ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಾನಂದ ಶಿವಾಚಾರ್ಯ ಭಗವತ್ಪಾದರ ಲಿಂಗಾಂಗ ಸಾಮರಸ್ಯದ ಪುಣ್ಯಾರಾಧನೆ ನಿಮಿತ್ತ ಈ ಲೇಖನ.
| ಡಾ. ಗುರುಪಾದಯ್ಯ ವೀ. ಸಾಲಿಮಠ, ಸವಣೂರು
ವೀರಶೈವ ಧರ್ಮದ ಸನಾತನ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನದ ಪರಂಪರೆಯಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀ ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಹೆಸರು ಚಿರಸ್ಮರಣೀಯವಾದುದು. ಬಳ್ಳಾರಿ ಜಿಲ್ಲೆ ಹಿರೇಹಾಳು ಗ್ರಾಮದ ಸಿದ್ಧೇಶ್ವರಯ್ಯ ಮತ್ತು ಸಿದ್ಧವೀರಮ್ಮ ದಂಪತಿಯ ಒಡಲ ಕುಡಿಯಾಗಿ ಜನಿಸಿದ್ದ ಸದಾಶಿವಯ್ಯ, ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿ, ಗದಗ ಜಿಲ್ಲೆ ಅಬ್ಬಿಗೇರಿ ಹಿರೇಮಠದ ವೀರಶೈವ ಸಂಸ್ಕೃತ ಪಾಠಶಾಲೆಗೆ ಪ್ರವೇಶ ಪಡೆದರು. ಪಂಡಿತ ರೇವಣಸಿದ್ಧ ಶಾಸ್ತ್ರಿಗಳಲ್ಲಿ ಸಂಸ್ಕೃತ, ಸಾಹಿತ್ಯ, ವ್ಯಾಕರಣ ಕರಗತ ಮಾಡಿಕೊಂಡು ಸದಾಶಿವಶರ್ಮ ಎಂಬ ನೂತನ ಅಭಿದಾನ ಹೊಂದಿದರು.
ಪರಳಿವ್ಯಾಜ್ಯ ನಿವಾರಣೆ: ಸಂಸ್ಕೃತದ ಉನ್ನತ ವ್ಯಾಸಂಗಕ್ಕಾಗಿ ಕಾಶೀ ಕ್ಷೇತ್ರಕ್ಕೆ ತೆರಳಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ಪ್ರವೇಶ ಪಡೆದರು. ಸತತ 10 ವರ್ಷ ಸಮಗ್ರ ಸಂಸ್ಕೃತ ವ್ಯಾಕರಣ ಶಾಸ್ತ್ರಾಧ್ಯಯನ ಮಾಡಿ ವ್ಯಾಕರಣತೀರ್ಥರಾದರು. ಅಂದು ಸಂಭವಿಸಿದ್ದ ಪರಳಿ ಕ್ಷೇತ್ರದ ಜ್ಯೋತಿರ್ಲಿಂಗದ ವ್ಯಾಜ್ಯ ನಿವಾರಣೆಯಲ್ಲಿ ಪಾತ್ರ ವಹಿಸಿ ಅದಕ್ಕೆ ಪೂರಕವಾದ ಮಹತ್ವದ ದಾಖಲೆಗಳನ್ನು ಒದಗಿಸಿ ಪ್ರಶಂಸೆಗೆ ಪಾತ್ರರಾದರು. ಉತ್ಕೃಷ್ಟ ವಾಕ್ಚಾತುರ್ಯ, ವ್ಯವಹಾರ ಚಾತುರ್ಯ, ಸಮನ್ವಯ ಭಾವ ಮೈಗೂಡಿಸಿಕೊಂಡು ಪಂಚಪೀಠಗಳಲ್ಲಿ ಒಂದಾದ ಕಾಶೀ ಜ್ಞಾನಸಿಂಹಾಸನ ಜಗದ್ಗುರು ಪೀಠದ ಸರ್ವಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಗಮನಸೆಳೆದಿದ್ದರು.
118ನೆಯ ಪೀಠಾಚಾರ್ಯರು: ಶ್ರೀ ರಂಭಾಪುರಿ ಪೀಠದ ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಭಗವತ್ಪಾದರು ಲಿಂಗೈಕ್ಯರಾದ ನಂತರ 3-4 ವರುಷ ಶ್ರೀಪೀಠಕ್ಕೆ ಉತ್ತರಾಧಿಕಾರಿ ಇಲ್ಲದ ಸಂದರ್ಭದಲ್ಲಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಆಗಿನ ಜಗದ್ಗುರುಗಳಾಗಿದ್ದ ಪರಮ ತಪಸ್ವಿ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಚಿಕ್ಕಮಗಳೂರು ಜಿಲ್ಲೆ ಬುಕ್ಕಾಂಬುಧಿ ಬೆಟ್ಟದಲ್ಲಿ ಶ್ರೀ ಸದಾಶಿವ ಶಾಸ್ತ್ರಿಗಳನ್ನು ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಜಗದ್ಗುರುಗಳನ್ನಾಗಿ ಮಾಡಬೇಕೆಂದು ಸಂಕಲ್ಪಿಸಿ ಕಠೋರ ತಪೋನುಷ್ಠಾನ ಮಾಡಿದರು. ಇದರ ಫಲವಾಗಿ ನಾಗನೂರು ಬೃಹನ್ಮಠದ ಪಂಡಿತ ಕಾಶೀನಾಥ ಶಾಸ್ತ್ರಿಗಳು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಉಜ್ಜಯನಿ ಸಿದ್ಧಲಿಂಗ ಜಗದ್ಗುರುಗಳ ತಪೋನುಷ್ಠಾನ ಮತ್ತು ಅದರ ಸತ್​ಸಂಕಲ್ಪದ ವಿಷಯವನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಮಹಾರಾಜರ ಸಹಕಾರದೊಂದಿಗೆ ಶ್ರೀ ಉಜ್ಜಯನಿ ಸಿದ್ಧಲಿಂಗ ಜಗದ್ಗುರುಗಳ ನೇತೃತ್ವದಲ್ಲಿ 1925ರಲ್ಲಿ ರಂಭಾಪುರಿ ವೀರಸಿಂಹಾಸನ ಪೀಠದ 118ನೆಯ ಪೀಠಾಚಾರ್ಯರಾಗಿ ಶ್ರೀ ಸದಾಶಿವಶಾಸ್ತ್ರಿಗಳು ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರು ಎಂಬ ನೂತನ ಅಭಿದಾನದೊಂದಿಗೆ ಪಟ್ಟಾಭಿಷಿಕ್ತರಾದರು. ಪೀಠದ ಘನ ಗುರು ಪರಂಪರೆಯನ್ನು ಎತ್ತಿಹಿಡಿದು ಸನಾತನ ವೀರಶೈವ ಧರ್ಮ ಸಂಸ್ಕೃತಿಯನ್ನು ಸಂವರ್ಧನೆಗೊಳಿಸಲು ಬಹುಮುಖವಾಗಿ ಶ್ರಮಿಸಿದರು.
ನವನಿರ್ವಣ ಶಿಲ್ಪಿ: 1934ರಲ್ಲಿ ಮಹಾರಾಜರು ಸಕಲ ರಾಜಮರ್ಯಾದೆಯೊಂದಿಗೆ ಜಗದ್ಗುರುಗಳನ್ನು ಮೈಸೂರು ಮಹಾನಗರಕ್ಕೆ ಬರಮಾಡಿಕೊಂಡು ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶಿಥಿಲವಾಗಿದ್ದ ಶ್ರೀಮದ್ ರಂಭಾಪುರಿ ಜಗದ್ಗುರು ಪೀಠದ ಹೊಸ ಶಿಲಾಮಯ ಭವ್ಯ ಕಟ್ಟಡ ನಿರ್ಮಾಣ ಮಾಡಲು ಶ್ರೀ ಶಿವಾನಂದ ಭಗವತ್ಪಾದರು ಪ್ರಸ್ತಾಪಿಸಿದರು. ಮಹಾರಾಜರು ಪೀಠಕ್ಕೆ ಆಗಮಿಸಿ ಭೂ-ಧನ-ಕನಕಾದಿ ಸಂಪತ್ತನ್ನು ದಾನ ಮಾಡಿದ್ದನ್ನು ಮರೆಯುವಂತಿಲ್ಲ. ಹಾಗಾಗಿ ಶ್ರೀ ಶಿವಾನಂದ ಭಗವತ್ಪಾದರು ಈ ಪೀಠದ ನವನಿರ್ವಣ ಶಿಲ್ಪಿ ಎಂಬ ಖ್ಯಾತಿಗೆ ಪಾತ್ರರಾದರು. ಅನಂತರ ಶ್ರೀ ಶಿವಾನಂದರು ಕಾಶಿ ಪೀಠದ ಶ್ರೀ ವೀರಭದ್ರ ಶಿವಾಚಾರ್ಯರಿಗೆ 1944ರಲ್ಲಿ ಜ್ಞಾನಸಿಂಹಾಸನ ಪೀಠದ ಅಧಿಕಾರವನ್ನು ಅನುಗ್ರಹಿಸಿದರು.
ದಸರಾ ದರ್ಬಾರ್: ಶ್ರೀ ಜಯಚಾಮರಾಜ ಒಡೆಯರ್ ಅವರೂ ಪೀಠಕ್ಕೆ ಆಗಮಿಸಿ ಶ್ರೀ ಶಿವಾನಂದ ಭಗವತ್ಪಾದರ ದರ್ಶನಾಶೀರ್ವಾದ ಪಡೆದಿದ್ದರು. ಇದು ಅರಮನೆ, ಗುರುಮನೆಗಳನ್ನು ಒಂದಾಗಿಸಿತ್ತು. ರಾಜರ ಸೇವೆಗಳನ್ನು ಬಳಸಿ ಭಕ್ತಗಣದಲ್ಲಿ ವೀರಶೈವ ಧರ್ಮ ಜಾಗೃತಿ ಮತ್ತು ಆಧ್ಯಾತ್ಮ ತತ್ವಗಳ ಹಂಚಿಕೆಗೆ ಪೂರಕವಾಗಿ ದಸರಾ ದರ್ಬಾರ್ ಧರ್ಮ ಸಮಾರಂಭಕ್ಕೆ ವಿಧಾಯಕ ಸ್ಪರ್ಶ ನೀಡಿ ಮುನ್ನಡೆಸಲು ಚಾಲನೆ ನೀಡಿದ ಶ್ರೀ ಶಿವಾನಂದ ಭಗವತ್ಪಾದರು ಜನಮನದ ಪ್ರೀತ್ಯಾದರಗಳಿಗೆ ಪಾತ್ರರಾದರು. ಕೃಷಿಯಲ್ಲಿಯೂ ಆಸಕ್ತಿ ಹೊಂದಿದ್ದ ಅವರು ಪೀಠದ ಪರಿಸರದಲ್ಲಿ ಕಾಫಿ ತೋಟ ನಿರ್ವಿುಸಿದರು.
ಅಸ್ಖಲಿತ ವಾಕ್ಪಟುತ್ವ: ವೀರಶೈವ ಧರ್ಮಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿ ಸೇರಿದಂತೆ ಹಲವು ಧರ್ಮಸಿದ್ಧಾಂತಗಳ ಅಧ್ಯಯನ ಮಾಡಿದ್ದ ಶ್ರೀ ಶಿವಾನಂದರು, ತಮ್ಮ ಅಸ್ಖಲಿತ ವಾಕ್ಪಟುತ್ವದ ನೆಲೆಯಲ್ಲಿ ಮೇರು ಚಿಂತನೆಗಳ ಪ್ರತಿಪಾದನೆಯಲ್ಲಿ ಸರ್ವ ಸಮಾಜಗಳ ಜನಮನಗಳನ್ನು ತಮ್ಮತ್ತ ಸೆಳೆದುಕೊಂಡಿದ್ದರು. ರಂಭಾಪುರಿ ಪೀಠದ ಪರಂಪರೆಯಲ್ಲಿ ಶ್ರೀ ಶಿವಾನಂದ ಶಿವಾಚಾರ್ಯ ಭಗವತ್ಪಾದರ ನೆನಹು ಇಂದಿಗೂ ಶಾಶ್ವತವಾಗಿದೆ.
(ಲೇಖಕರು ಹಾವೇರಿ ಕೆಎಲ್​ಇ ಸೊಸೈಟಿಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಕಾಲೇಜಿನ ಉಪನ್ಯಾಸಕರು)
PM ಕುಸುಮ್ ಯೋಜನೆಗೆ ಕರ್ನಾಟಕದಿಂದಲೇ ಹೆಚ್ಚು ರೈತರ ಬೇಡಿಕೆ: ಸಚಿವ ಪ್ರಲ್ಹಾದ ಜೋಶಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × five =
Remember me
