|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಶಾಶ್ವತವಾಗಿ ತಡೆ ಹಾಕುವ ಮೂಲಕ ಅವರ ಹಕ್ಕುಗಳನ್ನು ಎತ್ತಿ ಹಿಡಿಯುವ ಮಕ್ಕಳ ಸುರಕ್ಷತಾ ನೀತಿ ಹೊಸ ವರ್ಷಕ್ಕೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ರಾಜ್ಯ ಮಕ್ಕಳ ಸಂರಕ್ಷಣಾ ನಿರ್ದೇಶನಾಲಯ ತಜ್ಞರ ಸಲಹೆ ಗಳೊಂದಿಗೆ ಕರ್ನಾಟಕ ಮಕ್ಕಳ ಸುರಕ್ಷತಾ ನೀತಿ ಸಿದ್ಧಪಡಿಸಿದೆ. ಶೀಘ್ರ ಸಚಿವ ಸಂಪುಟದ ಒಪ್ಪಿಗೆ ಪಡೆದು ಜಾರಿಗೆ ತರಲಾಗುತ್ತದೆ.
ನೀತಿ ಏಕೆ?:ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಅವುಗಳನ್ನು ಕೊನೆಗಾಣಿಸಿ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾನೂನು ಬಿಗಿಗೊಳಿಸಲು ನೀತಿ ರೂಪಿಸಲಾಗಿದೆ. ಆರ್​ಟಿಇ, ಬಾಲ್ಯವಿವಾಹ ನಿಷೇಧ, ಬಾಲಕಾರ್ವಿುಕ ಪದ್ಧತಿ ನಿಷೇಧ, ಪೋಕ್ಸೋದಂಥ ಕಾನೂನುಗಳಿದ್ದರೂ ಸಾಲುತ್ತಿಲ್ಲ. ಹೀಗಾಗಿ ಇನ್ನಷ್ಟು ಬಿಗಿ ಕ್ರಮದ ಉದ್ದೇಶ ಸರ್ಕಾರದ್ದಾಗಿದೆ. ತಾರತಮ್ಯವಿಲ್ಲದೇ 18 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಹಿಂಸೆ, ಶಿಕ್ಷೆ, ನಿಂದನೆ, ನಿರ್ಲಕ್ಷ್ಯಗಳಿಲ್ಲದಂತೆ ರಕ್ಷಣೆ ನೀಡುವುದು, ಶಿಕ್ಷಣ, ಆರೋಗ್ಯ, ಭದ್ರತೆ ಒದಗಿಸುವುದು ನೀತಿಯ ಮೂಲಕ ಸಾಧ್ಯವಾಗಲಿದೆ.
ಇಲಾಖೆಗಳ ಜವಾಬ್ದಾರಿ:ಮಕ್ಕಳ ಸುರಕ್ಷತೆ ಯಾವುದೋ ಒಂದು ಇಲಾಖೆಗೆ ಒಳಪಡುವುದಿಲ್ಲ; ಬಹುತೇಕ ಇಲಾಖೆಗಳಿಗೆ ಸೇರಿದೆ. ಆದ್ದರಿಂದಲೇ ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಯನ್ನು ಗುರುತಿಸಿ ಸೂಚನೆಗಳನ್ನು ನೀಡಲಾಗಿದೆ. ಶಿಕ್ಷಣ, ಗೃಹ, ಸಮಾಜ ಕಲ್ಯಾಣ, ಆರೋಗ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಕಾರ್ವಿುಕ, ಗ್ರಾಮೀಣಾಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತಗಳು ಮೇಲು ನೋಟಕ್ಕೆ ನೇರವಾಗಿ ಮಕ್ಕಳ ವಿಚಾರಗಳಿಗೆ ಸಂಬಂಧಿಸಿದರೂ, ಪ್ರವಾಸೋದ್ಯಮ, ಸಾರಿಗೆ, ಕೃಷಿ, ಕನ್ನಡ ಮತ್ತು ಸಂಸ್ಕೃತಿ ಹೀಗೆ… ಇತರ ಹಲವು ಇಲಾಖೆಗಳಿಗೂ ಅಷ್ಟೇ ಪ್ರಮಾಣದ ಜವಾಬ್ದಾರಿ ಇರುತ್ತದೆ. ಅದನ್ನು ನೀತಿಯ ಮೂಲಕ ನೆನಪಿಸಲಾಗುತ್ತಿದೆ.
ಮಕ್ಕಳ ರಕ್ಷಣಾ ಬಜೆಟ್:ರಾಜ್ಯದಲ್ಲಿ ಈಗಾಗಲೆ ಮಕ್ಕಳ ಬಜೆಟ್ ಇದೆ. ಪ್ರತ್ಯೇಕವಾಗಿ ಮಕ್ಕಳ ರಕ್ಷಣಾ ಬಜೆಟ್ ರೂಪಿಸುವ ಅಗತ್ಯವನ್ನು ನೀತಿಯಲ್ಲಿ ಹೇಳಲಾಗಿದೆ. ಒಟ್ಟಾರೆ ಬಜೆಟ್​ನ ಶೇ.10 ಅನ್ನು ಇದಕ್ಕಾಗಿ ಮೀಸಲಿಡುವಂತೆಯೂ ನೀತಿಯಲ್ಲಿ ಶಿಫಾರಸು ಮಾಡಲಾಗುತ್ತಿದೆ. ವಿವಿಧ ಇಲಾಖೆಗಳ ಸಂಪನ್ಮೂಲಗಳನ್ನು ಬಳಸಿಕೊಂಡು ಅನುದಾನ ಮೀಸಲಿಡುವ ಬಗ್ಗೆ ಹೇಳಿದೆ.
ವಲಸೆ ಕಾರ್ಡ್:ಮಕ್ಕಳಿಗೆ ಶಿಕ್ಷಣದ ಹಕ್ಕಿನ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. 18 ವರ್ಷದ ತನಕ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ಸಿಗುವಂತಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದುವವರು ಅರ್ಧದಲ್ಲಿಯೇ ಶಾಲೆ ತೊರೆದರೆ ದೇಶದ ಯಾವುದೇ ಭಾಗದಲ್ಲಿ ಶಾಲೆಗೆ ಸೇರಲು ಅನುಕೂಲವಾಗುವಂತೆ ವಲಸೆ ಕಾರ್ಡ್ ನೀಡಬೇಕು. ಪ್ರತಿಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಬೇಕು. ಇಂದಿನ ಮಾರುಕಟ್ಟೆಗೆ ತಕ್ಕಂತೆ ಮಕ್ಕಳಿಗೆ ಕೌಶಲಪೂರ್ಣ ವೃತ್ತಿ ಶಿಕ್ಷಣ ನೀಡಬೇಕೆಂದು ತಿಳಿಸಿದೆ. ಕುಟುಂಬಗಳು ಸ್ಥಳಾಂತರಗೊಂಡರೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸ್ಪಷ್ಟಪಡಿಸಿದೆ.
ತೃತೀಯ ಲಿಂಗಿಗಳಿಗೂ ಆದ್ಯತೆ:ಮಕ್ಕಳು ತೃತೀಯ ಲಿಂಗಿಗಳಾಗಿದ್ದರೆ ಅವರು ಶಿಕ್ಷಣ ವಂಚಿತರಾಗದಂತೆ, ಶೋಷಣೆ ಆಗದಂತೆ ಎಚ್ಚರ ವಹಿಸಬೇಕು. ಕೌಶಲ ತರಬೇತಿ ನೀಡಬೇಕು.
ಆಸ್ತಿ ವಶ:ನಿರಂತರವಾಗಿ ದೌರ್ಜನ್ಯ ಎಸಗುವವರ ವಿರುದ್ಧ ಕ್ರಿಮಿನಲ್ ಪ್ರೋಸಿಜರ್ ಕೋಡ್ 1973ರ ಪ್ರಕಾರ ಆಸ್ತಿ ವಶ, ಬ್ಯಾಂಕ್ ಖಾತೆಗಳ ಸ್ಥಗಿತ, ದಂಡ, ಜೈಲು ಶಿಕ್ಷೆ ವಿಧಿಸುವುದು ಸೇರಿದೆ. ಲೈಂಗಿಕ ದೌರ್ಜನ್ಯ ಎಸಗುವವರ ಡೇಟಾ ಸಂಗ್ರಹವನ್ನೂ ಉಲ್ಲೇಖಿಸಲಾಗಿದೆ.
ಇಂಟರ್​ನೆಟ್ ಸೇವಾದಾರರ ಮೇಲೂ ಕ್ರಮ:ತಂತ್ರಜ್ಞಾನ ಬಳಕೆಯನ್ನು ಕೇವಲ ಮಕ್ಕಳ ಪ್ರಗತಿಗೆ ಬಳಕೆ ಮಾಡಬೇಕೆ ಹೊರತು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮಕ್ಕೆ ಬಳಕೆಯಾಗದಂತೆ ಎಚ್ಚರ ವಹಿಸುವ ಬಗ್ಗೆಯೂ ನೀತಿಯಲ್ಲಿ ಹೇಳಿದೆ. ಲೈಂಗಿಕ ಚಿತ್ರಗಳನ್ನು ತೋರಿಸಿ ಸುಲಿಗೆ, ಆರೋಗ್ಯಕ್ಕೆ ಅಪಾಯ ಉಂಟು ಮಾಡುವಂಥ ಪದಗಳನ್ನು ತೋರಿಸುವುದು ಮಾಡಿದರೆ ಅದಕ್ಕೆ ಕಠಿಣ ಶಿಕ್ಷೆಯ ಜತೆಗೆ ಇಂಟರ್​ನೆಟ್ ಸೇವೆ ಪೂರೈಕೆದಾರರ ಮೇಲೂ ಕಾನೂನು ಕ್ರಮದ ಬಗ್ಗೆ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇಲಾಖೆಗಳ ಜವಾಬ್ದಾರಿ ಹೇಗೆ:ಮಕ್ಕಳ ಸಾಗಣೆ, ಮನೆ ಬಿಟ್ಟು ಹೋಗುವುದು ತಡೆಗೆ ಸಾರಿಗೆ ಇಲಾಖೆಗಳ ಬಸ್​ಗಳಲ್ಲಿ ಪ್ರಯಾಣಿಸುವ ಮಕ್ಕಳ ಮೇಲೆ ನಿಗಾ ಇಡಬೇಕಾಗುತ್ತದೆ. ಪ್ರವಾಸೋದ್ಯಮ ಇಲಾಖೆಗೆ ಬಂದರೆ ಪ್ರವಾಸಿ ಸ್ಥಳಗಳಿಗೆ ಬರುವ ಮಕ್ಕಳ ಮೇಲೆ ನಿಗಾ ಹಾಗೂ ಯಾವುದೇ ತೊಂದರೆಯಾಗದಂತೆ ಎಚ್ಚರ. ಇದೇ ರೀತಿ ಪ್ರತಿ ಇಲಾಖೆಗೂ ಗುರುತರ ಜವಾಬ್ದಾರಿ ನೀಡಲಾಗಿದೆ.
ಮಕ್ಕಳ ಸುರಕ್ಷತೆಗೆ ಹೊಸ ನೀತಿ ರೂಪಿಸಿದ್ದೇವೆ. ಇದಕ್ಕೆ ಸಾರ್ವಜನಿಕರಿಂದಲೂ ಅಭಿಪ್ರಾಯಗಳನ್ನು ಕ್ರೋಡೀಕರಿಸಿದ ನಂತರ ಸಂಪುಟದ ಮುಂದೆ ತರುತ್ತೇವೆ. ಪ್ರತಿ ಇಲಾಖೆಯ ಜವಾಬ್ದಾರಿ ನಿಗದಿಯಾಗುತ್ತದೆ. ಜನವರಿಯಿಂದ ಹೊಸನೀತಿ ಜಾರಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ.
|ಹಾಲಪ್ಪ ಆಚಾರ್ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
ನ್ಯಾಯಾಲಯದ ಸೂಚನೆಯಂತೆ ರೂಪಿಸಿದ್ದರೂ ಇಂತಹ ನೀತಿಯೊಂದರ ಅಗತ್ಯ ಇತ್ತು. ಮಕ್ಕಳಿಗೆ ಸಂಬಂಧಿಸಿದಂತೆ ಹೊಸ ಹೊಸ ಕಾನೂನು ಬಂದಿದ್ದು, ಅವುಗಳನ್ನು ಇದರಲ್ಲಿ ಸೇರಿಸಬೇಕಾಗಿದೆ. ಹಿಂದೆ ಶಾಲಾ ಮಕ್ಕಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೀತಿ ಇತ್ತು. ಈಗ ಎಲ್ಲ ಮಕ್ಕಳನ್ನು ಒಳಗೊಂಡಿದೆ. ಈ ಪಂಚಾಯಿತಿ ಮಟ್ಟದಿಂದಲೂ ಜಾರಿಗೆ ಬರಬೇಕಾಗಿದೆ.
|ವಾಸುದೇವ ಶರ್ಮಚೈಲ್ಡ್ ರೈಟ್ ಟ್ರಸ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
