|ಡಾ.ಗಣಪತಿ ಹೆಗಡೆ
ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ||
ಶರದ್ರುತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ಪ್ರತಿಪತ್​ತಿಥಿಯು ನವರಾತ್ರಿಯ ಆರಂಭದ ದಿನ. ಅಂದಿನಿಂದ ನವಮಿಯವರೆಗೆ ನಡೆಯುವ ನವರಾತ್ರಿ ಉತ್ಸವವು ದೇವಿಯ ಆರಾಧಕರಿಗೆ ಅತ್ಯಂತ ಮಹತ್ವಪೂರ್ಣ ಉತ್ಸವ. ಈ ಒಂಬತ್ತು ದಿನಗಳಲ್ಲಿ ಆದಿಶಕ್ತಿಯ ಒಂಬತ್ತು ರೂಪಗಳನ್ನು ಆರಾಧಿಸುವುದು ರೂಢಿ. ನವರಾತ್ರಿಯ ಮೂರನೆಯ ದಿನ ಅಂದರೆ ತೃತೀಯಾ ತಿಥಿಯಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯ ಮಸ್ತಕದಲ್ಲಿ ಘಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಆ ಕಾರಣದಿಂದಲೇ ಅವಳನ್ನು ‘ಚಂದ್ರಘಂಟಾದೇವಿ’ ಎನ್ನುತ್ತಾರೆ. ದೇವಿಯ ಶರೀರವು ಚಿನ್ನದಂತೆ ಹೊಳೆಯುತ್ತದೆ ಹಾಗೂ ಅವಳ ಸ್ವರೂಪವೂ ಶಾಂತವಾದದ್ದಾಗಿದೆ.
ಚಂದ್ರಘಂಟಾದೇವಿಗೆ ದಶಭುಜಗಳು ಅಂದರೆ ಹತ್ತು ಕೈಗಳಿವೆ. ಅವುಗಳಲ್ಲಿ ಶಸ್ತ್ರ ಮತ್ತು ಬಾಣಗಳನ್ನು ಹಿಡಿದಿರುತ್ತಾಳೆ. ಐದು ಕಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳ ಸಂಕೇತವಾಗಿ ಈ ಹತ್ತು ಕೈಗಳನ್ನು ಕಲ್ಪಿಸಲಾಗಿದೆ. ಇವಳು ಸಿಂಹವಾಹಿನಿಯಾಗಿ ಕಂಗೊಳಿಸುತ್ತಾಳೆ. ದುಷ್ಟರ ದಮನ ಹಾಗೂ ಶಿಷ್ಟರ ರಕ್ಷಣೆಯೇ ಚಂದ್ರಘಂಟಾ ದೇವಿಯ ಅವತಾರದ ಹಿನ್ನೆಲೆ. ದುಷ್ಟಶಕ್ತಿಗಳನ್ನು ವಿನಾಶ ಮಾಡುವುದರಲ್ಲಿ ನಿರತಳಾಗಿರುವ ಈಕೆಯ ಕಣ್ಣುಗಳಲ್ಲಿ ಹಾಗೂ ಅವಳ ಶರೀರದಲ್ಲಿ ಅದ್ವಿತೀಯವಾದ ಕಾಂತಿ ತುಂಬಿ ತುಳುಕುತ್ತದೆ. ಈಕೆಯ ಸ್ವರದಲ್ಲಿ ದಿವ್ಯಮಾಧುರ್ಯ ತುಂಬಿರುತ್ತದೆ. ಕೆಲವೊಮ್ಮೆ ಗಂಭೀರಸ್ವರದಲ್ಲಿ ಇವಳು ನುಡಿದರೆ ದುಷ್ಟರ ಎದೆ ನಡುಗುತ್ತದೆ. ಈಕೆಯನ್ನು ಉಪಾಸಿಸುವ ಭಕ್ತರು ನಿರ್ಭಯರಾಗುತ್ತಾರೆ. ಪರಾಕ್ರಮ ಮತ್ತು ಆತ್ಮಶಕ್ತಿಗಳು ಜಾಗೃತವಾಗುತ್ತವೆ. ಅವರು ಹೋದೆಡೆಯೆಲ್ಲೆಲ್ಲ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಅವಳ ಆರಾಧನೆಯಿಂದ ಯಶಸ್ಸು, ಕೀರ್ತಿಗಳನ್ನು ಹೊಂದುತ್ತಾರೆ. ಆರಾಧಿಸುವ ಭಕ್ತರಲ್ಲಿ ದಿವ್ಯವಾದ, ಪ್ರಕಾಶಮಾನವಾದ ತೇಜಸ್ಸು ಹೊಳೆಯುತ್ತಿರುತ್ತದೆ. ದೇವಿಯ ಉಪಾಸನೆ ಮಾಡುವವರು ತಾಪತ್ರಯಗಳಿಂದ ಮುಕ್ತರಾಗಿ ಶಾಂತಿ ಮತ್ತು ಸುಖವನ್ನು ಸದಾ ಅನುಭವಿಸಿ, ಜೀವಿತಾಂತ್ಯದಲ್ಲಿ ಸದ್ಗತಿ ಪಡೆಯುತ್ತಾರೆ. ಈಕೆಯ ಧ್ಯಾನ ಮಾಡುವಾಗ ಘಂಟೆಯ ಧ್ವನಿ ಕೇಳಿಸುತ್ತದೆ ಎಂದು ಹೇಳಲಾಗಿದೆ.
ಚಂದ್ರಘಂಟಾದೇವಿಯ ಪೂಜಾವಿಧಾನವು ಬಹಳ ವಿಶೇಷವಾಗಿದೆ. ಆರಾಧಕರು ಅಂದು ದೇವಿಗೆ ಬೂದುಬಣ್ಣದ ಸೀರೆ ಹಾಗೂ ಕುಪ್ಪಸ ತೊಡಿಸಿ ಅಲಂಕರಿಸುತ್ತಾರೆ. ಬೂದು ಅಥವಾ ಕೇಸರಿಬಣ್ಣದ ಹೂಗಳಿಂದ ಅರ್ಚಿಸುತ್ತಾರೆ. ಅಕ್ಷತೆ, ಗೆಜ್ಜೆವಸ್ತ್ರಗಳಿಂದ ಅಲಂಕರಿಸುತ್ತಾರೆ. ಲಲಿತಾಸಹಸ್ರನಾಮವನ್ನು ಹೇಳುತ್ತಾ ಭಕ್ತಿಭಾವಗಳಿಂದ ಆರಾಧನೆ ಮಾಡುತ್ತಾರೆ. ಅಕ್ಕಿ ಮತ್ತು ಕಡಲೆ ಬೇಳೆಯಿಂದ ಮಾಡಿದ ಪಾಯಸಾನ್ನವನ್ನು ನೇವೇದ್ಯ ಮಾಡುತ್ತಾರೆ. ತೃತೀಯಾದಂದು ದೇವಿಗೆ ಕೌಮಾರಿ ಅಲಂಕಾರ ಮಾಡುವುದು ರೂಢಿಯಲ್ಲಿದೆ. ಚಂದ್ರಘಂಟಾ ದೇವಿಯ ಕೃಪೆಯಿಂದ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ ಮತ್ತು ವಿವಿಧ ಪ್ರಕಾರದ ದಿವ್ಯಧ್ವನಿಗಳು ಕೇಳಿಸುತ್ತವೆ ಎಂಬ ನಂಬಿಕೆಯಿದೆ. ದೇವಿಯ ಉಪಾಸನೆಯಿಂದ ಸಮಸ್ತ ಪಾಪಗಳು ಹಾಗೂ ಬಂಧನಗಳು ನಾಶವಾಗುತ್ತವೆ. ಜನ್ಮಾಂತರಗಳಿಂದ ಕಾಡುತ್ತಿರುವ ಪ್ರೇತಬಾಧೆಗಳಿದ್ದರೆ ಪರಿಹಾರವಾಗುತ್ತದೆ. ಸಂಸಾರವು ಕಷ್ಟಗಳಿಂದ ಮುಕ್ತವಾಗುತ್ತದೆ. ದೇವಿಯ ಧ್ಯಾನವು ಇಹ ಮತ್ತು ಪರದಲ್ಲಿ ಶ್ರೇಯಸ್ಕರವಾದುದು. ಇವಳ ಅರ್ಚನೆಯಿಂದ ಶಾಂತಿ, ಧೈರ್ಯ, ಸಮಾಧಾನಗಳು ಪ್ರಾಪ್ತವಾಗುವುದಲ್ಲದೇ ಧನಲಾಭ, ಗೃಹಲಾಭ, ಬಂಧುಲಾಭಗಳಾಗುತ್ತವೆ. ಅಂದು ಯೋಗಿಗಳು ಚಂದ್ರಘಂಟಾ ದೇವಿಯನ್ನು ಆರಾಧಿಸುವಾಗ ಮನಸ್ಸನ್ನು ಮಣಿಪೂರಚಕ್ರದಲ್ಲಿ ನೆಲೆಗೊಳಿಸಿಕೊಳ್ಳುತ್ತಾರೆ.
ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
