ಬಿಜೆಪಿ ಸಂಕಲ್ಪ:ರಾಜ್ಯ ಬಿಜೆಪಿ ಚುನಾವಣಾ ಸಿದ್ಧತೆಗೆ ಪೂರಕ ವಾಗಿ ವಿಸ್ತಾರಕರ ನೇಮಕ, ಶಕ್ತಿ ಸಂಗಮ ಮುಂತಾದ ಚಟುವಟಿಕೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮಗಳಿಗೆ ಕರೆಸುವ ಮೂಲಕ ಪಕ್ಷದ ಶಕ್ತಿವರ್ಧನೆಗೆ ಯತ್ನಿಸಿದೆ. ಸರ್ಕಾರದ ಯೋಜನೆಗಳ ಫಲ ತಲುಪಿರುವ ಫಲಾನು ಭವಿಗಳ ಸಮಾವೇಶವನ್ನು ‘ಜನ ಸಂಕಲ್ಪ’ದ ಹೆಸರಿನಲ್ಲಿ ಪಕ್ಷ ಮಾಡಿಕೊಂಡು ಬಂದಿದೆ.
ಜೆಡಿಎಸ್ ಹುರುಪು:ಜೆಡಿಎಸ್ ಸಹ ಭರ್ಜರಿಯಾಗಿ ಚುನಾವಣೆಗೆ ಸಿದ್ಧತೆ ನಡೆಸಿದೆ. ಆರಂಭದಲ್ಲಿ ಜನತಾ ಜಲಧಾರೆ ನಡೆಸಿತು. ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಆರಂಭವಾಗಿದೆ. 90 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿ ಬಿಜೆಪಿ ಮತ್ತು ಕಾಂಗ್ರೆಸ್​ಗಿಂತ ಮುಂದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುಮು ಅವರನ್ನು ಬೆಂಬಲಿಸಿ ಆ ಮೂಲಕ ಬಿಜೆಪಿ ಸಖ್ಯ ಗಟ್ಟಿಗೊಳಿಸಿಕೊಂಡರು. ಮುಮು ಬೆಂಗಳೂರಿಗೆ ಬಂದಾಗ ದೇವೇಗೌಡರ ಮನೆಗೆ ಭೇಟಿ ನೀಡಿದ್ದರು.
ತೆಲಂಗಾಣ ಪ್ರಕರಣ ಸಿಬಿಐ ತನಿಖೆ:ತೆಲಂಗಾಣದಲ್ಲಿ ಆಪರೇಷನ್ ಕಮಲ ನಡೆಸಲು ಹೋದ ಆರೋಪ ರಾಜ್ಯದ ಮುಖಂಡ ಬಿ.ಎಲ್. ಸಂತೋಷ್ ವಿರುದ್ಧ ಕೇಳಿಬಂದಿದ್ದು, ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ.
ಸಾವರ್ಕರ್ ಫೋಟೋ:ಬೆಳಗಾವಿಯ ಸುವರ್ಣ ವಿಧಾನ ಸೌಧದ ವಿಧಾನಸಭೆ ಸಭಾಂಗಣದಲ್ಲಿ ಸಾವರ್ಕರ್ ಪೋಟೋ ಹಾಕಿದ್ದು ವಿವಾದಕ್ಕೆ ಒಳಗಾಯಿತು. ಕುವೆಂಪು, ನಾರಾಯಣಗುರು, ವಾಲ್ಮೀಕಿ, ಜಗ ಜೀವನರಾಂ, ಕನಕದಾಸ ಮುಂತಾದ ಮಹನೀಯರ ಭಾವಚಿತ್ರಗಳನ್ನೂ ಅಳವಡಿಸಿ ಎಂದು ಕಾಂಗ್ರೆಸ್ ಆಗ್ರಹಿಸಿತು.
ಕುಕ್ಕರ್ ಸ್ಫೋಟ:ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಪೋೕಟ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚುತ್ತಿದೆಯೇ ಎಂಬ ಅನುಮಾನಕ್ಕೂ ಎಡೆ ಮಾಡಿದೆ. ತನಿಖೆ ಇನ್ನೂ ಪೂರ್ಣಗೊಳ್ಳಬೇಕಿದೆ. ಶಿವಮೊಗ್ಗದಲ್ಲಿ ಹರ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರ್, ಅಲ್ಪಸಂಖ್ಯಾತ ಯುವಕನ ಕೊಲೆಗಳು ಆತಂಕಕ್ಕೂ ಕಾರಣವಾಗಿವೆ.
ಧರ್ಮಸಂಕಟ:ಹಿಜಾಬ್, ಹಲಾಲ್, ಜಟ್ಕಾ ಕಟ್, ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ವಹಿವಾಟು ನಿರಾಕರಣೆ, ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ ಬಳಿದಿರುವುದು ಸೇರಿದಂತೆ ಅನೇಕ ಧರ್ಮಸೂಕ್ಷ್ಮದ ವಿಚಾರಗಳು ಸದ್ದು ಮಾಡಿದವು.
ಗಡಿ ಕಿಡಿಗೆ ಪ್ರತ್ಯುತ್ತರ:ಪದೇಪದೆ ಗಡಿ ವಿವಾದ ಕೆದಕುವ ಮಹಾರಾಷ್ಟ್ರಕ್ಕೆ ರಾಜ್ಯ ಸರ್ಕಾರ ಸರಿಯಾಗಿಯೇ ಕಿವಿ ಹಿಂಡಿತು. ಎಂಇಎಸ್​ನ ಮಹಾಮೇಳಾವಕ್ಕೆ ಅವಕಾಶ ನೀಡಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಸಭೆ ನಡೆಸಿದ್ದು ಅದು ಸಹ ಮಹಾರಾಷ್ಟ್ರಕ್ಕೆ ಹಿನ್ನಡೆಯೇ ಆಯಿತು. ವಿಧಾನಮಂಡಲದಲ್ಲಿ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡುವ ನಿರ್ಣಯ ಅಂಗೀಕರಿಸಲಾಯಿತು.
ಭಾರತ್ ಜೋಡೋ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿರುವ ಭಾರತ್ ಜೋಡೋ ರಾಜ್ಯದಲ್ಲಿ 20 ದಿನಗಳ ಕಾಲ ಸಂಚರಿಸಿತು. ಗುಂಡ್ಲುಪೇಟೆಯಿಂದ ಆರಂಭವಾಗಿ ರಾಯಚೂರಿನಲ್ಲಿ ಮುಕ್ತಾಯವಾಯಿತು. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಿತು.
ಕಾಂಗ್ರೆಸ್ ಜೋಶ್:ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಜೋಶ್ ಕಾಂಗ್ರೆಸ್​ನಲ್ಲಿ ಬಂದಿರುವುದು ವಿಶೇಷ. ಇಡೀ ವರ್ಷ ಕಾರ್ಯಕ್ರಮಗಳ ಮೂಲಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಯತ್ನ ಮಾಡಿಕೊಂಡು ಬಂದಿದೆ. ವರ್ಷದ ಆರಂಭದಲ್ಲಿಯೇ ಮೇಕೆದಾಟು ಪಾದಯಾತ್ರೆ ನಡೆಸಿತು. ನಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಡಿಗೆ ಕಾರ್ಯಕ್ರಮ ಮಾಡಿತು.
ಕೆಂಪೇಗೌಡ ಪ್ರತಿಮೆ ಅನಾವರಣ:ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು ವಿಶೇಷ. ಆದರೆ ಆ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಿಲ್ಲವೆಂಬುದು ವಿವಾದಕ್ಕೆ ಕಾರಣವಾಯಿತು.
ಕಮೀಷನ್ ಆರೋಪ:ವರ್ಷದುದ್ದಕ್ಕೂ ಹೆಚ್ಚು ಸದ್ದು ಮಾಡಿದ್ದು ಸರ್ಕಾರದ ವಿರುದ್ಧ ನಲವತ್ತು ಪರ್ಸೆಂಟ್ ಕಮೀಷನ್ ಆರೋಪ. ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ಸರ್ಕಾರದ ವಿರುದ್ಧ ನೀಡಿತು. ಗುತ್ತಿಗೆದಾರನೊಬ್ಬ ಕೆ.ಎಸ್. ಈಶ್ವರಪ್ಪ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ತನಿಖೆಯಲ್ಲಿ ಕ್ಲೀನ್​ಚಿಟ್ ಸಿಕ್ಕು ಸಂಪುಟ ಸೇರಲು ಹರಸಾಹಸ ಮಾಡುತ್ತಿದ್ದಾರೆ. ಸಚಿವ ಮುನಿರತ್ನ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತಿತರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಪೊಲೀಸರು ಬಂಧಿಸಿ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
ಹೂಡಿಕೆದಾರರ ಸಮಾವೇಶ:ರಾಜ್ಯದಲ್ಲಿ ಮತ್ತೊಂದು ಹೂಡಿಕೆದಾರರ ಸಮಾವೇಶ ನಡೆಯಿತು. ಸುಮಾರು 10 ಲಕ್ಷ ಕೋಟಿ ರೂ.ಗಳಷ್ಟು ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 10 ಲಕ್ಷ ಉದ್ಯೋಗಗಳು ಇದರಿಂದ ಸೃಷ್ಟಿ ಅಂದಾಜು ಮಾಡಲಾಗಿದೆ.
ಪ್ರಮುಖ ವಿಧೇಯಕ:ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸ ಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ 257 ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೆ.15 ರಿಂದ 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7ಕ್ಕೆ ಹೆಚ್ಚಿಸುವ ವಿಧೇಯಕ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದೆ.
ನೇಮಕ ಅಕ್ರಮ:ರಾಜ್ಯದಲ್ಲಿ 545 ಪಿಎಸ್​ಐ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮವಾಗಿದ್ದರ ಬಗ್ಗೆ ಸಿಐಡಿ ತನಿಖೆ ನಡೆದು ಎಡಿಜಿಪಿ ಅಮೃತ್ ಪೌಲ್ ಸೇರಿ ಅನೇಕರ ಬಂಧನವಾಗಿದೆ. ಕೆಲವರಿಗೆ ಜಾಮೀನು ಸಿಕ್ಕಿದೆ. ಶಿಕ್ಷಕರ ನೇಮಕದ ಅಕ್ರಮದಲ್ಲಿಯೂ ಕೆಲವರು ಬಂಧನಕ್ಕೆ ಒಳಗಾಗಿದ್ದಾರೆ.
ಸ್ವಾಮೀಜಿ ಬಂಧನ:ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಶರಣರು ಬಂಧನಕ್ಕೆ ಒಳಗಾಗಿದ್ದು, ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದೆ.
ಪಠ್ಯ ವಿವಾದ:ಪಠ್ಯ ಪರಿಷ್ಕರಣೆ ವಿವಾದ ಸಹ ತಾರಕಕ್ಕೇರಿತ್ತು. ಅನೇಕ ಸಾಹಿತಿಗಳು ತಮ್ಮ ಪಠ್ಯ ಬಳಸದಿರುವಂತೆ ಸರ್ಕಾರಕ್ಕೆ ಪತ್ರ ಬರೆದರು.
ರಾಷ್ಟ್ರಮಟ್ಟದಲ್ಲಿ ಅವಕಾಶ:ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ರಾಜ್ಯದ ಇಬ್ಬರು ಹಿರಿಯ ರಾಜಕಾರಣಿಗಳಿಗೆ ಅವಕಾಶ ಸಿಕ್ಕಿದ್ದು ವಿಶೇಷ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಚುನಾಯಿತರಾದರು. ಶಶಿ ತರೂರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. 5 ದಶಕಗಳ ನಂತರ ರಾಜ್ಯದ ರಾಜಕಾರಣಿಗೆ ಈ ಅವಕಾಶ ಲಭ್ಯವಾಯಿತು. ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯ ಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇಮಕವಾದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಮೂಲಕ ರಾಜ್ಯಕ್ಕೆ ಗೌರವ ಸಿಕ್ಕಿತು.
ಸಿದ್ದರಾಮೋತ್ಸವ:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬದ ಸಮಾರಂಭ ದಾವಣಗೆರೆಯಲ್ಲಿ ನಡೆದು 10 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ರಾಹುಲ್ ಗಾಂಧಿ ಭಾಗವಹಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿಲ್ಲವೆಂಬ ಸಂದೇಶ ಸಾರಲು ಪ್ರಯತ್ನ ನಡೆಸಿದರು.
ಕಲಾವಿದರ ಆಕ್ರೋಶ:ಕಲಾ ಸಂಘಟನೆಗಳಿಗೆ ನೀಡುವ ಅನುದಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡಿರುವ ನಿಯಮಗಳ ವಿರುದ್ಧ ಸಾಹಿತಿ-ಕಲಾವಿದರು ಸಾತ್ವಿಕ ಪ್ರತಿಭಟನೆಯ ಮೂಲಕ ಸರ್ಕಾರವನ್ನು ಮಣಿಸಿದರು.
ಪಕ್ಷಾಂತರ ಪರ್ವ:ಚುನಾವಣೆಗೆ ಮುನ್ನವೇ ಪಕ್ಷಾಂತರ ಪರ್ವ ಆರಂಭವಾಗಿದೆ. ಬಿಜೆಪಿಯಿಂದ ಯು.ಬಿ. ಬಣಕಾರ್, ವಿ.ಎಸ್. ಪಾಟೀಲ್, ಜೆಡಿಎಸ್​ನಿಂದ ವೈಎಸ್​ವಿ ದತ್ತ ಸೇರಿ ಅನೇಕರು ಕಾಂಗ್ರೆಸ್​ಗೆ ಸೇರಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ, ಸಚ್ಚಿದಾನಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ವಿವಾದದ ಚಿಲುಮೆ:ಬೆಂಗಳೂರಿನಲ್ಲಿ ಮತದಾರರ ಗೌಪ್ಯತೆ ಕಳವು ಪ್ರಕರಣ ಸದ್ದು ಮಾಡುತ್ತಿದ್ದು ಇಬ್ಬರು ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮವಾಗಿತ್ತು. ಚಿಲುಮೆ ಸಂಸ್ಥೆ ಒಳಗೊಂಡ ಈ ಪ್ರಕರಣ ರ್ತಾಕ ಅಂತ್ಯ ಕಂಡಿಲ್ಲ.
ಸಚಿವ ಸ್ಥಾನಮಾನ:ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಯಿತು. ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
ಬರಹ:ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 12 =
Remember me
