|ಡಾ.ಗಣಪತಿ ಹೆಗಡೆ
ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
‘ತನ್ನ ಕರಕಮಲಗಳಿಂದ ಸುರೆ ತುಂಬಿದ ಕಲಶವನ್ನು ಹಿಡಿದಿರುವ ಕೂಷ್ಮಾಂಡಾದೇವಿಯು ನನಗೆ ಶುಭಪ್ರದಳಾಗಿರಲಿ.’
ನವರಾತ್ರಿಯ ನಾಲ್ಕನೆಯ ದಿನ ಆಶ್ವಯುಜ ಶುಕ್ಲ ಚತುರ್ಥಿಯಂದು ದುರ್ಗಾದೇವಿಯನ್ನು ಕೂಷ್ಮಾಂಡಾದೇವಿ ಎಂಬುದಾಗಿ ಪೂಜಿಸಲಾಗುತ್ತದೆ. ಕೂಷ್ಮಾಂಡಾದೇವಿಗೆ ಎಂಟು ಭುಜಗಳಿರುವ ಕಾರಣ ‘ಅಷ್ಟಭುಜಾದೇವಿ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈಕೆಯ ಈ ಎಂಟು ಕೈಗಳಲ್ಲಿ ಕ್ರಮವಾಗಿ ಕಮಂಡಲು, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಜಪಮಾಲೆ, ಚಕ್ರ ಹಾಗೂ ಗದೆಗಳನ್ನು ಧರಿಸಿರುವಳು.
ಸಂಸ್ಕೃತದಲ್ಲಿ ‘ಕೂಷ್ಮಾಂಡ’ ಎಂದರೆ ಕುಂಬಳಕಾಯಿ ಎಂದರ್ಥ. ದೇವಿಗೆ ಬಲಿ ಕೊಡಬೇಕಾದರೆ ಕುಂಬಳಕಾಯಿಯನ್ನು ಕೊಡಬೇಕು. ಯಾಕೆಂದರೆ ದೇವಿಗೆ ಕುಂಬಳಕಾಯಿ ಬಹಳ ಪ್ರಿಯವಾದುದು. ಆ ಕಾರಣದಿಂದಲೇ ದೇವಿಗೆ ‘ಕೂಷ್ಮಾಂಡಾದೇವಿ’ ಎಂಬ ಹೆಸರು ಬಂದಿದೆ. ಹೆಚ್ಚಾಗಿ ನವರಾತ್ರಿಯ ಸಂದರ್ಭದಲ್ಲಿ ದೇವಿಗೆ ಕುಂಬಳಕಾಯಿಯನ್ನು ಒಡೆದು ಬಲಿ ಕೊಡುವುದು ಇದೇ ಕಾರಣದಿಂದ.
ಈ ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲ ಕಡೆಗಳಲ್ಲಿಯೂ ಅಂಧಕಾರವೇ ತುಂಬಿತ್ತು. ದೇವಿಯು ತನ್ನ ಮಂದ ಮಧುರ ನಗುವಿನಿಂದ ಈ ಬ್ರಹ್ಮಾಂಡವನ್ನು ಸೃಷ್ಟಿಸಿದಳು ಎಂಬುದು ಪುರಾಣದಲ್ಲಿ ಕಂಡುಬರುವ ಕಥೆ. ಇವಳು ಸೂರ್ಯಮಂಡಲದೊಳಗಿನ ಲೋಕದಲ್ಲಿ ನೆಲೆಸಿದ್ದಾಳೆ. ಇವಳ ತೇಜಸ್ಸು ದಶ ದಿಕ್ಕುಗಳಿಗೂ ಹರಡಿದೆ. ಎಲ್ಲೆಲ್ಲಿಯೂ ಪ್ರಕಾಶಮಾನಳಾಗಿ ದೇವಿ ಕೂಷ್ಮಾಂಡಾ ಕಂಡು ಬರುತ್ತಾಳೆ. ಇದು ಕೂಷ್ಮಾಂಡಾ ದೇವಿಯ ಅವತಾರದ ಹಿನ್ನೆಲೆ.
ನವರಾತ್ರಿಯ ಚತುರ್ಥಿಯಂದು ಲಲಿತಾಷ್ಟೋತ್ತರಶತನಾಮವನ್ನು ಹೇಳಿಕೊಂಡು ಭಗವತಿಯನ್ನು ಆರಾಧಿಸಬೇಕು. ಅಂದು ದೇವಿಯನ್ನು ಹಸಿರು ಬಣ್ಣದ ಸೀರೆ, ಕುಪ್ಪಸವನ್ನು ತೊಡಿಸಿ ಅಲಂಕರಿಸಬೇಕು. ಹಸಿರು ಗುಲಾಬಿ ಬಣ್ಣದ ಹೂ, ಹಸಿರು ಬಣ್ಣದ ಅಕ್ಷತೆ, ಗೆಜ್ಜೆವಸ್ತ್ರ, ಹಸಿರು ಬಣ್ಣದ ಪತ್ರೆಯಿಂದ ಪೂಜಿಸಬೇಕು ಎಂಬ ನಿಯಮವಿದೆ. ಅವಲಕ್ಕಿಯಿಂದ ಮಾಡಿದ ಪಾಯಸ ಹಾಗೂ ಅನ್ನವನ್ನು ನೈವೇದ್ಯ ಮಾಡಬೇಕು. ಆ ದಿನ ದೇವಿಗೆ ವೈಷ್ಣವಿ ಅಲಂಕಾರ ಮಾಡಲಾಗುತ್ತದೆ. ಕೂಷ್ಮಾಂಡಾದೇವಿಯನ್ನು ಪೂಜಿಸುವುದರಿಂದ ಆಧಿ-ವ್ಯಾಧಿಗಳು ಅಂದರೆ ಮಾನಸಿಕ ಹಾಗೂ ಶಾರೀರಿಕ ರೋಗಗಳು ನಿವಾರಣೆಯಾಗುತ್ತವೆ. ಆಯುಷ್ಯವೃದ್ಧಿಯಾಗಿ ಅಪಮೃತ್ಯುವಿನ ಭಯವಿರುವುದಿಲ್ಲ. ಯಶೋವೃದ್ಧಿ, ಬಲವೃದ್ಧಿ, ಆರೋಗ್ಯವೃದ್ಧಿಗಳಾಗುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ ಗೌರವ, ಸಂತಾನಪ್ರಾಪ್ತಿ, ಇವೆಲ್ಲವೂ ಉಂಟಾಗುತ್ತವೆ. ಸುಖ ಸಮೃದ್ಧಿಯಿಂದ ಬದುಕಲು ಸಾಧ್ಯವಾಗುತ್ತದೆ. ಅಂದು ಚತುರ್ಥಿಯ ದಿನ ಯೋಗಿಗಳು, ಸಾಧಕರು ಕೂಷ್ಮಾಂಡಾದೇವಿಯನ್ನು ಆರಾಧಿಸುವಾಗ ಮನಸ್ಸನ್ನು ಅನಾಹತಚಕ್ರದಲ್ಲಿ ನೆಲೆಗೊಳಿಸಿಕೊಳ್ಳುತ್ತಾರೆ.
ಯಾ ದೇವಿ ಸರ್ವಭೂತೇಷು ಲಜ್ಜಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
‘ಯಾವ ದೇವಿಯು ಎಲ್ಲ ಚರಾಚರ ಭೂತಗಳಲ್ಲಿ ಲಜ್ಜಾರೂಪದಿಂದ ಇರುವಳೋ ಅಂತಹ ದೇವಿಗೆ ನಮಸ್ಕಾರ’ ಎಂಬ ಅರ್ಥವನ್ನು ಕೊಡುವ ಈ ಶ್ಲೋಕವನ್ನು ಹನ್ನೆರಡು ಬಾರಿ ಹೇಳಿಕೊಂಡು ದೇವಿಗೆ ಶ್ರದ್ಧಾಭಕ್ತಿಗಳಿಂದ ನಮಸ್ಕರಿಸಿದರೆ ನಮ್ಮ ಮನಸ್ಸಿನ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಪುರಾಣಗಳಲ್ಲಿ ಕಂಡುಬರುವ ಅಂಶವಾಗಿದೆ.
ಪಿಎಫ್​​ಐ ಬ್ಯಾನ್​ ‘ಸೆಪ್ಟೆಂಬರ್​ ಕ್ರಾಂತಿ’ ಎಂದು ಬಣ್ಣಿಸಿದ ಅಲೋಕ್ ಕುಮಾರ್​; ಯಾಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 13 =
Remember me
