ಬೆಂಗಳೂರು:ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಕಲ್ಪಿಸಲು ಸೆಪ್ಟೆಂಬರ್ ಅಂತ್ಯದ ವೇಳೆಗೆ ನೂತನ ಪ್ರವಾಸೋದ್ಯಮ ನೀತಿ ಜಾರಿಗೆ ಬರಲಿದೆ. ಈ ಪ್ರವಾಸೋದ್ಯಮ ನೀತಿ ಹೊಸ ಭರವಸೆಯೊಂದಿಗೆ ಮೈದಳೆಯಲಿದ್ದು, ಸಾಮಾನ್ಯ ಜನರ ಪ್ರವಾಸಕ್ಕೆ ಈ ನೀತಿಯಲ್ಲಿ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ.
‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಈ ವಿಷಯ ಪ್ರಕಟಿಸಿದರು.
ಪ್ರವಾಸೋದ್ಯಮ ಎಂದರೆ ಬರೀ ಎಲೈಟ್ ಕ್ಲಾಸ್ ಜನರನ್ನೇ ಕೇಂದ್ರೀಕರಿಸಲಾಗುತ್ತದೆ. ಆದರೆ ಸಾಮಾನ್ಯ ಜನರ ಪ್ರವಾಸದ ಬಗ್ಗೆ ಪ್ರವಾಸೋದ್ಯಮ ನೀತಿಗಳು ಗಮನಹರಿಸುವುದು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ನೂತನ ಪ್ರವಾಸೋದ್ಯಮ ನೀತಿ ಎಲ್ಲ ವರ್ಗದ ಜನರು ಮತ್ತು ಎಲ್ಲ ವಿಭಾಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿತವಾಗಲಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಆಕರ್ಷಣೀಯ ಹೌದು. ರಾಜ್ಯದ ಬೊಕ್ಕಸಕ್ಕೆ ಆದಾಯ ತರುವ ಪ್ರಮುಖ ಉದ್ಯಮವೂ ಹೌದು. ಕೃಷಿ, ನೇಕಾರಿಕೆ, ಕೈಗಾರಿಕೆ ಬಿಟ್ಟರೆ ಪ್ರವಾಸೋದ್ಯಮ ಹೆಚ್ಚು ಆದಾಯ ತಂದು ಕೊಡುವ ಮತ್ತು ಉದ್ಯೋಗ ಸೃಜನೆ ಮಾಡುವ ಕ್ಷೇತ್ರ. ಹಾಗಾಗಿ ನೂತನ ಪ್ರವಾಸೋದ್ಯಮ ನೀತಿಯನ್ನು ಹಲವು ದೃಷ್ಟಿಕೋನಗಳನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗುತ್ತದೆ ಎಂದು ತಿಳಿಸಿದರು. ಎಲೈಟ್ ಕ್ಲಾಸ್ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವಂತೆಯೇ ಸಾಮಾನ್ಯರ ಪ್ರವಾಸದ ಬಗ್ಗೆ ಲಕ್ಷ್ಯ ಕೊಡಲಾಗುತ್ತದೆ. ಅಮೆರಿಕದಲ್ಲಿ ವೀಕೆಂಡ್ ಟೂರಿಸಂ ಯಶಸ್ವಿಯಾಗಿದೆ. ನಮ್ಮಲ್ಲೂ ಇದೆ. ಪ್ರವಾಸೋದ್ಯಮ ಎಂದರೆ ಎಲೈಟ್ ಕ್ಲಾಸ್ ಪ್ರವಾಸೋದ್ಯಮ ಮಾತ್ರವಲ್ಲ. ನಮ್ಮ ಪ್ರವಾಸೋದ್ಯಮದಲ್ಲಿ ಬೇಸರ ಕಳೆದುಕೊಳ್ಳುವ ಪ್ರವಾಸೋದ್ಯಮದಿಂದ ಪ್ರಾರಂಭಿಸಿ ಶೈಕ್ಷಣಿಕ ಪ್ರವಾಸ, ರೈತ ಪ್ರವಾಸ, ಧಾರ್ವಿುಕ ಕ್ಷೇತ್ರ ಪ್ರವಾಸ ಉತ್ತೇಜಿಸಬೇಕಿದೆ.
ಅಲಕ್ಷಿತ ಕ್ಷೇತ್ರಗಳಿಗೆ ಆದ್ಯತೆ:ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಬೇಸರ ಕಳೆಯುವ ಪ್ರವಾಸೋದ್ಯಮದಿಂದ ಹಿಡಿದು ಶೈಕ್ಷಣಿಕ, ಧಾರ್ವಿುಕ, ಸಾಹಸಿ, ಪರಿಸರ, ವನ್ಯಜೀವಿ, ಕರಾವಳಿ ಪ್ರವಾಸೋದ್ಯಮ, ಅಧ್ಯಯನ, ಐಷಾರಾಮಿ ಪ್ರವಾಸೋದ್ಯಮಗಳನ್ನು ಒಳಗೊಂಡಂತೆ ಅಲಕ್ಷಿತ ಕ್ಷೇತ್ರಗಳಿಗೂ ಆದ್ಯತೆ ನೀಡುತ್ತೇವೆ ಎಂದು ಎಚ್.ಕೆ.ಪಾಟೀಲ ಹೇಳಿದರು.
ಪ್ರವಾಸೋದ್ಯಮದಲ್ಲಿ ಪುರಾತತ್ವ:ಪ್ರವಾಸೋದ್ಯಮ ಇಲಾಖೆಯಲ್ಲಿ ಈಗ ಪುರಾತತ್ವ ಇಲಾಖೆ ವಿಲೀನಗೊಂಡಿದೆ. ಸಾಮಾನ್ಯವಾಗಿ ನಾವು ಶ್ರವಣಬೆಳಗೊಳ, ಹಂಪಿ, ಬದಾಮಿ, ಐಹೊಳೆ, ಪಟ್ಟದಕಲ್ಲುಗಳಿಗೆ ಹೆಚ್ಚಿನ ಗಮನಕೊಟ್ಟಿದ್ದೇವೆ. ಲಕ್ಕುಂಡಿ ಅದ್ಭುತ ಪ್ರವಾಸಿ ತಾಣ. ಅದನ್ನು ನಾವು ಅಲಕ್ಷಿಸಿದ್ದೇವೆ. ಲಕ್ಕುಂಡಿಯಲ್ಲಿ 51 ಗುಡಿಗಳಿವೆ. 101 ಗುಡಿ, 101 ಕಲ್ಯಾಣಿ ಎನ್ನುವ ಪ್ರತೀತಿ ಇದೆ. ಹೊಯ್ಸಳರ ಕಾಲದಲ್ಲಿ ಅದು ಠಂಕಸಾಲೆ ಇತ್ತು. ಈಗಲೂ ಅಲ್ಲಿ ಮಣ್ಣು ಅಗೆದಾಗ ಜನರಿಗೆ ಆಗಾಗ್ಗೆ ಬಂಗಾರ ದೊರೆಯುತ್ತದೆ. ಅಂದರೆ ಯಾವ ಮಟ್ಟಕ್ಕೆ ಅಲ್ಲಿ ಶ್ರೀಮಂತಿಕೆ ಇತ್ತು ಎಂಬುದು ಊಹಿಸಲೂ ಕಷ್ಟ ಎಂದರು.
ಅಧ್ಯಯನ ಸಮಿತಿ ರಚನೆ:ಲಕ್ಕುಂಡಿ ಅಧ್ಯಯನಕ್ಕಾಗಿ ಐಎಎಸ್ ಅಧಿಕಾರಿ ಮನೋಜ್​ಕುಮಾರ್ ಅಧ್ಯಕ್ಷತೆಯಲ್ಲಿ ಮೇಧಾವಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ಆಶ್ಚರ್ಯಕರ ಅಂಶಗಳನ್ನು ಒಳಗೊಂಡ ವರದಿ ನೀಡಿದೆ. 2017-18ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಆಯವ್ಯಯ ಭಾಷಣದಲ್ಲಿ ಲಕ್ಕುಂಡಿ ಪ್ರಾಧಿಕಾರ ಘೋಷಣೆ ಮಾಡಿದ್ದರು. ಈಗ ಅದಕ್ಕೊಂದು ರಾಜ್ಯಮಟ್ಟದ ಸಮಿತಿ ರಚನೆ ಮಾಡಲಾಗಿದೆ. ತಮ್ಮ ಅಧ್ಯಕ್ಷತೆಯಲ್ಲಿರುವ ಈ ಸಮಿತಿ ಈಗಾಗಲೇ ಒಂದು ಸಭೆ ಮಾಡಿದೆ. ಈ ಪ್ರಾಧಿಕಾರಕ್ಕೆ ಸಂಬಂಧಿಸಿದ ಕಚೇರಿ ಗದಗದಲ್ಲಿ ಸೆಪ್ಟೆಂಬರ್ ಎರಡನೇ ವಾರ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮದಿಂದ ಆರ್ಥಿಕತೆ ಉತ್ತೇಜನ:ಪ್ರವಾಸೋದ್ಯಮ ಅಭಿವೃದ್ಧಿಯಿಂದ ಎಕಾನಮಿಗೆ ಬೂಸ್ಟ್ ಸಿಗುತ್ತದೆ. ಉದ್ಯೋಗ ಸೃಜನೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ನೂತನ ಪ್ರವಾಸೋದ್ಯಮ ನೀತಿ ಇರಲಿದೆ ಎಂದು ಹೇಳಿದರು.
ಸವದತ್ತಿಗೆ 1.25 ಕೋಟಿ ಜನರ ಭೇಟಿ!: ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸುವ ಧಾರ್ವಿುಕ ಪ್ರವಾಸಿ ಕೇಂದ್ರ ಎಂದರೆ ಅದು ಸವದತ್ತಿ ಯಲ್ಲಮ್ಮನಗುಡ್ಡ. ಒಂದು ವರ್ಷಕ್ಕೆ 1.25 ಕೋಟಿ ಜನ ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಅಲ್ಲಿ ಪ್ರವಾಸಿಗರಿಗೆ ವಸತಿ ಮತ್ತಿತರ ಮೂಲಸೌಕರ್ಯ ಸಮರ್ಪಕವಾಗಿ ಕಲ್ಪಿಸಲು ಆಗಿಲ್ಲ. ನಮ್ಮ ಗ್ಯಾರಂಟಿ ಸ್ಕೀಂನಲ್ಲಿ ಶಕ್ತಿ ಯೋಜನೆ ಜಾರಿಯಿಂದ ಸವದತ್ತಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವಾರ್ಷಿಕ 1.50 ಕೋಟಿ ದಾಟುವ ನಿರೀಕ್ಷೆ ಇದೆ. ಈ ದೊಡ್ಡ ಸಂಖ್ಯೆ ಪ್ರವಾಸಿಗರಿಗೆ 2 ರಿಂದ 3 ಸಾವಿರ ಕೊಠಡಿ ನಿರ್ವಿುಸಬೇಕಿದೆ. ಇದಕ್ಕೆ ಜನರು, ಕಾಪೋರೇಟ್ ಕಂಪನಿಗಳು, ಲಾಭ ಮಾಡುವ ಸಂಸ್ಥೆಗಳು, ಸಹಕಾರ ಸಂಸ್ಥೆಗಳು ಕೈಜೋಡಿಸಬೇಕು. ಆಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವನಾಗಿದ್ದಾಗ ನಾನು ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು 160 ಕೋಟಿ ರೂ. ಯೋಜನೆ ಮಾಡಿದ್ದೆ. ಈಗ ಅದು ಏನಕ್ಕೂ ಸಾಕಾಗುವುದಿಲ್ಲ. ಹತ್ತು ಪಟ್ಟು ಕೆಲಸ ಆಗಬೇಕಿದೆ. 1.25 ಕೋಟಿ ಜನ ಬರುವ ಈ ಕ್ಷೇತ್ರದಲ್ಲಿ ಕನಿಷ್ಟ ಒಂದೆರಡು ವರ್ಷದಲ್ಲಿ ಮೂಲಸೌಕರ್ಯಗಳಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಿದೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.
ಗ್ಯಾರಂಟಿಯಿಂದ ಸವಾಲು ಹೆಚ್ಚು:ಸರ್ಕಾರ ಘೋಷಿಸಿರುವ ಗ್ಯಾರಂಟಿ, ಅದರಲ್ಲೂ ವಿಶೇಷವಾಗಿ ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಇಲಾಖೆಗೆ ಸವಾಲು ಎದುರಾಗಿದೆ. ಶಕ್ತಿ ಕಾರ್ಯಕ್ರಮದಿಂದ ದೊಡ್ಡ ಪ್ರಮಾಣದ ಪ್ರವಾಸಿಗರು ಬೇರೆ ಬೇರೆ ಕಡೆಗೆ ಹೋಗುತ್ತಾರೆ. ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ. ಅದಕ್ಕೆ ಜನರು ಕೂಡ ಕೈಜೋಡಿಸಬೇಕು ಎಂದು ಎಚ್.ಕೆ. ಪಾಟೀಲ ಮನವಿ ಮಾಡಿದರು.
ದಕ್ಷಿಣ ಉತ್ಸವದ ಮೂಲಕ ಹೂಡಿಕೆಗೆ ಒತ್ತು:ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ದಕ್ಷಿಣ ಉತ್ಸವ ಮಾಡುತ್ತೇವೆ. ಆ ಮೂಲಕ ನಮ್ಮ ರಾಜ್ಯದ ಮಹತ್ವ ಏನಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ. ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಹಣದ ಕೊರತೆ ಇದೆ. ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದೇವೆ. ಸರ್ಕಾರಕ್ಕಿಂತ ಮುಖ್ಯವಾಗಿ ಜನರ ಪಾಲ್ಗೊಳ್ಳುವಿಕೆಯಿಂದ ನಮ್ಮ ಕನಸು ನನಸಾಗುತ್ತವೆ. ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಸಹಭಾಗಿತ್ವ ಅವಶ್ಯ ಎಂದು ಎಚ್.ಕೆ.ಪಾಟೀಲ ಹೇಳಿದರು.
1 ಸಾವಿರ ಸ್ಮಾರಕ ಅಧಿಸೂಚನೆಗೆ ನಿರ್ಧಾರ:ರಾಜ್ಯದಲ್ಲಿ 522 ಅಧಿಸೂಚಿತ ಸ್ಮಾರಕಗಳಿವೆ. ಮತ್ತೆ 500 ಸ್ಮಾರಕಗಳನ್ನು ಗುರುತಿಸಲಾಗಿದೆ. ಗುರುತಿಸಲಾಗದೇ ಇರುವ ಕನಿಷ್ಠ 5000 ಸ್ಮಾರಕಗಳು ನಮ್ಮಲ್ಲಿವೆ. ಈ ಆಸ್ತಿ ರಕ್ಷಣೆ ಮಾಡಬೇಕು ಎಂಬ ನಿರ್ಣಯ ಮಾಡಿದ್ದೇವೆ. ಕನಿಷ್ಠ 1000 ಸ್ಮಾರಕಗಳನ್ನು ನಾವು ಇದೇ ವರ್ಷ ಅಧಿಸೂಚನೆ ಮಾಡಿ ಸಂರಕ್ಷಣೆ ಮಾಡುವ ಕೆಲಸ ಮಾಡುತ್ತೇವೆ. ಇಂತಹ ಕೆಲಸಕ್ಕೆ ಜನರೂ ಆಸಕ್ತಿಯಿಂದ ಮುಂದೆ ಬರಬೇಕು. ಮಾಧ್ಯಮಗಳು ಹೆಚ್ಚು ಉತ್ತೇಜನ ನೀಡಬೇಕು. ರಾಷ್ಟ್ರೀಯ ಸ್ವತ್ತು ಸಂರಕ್ಷಣೆಗೆ ಜನ, ಶ್ರೀಮಂತರು ಕೈಜೋಡಿಸಬೇಕು. ಚೆಲುವ ಕನ್ನಡ ನಾಡಿನ ಕನಸು ಕಾಣುವವರೆಲ್ಲ ಸಹಕಾರ ನೀಡಬೇಕು. ಕಾಪೋರೇಟ್ ಸಂಸ್ಥೆಗಳೂ ಕೈಜೋಡಿಸಬೇಕು ಎಂದು ಎಚ್.ಕೆ.ಪಾಟೀಲ ಮನವಿ ಮಾಡಿದರು.
ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!

ಹಬ್ಬದ ದಿನವೇ ಏನಿದು ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 4 =
Remember me
