ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 10 ಹೊಸ ಶಾಸಕರು ಸೇರ್ಪಡೆಯಾಗಿದ್ದು, ಮಂತ್ರಿಮಂಡಲದ ಗಾತ್ರ 18 ರಿಂದ 28ಕ್ಕೆ ಹಿಗ್ಗಿದೆ. ಆದರೆ, ಖಾಲಿ ಉಳಿದಿರುವ ಆರು ಸ್ಥಾನಗಳ ಮೇಲೆ ಹಲವರು ಕಣ್ಣಿಟ್ಟಿದ್ದು, ಸಂಕಟ ಇನ್ನೂ ಹಾಗೆಯೇ ಉಳಿದಿದೆ. ಪ್ರಮಾನವಚನ ಸ್ವೀಕರಿಸಿದ ಸಚಿವರ ಪರಿಚಯ ಇಲ್ಲಿದೆ.
ರಮೇಶ ಜಾರಕಿಹೊಳಿ (ಗೋಕಾಕ)
1985ರಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮೇಶ ಜಾರಕಿಹೊಳಿ ಸೋಲು ಅನುಭವಿಸಿದ್ದರು. ಬಳಿಕ 1999, 2004, 2008, 2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ಇದೇ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಜಯಿಸುತ್ತ ಬಂದರು.
ಬದಲಾದ ರಾಜಕೀಯ ಸನ್ನಿವೇಶದಿಂದ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿದರು. ಸಿದ್ದರಾಮಯ್ಯ ಸಂಪುಟದಲ್ಲಿ ಮೊದಲ ಬಾರಿಗೆ ಮಂತ್ರಿಯಾದ ಜಾರಕಿಹೊಳಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿದ್ದರು. ಇದೀಗ ಬಿಎಸ್​ವೈ ನೇತೃತ್ವದ ಸರ್ಕಾರದಲ್ಲಿ 3ನೇ ಬಾರಿಗೆ ಮಂತ್ರಿಯಾಗಿದ್ದಾರೆ.
ಶ್ರೀಮಂತ ಪಾಟೀಲ (ಕಾಗವಾಡ)
ಎರಡು ದಶಕಗಳಿಂದ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಕೆಲಸದಲ್ಲಿ ತೊಡಗಿಕೊಂಡಿದ್ದ ಶ್ರೀಮಂತ ಪಾಟೀಲ 2013 ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
2018ರ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್​ನಿಂದ ಸ್ಪರ್ಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ರಾಜಕೀಯ ಬದಲಾವಣೆಯಿಂದ ಕಾಂಗ್ರೆಸ್ ತೊರೆದು, ಬಿಜೆಪಿಗೆ ಸೇರ್ಪಡೆಗೊಂಡು 2019ರಲ್ಲಿ ನಡೆದ ಉಪಚುನಾವಣೆಯಲ್ಲಿ 2ನೇ ಬಾರಿಗೆ ಶಾಸಕರಾಗಿದ್ದಾರೆ.
ಇದೀಗ ಯಡಿಯೂರಪ್ಪ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆನಂದ್​ಸಿಂಗ್ (ವಿಜಯನಗರ)
1996ರಲ್ಲಿ ಕಂಪ್ಲಿ ಪುರಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಆನಂದ ಸಿಂಗ್, 2008ರಲ್ಲಿ ಬಿಜೆಪಿ ಮೂಲಕ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿ ವಿಜಯನಗರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾದರು.
2013ರಲ್ಲಿ ಬಿಜೆಪಿಯಿಂದ ಪುನರಾಯ್ಕೆಯಾದರು. 2018ರ ಚುನಾವಣೆ ವೇಳೆ ಕಾಂಗ್ರೆಸ್ ಸೇರ್ಪಡೆಯಾಗಿ ಹ್ಯಾಟ್ರಿಕ್ ಗೆಲುವು ದಾಖಲಿಸಿದರು. 2019ರಲ್ಲಿ ಮತ್ತೆ ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಜಯ ಗಳಿಸಿದರು.
4 ಬಾರಿ ಶಾಸಕರಾಗಿರುವ ಸಿಂಗ್, 2013ರಲ್ಲಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದರು. ಇದೀಗ ಯಡಿಯೂರಪ್ಪ ಸಂಪುಟ ಸೇರಿದ್ದಾರೆ.
ಶಿವರಾಮ್ ಹೆಬ್ಬಾರ್ (ಯಲ್ಲಾಪುರ-ಮುಂಡಗೋಡ)
ಹೆಬ್ಬಾರ ಮೂಲತಃ ಹೊನ್ನಾವರ ತಾಲೂಕಿನ ಕೃಷಿ ಕುಟುಂಬದಿಂದ ಬಂದವರು. ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲುಂಡಿದ್ದರು. 2013 ಹಾಗೂ 2018ರಲ್ಲಿ ಅದೇ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಜೆಡಿಎಸ್-
ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಅಸಮಾಧಾನ ಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೂಲತಃ
ಬಿಜೆಪಿಯವರಾದ ಹೆಬ್ಬಾರ್, 2019ರ ಉಪಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಲಾರಿ ಕ್ಲೀನರ್ ಆಗಿದ್ದ ಇವರು, ಬಿಎಸ್​ವೈ ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ.
ಬಿ.ಸಿ.ಪಾಟೀಲ (ಹಿರೇಕೆರೂರು)
ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಪಾಟೀಲ್, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದವರು. ಕೌರವ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿ, ನಿರ್ದೇಶನ, ನಿರ್ಮಾಣವನ್ನೂ ಮಾಡಿದ್ದಾರೆ. ರೈತರ ಹೋರಾಟದ ಮೂಲಕ 2003ರಲ್ಲಿ ಹಿರೇಕೆರೂರು ಪ್ರವೇಶಿಸಿದ ಪಾಟೀಲ್, 2004ರಲ್ಲಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾದರು.
2008, 2018ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಇದೀಗ ಬಿಎಸ್​ವೈ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಲೇ ಔಟ್)
ಬಿಬಿಎಂಪಿ ಸದಸ್ಯರಾಗಿದ್ದ ಕೆ.ಗೋಪಾಲಯ್ಯ 2013ರಲ್ಲಿ ಜೆಡಿಎಸ್​ನಿಂದ ಮೊದಲ ಬಾರಿಗೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಿಂದ ಚುನಾಯಿತರಾಗಿದ್ದರು.
ಒಕ್ಕಲಿಗ ಮತದಾರರ ಸಂಖ್ಯಾ ಬಾಹುಳ್ಯವಿರುವ ಈ ಕ್ಷೇತ್ರದಲ್ಲಿ 2018ರಲ್ಲೂ ಮರು ಆಯ್ಕೆಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ 2019ರ ಉಪ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ್ದಾರೆ.
ಅವರ ಪತ್ನಿ ಹೇಮಲತಾ ಕೂಡ ರಾಜಕಾರಣಿಯಾಗಿದ್ದು, ಬಿಬಿಎಂಪಿ ಉಪ ಮಹಾಪೌರರಾಗಿದ್ದರು. ಗೋಪಾಲಯ್ಯ ಮೊದಲ ಬಾರಿಗೆ ಬಿಎಸ್​ವೈ ಸಂಪುಟದಲ್ಲಿ ಸಚಿವರಾಗಿದ್ದಾರೆ.
ಎಸ್.ಟಿ.ಸೋಮಶೇಖರ್ (ಯಶವಂತಪುರ)
ಕಟ್ಟಾ ಕಾಂಗ್ರೆಸಿಗರಾಗಿದ್ದ ಎಸ್.ಟಿ.ಸೋಮಶೇಖರ್ ಯಶವಂತಪುರ ಕ್ಷೇತ್ರದಿಂದ 2013, 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡು ಉಪ ಚುನಾವಣೆಯಲ್ಲಿ ಪುನರಾಯ್ಕೆಯಾಗಿದ್ದಾರೆ.
ಜೆಡಿಎಸ್ ಪ್ರಬಲ ಪೈಪೋಟಿಯ ನಡುವೆಯೂ ಉಪ ಸಮರದಲ್ಲಿ ವಿಜಯಿಯಾಗಿದ್ದಾರೆ. ಸೋಮಶೇಖರ್ ಸೋಲಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹಲವು ಹತ್ತು ಕಸರತ್ತು ನಡೆಸಿದರೂ ಜಯಶಾಲಿಯಾಗಿ ಬಿಎಸ್​ವೈ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ)
ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿರುವ ನಾರಾಯಣಗೌಡ, 2008ರಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಬಿಎಸ್​ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡರು.
2013ರ ಚುನಾವಣೆಯಲ್ಲಿ ಜೆಡಿಎಸ್​ನಿಂದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2018ರಲ್ಲೂ ಇದೇ ಪಕ್ಷದಿಂದ ಕಣಕ್ಕಿಳಿದು ಗೆದ್ದ ಇವರು, ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಿಜಯ ದಾಖಲಿಸಿ, ಜಿಲ್ಲೆಯಿಂದ ಗೆದ್ದ ಮೊದಲ ಬಿಜೆಪಿ ಶಾಸಕ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸದ್ಯ ಬಿಎಸ್​ವೈ ಸಂಪುಟ ಸೇರುವ ಮೂಲಕ ಕೆ.ಆರ್.ಪೇಟೆ ಕ್ಷೇತ್ರದಿಂದ ಮೂರು ದಶಕಗಳ ಬಳಿಕ ಸಚಿವರಾದ ಕೀರ್ತಿಗೆ ಭಾಜನರಾಗಿದ್ದಾರೆ.
ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ)
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ 2013, 2018ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನಕಾಂಕ್ಷಿ ಯಾಗಿದ್ದ ಇವರು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಸಾಕಷ್ಟು ವಿರೋಧ ಎದುರಿಸಬೇಕಾಯಿತು.
ಈ ನಡುವೆ ಅಂದಿನ ಸಿಎಂ ಕುಮಾರಸ್ವಾಮಿ ಚಿಕ್ಕಬಳ್ಳಾಪುರದ ಬದಲಿಗೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿರುವುದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಕಂಡರು. 30 ವರ್ಷಗಳ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಇವರ ಮೂಲಕ ಮಂತ್ರಿ ಭಾಗ್ಯ ಸಿಕ್ಕಿದೆ.
ಬಿ.ಎ.ಬಸವರಾಜ (ಕೆ.ಆರ್.ಪುರ)
ಭೈರತಿ ಬಸವರಾಜ ಎಂದೇ ಜನಪ್ರಿಯರಾಗಿರುವ ಬಿ.ಎ.ಬಸವರಾಜ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಕಾಪೋರೇಟರ್ ಹೀಗೆ ತಳಮಟ್ಟದಿಂದ ಹಂತ ಹಂತವಾಗಿ ರಾಜಕೀಯ ಮೆಟ್ಟಿಲೇರಿ 2013ರಲ್ಲಿ ಬಿಜೆಪಿಯ ನಂದೀಶ್ ರೆಡ್ಡಿ ವಿರುದ್ಧ ಕೆ.ಆರ್.ಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು.
2018ರಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗದ ಕಾರಣ ಬಂಡಾಯವೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ 2019ರಲ್ಲಿ ಪುನರಾಯ್ಕೆಯಾಗಿದ್ದು, ಮೊದಲಬಾರಿಗೆ ಮಂತ್ರಿಗಿರಿ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
