| ಯಂಕಣ್ಣ ಸಾಗರ್ ಬೆಂಗಳೂರು
ಬಹುಮಾನದ ಹೆಸರಲ್ಲಿ, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಒಟಿಪಿ, ಕ್ಯೂಆರ್ ಕೋಡ್, ಆಪ್​ಗಳ ಮೂಲಕ ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಸೈಬರ್ ಕಳ್ಳರೀಗ, ಫೋನ್ ಪೇ ಹಾಗೂ ಗೂಗಲ್ ಪೇಗೂ ಎಂಟ್ರಿ ಕೊಟಿದ್ದಾರೆ! ವಿಶೇಷ ರಿವಾರ್ಡ್ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸಿ ಹಣ ಲಪಟಾಯಿಸುತ್ತಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಸಾಮಾಜಿಕ ಜಾಲತಾಣ, ಆನ್​ಲೈನ್ ಮಾರ್ಕೆಟ್ ವ್ಯವಹಾರ, ಶಾಪಿಂಗ್ ಮಾಲ್ ಇನ್ನಿತರ ಕಡೆ ಹಂಚಿಕೊಳ್ಳುವ ಫೋನ್ ನಂಬರ್, ಹೆಸರಿನ ವಿವರ ಕಲೆಹಾಕುವ ಖದೀಮರು ಆನ್​ಲೈನ್ ವಹಿವಾಟು ನಡೆಸುವವರನ್ನೇ ಟಾರ್ಗೆಟ್ ಮಾಡುತ್ತಾರೆ. ಬಳಿಕ ಅವರ ಫೋನ್ ನಂಬರ್ ಆನ್​ಲೈನ್ ಬ್ಯಾಂಕಿಂಗ್​ಗೆ ಜೋಡಣೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡುವ ಅನಾಮಿಕ ವ್ಯಕ್ತಿ, ಕಂಪನಿಯ ಅಪ್ಲಿಕೇಷನ್ ಉತ್ತಮವಾಗಿ ಬಳಸಿರುವುದಕ್ಕೆ ವಿಶೇಷ ಕೊಡುಗೆಗೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಗೂಗಲ್ ಪೇ ಮೂಲಕ ಸ್ನೇಹಿತನಿಗೆ 99 ಸಾವಿರ ರೂ. ಕಳುಹಿಸಿದ್ದ ಬೆಂಗಳೂರಿನ ಅರಕೆರೆಯ ಉದ್ಯೋಗಿ ಒಬ್ಬರು ಮೋಸಹೋಗಿದ್ದಾರೆ.
ನೀವು ಬಳಸುತ್ತಿರುವ ಆಪ್ ಮುಖಾಂತರ ಬ್ಯಾಂಕ್​ಗೆ ಬಹುಮಾನದ ಹಣ ಜಮಾ ಆಗಲಿದೆ ಎಂದು ಪುಸಲಾಯಿಸುತ್ತಾರೆ. ಅವರು ಹೇಳಿದಂತೆ ಕ್ಯಾಷ್​ಬ್ಯಾಕ್ ಆಫರ್ ಆಸೆಯಿಂದ ಲಿಂಕ್ ಒತ್ತಿ, ಪಾಸ್​ವರ್ಡ್ ನಮೂದಿಸಿದರೆ, ಖಾತೆಯಲ್ಲಿನ ಹಣ ಕ್ಷಣಾರ್ಧದಲ್ಲಿ ಬೇರೊಂದು ಖಾತೆಗೆ ವರ್ಗಾವಣೆಯಾಗುತ್ತದೆ. ಇಂತಹ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ರಿಕ್ವೆಸ್ಟ್ ಮರೆಮಾಚಿ ಕೃತ್ಯ
ಸಾಮಾನ್ಯವಾಗಿ ಪರಿಚಯಸ್ಥರು ಹಣ ಕೋರಿ ರಿಕ್ವೆಸ್ಟ್ ಕಳುಹಿಸುವಂತೆಯೇ ಸೈಬರ್ ಕಳ್ಳರು ಆನ್​ಲೈನ್ ಲಿಂಕ್ ತಯಾರಿಸಿಕೊಂಡಿದ್ದಾರೆ. ನಾವು ಬಳಸುವ ಯುಪಿಐ ಆಧಾರಿತ ಆಪ್​ಗಳನ್ನು ತೆರೆದ ಕೂಡಲೇ, ಮೊದಲಿಗೆ ಆನ್​ಲೈನ್ ಲಿಂಕ್ ಕಾಣಿಸಿಕೊಳ್ಳುತ್ತದೆ. ಹಣ ಜಮೆ ಆಗಲಿದೆ ಎಂಬ ಸಂದೇಶ ತೋರಿಸುತ್ತದೆ. ಅದರಲ್ಲಿ ’ಪಾವತಿಸಿ’ ಎಂಬ ಪದವೇ ಇರುವುದಿಲ್ಲ. ಅದನ್ನು ಮರೆಮಾಚಿ ‘ಹಣ ಸ್ವೀಕರಿಸಿ’ ಎಂದು ಸೈಬರ್ ಖದೀಮರು ಸೃಷ್ಟಿಸಿರುತ್ತಾರೆ. ಅದನ್ನು ಒತ್ತಿದಾಗ ಪಾಸ್​ವರ್ಡ್ ಕೇಳುತ್ತದೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳದೇ ಪಾಸ್​ವರ್ಡ್ ನಮೂದಿಸಿದರೆ ಬ್ಯಾಂಕ್ ಖಾತೆಯಲ್ಲಿನ ಹಣ, ಸೈಬರ್ ಕಳ್ಳರ ಪಾಲಾಗಲಿದೆ. ಯುಪಿಐ ಆಧಾರಿತ ಆನ್​ಲೈನ್ ಆಪ್ ಬಳಸುವ ಜನರು ಎಚ್ಚೆರಿಕೆ ವಹಿಸುವುದು ಅಗತ್ಯ ಎಂದು ಸೈಬರ್ ಕ್ರೖೆಂ ಪೊಲೀಸರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಬೆಲ್ ಬಟನ್ ಕ್ಲಿಕ್ಕಿಸಿ ಮೋಸ ಹೋದ
ಕಾಮಾಕ್ಷಿಪಾಳ್ಯದ ವೃಷಭಾವತಿನಗರ ನಿವಾಸಿ ಲೋಕೇಶ್ ಎಂಬುವರಿಗೆ ಕರೆ ಮಾಡಿದ್ದ ವ್ಯಕ್ತಿ, ತಾನು ಫೋನ್​ಪೇ ಕಸ್ಟಮರ್ ಕೇರ್ ಸರ್ವೀಸ್​ನಿಂದ ಮಾತನಾಡುತ್ತಿರುವುದಾಗಿ ಹೇಳಿದ್ದ. ಫೋನ್​ಪೇ ಕಡೆಯಿಂದ ಆಫರ್ ಬಂದಿದೆ. ನಾನು ಹೇಳಿದಂತೆ, ಮಾಡಿದರೆ, ಕೊಡುಗೆಯ ಹಣ ಬ್ಯಾಂಕ್ ಅಕೌಂಟ್​ಗೆ ಜಮಾ ಆಗುತ್ತದೆ ಎಂದು ಹೇಳಿದ್ದ. ಆತನ ಮಾತನ್ನು ನಂಬಿ, ಫೋನ್​ಪೇ ಆಪ್​ಗೆ ಬಂದಿದ್ದ ಲಿಂಕ್ ಮೇಲಿದ್ದ ಬೆಲ್ ಬಟನ್ ಕ್ಲಿಕ್ ಮಾಡಿದ್ದ. ಅದರಲ್ಲಿ ’5000 ರೂ. ಪೇ’ ತೋರಿಸಿದೆ. ಈ ಬಗ್ಗೆ ಯೋಚಿಸದೆ ಲಿಂಕ್ ಒತ್ತಿ, ಪಾಸ್​ವರ್ಡ್ ನಮೂದಿಸಿದಾಗ ಖಾತೆಯಿಂದ ಹಂತಹಂತವಾಗಿ 21 ಸಾವಿರ ರೂ. ಕಡಿತವಾಗಿದೆ. ತನಗಾದ ವಂಚನೆ ಕುರಿತು ಪಶ್ಚಿಮ ವಿಭಾಗ ಸಿಇಎನ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಸಂಸ್ಥೆ ಹೇಳೋದೇನು?
ಟ್ವಿಟರ್​ನಲ್ಲಿ ಕಾರ್ತಿಕ್ ಕಾಮತ್ ಎಂಬುವರು ತಮಗಾದ ವಂಚನೆ ಕುರಿತು ಸಿಐಡಿ ಸೈಬರ್ ಕ್ರೖೆಂ ಮತ್ತು ಫೋನ್​ಪೇ ಕಂಪನಿ ಗಮನಕ್ಕೆ ತಂದು ತನಿಖೆ ನಡೆಸುವಂತೆ ಕೋರಿದ್ದಾರೆ. ಇದಕ್ಕೆ ಫೋನ್​ಪೇ ಕಂಪನಿ, ದೂರನ್ನು ಪರಿಶೀಲಿಸುವುದಾಗಿ ಪ್ರತಿಕ್ರಿಯಿಸಿದೆ. ಅಲ್ಲದೆ, ಕಂಪನಿಯಿಂದ ಯಾವುದೇ ರೀತಿಯ ರಿವಾರ್ಡ್ ಅಥವಾ ಕ್ಯಾಶ್​ಬ್ಯಾಕ್ ಹೆಸರಿನಲ್ಲಿ ಕರೆ ಮಾಡುವುದಿಲ್ಲ. ಹಣ ಕೋರಿ ರಿಕ್ವೆಸ್ಟ್ ಕಳುಹಿಸಿರುವ ವ್ಯಕ್ತಿಯ ಜತೆ ಚಾಟ್ ಮಾಡುವ ಅವಕಾಶವಿದೆ. ಹಣ ಕೋರಿರುವರು ನಿಮ್ಮವರೇ ಎಂಬುದನ್ನು ಖಚಿತಪಡಿಸಿಕೊಂಡು ಪಾವತಿಸುವಂತೆ ಕಂಪನೆ ಹೇಳಿದೆ.
ವೈದ್ಯರಿಗೆ -ಠಿ;9 ಸಾವಿರ ಮೋಸ
ಕತ್ರಿಗುಪ್ಪೆ ನಿವಾಸಿ ಡಾ. ಯೋಗೇಶ್ ಎಂಬುವರಿಗೆ ಫೋನ್​ಪೇ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ್ದ ವ್ಯಕ್ತಿ, ರಿವಾರ್ಡ್ ಪಾಯಿಂಟ್ಸ್ ಬಂದಿದೆ ಎಂದು ಆಸೆ ತೋರಿಸಿದ್ದ. ಫೋನ್​ಪೇ ಮೂಲಕ ಬ್ಯಾಂಕ್ ಖಾತೆಗೆ ಸಂದಾಯ ಮಾಡುತ್ತೇವೆ. ಪೇಮೆಂಟ್ ರಿಕ್ವೆಸ್ಟ್ ಒತ್ತುವಂತೆ ಸೂಚಿಸಿದ್ದ. ಅಪರಿಚಿತನ ಮಾತನ್ನು ನಂಬಿದ ವೈದ್ಯ, ಪೇಮೆಂಟ್ ರಿಕ್ವೆಸ್ಟ್ ಒತ್ತಿದಾಗ 9,631 ರೂ. ಕಡಿತವಾಗಿದೆ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:3 × five =
Remember me
