ರಮೇಶ ದೊಡ್ಡಪುರ
ಬೆಂಗಳೂರು:ಪರೀಕ್ಷೆ ಪ್ರಮಾಣವನ್ನು ತೀವ್ರಗತಿಯಲ್ಲಿ ಏರಿಸದೆ ಇದ್ದ ವ್ಯವಸ್ಥೆಯಲ್ಲೇ ಕರೊನಾ ಸೋಂಕಿತರನ್ನು ನಿಭಾಯಿಸಲು ಸರ್ಕಾರ ಹೊರಡಿಸಿರುವ ಡಿಸ್​ಚಾರ್ಜ್ ನೀತಿಯೇ ಇದೀಗ ಸಕ್ರಿಯ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಸೋಂಕಿನ ಲಕ್ಷಣ ಇಲ್ಲದಿರುವವರನ್ನು 10 ದಿನ ಚಿಕಿತ್ಸೆ ನೀಡಿ ಯಾವುದೇ ಪರೀಕ್ಷೆ ನಡೆಸದೆ ಮನೆಗೆ ಕಳಿಸಲಾಗುತ್ತಿದೆ. ಪರೀಕ್ಷೆ ನಡೆಸಲು ಪ್ರಯೋಗಾಲಯದ ಮೇಲಿನ ಹೊರೆ ತಗ್ಗಿಸಲು ಕೈಗೊಂಡ ಈ ನಿರ್ಧಾರದಿಂದಾಗಿ, 2-3 ದಿನಕ್ಕೆ ಸೋಂಕಿನಿಂದ ಗುಣವಾದವರೂ ಹೆಚ್ಚುವರಿ 10-12 ದಿನ ಆಸ್ಪತ್ರೆಯಲ್ಲಿ ಇರುವುದರಿಂದ ಹಾಸಿಗೆಗಳು ಖಾಲಿಯಾಗುತ್ತಿಲ್ಲ. ನೆಗೆಟಿವ್ ಪರೀಕ್ಷೆ ಇಲ್ಲದೆ ಬಿಡುಗಡೆಯಾದವರಲ್ಲಿ ಪೂರ್ಣವಾಗಿ ಸೋಂಕು ವಾಸಿ ಆಗಿರದಿದ್ದರೆ ಮತ್ತೆ ಹಲವರಿಗೆ ಹರಡುವ ಆತಂಕವೂ ಇದೆ. ಇದೆಲ್ಲದರ ನಡುವೆ ಡಿಸ್​ಚಾರ್ಜ್ ನೀತಿಯನ್ನೇ ಬಂಡವಾಳ ಆಗಿಸಿಕೊಂಡಿರುವ ಅನೇಕ ಖಾಸಗಿ ಆಸ್ಪತ್ರೆಗಳು ಪ್ಯಾಕೇಜ್ ರೂಪಿಸಿ ಹಣ ಸುಲಿಗೆಗೆ ಇಳಿದಿವೆ.
ಲ್ಯಾಬ್​ಗಳ ಮೇಲಿನ ಹೊರೆ ಇಳಿಸುವ ಪ್ರಯತ್ನ:
ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಒಟ್ಟು 72 ಪ್ರಯೋಗಾಲಯಗಳಲ್ಲಿ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಕರೊನಾ ಪತ್ತೆಯಾದಾಗ ಮಾರ್ಚ್​ನಲ್ಲಿ ಪ್ರತಿನಿತ್ಯ 500-600 ಇದ್ದ ಪರೀಕ್ಷೆ ಸಂಖ್ಯೆ ಇದೀಗ ಗರಿಷ್ಠ 19,228ರವರೆಗೆ ಏರಿದೆ.
ಆದರೆ ಪರೀಕ್ಷೆ ಸಾಮರ್ಥ್ಯವನ್ನೂ ಮೀರಿ ಸೋಂಕು ಸಮುದಾಯದಲ್ಲಿ ಸಾಕಷ್ಟು ಆವರಿಸಿರುವ ಅಪಾಯ ಕಾಣಿಸುತ್ತಿದೆ. ಈಗಾಗಲೆ ಪತ್ತೆಯಾದ ಸೋಂಕಿತರ ಪ್ರಾಥಮಿಕ-ದ್ವಿತೀಯ ಸಂರ್ಪತರ ಪರೀಕ್ಷೆ ಹಾಗೂ ಸಮಾಜದಲ್ಲಿ ರ್ಯಾಂಡಂ ಪರೀಕ್ಷೆ ನಡೆಸುವುದು ಒಂದು ಭಾಗ. ಆಸ್ಪತ್ರೆಗಳಲ್ಲಿ ದಾಖಲಾಗಿರುವವರು ಗುಣಮುಖರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿಯಲೂ ಪರೀಕ್ಷೆ ನಡೆಸಬೇಕು ಎಂಬುದು ಎರಡನೇ ಹಾಗೂ ಪ್ರಮುಖ ಭಾಗ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರ ನಡುವೆ ಸರ್ಕಾರ ಕಳೆದ ತಿಂಗಳ ಕೊನೆಯ ವಾರದಿಂದ, ಆಸ್ಪತ್ರೆಯಲ್ಲಿ ದಾಖಲಾಗಿರುವವರ ಪರೀಕ್ಷೆ ಹಾಗೂ ಡಿಸ್ ಚಾರ್ಜ್ ಮಾಡುವ ನೀತಿಯಲ್ಲಿ ಗಮನಾರ್ಹ ಬದಲಾವಣೆ ಮಾಡಿತ್ತು. ಒಟ್ಟು ಸೋಂಕಿತರಲ್ಲಿ ಅಂದಾಜು ಶೇ.90 ಗುಣಲಕ್ಷಣ ಇಲ್ಲದವರನ್ನು (ಅಸಿಂಪ್ಟಮ್ಯಾಟಿಕ್) ಪರೀಕ್ಷೆ ಇಲ್ಲದೆ ಬಿಡುಗಡೆ ಮಾಡುವುದು ಆ ನೀತಿ.
ಹೊರೆ ಇನ್ನೊಂದು ಕಡೆಗೆ ವರ್ಗಾವಣೆ:ಲ್ಯಾಬ್ ಮೇಲಿನ ಹೊರೆ ತಗ್ಗಿಸಲು ಸರ್ಕಾರ ಜೂ.23ರಂದು ಹೊಸ ನಿಯಮ ಜಾರಿಗೊಳಿಸಿತು. ಇದರಂತೆ, ಗುಣಲಕ್ಷಣಗಳಿಲ್ಲದ ಸೋಂಕಿತರು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಅವರನ್ನು ಡಿಸ್​ಚಾರ್ಜ್ ಮಾಡುವಾಗ ಕರೊನಾ ಪರೀಕ್ಷೆ ಅಗತ್ಯವಿಲ್ಲ. ಗಂಟಲು ದ್ರವ ಸಂಗ್ರಹಿಸಿ 10 ದಿನದವರೆಗೂ ಗುಣಲಕ್ಷಣಗಳಿಲ್ಲದಿದ್ದರೆ, ದೇಹದ ಉಷ್ಣಾಂಶ 99.5 ಫ್ಯಾರನ್ ಹೀಟ್​ಗಿಂತ ಕಡಿಮೆ ಇದ್ದರೆ, ಶೇ.95ಕ್ಕಿಂತ ಹೆಚ್ಚು ಆಮ್ಲಜನಕ ಸಾಂದ್ರತೆ ಹೊಂದಿದ್ದರೆ, ಉಸಿರಾಟದ ದರ ಪ್ರತಿ ನಿಮಿಷಕ್ಕೆ 24ಕ್ಕಿಂತ ಕಡಿಮೆ ಇದ್ದರೆ ಅಂಥವರನ್ನು ಕರೊನಾ ಪರೀಕ್ಷೆ ನಡೆಸದೆ ಬಿಡುಗಡೆ ಮಾಡಬಹುದು. ಆದರೆ ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೊರೆ ಹೆಚ್ಚಾಗಿದೆ. ಅನೇಕ ಸೋಂಕಿತರು 2-4 ದಿನಗಳಲ್ಲೇ ಗುಣಮುಖವಾಗುತ್ತಾರೆ. ಆದರೆ ಈ ನೀತಿಯ ಕಾರಣಕ್ಕೆ ಅಂಥವರೂ ಅನಿವಾರ್ಯವಾಗಿ 10 ದಿನ ಆಸ್ಪತ್ರೆಯಲ್ಲಿ ಉಳಿಯುತ್ತಿದ್ದಾರೆ. ಇದರಿಂದಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಹೊಸ ಸೋಂಕಿತರಿಗೆ ಹಾಸಿಗೆಗಳ ಕೊರತೆ ಉಂಟಾಗುತ್ತಿದೆ. ಪರೀಕ್ಷೆಗಳ ಸಂಖ್ಯೆ 25 ಸಾವಿರಕ್ಕೆ ಹೆಚ್ಚಿಸುವುದಾಗಿ ಈ ಹಿಂದೆ ಸರ್ಕಾರ ತಿಳಿಸಿತ್ತಾದರೂ ಶುಕ್ರವಾರದವರೆಗೂ 20 ಸಾವಿರ ಗಡಿಯನ್ನೂ ಮುಟ್ಟಿಲ್ಲ. ಪರೀಕ್ಷೆ ಪ್ರಮಾಣ ಹೆಚ್ಚಿಸಿದರೆ, ಗುಣಲಕ್ಷಣ ಇಲ್ಲದವರನ್ನೂ 3-4 ದಿನಗಳಿಗೊಮ್ಮೆ ಪರೀಕ್ಷಿಸಬಹುದು. ವರದಿ ನೆಗೆಟಿವ್ ಬಂದೊಡನೆ ಬಿಡುಗಡೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೆ ಹರಡುವ ಭಯ:ಹತ್ತು ದಿನದ ನಂತರ ಬಿಡುಗಡೆಯಾಗುವ ಸೋಂಕಿತರನ್ನು ಮತ್ತೆ 14 ದಿನ ಮನೆಯಲ್ಲಿ ಕ್ವಾರಂಟೈನ್ ಆಗುವಂತೆ ‘ಸೂಚನೆ’ ನೀಡಲಾಗುತ್ತದೆ. ಆದರೆ ಇಲ್ಲಿವರೆಗೆ ಹೋಂ ಕ್ವಾರಂಟೈನ್ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹೋಂ ಕ್ವಾರಂಟೈನ್ ಆಗಬೇಕಿದ್ದ 10 ಸಾವಿರಕ್ಕೂ ಹೆಚ್ಚು ಜನರು ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದಾರೆ ಎಂಬ ಲೆಕ್ಕ ಸರ್ಕಾರದ ಬಳಿಯೇ ಇದೆ. ಹೀಗಿರುವಾಗ ಒಟ್ಟಾರೆ ಈ ಡಿಸ್​ಚಾರ್ಜ್ ನೀತಿ ಬಗ್ಗೆಯೇ ಅನುಮಾನಗಳಿವೆ.
ಖಾಸಗಿಯವರಿಂದ ಪ್ಯಾಕೇಜ್ ಸರ್ಕಾರದ 10 ದಿನದ ಪ್ರೊಟೊಕಾಲ್​ಅನ್ನೇ ಅನೇಕ ಖಾಸಗಿ ಆಸ್ಪತ್ರೆಗಳು ಹಣ ಮಾಡುವ ಮೂಲ ಆಗಿಸಿಕೊಂಡಿವೆ. ಲ್ಯಾಬ್​ನಲ್ಲಿ ವರದಿ ಪಡೆಯುವ ಅನೇಕರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ 10 ದಿನದ ಚಿಕಿತ್ಸೆಗೆ 70 ಸಾವಿರ ರೂ. ನಿಂದ ಆರಂಭಿಸಿ ವಿವಿಧ ಹಂತದ ಪ್ಯಾಕೇಜ್ ನಿಗದಿ ಮಾಡಿದ್ದಾರೆ.
ಗುಣಲಕ್ಷಣ ಇಲ್ಲದಿದ್ದರೂ ಸೋಂಕಿತರನ್ನು 10 ದಿನ ಹಾಸಿಗೆಯಲ್ಲಿ ಮಲಗಿಸಿರುತ್ತಾರೆ. ಪ್ರತಿದಿನ ಬೆಳಗ್ಗೆ, ಸಂಜೆ ಪ್ಯಾರಾಸಿಟಮಲ್ ನೀಡಿ ಊಟೋಪಚಾರ ಮಾಡುತ್ತಾರೆ. ಪ್ರತಿ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಪ್ರತಿದಿನ 3 ಪಿಪಿಇ ಕಿಟ್ ಬಳಸಿದ್ದೇವೆ ಎನ್ನುತ್ತ ಅದನ್ನೂ ಸೇರಿಸಿ ಬಿಲ್ ಮಾಡುತ್ತಾರೆ. ಪ್ರತಿ 3-4 ದಿನಕ್ಕೊಮ್ಮೆ ಪರೀಕ್ಷೆ ನಡೆಸುವಂತಾದರೆ ಅನೇಕರ ಜೇಬಿಗೆ ಕತ್ತರಿ ಬೀಳುವುದು ತಪು್ಪತ್ತದೆ ಎಂದು ಪ್ರಯೋಗಾಲಯವೊಂದರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − 3 =
Remember me
