ಬೆಂಗಳೂರು:ರಾಜ್ಯ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಾಯಕತ್ವದ ತರುವಾಯ ಸೃಷ್ಟಿಯಾಗುವ ನಿರ್ವಾತವನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಶಕ್ತಿ ಕೇಂದ್ರದ ಬೀಜಾಂಕುರವಾಗಿದೆ. ಈ ನಿಟ್ಟಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸುತ್ತ ಚಟುವಟಿಕೆಗಳು ಬಿರುಸುಗೊಂಡಿದೆ. ಈ ಬೆಳವಣಿಗೆಯನ್ನು ಹೊಸ ಗುಂಪಿನ ಉದಯ ಎಂದಾದರೂ ಭಾವಿಸಬಹುದು ಅಥವಾ ನಾಯಕತ್ವ ಹೆಪ್ಪುಗಟ್ಟುವ ಮೊದಲ ಹೆಜ್ಜೆ ಎಂದಾದರೂ ವ್ಯಾಖ್ಯಾನಿಸಬಹುದು. ಸದ್ಯಕ್ಕೆ ಸರ್ಕಾರದಲ್ಲಿ ಕೆಲಸ ಮಾಡಿಸಿಕೊಳ್ಳಲಾಗದೇ ವೇದನೆಯಲ್ಲಿರುವ ಕೈ ನಾಯಕರಿಗೂ ಸತೀಶ್ ಜಾರಕಿಹೊಳಿ ಕಿವಿಯಾಗುತ್ತಿದ್ದು, ಅವಕಾಶಕ್ಕಾಗಿ ಅರಸುತ್ತಿರುವವರೂ ಇವರ ಬಲ ನಿರೀಕ್ಷಿಸುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಸಹ ಈ ಬೆಳವಣಿಗೆಯನ್ನು ವಿಶೇಷವಾಗಿ ವಿಶ್ಲೇಷಿಸಿದ್ದು, ‘ನಮ್ಮದು ಬಂಡಾಯವಲ್ಲ, ಯಾರ ವಿರುದ್ಧವೂ ಅಲ್ಲ, ಯಾರಿಗೆ ಸಂದೇಶ ಕಳಿಸಲೂ ಅಲ್ಲ. ಡ್ಯಾಮೇಜ್ ಮಾಡಲೂ ಅಲ್ಲ. ಸಮಾನ ಮನಸ್ಕರ ಗುಂಪು ಅಷ್ಟೇ’ ಎಂದು ಹೇಳಿದ್ದಾರೆ. ಈ ಗುಂಪು ವಿಸ್ತರಣೆಯಾಗುವ ಕುರುಹೂ ಸಹ ಕಾಣಿಸಿದ್ದು, ಕ್ರೆಸೆಂಟ್ ರಸ್ತೆಯ ಸರ್ಕಾರಿ ಬಂಗಲೆ ಹೊಸ ಶಕ್ತಿಕೇಂದ್ರವಾಗಿಯೂ ಹೊಳಪು ಪಡೆದುಕೊಳ್ಳುತ್ತಿದೆ.
ವಿಜಯವಾಣಿಯೊಂದಿಗೆ ಸಾವಧಾನವಾಗಿ ತಮ್ಮ ಭಾವನೆ ಗಳನ್ನು ಹಂಚಿಕೊಂಡ ಸತೀಶ್ ಜಾರಕಿಹೊಳಿ, ಬಿಜೆಪಿ, ಜೆಡಿಎಸ್​ನಲ್ಲೂ ಬಣಗಳು ಇವೆ. ನಮ್ಮಲ್ಲೂ ಇದೆ. ಇಲ್ಲ ಎಂದು ಹೇಳಲಾಗಲ್ಲ. ಆದರೆ, ನಾವು ಚುನಾವಣೆ ಬಂದಾಗ ಒಟ್ಟಾಗಿ ಕೆಲಸ ಮಾಡುತ್ತೇವೆ. ಇನ್ನು ನಾಯಕತ್ವದ ವಿಚಾರಕ್ಕೆ ಬಂದರೆ ಜನ ಹಾಗೂ ಪಕ್ಷ ನಿರ್ಧಾರ ಮಾಡಬೇಕು. ರಾಜಕಾರಣದಲ್ಲಿ ಎಲ್ಲರಿಗೂ ಸಿಎಂ ಆಗಬೇಕು, ನಾಯಕ ಆಗಬೇಕೆಂಬ ಬಯಕೆ ಇರುತ್ತದೆ. ಆದರೆ, ಜನ ಗುರುತಿಸಬೇಕು, ಪಕ್ಷ ಗುರುತಿಸಬೇಕು. ಖಂಡಿತವಾಗಿ, ಈ ಅವಧಿಯಲ್ಲಿ ನಾನು ಸಿಎಂ ಆಕಾಂಕ್ಷಿಯಲ್ಲ. ಮುಂದಿನ ಅವಧಿಗೆ ಆಪೇಕ್ಷಿತ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಶಾಸಕರ ಟೂರ್ ರದ್ದಾಗಿಲ್ಲ, ಮುಂದೂಡಲ್ಪಟ್ಟಿದೆ, ಟೂರ್ ಮಾಡೇ ಮಾಡುತ್ತೇವೆ. ಮೈಸೂರು ಪ್ರವಾಸ ರದ್ದಾಗಲು ಸಿಎಂ ಸಿದ್ದರಾಮಯ್ಯ ಸೂಚನೆ ಕಾರಣ ಎಂದು ಇತ್ತೀಚಿನ ಶಾಸಕರ ಗುಂಪು ಪ್ರವಾಸದ ಬಗ್ಗೆ ಸ್ಪಷ್ಟನೆಯನ್ನೂ ಇದೇ ವೇಳೆ ನೀಡಿದರು.
‘ಪಕ್ಷಕ್ಕಾಗಿ ಕಾಂಪ್ರಮೈಸ್ ಅನಿವಾರ್ಯ. ಅದು ನನ್ನ ಸೋಲಲ್ಲ, ನಮ್ಮ ಕೋಟೆಯನ್ನು ಯಾರಿಗೂ ಛಿದ್ರ ಮಾಡಲು ಆಗಲ್ಲ. ನನ್ನದೊಂದು ಸಮಾನಮನಸ್ಕ ಶಾಸಕರ ತಂಡ ಇರುವುದು ನಿಜ. ಎಷ್ಟು ಶಾಸಕರಿದ್ದಾರೆ ಅನ್ನೋದು ಮುಂದೆ ಗೊತ್ತಾಗಲಿದೆ’ ಎಂಬ ಅವರ ಮಾತು ತಮ್ಮ ಸುತ್ತಲಿನ ಚಟುವಟಿಕೆಯನ್ನು ಯಾವ ರೀತಿ ಗಂಭೀರವಾಗಿ ಪರಿಗಣಿಸಿದ್ದಾರೆಂಬುದನ್ನು ಸೂಚಿಸುತ್ತಿತ್ತು. ಅರ್ಥಾತ್ ಪರ್ಯಾಯ ನಾಯಕತ್ವದ ದನಿ ಕೂಡ ಮಾತಿನ ಸಾಲುಗಳ ನಡುವೆ ಮಾರ್ದನಿಸುತ್ತಿತ್ತು.
ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಕೆಲ ಸಣ್ಣ, ಕೆಲ ದೊಡ್ಡ ಸಮಸ್ಯೆಗಳಿವೆ. ಅದು ಸಹಜ. ರಾಜಕೀಯ ಇರುವವರೆಗೆ ಇಂಥದ್ದೆಲ್ಲ ಇರುತ್ತದೆ. ಇನ್ನು, ಬೆಳಗಾವಿಯಲ್ಲಿ ನಾನು ಸ್ಪರ್ಧಿಸಲ್ಲ, ನನ್ನ ಮಗಳು ಸ್ಪರ್ಧಿಸುವುದಿಲ್ಲ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಸಿಗಬೇಕು ಎಂಬ ಹಂಬಲವಿದೆ. ಜಿಲ್ಲೆಯಲ್ಲಿ ಕುರುಬರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ಯಾರೂ ಶಾಸಕರಿಲ್ಲ. ಹೀಗಾಗಿ ಲೋಕಸಭೆಗೆ ಕಳಿಸಬೇಕೆಂಬ ಬಯಕೆ ಇದೆ ಎಂದು ಸ್ಪಷ್ಟನೆ ನೀಡಿದರು. ಈ ಮೂಲಕ ಪುತ್ರಿಯ ಟಿಕೆಟ್​ಗಾಗಿ ಗುಂಪುಗಾರಿಕೆ ಮಾಡುತ್ತಿದ್ದಾರೆಂಬ ಪಕ್ಷದೊಳಗಿನ ಟೀಕೆಗೆ ಅವರು ಈ ರೀತಿ ಸ್ಪಷ್ಟನೆ ನೀಡಿ ಚರ್ಚೆಗೆ ತೆರೆಯನ್ನೂ ಎಳೆದಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿ ಐದು ವರ್ಷ ಪೂರ್ಣಗೊಳ್ಳಬಹುದು ಅಥವಾ ಹೈಕಮಾಂಡ್ ನಿರ್ದೇಶನದಂತೆ ಮೊಟಕೂ ಆಗಬಹುದು. ಆ ಮೂಲಕ ಅವರ ಸಕ್ರಿಯ ರಾಜಕಾರಣ ನಿಧಾನವಾಗಿ ನೇಪಥ್ಯಕ್ಕೆ ಸರಿಯಲಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ನಾಯಕತ್ವ ಮುನ್ನೆಲೆಗೆ ಬರುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ ಡಿಕೆಶಿಯವರನ್ನು ಒಪ್ಪದ ಕೈ ನಾಯಕರು ಪರ್ಯಾಯ ನಾಯಕತ್ವದ ಆಶ್ರಯ ಬಯಸುವುದೂ ಸಹ ಅಷ್ಟೇ ಸತ್ಯ. ಈ ನಾಯಕತ್ವವನ್ನು ಸತೀಶ್ ಜಾರಕಿಹೊಳಿ ಅವರಲ್ಲಿ ಕಾಣಲು ಕಸರತ್ತು ಆರಂಭವಾಗಿದೆ. ಶಾಸಕರ ಬಲ ಹೆಚ್ಚಿಸಿಕೊಳ್ಳುವ ಮೂಲಕ ಹೊಸ ಶಕ್ತಿಯನ್ನು ಉದಯಿಸಬೇಕು, ಇದರಿಂದ ಹಿಂದುಳಿದ ಹಾಗೂ ದಲಿತ ವರ್ಗದ ಮನವೊಲಿಕೆ ಸಾಧ್ಯವಿದೆ, ಉತ್ತರ ಕರ್ನಾಟಕ ಭಾಗದ ನಾಯಕನೆಂಬ ಲಾಭವಾಗುವ ಲೆಕ್ಕಾಚಾರ ನಡೆದಿದೆ. ಲೋಕಸಭೆ ಚುನಾವಣೆ ತರುವಾಯ ಸಮುದಾಯ ಆಧಾರಿತ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಕೂಗು ಹೆಚ್ಚಾಗುವ ಲಕ್ಷಣವಿದೆ. ಈ ಕೂಗಿನ ಹಿಂದೆ ಜಾರಕಿಹೊಳಿ ಇಲ್ಲದೇ ಹೋದರೂ ಪಕ್ಷ ಅವರಿಗೆ ಮಣೆಹಾಕುವ ಅನಿವಾರ್ಯತೆ ಸೃಷ್ಟಿಸುವ ಕೆಲಸವೂ ಆರಂಭವಾಗಿದೆ.
ಮುಂದುವರಿದ ಸಭೆ:ಆಪ್ತ ಶಾಸಕರೊಂದಿಗೆ ಊಟ- ಉಪಾಹಾರ ಕೂಟ ನಡೆಸಿ ತಂಡ ಕಟ್ಟಿಕೊಳ್ಳುತ್ತಿರುವ ಸತೀಶ್, ಶುಕ್ರವಾರವೂ ಸಭೆ ನಡೆಸಿದ್ದಾರೆ. ತಮ್ಮ ಮನೆಗೆ ಆಗಮಿಸಿದ್ದ ಸಚಿವ ರಾಜಣ್ಣ, ನಾಗೇಂದ್ರ ಹಾಗೂ ಹಲವು ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಿ, ಸರ್ಕಾರದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಕ್ಲೋಸ್​ಡೋರ್ ಮೀಟಿಂಗ್ ನಡೆಸಿದ ಅವರು, ಸಾಮಾನ್ಯ ಚರ್ಚೆ ನಡೆದಿದೆ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.
ಜನವರಿಯಿಂದ ಕಾಮಗಾರಿ:ಹೊಸ ಸರ್ಕಾರ ಬಂದು ಐದು ತಿಂಗಳಾಗುತ್ತ ಬರುತ್ತಿದೆ. ಈವರೆಗೆ ಶಂಕುಸ್ಥಾಪನೆಗಳೇ ನಡೆದಿಲ್ಲ. ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂಬ ಪ್ರತಿಪಕ್ಷದ ಆರೋಪ ಹಾಗೂ ಜನರ ನಡುವಿನ ಚರ್ಚೆಗೆ ಸಚಿವರು ಉತ್ತರ ನೀಡಿದ್ದು, ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಜನವರಿಯಿಂದ ಕಾಮಗಾರಿಗಳನ್ನು ತೆಗೆದುಕೊಳ್ಳುತ್ತೇವೆ ಎಂದರು. ಹಿಂದಿನ ಸರ್ಕಾರ ಅನುದಾನದ ಲಭ್ಯತೆಗಿಂತ ಹೆಚ್ಚಿನ ಕಾಮಗಾರಿ ತೆಗೆದುಕೊಂಡಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಇದನ್ನು ಸರಿಪಡಿಸಲು ಸಮಯ ಬೇಕಾಗಿದೆ. ಲೋಪ-ದೋಷ ಸರಿಪಡಿಸುವ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿಯಷ್ಟೇ ಅಲ್ಲ. ಮುಖ್ಯಮಂತ್ರಿಯಾಗುವ ಅರ್ಹತೆಯನ್ನೇ ಹೊಂದಿದ್ದಾರೆ. ನನ್ನ ಮೌನ ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು ಎಂದು ಅವರೇ ನೀಡಿರುವ ಹೇಳಿಕೆ ಬಹಳಷ್ಟು ಅರ್ಥ ಕಲ್ಪಿಸುತ್ತದೆ. ಅವರ ಹೇಳಿಕೆಯಿಂದ ಸರ್ಕಾರ ಅಥವಾ ಪಕ್ಷಕ್ಕೆ ಯಾವುದೇ ಮುಜುಗರವಾಗಿಲ್ಲ.
| ಕೆ.ಎನ್ ರಾಜಣ್ಣ, ಸಹಕಾರ ಸಚಿವ
ಬೆಳಗಾವಿ ರಾಜಕೀಯದಲ್ಲಿ ಯಾವುದೇ ಬಿರುಕು ಇಲ್ಲ. ತಲೆನೋವು, ಮೈಕೈ ನೋವೂ ಇಲ್ಲ. ಯಾರ ಮಧ್ಯೆಯೂ ವೈಷಮ್ಯ ಇರುವುದಿಲ್ಲ. ಊಹಾಪೋಹಗಳು ಸಹಜ. ಮುಂದಿನ 5 ವರ್ಷವೂ ಸೇರಿ ಒಟ್ಟು 10 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲಿದೆ. ಬಿಜೆಪಿಯವರು ವಿರೋಧ ಪಕ್ಷದಲ್ಲಿ ಗಟ್ಟಿಯಾಗಿ ಕೂಡಲಿದ್ದಾರೆ.
| ಲಕ್ಷ್ಮಣ ಸವದಿ, ಕಾಂಗ್ರೆಸ್ ಶಾಸಕ
ಬೆಳಗಾವಿ ಜಿಲ್ಲಾ ರಾಜಕಾರಣದ ಮೇಲೆ ಪ್ರಬಲ ಹಿಡಿತ ಸಾಧಿಸಿಕೊಂಡು ಬರುತ್ತಿರುವ ಜಾರಕಿಹೊಳಿ ಸಹೋದರರನ್ನು ರಾಜಕೀಯವಾಗಿ ಮಣಿಸಲು ಬಿಜೆಪಿ, ಕಾಂಗ್ರೆಸ್​ನಲ್ಲಿ ದಶಕಗಳಿಂದ ಪ್ರಯತ್ನಗಳು ನಡೆದುಕೊಂಡು ಬರುತ್ತಿವೆ. ಆದರೆ, ಇಲ್ಲಿಯವರೆಗೆ ಯಶಸ್ವಿಯಾಗಿಲ್ಲ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಸಚಿವರಾಗಿ, ಜಿಲ್ಲಾ ಉಸ್ತುವಾರಿಯಾಗಿರುತ್ತಾರೆ. ಇದನ್ನು ಸಹಿಸಿಕೊಳ್ಳಲು ರಾಜಕೀಯ ವಿರೋಧಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವ ಜತೆಗೆ ಗೆಲ್ಲಿಸಿ ದೆಹಲಿಗೆ ಕಳುಹಿಸುವುದು. ಜಿಲ್ಲಾ ರಾಜಕಾರಣ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ತಂತ್ರಕ್ಕೆ ಅಕ್ಟೋಬರ್ ಎರಡನೇ ವಾರದಲ್ಲೇ ಚಾಲನೆ ಸಿಕ್ಕಿದೆ. ಅದರ ಪರಿಣಾಮವೇ ಸತೀಶ್ ಅವರು 25 ರಿಂದ 30 ಶಾಸಕರನ್ನು ಮೈಸೂರು ಪ್ರವಾಸ ಕೈಗೊಳ್ಳಲು ಯೋಜನೆ ರೂಪಿಸಿದ್ದರು. ಅದು ಇದೀಗ ಸ್ಥಗಿತಗೊಂಡಿದ್ದರೂ ಯಾವುದೇ ಸಂದರ್ಭದಲ್ಲಿ ಆರಂಭವಾಗಬಹುದು ಎಂದು ಜಾರಕಿಹೊಳಿ ಬೆಂಬಲಿಗರು ತಿಳಿಸಿದ್ದಾರೆ.
2. ಹಸ್ತಕ್ಷೇಪ ಹೊಸದೇನಲ್ಲ. ನನ್ನ ಮೌನ ದೌರ್ಬಲ್ಯವಲ್ಲ. ನಮ್ಮ ಮಾತಿಗೆ ಮನ್ನಣೆ ಸಿಗುತ್ತೆಂಬ ನಂಬಿಕೆ ಇದೆ. ಮನ್ನಣೆ ಸಿಗಲಿಲ್ಲ ಅಂದರೆ ಮುಂದಿನ ಅವಧಿ ಇದ್ದೇ ಇದೆ. ಈಗ ಪರ್ಯಾಯ ನಾಯಕತ್ವ ಸೃಷ್ಟಿಸುವ ಅಗತ್ಯವಿಲ್ಲ, ಆದರೆ, ನಾಯಕತ್ವ ಸೃಷ್ಟಿಸುವ ಶಕ್ತಿ ಇದೆ.
3. ಜನ ಇರುವವವರೆಗೂ ನಮ್ಮ ನಿಯಂತ್ರಣ ಇರಲಿದೆ. ನಾಯಕನಾಗಿರಬೇಕೆಂದು ಜನ ಬಯಸುತ್ತಿದ್ದಾರೆ. ಸದ್ಯ ಸಚಿವ, ಕಾರ್ಯಾಧ್ಯಕ್ಷ ಸ್ಥಾನ ಕೊಡಲಾಗಿದೆ. ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
