|ಡಾ.ಗಣಪತಿ ಹೆಗಡೆ
ಓಂ ಜಗನ್ಮಾತ್ರೇ ನಮಃ||
ಶರಣಾಗತದೀನಾರ್ತಪರಿತ್ರಾಣಪರಾಯಣೇ|
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತುತೇ||
‘ನಂಬಿ, ಶರಣಾಗಿ ಬಂದ ಎಲ್ಲ ದೀನ, ದುಃಖಿತರ ನೋವುಗಳನ್ನು ದೂರಮಾಡುವ ದೇವಿ ನಾರಾಯಣಿಯೇ ನಿನಗೆ ನಮಸ್ಕಾರ.’
ಭಾರತದಲ್ಲಿ ಶಕ್ತಿಯ ಆರಾಧನೆಗೆ ಬಹಳ ಮಹತ್ವವಿದೆ. ಸ್ತ್ರೀರೂಪಿಣಿಯಾದ ಶಕ್ತಿಯನ್ನು ನಾವು ತಾಯಿಯಾಗಿ, ಭೂಮಾತೆಯಾಗಿ, ನಾಡದೇವಿ ಭುವನೇಶ್ವರಿಯಾಗಿ, ದುರ್ಗಾಮಾತೆಯಾಗಿ, ಮಹಾಲಕ್ಷ್ಮಿಯಾಗಿ ಆರಾಧಿಸುತ್ತೇವೆ. ಅಂತಹ ಶಕ್ತಿರೂಪಿಣಿಯನ್ನು ಆರಾಧಿಸುವ ಉತ್ಸವವೇ ನವರಾತ್ರಿ. ಅಂದಿನ ದಿನಗಳಲ್ಲಿ ಜನರು ಜಗಜ್ಜನನಿ ಭಗವತಿಯನ್ನು ನಾನಾ ರೂಪಗಳಲ್ಲಿ ಆವಾಹಿಸಿ ನಾನಾ ಅವತಾರಗಳಲ್ಲಿ ಅರ್ಚಿಸಿ ಇಷ್ಟಾರ್ಥಗಳ ಪೂರ್ತಿಗೆ ಪ್ರಾರ್ಥಿಸಿ ಕೃತಕೃತ್ಯರಾಗುತ್ತಾರೆ.
ಒಂಬತ್ತು ದಿನಗಳವರೆಗೆ ಆರಾಧಿಸುವ ದೇವಿಯ ವ್ರತ ನವರಾತ್ರಿಯು ದೇವಿಯು ಎಷ್ಟೇ ಅವತಾರಗಳನ್ನು ತಾಳಿದರೂ ಕೊನೆಯಲ್ಲಿ ಆದಿಶಕ್ತಿಯಾಗಿ ಉಳಿಯುತ್ತಾಳೆ ಎಂಬ ಸಂದೇಶವನ್ನು ಕೊಡುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯನ್ನು ಕ್ರಮವಾಗಿ ಶೈಲಪುತ್ರೀ, ಬ್ರಹ್ಮಚಾರಿಣೀ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನೀ, ಸರಸ್ವತೀ, ದುರ್ಗಾ ಹಾಗೂ ಮಹಾಗೌರೀ ಹೀಗೆ ಒಂಬತ್ತು ರೂಪಗಳಲ್ಲಿ ಪೂಜಿಸುತ್ತಾರೆ ಎಂಬುದನ್ನು ನಾವು ಬ್ರಹ್ಮವೈವರ್ತಪುರಾಣದಲ್ಲಿ ನೋಡಬಹುದು.
ನವರಾತ್ರಿಯ ಮೊದಲ ದಿನ ದುರ್ಗಾದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಶೈಲರಾಜನ ಪುತ್ರಿಯಾಗಿ ಅವತರಿಸಿದ್ದರಿಂದ ‘ಶೈಲಪುತ್ರೀ’ ಎಂದು ಹೆಸರು. ಪೂರ್ವಜನ್ಮದಲ್ಲಿ ಅವಳು ಪ್ರಜಾಪತಿ ದಕ್ಷನ ಮಗಳಾಗಿ ಅವತರಿಸಿದ್ದಳು. ಶಿವನ ಜೊತೆ ಅವಳ ವಿವಾಹವಾಗಿತ್ತು. ಒಮ್ಮೆ ದಕ್ಷನು ಯಜ್ಞವೊಂದನ್ನು ಮಾಡಿದ. ಯಜ್ಞಕ್ಕೆ ದೇವಾನುದೇವತೆಗಳನ್ನು ಆತ್ಮೀಯವಾಗಿ ಆಹ್ವಾನಿಸಿದರೂ ಶಿವನಿಗೆ ಮಾತ್ರ ಆಹ್ವಾನವನ್ನು ಕಳುಹಿಸಿರಲಿಲ್ಲ. ಯಜ್ಞ ನಡೆಯುವ ವಿಷಯ ಅದು ಹೇಗೋ ಶಿವನಿಗೂ, ಸತಿಗೂ ತಿಳಿದಿತ್ತು. ‘ನಿನ್ನ ತಂದೆ ಯಜ್ಞಕ್ಕೆ ನಮ್ಮನ್ನು ಆಮಂತ್ರಿಸಿಲ್ಲ. ನಾನೂ ಹೋಗುವುದಿಲ್ಲ, ನೀನೂ ಹೋಗಬೇಡ’ ಎಂದು ಸತಿಗೆ ಶಿವ ಹೇಳಿದ.
ಸತಿಯು ತಂದೆಯ ಮೇಲಿನ ಅಭಿಮಾನದಿಂದ ಯಜ್ಞದಲ್ಲಿ ಭಾಗವಹಿಸಲು ಹೊರಡುತ್ತಾಳೆ. ಅಲ್ಲಿ ದಕ್ಷನು ಪತಿ ಶಂಕರನನ್ನು ಅವಮಾನಿಸಿದ್ದನ್ನು ಸಹಿಸಲಾಗದೆ ಸತಿಯು ತನ್ನ ಶರೀರವನ್ನು ಯೋಗಾಗ್ನಿಯಿಂದ ದಹಿಸಿ ಭಸ್ಮವಾದಳು. ಈ ದುಃಖದ ಘಟನೆಯನ್ನು ಕೇಳಿ ತಿಳಿದ ಶಿವನು ತನ್ನ ಗಣಗಳನ್ನು ಕಳುಹಿಸಿ ದಕ್ಷನು ಮಾಡುತ್ತಿದ್ದ ಯಜ್ಞವನ್ನು ಧ್ವಂಸ ಮಾಡಿಸಿದನು.
ಸತಿಯು ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಶೈಲಪುತ್ರೀ ಎಂದು ಪ್ರಖ್ಯಾತಳಾದಳು. ನವರಾತ್ರಿಯ ಮೊದಲನೆಯ ದಿವಸ ಶೈಲಪುತ್ರಿಗೆ ಹಳದಿ ಬಣ್ಣದ ಸೀರೆ, ಕುಪ್ಪಸಗಳನ್ನು ತೊಡಿಸಿ, ಹಳದಿ ಬಣ್ಣದ ಹೂ, ಅಕ್ಷತೆ ಅರಿಶಿನ ಗೆಜ್ಜೆವಸ್ತ್ರಗಳಿಂದ ಪೂಜಿಸಿ ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡುತ್ತಾರೆ. ಅಂದು ದೇವಿಗೆ ಬ್ರಾಹ್ಮೀ ಅಲಂಕಾರ ಮಾಡುತ್ತಾರೆ.
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್|
ಶೈಲಪುತ್ರಿ ದೇವಿಯ ಆರಾಧನೆಯಿಂದ ಇಷ್ಟಾರ್ಥಗಳು ಕೈಗೂಡುತ್ತವೆ. ಅವಳ ಪೂಜೆಯಿಂದ ಸಂತಾನಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಕೀರ್ತಿ, ಯಶಸ್ಸು, ಆರೋಗ್ಯ ಲಭ್ಯವಾಗುತ್ತವೆ. ಅವಳ ಪೂಜೆಯಿಂದ ಮನಸ್ಸಿನ ದೃಢತೆ ಹೆಚ್ಚುತ್ತದೆ. ಗೌರವವು ವರ್ಧಿಸುತ್ತದೆ. ಅಂದು ತಪಸ್ವಿಗಳು, ಯೋಗಿಗಳು, ಸಾಧಕರು ತಂತ್ರಸಾಧನೆಗಳ ಸಿದ್ಧಿಗಾಗಿ ಮನಸ್ಸನ್ನು ಮೂಲಾಧಾರಚಕ್ರದಲ್ಲಿ ಸ್ಥಿರಗೊಳಿಸಿಕೊಂಡು ಸಾಧನೆಗೈಯುತ್ತಾರೆ.
(ಲೇಖಕರು ಸಂಸ್ಕೃತ ವಿದ್ವಾಂಸರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
