ಬೆಂಗಳೂರು:ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ನೀತಿಯ ಜಾರಿ ಪ್ರಕ್ರಿಯೆಯನ್ನು ಆರಂಭ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಅಸೋಚಂ ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಉನ್ನತ ಶಿಕ್ಷಣದಲ್ಲಿ ಆಗುವ ಬದಲಾವಣೆ ಮತ್ತು ಬೀರುವ ಪ್ರಭಾವ”ದ ಕುರಿತ ಸಂವಾದದಲ್ಲಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದರು. ಒಮ್ಮೆ ಶಿಕ್ಷಣ ನೀತಿ ಜಾರಿ ಮಾಡಿದರೆ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗುರುತರ ಬದಲಾವಣೆಗಳು ಗೋಚರವಾಗುತ್ತವೆ. ರಾಜ್ಯದ ಉನ್ನತ ಶಿಕ್ಷಣದ ದಿಕ್ಕನ್ನೇ ಬದಲಿಸುವಂಥ ಅಂಶಗಳು ಈ ನೀತಿಯಲ್ಲಿವೆ ಎಂದರು.
ಈಗಾಗಲೇ ನೀತಿಯಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡಲಾಗಿದೆ. ಅದಕ್ಕಾಗಿ ಉನ್ನತಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಈಗಾಗಲೇ ಕಾರ್ಯಪಡೆಯ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಈ ಕಾರ್ಯಪಡೆಯ ಉಪ ಸಮಿತಿಗಳು ನೀಡಿರುವ ವರದಿಗಳನ್ನು ಅಧ್ಯಯನ ಮಾಡಲಾಗಿದೆ. ಇನ್ನು ನೀತಿಯ ಜಾರಿಗೆ ಕಾರ್ಯಪಡೆಯು ಅಂತಿಮ ವರದಿ ನೀಡಲಿದ್ದು, ಅದು ಕೈ ಸೇರಿದ ಕೂಡಲೇ ಸರ್ಕಾರವು ಶಿಕ್ಷಣ ನೀತಿಯ ಜಾರಿ ನಿಟ್ಟಿನಲ್ಲಿ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಇದನ್ನೂ ಓದಿ;ಸಿಬ್ಬಂದಿಗೆ ಸಂಬಳ ನೀಡಲು ಬಡ್ಡಿ ದುಡ್ಡಿಗೆ ಮೊರೆಹೋದ ತಿರುಪತಿ ದೇಗುಲ; ಎಷ್ಟಿದೆ ಗೊತ್ತೆ ಠೇವಣಿ?
ನಮ್ಮ ರಾಜ್ಯಕ್ಕೆ ಸೇರಿದ ತಜ್ಞರೇ ಇದ್ದ ಸಮಿತಿಯು ಅನೇಕ ಕ್ರಾಂತಿಕಾರಕ ಅಂಶಗಳನ್ನು ನೀತಿಯಲ್ಲಿ ಸೇರಿಸಿದೆ. ಎಲ್ಲ ಹಂತಗಳ ಶಿಕ್ಷಣದಲ್ಲೂ ಉತ್ತಮ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಮುಂದೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಹಂತದವರೆಗೂ ಅಪಾರ ಬದಲಾವಣೆಗಳನ್ನು ಕಾಣಬಹುದು. ಈ ಮೂಲಕ ಭಾರತವು ಜಗತ್ತಿನ ಜ್ಞಾನ ಕಣಜವಾಗಿ ಹೊರಹೊಮ್ಮಲಿದೆ. ಕರ್ನಾಟಕವೂ ಶಿಕ್ಷಣ ನೆಲೆಯಾಗಲಿದೆ ಎಂಬ ವಿಶ್ವಾಸ ನನಗೆ ಸಂಪೂರ್ಣವಾಗಿ ಇದೆ ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಅಕಾಡೆಮಿ:ಐದು ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯವು ಶೈಕ್ಷಣಿಕವಾಗಿ ಶರವೇಗದಲ್ಲಿ ಬೆಳೆಯುತ್ತಿದೆ. ಸರಾಸರಿ ರಾಜ್ಯದ ಜಿಲ್ಲೆಗಳಿಗೆ ಹೋಲಿಸಿದರೆ ಪ್ರತಿ ಜಿಲ್ಲೆಗೆ ಎರಡು ವಿಶ್ವವಿದ್ಯಾಲಯಗಳಿವೆ. ಬೆಂಗಳೂರು ನಗರವೊಂದರಲ್ಲೇ 880ಕ್ಕೂ ಹೆಚ್ಚು ಕಾಲೇಜುಗಳಿವೆ. ಹೀಗಾಗಿ ಶಿಕ್ಷಣದ ರಾಜಧಾನಿಯಾಗಿ ಹೊರಹೊಮ್ಮುವ ಎಲ್ಲ ಶಕ್ತಿಯೂ ಈ ನಗರಕ್ಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಈ ಗುರಿಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಉಪ ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ;ಹಂದಿ ಮಿದುಳಿನಲ್ಲಿ ಕಂಪ್ಯೂಟರ್​ ಚಿಪ್​; ಶೀಘ್ರದಲ್ಲಿ ಮಾನವರಿಗೂ ಅಳವಡಿಕೆ; ಆಸಕ್ತರಿಗಾಗಿ ನಡೆದಿದೆ ಹುಡುಕಾಟ…!
ಇಡೀ ದೇಶದಲ್ಲೇ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯವಾಗಿ ಕರ್ನಾಟಕವು ಮುನ್ನಡೆಯಲ್ಲಿ ನಿಲ್ಲಲಿದೆ. ಈಗಾಗಲೇ ಸರ್ಕಾರ ಹಾಕಿಕೊಂಡಿರುವ ಯೋಜನೆಯಂತೆ, ತಜ್ಞರು ಕೊಟ್ಟಿರುವ ಸಲಹೆಯಂತೆ ಹಂತಹಂತವಾಗಿ ಅನುಷ್ಠಾನ ಮಾಡಲಾಗುವುದು. ಧಾರವಾಡದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಉನ್ನತ ಶಿಕ್ಷಣ ಅಕಾಡೆಮಿಯಿಂದಲೂ ಇದಕ್ಕೆ ಅನುಕೂಲವಾಗಲಿದೆ. ಇದರ, ಜತೆಜತೆಯಲ್ಲೇ ಬಹು ಉದ್ದೇಶಿತ ಹಾಗೂ ಬಹುವಿಷಯಗಳನ್ನು ಬೋಧನೆ ಮಾಡುವ ವಿವಿಗಳನ್ನು ಕೂಡ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಅಸೋಚಂ ರಾಜ್ಯ ಘಟಕದ ಅಧ್ಯಕ್ಷ ಬಿ.ವಿ. ನಾಯ್ಡು, ಪ್ರಾದೇಶಿಕ ನಿರ್ದೇಶಕಿ ಉಮಾ ನಾಯರ್, ಎಐಸಿಟಿಇ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ, ಬೆಂಗಳೂರಿನ ಐಐಐಟಿ-ಬಿ ನಿರ್ದೇಶಕ ಪ್ರೊ.ಎಸ್. ಸಡಗೋಪನ್ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಮಂಗಳವಾರ ಶಾಲಾ- ಕಾಲೇಜು ಓಪನ್​; ವಿದ್ಯಾರ್ಥಿಗಳಿಗೆ ತರಬೇತಿ, ಸಿದ್ಧತೆ ಪೂರ್ಣಗೊಂಡಿರೋದೆಲ್ಲಿ ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 × 4 =
Remember me
