣಕ್ಕೆ ಈ ಹೆಸರು ಗುಲಾಬಿ ಹೂವಿನಿಂದ ಬಂದಿದೆ ಎನ್ನಬಹುದು. ಗುಲಾಬಿ ಹೂವು ಅತಿ ಸುಂದರವಾದ ಹೂವಾದರೂ ಮುಳ್ಳುಗಳಿಂದ ಕೂಡಿರುತ್ತದೆ. ಹಾಗೆಯೇ ಒಳ್ಳೆಯದು ಸಿಗಬೇಕೆಂದರೆ ಮುಳ್ಳುಗಳಂತೆ ಎದುರಾಗುವ ಕಷ್ಟಗಳನ್ನು ಸಹಿಸಬೇಕು ಎಂಬುದರ ಸಂಕೇತ. ಈ ಗುಲಾಬಿ ಬಣ್ಣವು ವ್ಯಕ್ತಿಯ ಭಾವನೆಗಳಿಗೆ ಸಕಾರಾತ್ಮಕವಾದ ಪ್ರಭಾವವನ್ನು ಬೀರುತ್ತದೆ. ಗುಲಾಬಿ ಬಣ್ಣವು ಗೌರವಾತ್ಮಕವಾದ ಪ್ರೀತಿ, ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಗುಲಾಬಿ ಬಣ್ಣದ ಗುಲಾಬಿ ಹೂವುಗಳು ಸಂತೋಷ ಮತ್ತು ಕೃತಜ್ಞತೆಯನ್ನು ತೋರಿಸಿಕೊಳ್ಳುವ ಪ್ರತಿಕ. ಒಬ್ಬ ವ್ಯಕ್ತಿಯನ್ನು ನಾವು ಎಷ್ಟು ಗೌರವಿಸುತ್ತೇವೆ ಎಂಬುದನ್ನು ವ್ಯಕ್ತಪಡಿಸುವ ಸಾಧನ. ಈ ಗುಲಾಬಿ ಬಣ್ಣ ಮನಸ್ಸಿಗೆ ಉಲ್ಲಾಸವನ್ನು ನೀಡುವ ಬಣ್ಣವಾದ್ದರಿಂದ ವಾಸ್ತು ಶಾಸ್ತ್ರದಲ್ಲಿ ಮಲಗುವ ಕೋಣೆಗಳಿಗೆ ಗುಲಾಬಿ ಬಣ್ಣವನ್ನು ಹಚ್ಚಲು ಹೇಳುತ್ತಾರೆ. ಇದು ಪ್ರೀತಿ ಮತ್ತು ಪ್ರಣಯದ ಸಂಕೇತ. ಮನೋವಿಜ್ಞಾನದ ಪ್ರಕಾರ ಮಹಿಳೆಯರಿಗೆ ಅತಿ ಪ್ರಿಯವಾದ ಬಣ್ಣ ಗುಲಾಬಿ. ಭಗವಾನ್ ವಿಷ್ಣುವಿಗೆ ಪ್ರಿಯವಾದ ಹೂವುಗಳು ಕಮಲ ಮತ್ತು ಗುಲಾಬಿ. ಮುಳ್ಳುಗಳಿಂದ ಕೂಡಿದ ಗುಲಾಬಿಯು ಶ್ರೇಷ್ಠ. ಕೆಸರಿನಲ್ಲಿ ಅರಳಿದ ಕಮಲವೂ ಶ್ರೇಷ್ಠ. ಹೀಗೆಯೇ ಕೆಸರು ಮತ್ತು ಮುಳ್ಳುಗಳಂತೆ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಗುಲಾಬಿಯಂತೆ ಮತ್ತು ಕಮಲದಂತೆ ಅರಳುವವರಾಗೋಣ ಎಂದು ದೇವಿಗೆ ಪ್ರಾರ್ಥಿಸಿ ೯ನೇ ದಿನ ಗುಲಾಬಿ ಬಣ್ಣದ ವಸ್ತ್ರಧಾರಣೆಯನ್ನು ಮಾಡಬೇಕು.
ಶ್ರೀ ಕೃಷ್ಣನ ಕಿರೀಟಕ್ಕೇರಿದ ಗರಿಮೆ ನವೀಲು ಗರಿಯದ್ದು.ಅಂತಹ ನವಿಲು ಬಣ್ಣ ಅತಿ ಶ್ರೇಷ್ಠವಾಗಿದೆ. ಆಧ್ಯಾತ್ಮಿಕತೆ, ಅಂತಃಪ್ರಜ್ಞೆ, ಸಂಪತ್ತು, ಉತ್ಸಾಹ, ವೈಭವದ ಪ್ರತೀಕವಾಗಿದೆ ಈ ನವಿಲು ಬಣ್ಣ. ನವಿಲು ಹಸಿರು ಬಣ್ಣ ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ಮನಸ್ಸನ್ನು ತೊಡಗಿಸಲು ಪ್ರೇರಿಸುತ್ತದೆ. ನವಿಲುಗರಿಯು ಅನೇಕ ಬಣ್ಣಗಳಿಂದ ಕೂಡಿದ್ದರು ಆ ಹಸಿರು ಮಾತ್ರ ವಿಶೇಷವಾಗಿ ಕಾಣುವಂತೆ ನಮ್ಮ ವ್ಯಕ್ತಿತ್ವವು ವಿಶಿಷ್ಟತೆಯಿಂದ ಕೂಡಿರಲಿ ಎಂದು ದೇವಿಗೆ ಪ್ರಾರ್ಥಿಸಿ ಎಂಟನೇಯ ದಿನ ನವಿಲು ಹಸಿರು ಬಣ್ಣದ ವಸ್ತ್ರಧಾರಣೆಯನ್ನು ಮಾಡಬೇಕು.


ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × one =
Remember me
