ಬೆಂಗಳೂರು:ಪದವಿ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಗೆ ಈಗಿರುವ ಕಾನೂನು ರದ್ದುಗೊಳಿಸಿ, ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಉನ್ನತ ಶಿಕ್ಷಣದ ಪಠ್ಯಕ್ರಮ, ಪರೀಕ್ಷೆ, ಆನ್​ಲೈನ್ ಶಿಕ್ಷಣ, ಉಪನ್ಯಾಸಕರ ವರ್ಗಾವಣೆ ಸೇರಿ ಹಲವು ವಿಷಯಗಳ ಕುರಿತು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. 3-4 ವರ್ಷಗಳಿಂದ ಉಪನ್ಯಾಸಕರ ವರ್ಗಾವಣೆ ಆಗಿಲ್ಲ. ಹಾಗಾಗಿ, ಈ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಹೊಸ ನಿಯಮಗಳ ಕರಡು ರೂಪಿಸಿ ಉಪನ್ಯಾಸಕರ ಸಂಘ ಮತ್ತು ಸಂಬಂಧಪಟ್ಟವರಿಗೆ ಕಳುಹಿಸಿ ಸಲಹೆ ಪಡೆಯಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕಾನೂನು ತಿದ್ದುಪಡಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಹೊಸ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ನೇಮಕ ಸಂಬಂಧ ಅಧಿಸೂಚನೆ ಹೊರಡಿಸಿ, ಸೂಕ್ತ ಕ್ರಮ ವಹಿಸಲಾಗುವುದು. ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ ನೇಮಕ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!
ಜೂನ್​ನಲ್ಲಿ ಪರೀಕ್ಷೆ ನಿರ್ಧಾರ: ಉನ್ನತ ಶಿಕ್ಷಣದ ಪರೀಕ್ಷೆ ಬಗ್ಗೆ ಜೂನ್ ಮೊದಲ ವಾರ ವಿವರ ಹಂಚಿಕೊಳ್ಳಲಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಕರೊನಾ ಹಿನ್ನೆಲೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಆತಂಕ ಪರಿಹರಿಸುವ ನಿಟ್ಟಿನಲ್ಲಿ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿ, ಸಮಸ್ಯೆಗಳಿದ್ದರೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ತರಗತಿಗಳು, ಪಠ್ಯಕ್ರಮ ಹಾಗೂ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿರುವ ಸರಳ ಪರೀಕ್ಷೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಶೈಕ್ಷಣಿಕ ಸಾಲಿನ ರಜೆ ಕಡಿತಗೊಳಿಸಿ ಪಠ್ಯಕ್ರಮ ಪೂರ್ಣಗಳಿಸಬಹುದೆಂಬ ಸಲಹೆಯನ್ನು ವಿಧಾನಪರಿಷತ್ತಿನ ಸದಸ್ಯರು ನೀಡಿದ್ದಾರೆ ಎಂದು ಹೇಳಿದರು.
ಆನ್​ಲೈನ್ ತರಗತಿಗೆ ಮೆಚ್ಚುಗೆ: ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಆಯೋಜಿಸಿದ್ದ ಆನ್​ಲೈನ್ ತರಗತಿ, ಯುಟ್ಯೂಬ್ ಪಾಠ, ವಾಟ್ಸ್​ಆಪ್ ಮೂಲಕ ಪಠ್ಯ ಸಾರಂಶ, ಸಿಇಟಿ ಹಾಗೂ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಗೆಟ್​ಸೆಟ್​ಗೊ ತರಬೇತಿ ಬಗ್ಗೆ ಮೇಲ್ಮನೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ಇದನ್ನೂ ಓದಿಐಸಿಸಿಯಲ್ಲೂ ಶುರುವಾಗುತ್ತಾ ‘ದಾದಾ’ಗಿರಿ?
ಪ್ರಮುಖ ಬೇಡಿಕೆಗಳು
ಆನ್​ಲೈನ್ ಬೋಧನೆಯಲ್ಲಿನ ಗೊಂದಲ ನಿವಾರಣೆ
ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಪಠ್ಯ, ಪರೀಕ್ಷೆ, ವೇಳಾಪಟ್ಟಿ ಜಾರಿ
ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆ ಭರ್ತಿ, ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ
ಈ ಹಿಂದಿನ ಎಲ್ಲ ನಿಯೋಜನೆ ಗಳ ರದ್ದು, ವರ್ಗಾವಣೆಗೆ ವೈಜ್ಞಾನಿಕ ರೂಪ
ಪಠ್ಯಕ್ರಮ ಪರಿಷ್ಕರಣೆ
ಹೊಸ ಶಿಕ್ಷಣ ನೀತಿ ಜಾರಿ ಹಿನ್ನೆಲೆ ಅದರ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಟಾಸ್ಕ್​ಫೋರ್ಸ್ ರಚನೆ ಮಾಡಲಾಗಿದೆ. ಅನುಷ್ಠಾನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳ ಲಾಗಿದ್ದು, ಡಿಪ್ಲೊಮಾ ಪಠ್ಯಕ್ರಮದಲ್ಲಿ ಬದಲಾವಣೆ ತರುವ ಮೂಲಕ ಅದನ್ನು ಉದ್ಯೋಗ ಆಧರಿತ ಕೋರ್ಸ್ ಆಗಿ ಪರಿವರ್ತಿಸಲಾಗುವುದು. ಈ ಸಂಬಂಧ ನಾಸ್ಕಂ ಜತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಪದವಿ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುವುದು ಎಂದು ಅಶ್ವತ್ಥನಾರಯಣ ವಿವರಿಸಿದರು.
ಸಂಬಳ ವಿಳಂಬವಾಗದಂತೆ ಕ್ರಮ
ಅತಿಥಿ ಉಪನ್ಯಾಸಕರ ಸಂಬಳ ತಡವಾಗುತ್ತಿರುವ ವಿಚಾರದ ಬಗ್ಗೆ ಈಗಾಗಲೇ ಗಮನ ಹರಿಸಲಾಗಿದೆ. ಇದು ಬಹಳ ಹಳೆಯ ಸಮಸ್ಯೆಯಾಗಿದ್ದು, ಪರಿಹರಿಸಲು ಯೋಜನಾ ಬದ್ಧವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅತಿಥಿ ಉಪನ್ಯಾಸಕರ ವೇತನಕ್ಕೆ ವ್ಯವಸ್ಥಿತ ಬಜೆಟ್ ರೂಪಿಸುವ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಜುಲೈ ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದರು.
ಕರೊನಾದಿಂದ ತತ್ತರಿಸಿಹೋಗಿವೆ ಭಯೋತ್ಪಾದಕ ಶಿಬಿರಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
