ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ರಾಷ್ಟ್ರೀಯ ತನಿಖಾದಳದ (ಎನ್​ಐಎ) ಬಲೆಗೆ ಬಿದ್ದ ಡಾ. ಅಬ್ದುರ್ ರೆಹಮಾನ್(28) ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ‘ಗುಪ್ತ ಮೊಬೈಲ್ ತಂತ್ರಾಂಶ’ ಅಭಿವೃದ್ಧಿ ಪಡಿಸುವ ಹೊಣೆ ಹೊತ್ತಿದ್ದನೆಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರಿನ ಬಸವನಗುಡಿಯಲ್ಲಿ ನೆಲೆಸಿದ್ದ ಈತ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ನೇತ್ರ ವೈದ್ಯನಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ತೀವ್ರ ವಿಚಾರಣೆ ವೇಳೆ ಐಸಿಸ್ ಜತೆಗಿನ ನಂಟನ್ನು ಒಪ್ಪಿಕೊಂಡಿರುವುದಾಗಿ ಎನ್​ಐಎ ತಿಳಿಸಿದೆ.
2019ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿರೋಧಿಸಿ ದೇಶ ವ್ಯಾಪಿ ವಿಧ್ವಂಸಕ ಕೃತ್ಯ ನಡೆಸಲು ಐಸಿಸ್ ಸಹೋದರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್​ಕೆಪಿ) ಸಂಚು ರೂಪಿಸಿರುವುದನ್ನು ಇತ್ತೀಚೆಗಷ್ಟೇ ದೆಹಲಿ ಪೊಲೀಸರು ಮತ್ತು ಎನ್​ಐಎ ಅಧಿಕಾರಿಗಳು ಪತ್ತೆಹಚ್ಚಿದ್ದರು. ಈ ಸಂಬಂಧ ಮಾ.8ರಂದು ಕಾಶ್ಮೀರ, ದೆಹಲಿ ಮತ್ತು ಪುಣೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ವೇಳೆ ಐಎಸ್​ಕೆಪಿ ಜತೆ ನಿಕಟ ಸಂಪರ್ಕ ಹೊಂದಿದ್ದ ಕಾಶ್ಮೀರ ಮೂಲದ ಜಹಾನೇಬ್ ಸಮಿ ವಾನಿ ಮತ್ತು ಆತನ ಪತ್ನಿ ಹಿನಾ ಬಶೀರ್ ಬೇಗ್​ರನ್ನು ದೆಹಲಿ ಜಾಮಿಯಾನಗರದಲ್ಲಿ ಬಂಧಿಸಲಾಗಿತ್ತು.
ಇವರ ವಿಚಾರಣೆ ವೇಳೆ ಐಸಿಸ್ ಜಾಲಕ್ಕೆ ಪುಣೆಯ ನಂಟು ಇರುವುದು ಬೆಳಕಿಗೆ ಬಂದಿತ್ತು. ಪತ್ರಿಕೋದ್ಯಮ ವಿದ್ಯಾರ್ಥಿನಿ ಸಾದಿಯಾ ಅನ್ವರ್ ಶೇಖ್ ಮತ್ತು ನಬೀಲ್ ಸಿದ್ದಿಕ್ ಖತ್ರಿ ಎಂಬಾತನನ್ನು ಬಂಧಿಸಿದ ಬಳಿಕ ವಿಚಾರಣೆಯಲ್ಲಿ ಉಗ್ರ ಕೃತ್ಯದ ಬಗ್ಗೆ ಮತ್ತಷ್ಟು ಮಾಹಿತಿ ಬೆಳಕಿಗೆ ಬಂದಿತ್ತು. ಈ ಶಂಕಿತರ ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಅಬ್ದುರ್ ರೆಹಮಾನ್ ಸುಳಿವು ಲಭ್ಯವಾಗಿತ್ತು. ಎನ್​ಐಎ ಅಧಿಕಾರಿಗಳ ತಂಡ ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಎಂ.ಎಸ್. ರಾಮಯ್ಯ ವೈದ್ಯಕೀಯ ಸಂಸ್ಥೆಯಲ್ಲಿ ವೈದ್ಯನಾಗಿರುವ ಡಾ. ಅಬ್ದುರ್ ರೆಹಮಾನ್​ನನ್ನು ಸೋಮವಾರ ಬಂಧಿಸಿತ್ತು.
ಹೆಚ್ಚಿನ ವಿಚಾರಣೆ ನಡೆಸಿದಾಗ ಸಾಕಷ್ಟು ಸ್ಪೋಟಕ ಮಾಹಿತಿಗಳು ಎನ್​ಐಎ ಅಧಿಕಾರಿಗಳಿಗೆ ತಿಳಿದುಬಂದಿದೆ. ಆರೋಪಿಯನ್ನು ದೆಹಲಿ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ವಶಕ್ಕೆ ಪಡೆಯುವುದಾಗಿ ಎನ್​ಐಎ ಮೂಲಗಳು ತಿಳಿಸಿವೆ.
ವಿಶ್ವಾದ್ಯಂತ ಬಳಕೆಗೆ ತಂತ್ರಾಂಶ
ಸಿರಿಯಾ, ಇರಾಕ್ ಸೇರಿದಂತೆ ವಿಶ್ವದ ಹಲವೆಡೆ ಐಸಿಸ್ ಉಗ್ರರು ಹಾಗೂ ವಿವಿಧ ಸೇನಾಪಡೆಗಳ ಜತೆಗೆ ಕಾದಾಟ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ಗಾಯಗೊಳ್ಳುವ ಉಗ್ರರಿಗೆ ಚಿಕಿತ್ಸೆ ನೀಡಲು, ವಿಶ್ವಾದ್ಯಂತ ಹಲವೆಡೆ ಇರುವ ಐಸಿಸ್ ಸಂರ್ಪತ ವೈದ್ಯರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ. ಗಾಯಗೊಂಡ ಉಗ್ರ ತಂತ್ರಾಂಶದ ಮೂಲಕ ವೈದ್ಯನನ್ನು ಸಂರ್ಪಸಿ ಚಿಕಿತ್ಸೆ ಪಡೆಯಲು ಸಹಕರಿಸುವುದು ಈ ಯೋಜನೆಯ ಉದ್ದೇಶ. ಈ ತಂತ್ರಾಂಶವು ಕೇವಲ ಉಗ್ರರಿಗಷ್ಟೇ ದೊರಕುವಂತೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ರೂಪುಗೊಳಿಸುವ ಯೋಜನೆಯಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಬೈಲ್, ಲ್ಯಾಪ್​ಟಾಪ್ ಜಪ್ತಿ
ಬಸವನಗುಡಿ ಎಂ.ಡಿ. ಬ್ಲಾಕ್​ನ ಅಪಾರ್ಟ್​ವೆುಂಟ್​ನಲ್ಲಿ ತಂದೆ, ತಾಯಿ ಜತಗೆ ಡಾ. ಅಬ್ದುರ್ ರೆಹಮಾನ್ ನೆಲೆಸಿದ್ದ. ಬಸವನಗುಡಿಯ ಮನೆ, ಆಸ್ಪತ್ರೆ ಸೇರಿದಂತೆ 3 ಕಡೆ ಏಕಕಾಲಕ್ಕೆ ದಾಳಿ ನಡೆಸಿದ 8 ಅಧಿಕಾರಿಗಳ ಎನ್​ಐಎ ತಂಡ ಡಾ.ಅಬ್ದುರ್ ರೆಹಮಾನ್ ಕೃತ್ಯಕ್ಕೆ ಬಳಸಿದ್ದ ಡಿಜಿಟಲ್ ಸಾಧನಗಳು, ಮೊಬೈಲ್, ಕೆಮಿಕಲ್, ಲ್ಯಾಪ್​ಟಾಪ್ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಿದೆ.
ಹೊರಗಿನ ಚಟುವಟಿಕೆ ಮಾಹಿತಿಯಿಲ್ಲ
ಅಬ್ದುರ್ ರೆಹಮಾನ್ ವಿಚಾರವಾಗಿ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಸ್ಪಷ್ಟನೆ ನೀಡಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದಲ್ಲಿ 2014ರಲ್ಲಿ ಡಾ. ಅಬ್ದುರ್ ರೆಹಮಾನ್ ಎಂಬಿಬಿಎಸ್ ಮುಗಿಸಿದ್ದ. 2017ರಲ್ಲಿ ಸರ್ಕಾರಿ ಕೋಟಾದಲ್ಲಿ ನೇತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ (ಎಂಎಸ್) ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿಗೆ ಸೇರಿದ್ದ. 2020ರ ಜುಲೈನಲ್ಲಿ ಎಂಎಸ್​ನಲ್ಲಿ ತೇರ್ಗಡೆ ಹೊಂದಿದ್ದಾನೆ. ಕಾಲೇಜಿನ ಚಟುವಟಿಕೆ ಹೊರತು ಪಡಿಸಿ ಹೊರಗಡೆಯ ಚಟುವಟಿಕೆ ಕುರಿತು ಮಾಹಿತಿ ಇಲ್ಲ ಎಂದು ಸಂಸ್ಥೆ ಹೇಳಿದೆ.
ಸಿರಿಯಾ ಕ್ಯಾಂಪ್​ನಲ್ಲಿ 10 ದಿನ ತಂಗಿದ್ದ
ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (2014) ಎಂಬಿಬಿಎಸ್ ಪದವಿ ಮುಗಿಸಿದ್ದ ಡಾ. ಅಬ್ದುರ್ ರೆಹಮಾನ್ ಅದೇ ವರ್ಷ ಸಿರಿಯಾಗೆ ಹೋಗಿ ಉಗ್ರರ ಮೆಡಿಕಲ್ ಕ್ಯಾಂಪ್​ಗೆ ಭೇಟಿ ನೀಡಿದ್ದ. ಅಮೆರಿಕ ಸೈನಿಕರ ವಿರುದ್ಧ ಹೋರಾಟ ಮತ್ತು ಉಗ್ರ ಚಟುವಟಿಕೆಗಳಲ್ಲಿ ಗಾಯಗೊಂಡಿದ್ದ ಐಸಿಸ್ ಉಗ್ರರಿಗೆ ಚಿಕಿತ್ಸೆ ನೀಡಿದ್ದ. 10 ದಿನಗಳ ಬಳಿಕ ಭಾರತಕ್ಕೆ ವಾಪಸಾಗಿದ್ದ. 2017ರಲ್ಲಿ ಸರ್ಕಾರದ ಕೋಟಾದಲ್ಲಿ ನೇತ್ರ ಚಿಕಿತ್ಸೆ ವಿಭಾಗದಲ್ಲಿ (ಆಫ್ತಲ್ಮಾಲಜಿ) ಸ್ನಾತಕೋತ್ತರ ಪದವಿಗೆ (ಎಂಎಸ್) ಸೇರ್ಪಡೆಯಾಗಿ, ಕಿರಿಯ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ.
ಬೆಳಕಿಗೆ ಬಂದಿದ್ದೇಗೆ?
ವಿಶ್ವದ ಹಲವೆಡೆ ಐಸಿಸ್ ನಿಷೇಧಕ್ಕೀಡಾದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್​ಕೆಪಿ) ಎಂಬ ಹೆಸರಿನಡಿ ಇದೇ ಸಂಘಟನೆ ಹೊಸ ರೂಪ ಪಡೆದುಕೊಂಡಿದೆ. ದೇಶಾದ್ಯಂತ ಭಯೋತ್ಪಾದಕ ಕೃತ್ಯವೆಸಗಲು ಸಂಚು ರೂಪಿಸಿದ ಆರೋಪದಡಿ ಹೈದರಾಬಾದ್​ನಲ್ಲಿ ಅಬ್ದುಲ್ಲಾ ಬಸಿತ್ ಎಂಬಾತನನ್ನು ಬಂಧಿಸಲಾಗಿತ್ತು. ಆತ ತಿಹಾರ್ ಜೈಲಿನಲ್ಲಿದ್ದಾನೆ. ಇವರೊಂದಿಗೆ ಕಾಶ್ಮೀರ ಮೂಲದ ಜಹಾನೇಬ್ ಸಮಿ ವಾನಿ ದಂಪತಿ ಸಂಪರ್ಕದಲ್ಲಿದ್ದರು. ಈ ದಂಪತಿ ಜತೆ ಡಾ. ಅಬ್ದುರ್ ರೆಹಮಾನ್ ನಿಕಟ ಸಂಪರ್ಕದಲ್ಲಿದ್ದ. ಕಾಶ್ಮೀರ ಮೂಲದ ದಂಪತಿಯನ್ನು ಬಂಧಿಸಿದಾಗ ಬೆಂಗಳೂರಿನಲ್ಲಿದ್ದ ರೆಹಮಾನ್ ಸುಳಿವು ಲಭ್ಯವಾಗಿದೆ.
3 ಆಪ್ ರೂಪಿಸುವ ಹೊಣೆ
2. ಗಾಯಗೊಂಡ ಉಗ್ರರಿಗೆ ಚಿಕಿತ್ಸೆ
3. ಸಂಘಟನೆಗೆ ಶಸ್ತ್ರಾಸ್ತ್ರ ಖರೀದಿ
ಮೂವರು ಸ್ನೇಹಿತರು ವಶಕ್ಕೆ
ನೇತ್ರ ವೈದ್ಯ ಡಾ. ಅಬ್ದುರ್ ರೆಹಮಾನ್ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಬೆಂಗಳೂರಿನ ಮೂವರನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಐಸಿಸ್ ಕೃತ್ಯದಲ್ಲಿ ಈ ಮೂವರು ಭಾಗಿಯಾಗಿರುವ ಸಾಧ್ಯತೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
