ಬೆಂಗಳೂರು:ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕದ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ಬಜೆಟ್ ಭಾಷಣದಲ್ಲಿ ಘೋಷಿಸಿದರು. ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ಸುಮಾರು 88,150 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಅವರು ಹೇಳಿದರು.
ಇಲೆಕ್ಟ್ರಾನಿಕ್ ಸಿಸ್ಟಂ ಡಿಸೈನ್ ಆಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್​ಡಿಎಂ), ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ ಅಯಾನ್ ಬ್ಯಾಟರಿ ತಯಾರಿಕೆ, ತಯಾರಿಕಾ ವಲಯ, ಆಟೊಮೊಬೈಲ್, ಡೇಟಾ ಸೆಂಟರ್ ಮತ್ತಿತರ ವಲಯಗಳಲ್ಲಿ ಈ ಹೂಡಿಕೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ವರ್ಷ ಜಾಗತಿಕ ಸಮಾವೇಶ:ರಾಜ್ಯದಲ್ಲಿ ಅಧಿಕ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ 2025ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು (ಜಿಐಎಂ) ಆಯೋಜಿಸಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶಕ್ಕೆ ಚಿಟ್​ಫಂಡ್ ವಿಸ್ತರಣೆ:ಗ್ರಾಮೀಣ ಜನರಲ್ಲಿ ಆರ್ಥಿಕ ಶಿಸ್ತು ಮತ್ತು ಉಳಿತಾಯ ಮನೋಭಾವವನ್ನು ಉತ್ತೇಜಿಸಲು ಮೈಸೂರು ಸೇಲ್ಸ್ ಇಂಟರ್​ನ್ಯಾಶನಲ್ (ಎಂ.ಎಸ್.ಐ.ಎಲ್.) ವತಿಯಿಂದ ಚಿಟ್​ಫಂಡ್ ಅನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಯಶವಂತಪುರದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ (ಕೆ.ಎಸ್.ಡಿ.ಎಲ್.) ಸಂಸ್ಥೆಯಿಂದ ವಿವಿಧ ಸರ್ಕಾರಿ ಇಲಾಖೆಗಳನ್ನು ನಿರ್ವಹಿಸಲು ಸುಸಜ್ಜಿತ ಕಚೇರಿ ಸಂಕೀರ್ಣವನ್ನು ನಿರ್ವಿುಸಲಾಗುವುದು.
ಮೇಲ್ದರ್ಜೆಗೆ ಏರಿಕೆ:ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಕೈಗಾರಿಕಾ ವಸಾಹತುಗಳನ್ನು ಕೇಂದ್ರ ಸರ್ಕಾರದ ಸಹಯೋಗದಲ್ಲಿ 39 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್​ಎಸ್​ಐಡಿಸಿ) ಮೂಲಕ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ ಎಂದು ಸಿಎಂ ಹೇಳಿದರು.
ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ:ಮಂಡ್ಯ ಭಾಗದ ಕಬ್ಬು ಬೆಳೆಗಾರರಿಗೆ ಮುಖ್ಯಮಂತ್ರಿ ಸಿಹಿ ಸುದ್ದಿಯೊಂದನ್ನು ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು. ಮಂಡ್ಯದ ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ವಿುಸಲಾಗುವುದೆಂದು ಸಿದ್ದರಾಮಯ್ಯ ಹೇಳಿದರು. ಅದಕ್ಕಾಗಿ ಸರ್ಕಾರದ ಅನುದಾನ, ಇತರೆ ಮೂಲಗಳು ಹಾಗೂ ಕಾರ್ಖಾನೆಯ ಆಸ್ತಿಯ ಮಾರಾಟದ (ಅಸೆಟ್ ಮಾನಿಟೈಸೇಶನ್) ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು ಎಂದರು.
80,000 ಉದ್ಯೋಗ ಸೃಷಿ:ಬೆಂಗಳೂರು ಸಮೀಪ ಸುಮಾರು 2,000 ಎಕರೆ ಪ್ರದೇಶದಲ್ಲಿ ಜ್ಞಾನ, ಆರೋಗ್ಯ ಕಾಳಜಿ, ಆವಿಷ್ಕಾರ ಮತ್ತು ಸಂಶೋಧನಾ ನಗರವನ್ನು (ಕೆಎಚ್​ಐಆರ್) ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಈ ಯೋಜನೆಯಲ್ಲಿ ಅಂದಾಜು 40,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 80,000 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ ಎಂದು ಸಿಎಂ ವಿವರಿಸಿದರು.
ಕೈಗಾರಿಕಾ ಕಾರಿಡಾರ್ :ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿ ಧಾರವಾಡ ಸಮೀಪ ಸುಮಾರು 6,000 ಎಕರೆ ಜಮೀನಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಮೂಲಕ ಉತ್ತರ ಕರ್ನಾಟಕದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಆರ್ಥಿಕ ಬೆಳವಣಿಗೆಗಳಿಗೆ ಉತ್ತೇಜನ ನೀಡಲು ತೀರ್ವನಿಸಲಾಗಿದೆ ಎಂದು ತಮ್ಮ ಸರ್ಕಾರದ ಸಂಕಲ್ಪವನ್ನು ಸಿಎಂ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ವಿವರಿಸಿದರು.
ಐಪಿಒಗೆ ಸಹಾಯಧನ:ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಷೇರು ವಿನಿಮಯ ಕೇಂದ್ರಗಳಲ್ಲಿ (ಸ್ಟಾಕ್ ಎಕ್ಸ್​ಚೇಂಜ್) ಐಪಿಓ ಬಿಡುಗಡೆ ಮಾಡಲು ತಗಲುವ ವೆಚ್ಚದಲ್ಲಿ ಗರಿಷ್ಠ ಮಿತಿ 25 ಲಕ್ಷ ರೂಪಾಯಿಗೆ ಒಳಪಟ್ಟು ಶೇಕಡ 50 ರಷ್ಟು ಸಹಾಯಧನ ನೀಡಲಾಗುವುದು ಎಂದರು. ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು ಮತ್ತು ಎಂ.ಎಸ್.ಎಂ.ಇ.ಗಳನ್ನು ಟ್ರೆಡ್ಸ್ (ಖ್ಕಛಿಈಖ) ವೇದಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಂ.ಎಸ್.ಎಂ.ಇ. ಗಳಿಗೆ ಬರಬೇಕಾದ ಪಾವತಿಗಳು ಕಾಲಮಿತಿಯೊಳಗೆ ಸ್ವೀಕೃತಿಯಾಗಿ ಅವುಗಳ ನಗದು ಹರಿವು ಸಧೃಡಗೊಳಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿ ಟ್ರೆಡ್ಸ್ ಸೇವಾ ಪೂರೈಕೆದಾರರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗುವುದೆಂದು ಸಿಎಂ ಹೇಳಿದರು.
ಅಕ್ರಮ ಖನಿಜ ಗಣಿಗಾರಿಕೆಗೆ ಕಡಿವಾಣ:ರಾಜ್ಯದಲ್ಲಿನ ಕಟ್ಟಡಕಲ್ಲು ಸೇರಿದಂತೆ ಎಲ್ಲ ಉಪ ಖನಿಜಗಳ ಅನಧಿಕೃತ ಗಣಿಗಾರಿಕೆಯನ್ನು ನಿಯಂತ್ರಿಸಲು ಸರ್ಕಾರ ಸಕಲ ಕ್ರಮಗಳನ್ನು ಕೈಗೊಳ್ಳಲಿದೆ. ಜೊತೆಗೆ ಸಂಪೂರ್ಣ ಖನಿಜ ಬಳಕೆ ಪ್ರಮಾಣವನ್ನು ಡ್ರೋನ್ ಸಮೀಕ್ಷೆ ಮೂಲಕ ವೈಜ್ಞಾನಿಕವಾಗಿ ಅಂದಾಜಿಸುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಿ, ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸಲಾಗುವುದು. ಇದರಿಂದ ಉದ್ಯಮ ಸ್ನೇಹಿ, ಸರಳ ಮತ್ತು ಉತ್ತರದಾಯಿತ್ವ ಹೊಂದಿರುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವಿವರಿಸಿದರು.

ಮದ್ಯದ ದರ ವ್ಯತ್ಯಾಸ ಸಾಧ್ಯತೆ:ಐದು ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ಹೆಣಗಾಡುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಬಜೆಟ್​ನಲ್ಲಿ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್), ಬಿಯರ್ ಮೇಲಿನ ಅಬಕಾರಿ ಸುಂಕ ಪರಿಷ್ಕರಣೆ ಮೂಲಕ ಮದ್ಯವ್ಯಸನಿಗಳಿಗೆ ಬೆಲೆ ಏರಿಕೆ ಶಾಕ್ ಕೊಟ್ಟಿದೆ. ಇದರಿಂದಾಗಿ ಬಿಯರ್, ಐಎಂಎಲ್ ಮೇಲೆ ಮತ್ತೊಮ್ಮೆ ಕನಿಷ್ಠ 6-8 ರೂ. ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಇತ್ತೀಚಿಗಷ್ಟೇ ರಾಜ್ಯದಲ್ಲಿ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಬಿಯರ್ ಬಾಟಲ್ ಮೇಲೆ ಹೆಚ್ಚವರಿ ಅಬಕಾರಿ ಸುಂಕವನ್ನು ಶೇ.10 ಹೆಚ್ಚಿಸಲಾಗಿತ್ತು. ಈ ಬಗ್ಗೆ ಇಲಾಖೆ, ಬಿಯರ್ ದರ ಹೆಚ್ಚಿಸಿ ಕರ್ನಾಟಕ ಅಬಕಾರಿ (ಸುಂಕಗಳ ಮತ್ತು ಶುಲ್ಕಗಳು) ನಿಯಮಕ್ಕೆ ತಿದ್ದುಪಡಿ 2024ರ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. 2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿಯೂ ಸಿಎಂ ಸಿದ್ದರಾಮಯ್ಯ, ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಶುಂಕ ಹೆಚ್ಚಿಸಿದ್ದರು. ಇದೀಗ ಮತ್ತೊಮ್ಮೆ ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ. ಇಲಾಖೆಯ ಎಲ್ಲ ಸೇವೆಗಳನ್ನು ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ಸಿಎಂ ಸಿದ್ದರಾಮಯ್ಯ, ಇಲಾಖೆ ಒದಗಿಸುವ ವಿವಿಧ ಸೇವೆಗಳಿಗೆ ಸಮಯ ಮಿತಿ ನಿಗದಿ ಹಾಗೂ ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.
38,525 ಕೋಟಿ ರೂ. ಟಾರ್ಗೆಟ್:ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ರಾಜಸ್ವ ಹರಿದು ಬರುತ್ತಿರುವ ಪ್ರಮುಖ ಇಲಾಖೆಗಳಲ್ಲಿ ಅಬಕಾರಿ ಇಲಾಖೆಯೂ ಒಂದಾಗಿದೆ. ಹೀಗಾಗಿ, ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಪ್ರತಿ ವರ್ಷ ಇಲಾಖೆಗೆ ಹೊಸ ಆದಾಯ ಸಂಗ್ರಹ ಗುರಿಯನ್ನು ನೀಡುತ್ತಾ ಬರುತ್ತಿದೆ. ಅದರಂತೆ, ಈ ಬಾರಿಯೂ ಬಜೆಟ್​ನಲ್ಲಿ ಕಾಂಗ್ರೆಸ್ ಸರ್ಕಾರ, 2024-25ನೇ ಸಾಲಿನಲ್ಲಿ ಇಲಾಖೆಗೆ 38,525 ಕೋಟಿ ರೂ.ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಿದೆ. 2023-24 ರಲ್ಲಿ 36 ಸಾವಿರ ಕೋಟಿ ರೂ. ಗುರಿ ರಾಜಸ್ವ ಸಂಗ್ರಹ ಟಾರ್ಗೆಟ್ ನೀಡಲಾಗಿತ್ತು. ಪ್ರತಿ ವರ್ಷ ಹಳೆಯ ಗುರಿಗೆ ಹೆಚ್ಚುವರಿ 2-3 ಸಾವಿರ ಕೋಟಿ ರೂ.ಹೆಚ್ಚಿಸಿ ಹೊಸ ಟಾರ್ಗೆಟ್ ನೀಡಲಾಗುತ್ತಿದೆ.
ಜವಳಿ ಕ್ಷೇತ್ರದಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿ ಗುರಿ:ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಸಲು 2024-29ರ ಅವಧಿಗೆ 10,000 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಪ್ರಕಟಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿ.ಪಿ.ಪಿ.) ಮಾದರಿಯಲ್ಲಿ ಮೆಗಾ ಟೆಕ್ಸ್​ಟೈಲ್ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ 50 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗುವುದು ಎಂದು ಸಿಎಂ ತಿಳಿಸಿದರು. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ (ರಾಯಚೂರು) ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್​ಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು ಎಂದರು.
ಕೇಬಲ್ ಕಾರ್, ರೋಪ್ ವೇ :ರಾಜ್ಯದ ಪ್ರಮುಖ ಜಲಾಶಯಗಳ ಹಿನ್ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ. ಸಾಹಸ ಪ್ರವಾಸೋದ್ಯವನ್ನು ಉತ್ತೇಜಿಸಲು ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯ ಅಭಿವೃದ್ಧಿಪಡಿಸಲಾಗುವುದು. ಗೋಕಾಕ್ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಸ್ಮಾರಕಗಳ ದಾಖಲೆ ಡಿಜಿಟಲ್:ರಾಜ್ಯದ 530 ಸಂರಕ್ಷಿತ ಸ್ಮಾರಕಗಳನ್ನು 3ಡಿ ಲೇಸರ್ ಸ್ಕಾ್ಯನಿಂಗ್ ಮೂಲಕ ಡಿಜಿಟಲ್ ದಾಖಲೀಕರಣ ಮಾಡಲಾಗಿದೆ. ಈ ಕಾರ್ಯವನ್ನು ದೇಶದಲ್ಲಿಯೇ ಪ್ರಥಮವಾಗಿ ಕೈಗೊಂಡಿರುವ ಶ್ರೇಯಸ್ಸು ಕರ್ನಾಟಕದ್ದಾಗಿದೆ. ಈ ಡಿಜಿಟಲ್ ಮಾಹಿತಿಗಳನ್ನು ಪರಿಣಾಮಕಾರಿಯಾಗಿ ಮತ್ತು ಸಂವಾದಾತ್ಮಕವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸಿರುವುದಾಗಿ ಸಿಎಂ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 5 =
Remember me
