ಬೆಂಗಳೂರು:ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಈ ಸಮಿತಿಗಳಲ್ಲಿ ಅವಕಾಶ ನೀಡಲು ತೀರ್ವನಿಸಲಾಗಿದೆ. ಈ ಮೂಲಕ ಮುಖಂಡರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ಒದಗಿಸುವ ತಾಪತ್ರಯದಲ್ಲಿ ಸಿಲುಕಿದ್ದ ಆಡಳಿತ ಪಕ್ಷ ವಿನೂತನ ದಾರಿಯೊಂದನ್ನು ಕಂಡುಕೊಂಡಿದ್ದು, ಇನ್ನಷ್ಟು ಮಂದಿಗೆ ಅಧಿಕಾರ ನೀಡಲಾಗುತ್ತಿದೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಲೋಕಸಭೆ ಚುನಾವಣೆ ತಯಾರಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಿತಿಗಳನ್ನು ರಚಿಸುವ ನಿರ್ಧಾರ ಘೋಷಿಸಿದರು. ಅದಕ್ಕೂ ಮುನ್ನ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದರು.
ಅರ್ಹರು ಯಾರು?:ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಯಾರು ಅವಕಾಶ ಪಡೆದುಕೊಳ್ಳುತ್ತಾರೆಂಬುದನ್ನೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಂಸದರು, ಶಾಸಕರು, ಪರಿಷತ್ ಸದಸ್ಯರನ್ನು ಹೊರತುಪಡಿಸಿ, ಸಕ್ರಿಯ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ. ವಿವಿಧ ಇಲಾಖೆಗಳ ಸಮಿತಿಗಳನ್ನು ಕೂಡಲೇ ರಚಿಸಲು ಆಯಾ ಇಲಾಖೆಗಳ ಸಚಿವರ ವಿವೇಚನೆಗೆ ಬಿಡಲಾಗಿದೆ. ಹೆಸರುಗಳನ್ನು ನೀಡುವಾಗ ನಮ್ಮ ಶಾಸಕರು, ಸಂಸದರ ಸಲಹೆ ಪಡೆಯುವಂತೆ ಸೂಚಿಸಿದರು. ಕೆಲವು ಶಾಸಕರಿಗೆ, ವಿಧಾನಸಭೆ ಟಿಕೆಟ್ ದೊರೆಯದವರಿಗೆ ರಾಜ್ಯಮಟ್ಟದಲ್ಲಿ ಅವಕಾಶ ಕಲ್ಪಿಸುವ ಉದ್ದೇಶವಿದೆ.
ಸಿಎಂ ಸಮರ್ಥನೆ:ಈ ಆರ್ಥಿಕ ವರ್ಷದಲ್ಲಿ ಗ್ಯಾರಂಟಿಗಾಗಿ 38 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮುಂದಿನ ಸಾಲಿನಲ್ಲಿ ಅಂದಾಜು 58-59 ಸಾವಿರ ಕೋಟಿ ರೂ. ವೆಚ್ಚ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇಷ್ಟು ದೊಡ್ಡ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯಬೇಕೆಂಬ ಉದ್ದೇಶದಿಂದ ಸಮಿತಿ ರಚಿಸಲಾಗುತ್ತಿದೆ. ಯೋಜನೆ ಲಾಭವನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಆಶ್ರಯ ಸಮಿತಿ, ಬಗರ್ ಹುಕುಂ ಸಮಿತಿ ಸೇರಿ ವಿವಿಧ ಸಮಿತಿ ಇದ್ದಂತೆ ಇದೂ ಒಂದು ಸಮಿತಿ ಇರಲಿದೆ ಎಂದರು. 60ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು, 32 ಮಂತ್ರಿಗಳು, ಇಲಾಖೆಗಳಿರುವಾಗ ಈ ಸಮಿತಿ ಅಗತ್ಯ ಇತ್ತೇ? ಇದೊಂದು ಪುನರ್ವಸತಿ ಕೇಂದ್ರವಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅಸಹನೆ ವ್ಯಕ್ತಪಡಿಸಿದರು. ಈ ಸಮಿತಿಗಳಿಗೆ ಆಗುವ ವೆಚ್ಚದ ಕುರಿತು ಕೇಳಿದ ಪ್ರಶ್ನೆಗೆ, ವರ್ಷಕ್ಕೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಯೋಜನೆಯ ಭಾಗವಾಗಿ ರಚಿತವಾಗಿರುವ ಸಮಿತಿ ನಿರ್ವಹಣೆಗೆ ಆಗುವ ವೆಚ್ಚ ಅಲ್ಪ, ಹಾಲು ಕರೆಯುವ ಹಂಡೆಗೆ ಎಷ್ಟು ರೇಟು ಎಂದು ಕೇಳಿದ ಹಾಗಾಯಿತು ಎಂದು ನಕ್ಕರು.
ಸ್ವರೂಪ:ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗುತ್ತದೆ. ರಾಜ್ಯ ಸಮಿತಿಯಲ್ಲಿ ಅಧ್ಯಕ್ಷರು, ಐವರು ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಇರಲಿದೆ. ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ಅಂದಾಜು 31 ಸದಸ್ಯರು ಇರಲಿದ್ದು, ಇವರೆಲ್ಲರೂ ಕಾರ್ಯಕರ್ತರು. 31 ಜಿಲ್ಲಾಮಟ್ಟದ ಸಮಿತಿಗಳಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 21 ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವ ಧನ ನೀಡುವ ವ್ಯವಸ್ಥೆ ಆಗಲಿದೆ ಹಾಗೂ ಅಧ್ಯಕ್ಷರಿಗೆ ಮಾಸಿಕ 50 ಸಾವಿರ ರೂ. ನೀಡಲಾಗುವುದು. 224 ಕ್ಷೇತ್ರಗಳಲ್ಲಿ ಅಧ್ಯಕ್ಷರು, 11 ಸದಸ್ಯರು ಇರಲಿದ್ದಾರೆ. ಅಧ್ಯಕ್ಷರಿಗೆ 25 ಸಾವಿರ ರೂ.ವರೆಗೆ ಗೌರವ ಧನ ಹಾಗೂ ಸದಸ್ಯರಿಗೆ ಸಭಾ ಹಾಜರಾತಿ ಭತ್ಯೆ ಒದಗಿಸಲಾಗುವುದು. ಈ ಮೊತ್ತವನ್ನು ರಾಜ್ಯ ಖಜಾನೆಯಿಂದ ಭರಿಸಲಾಗುತ್ತದೆಂದು ಸಿಎಂ ಮಾಹಿತಿ ನೀಡಿದರು.
ಅಂದಾಜು ವೆಚ್ಚ:ಈ ಸಮಿತಿ ನಿರ್ವಹಣೆಗೆ ಆಗುವ ವೆಚ್ಚ ಸರ್ಕಾರಕ್ಕೆ ದೊಡ್ಡ ಹೊರೆಯೇನಲ್ಲ. ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮಿತಿ ರಚಿಸಲಾಗುತ್ತಿದೆ. ಅಂದಾಜು ವಾರ್ಷಿಕ 16 ಕೋಟಿ ರೂ. ಭರಿಸುತ್ತೇವೆ. ಅಪಪ್ರಚಾರಕ್ಕೆ ಉತ್ತರ ಕೊಡಲಿದ್ದೇವೆ ಎಂದು ಸಿಎಂ ಹೇಳಿದರು.
ಚುನಾವಣೆ ಮೇಲೆ ಕಣ್ಣು:ಸಮಿತಿಗಳ ಜವಾಬ್ದಾರಿ ಏನೆಂಬುದನ್ನು ಸದ್ಯಕ್ಕೆ ಸ್ಪಷ್ಟಪಡಿಸಿಲ್ಲ, ಶೀಘ್ರವೇ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಸದ್ಯಕ್ಕೆ ಐದು ಗ್ಯಾರಂಟಿ ಅನುಷ್ಠಾನ ಪರಾಮರ್ಶೆ ನಡೆಸುವ ಅಧಿಕಾರ ಸಮಿತಿಗಿರಲಿದೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ಲಾಭ ದೊರಕಿಸಿಕೊಡುವ ಕೆಲಸ ಮಾಡಲಿದೆ. ಸರ್ಕಾರಕ್ಕೆ ವರದಿ ಮಾಡಲಿದೆ. ಕೆಪಿಸಿಸಿಯಿಂದ ಗ್ಯಾರಂಟಿ ಕರಪತ್ರ ಸಿದ್ಧಪಡಿಸಲಾಗುತ್ತದೆ. ಅದನ್ನು ಈ ಸಮಿತಿ ಮೂಲಕ ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ಜತೆಗೆ ಗ್ಯಾರಂಟಿ ಗುರುತಿನ ಚೀಟಿಯನ್ನು ಹಂಚುವ ಕೆಲಸ ಮಾಡಲಿದೆ.
ಎಷ್ಟು ಮಂದಿಗೆ ಅವಕಾಶ?:ರಾಜ್ಯಮಟ್ಟದಲ್ಲಿ 37 ಮಂದಿಗೆ ಅವಕಾಶ ದೊರೆತರೆ, ಜಿಲ್ಲಾ ಮಟ್ಟದಲ್ಲಿ 682 ಹಾಗೂ ತಾಲೂಕು ಮಟ್ಟದಲ್ಲಿ 2,688 ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಈ ಸಮಿತಿಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
