ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ ವೈಟ್​ಫೀಲ್ಡ್ ಸಮೀಪದ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭೂಗತರಾಗಿದ್ದ ಇಬ್ಬರು ಮೋಸ್ಟ್ ವಾಂಟೆಡ್ ಶಂಕಿತ ಉಗ್ರರನ್ನು ಕೊನೆಗೂ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಂಧಿಸಿದೆ. ನಕಲಿ ದಾಖಲೆ ಸೃಷ್ಟಿಸಿಕೊಂಡು 48 ದಿನಗಳ ಕಾಲ ತಲೆಮರೆಸಿಕೊಂಡು ಓಡಾಡುತ್ತಿದ್ದ ಬಾಂಬರ್​ಗಳು ಪಶ್ಚಿಮ ಬಂಗಾಳದಲ್ಲಿ ಸಿಕ್ಕಿಬಿದ್ದಿದ್ದಾರೆ.
ಮುಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತೀನ್ ತಾಹಾ ಬಂಧಿತರು. ಶುಕ್ರವಾರ ಮುಂಜಾನೆ ಕೋಲ್ಕತಾದ ಹೋಟೆಲ್​ನಲ್ಲಿ ಇವರನ್ನು ಬಂಧಿಸಿ, ನಂತರ ಪರಗಣ ಜಿಲ್ಲೆಯ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಾಲ ಟ್ರಾನ್ಸಿಟ್ ವಾರಂಟ್ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಇದರೊಂದಿಗೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಈ ಮೊದಲು ಲಾಜಿಸ್ಟಿಕ್ ನೆರವು ನೀಡಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಕಳಸದ ಮುಜಾಮಿಲ್ ಷರೀಫ್ ಮತ್ತು ಹಳೇ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮುಸಾವಿರ್​ನ ಸಹಚರ ಮಾಝು ಮುನೀರ್ ಅಹ್ಮದ್​ನನ್ನು ಎನ್​ಐಎ ಬಂಧಿಸಿತ್ತು. ಈಗ ಕೆಫೆಗೆ ಬಾಂಬ್ ಇಟ್ಟಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾವಿರ್ ಹುಸೇನ್ ಶಾಜಿದ್ ಮತ್ತು ಸಂಚುಕೋರ ಅಬ್ದುಲ್ ಮತೀನ್ ತಾಹಾ ಎನ್​ಐಎ ಬಲೆಗೆ ಬಿದ್ದಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ತಲೆಗೆ ಧರಿಸಿದ್ದ ಕ್ಯಾಪ್​ನ ಬೆನ್ನತ್ತಿ ಆರೋಪಿಗಳನ್ನು ಸೆರೆಹಿಡಿದಿರುವ ಎನ್​ಐಎ ಕಾರ್ಯಾಚರಣೆ ನಿಜಕ್ಕೂ ರೋಚಕವಾಗಿದೆ.
ನಿದ್ರೆಯಲ್ಲಿದ್ದಾಗಲೇ ಆಪರೇಷನ್ :ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶಕ್ಕೆ ತೆರಳಲು ಶಂಕಿತರು ಸಂಚು ರೂಪಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಎನ್​ಐಎ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿ ಹೋಟೆಲ್, ಲಾಡ್ಜ್ ಮತ್ತು ಪೇಯಿಂಗ್ ಗೆಸ್ಟ್​ಗಳ ಮೇಲೆ ಗುಪ್ತಚರ ಇಲಾಖೆ ಸಹಾಯದಿಂದ ಹೆಚ್ಚಿನ ನಿಗಾ ವಹಿಸಿದ್ದರು. ಕೋಲ್ಕತ್ತಾ ಸಮೀಪದ ಮಿಡ್ನಾಪುರದ ಹೋಟೆಲ್​ನಲ್ಲಿ ನಕಲಿ ಹೆಸರು ಬಳಸಿ ಮುಸಾವಿರ್ ಮತ್ತು ಮತೀನ್ ತಾಹಾ ಉಳಿದುಕೊಂಡಿರುವ ಖಚಿತ ಮಾಹಿತಿ ಸಿಕ್ಕಿತ್ತು. ಎನ್​ಐಎ ತಂಡ ಸ್ಥಳೀಯ ಕಂಠಿ ಠಾಣೆ ಪೊಲೀಸರ ಸಹಾಯದಿಂದ ಮುಂಜಾನೆ 2.30ಕ್ಕೆ ದಾಳಿ ನಡೆಸಿ, ಗಾಢ ನಿದ್ರೆಯಲ್ಲಿದ್ದಾಗಲೇ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ನಕಲಿ ಹೆಸರು ತಲೆಗೆ ವಿಗ್, ಗಡ್ಡ!:ಶಂಕಿತ ಅಬ್ದುಲ್ ಮತೀನ್ ತಾಹಾ ವಿವಿಧೆಡೆ ಉಗ್ರ ಕೃತ್ಯವೆಸಗಿದ್ದ. ಬಳಿಕ ವಿಘ್ನೇಶ್ ಡಿ. ಅಲಿಯಾಸ್ ಸುಮಿತ್ ಎಂದು ಹೆಸರು ಬದಲಾಯಿಸಿಕೊಂಡು ಆಧಾರ್ ಮತ್ತು ಇನ್ನಿತರ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ಚೆನ್ನೈನಲ್ಲಿ ನೆಲೆಸಿದ್ದ. ತಲೆಗೆ ವಿಗ್ ಮತ್ತು ನಕಲಿ ಗಡ್ಡವನ್ನು ಅಂಟಿಸಿಕೊಂಡು ಓಡಾಡುತ್ತಿದ್ದ. ಮುಸಾವಿರ್ ಹುಸೇನ್ ಶಾಜಿಬ್ ಅಲಿಯಾಸ್ ಎಂ.ಡಿ. ಹುಸೇನ್ ಕೂಡ ಮಹಮ್ಮದ್ ಜುನೇದ್ ಸಾಯಿದ್ ಎಂಬ ನಕಲಿ ಹೆಸರಲ್ಲಿ ಡಿಎಲ್ ಇನ್ನಿತರ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದ. ಇವರು ಹಾಸ್ಟೆಲ್ ಅಥವಾ ಪೇಯಿಂಗ್ ಗೆಸ್ಟ್​ನಲ್ಲಿ ಮತ್ತು ಹೋಟೆಲ್, ಲಾಡ್ಜ್​ಗಳಲ್ಲಿ ಉಳಿದುಕೊಳ್ಳುತ್ತಿದ್ದರು.
ದಿಕ್ಕು ತಪ್ಪಿಸಲು ಬಸ್ ಪ್ರಯಾಣ:ವಿಮಾನ ಅಥವಾ ರೈಲುಗಳಲ್ಲಿ ಪ್ರಯಾಣಿಸಿದರೆ ಪೊಲೀಸರಿಗೆ ಸಿಕ್ಕಿಬೀಳಬಹುದು ಎಂದು ಎಚ್ಚರಿಕೆ ವಹಿಸಿದ್ದ ಶಂಕಿತರು, ಬಸ್​ಗಳಲ್ಲೇ ಪ್ರಯಾಣ ಮಾಡಿದ್ದಾರೆ. ಮಾ.1ರ ಮಧ್ಯಾಹ್ನ 11.35ಕ್ಕೆ ರಾಮೇಶ್ವರಂ ಕೆಫೆಗೆ ಬಂದಿದ್ದ ಮುಸಾವಿರ್ , 11.44ರವರೆಗೂ ಕೆಫೆಯಲ್ಲಿದ್ದು, ಐಇಡಿ ಇದ್ದ ಬ್ಯಾಗ್ ಇಟ್ಟು ಅಲ್ಲಿಂದ ಕಾಲ್ನಡಿಗೆಯಲ್ಲಿ ಹೊರಟು ಬಿಎಂಟಿಸಿ ಬಸ್ ಹತ್ತಿದ್ದ. 3 ಕಿ.ಮೀ ದೂರದಲ್ಲಿರುವ ಪ್ರಾರ್ಥನಾ ಮಂದಿರ ತಲುಪಿದ್ದ. ಅಲ್ಲಿ ಶರ್ಟ್ ತೆಗೆದು, ರೌಂಡ್ ನೆಕ್ ಟೀ ಶರ್ಟ್ ಧರಿಸಿಕೊಂಡು ಅಲ್ಲಿಯೇ ಟೋಪಿ ಬಿಟ್ಟು ಬಿಎಂಟಿಸಿ ಬಸ್​ನಲ್ಲಿ ಗೊರಗುಂಟೆಪಾಳ್ಯಕ್ಕೆ ತೆರಳಿದ್ದ. ಮತ್ತೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮುಸಾವಿರ್ ಮತ್ತು ತಾಹಾ ತುಮಕೂರು ತಲುಪಿ ಬಸ್​ಗಳನ್ನು ಬದಲಿಸಿಕೊಂಡು ಬಳ್ಳಾರಿ ಮೂಲಕ ಕಲಬುರಗಿಗೆ ಪ್ರಯಾಣಿಸಿದ್ದರು. ಅಲ್ಲಿಂದ ಆಂಧ್ರಪ್ರದೇಶದ ನೆಲ್ಲೂರು ತಲುಪಿದರು. ಆಂಧ್ರಪ್ರದೇಶದಿಂದ ಮುಸಾವಿರ್ ಒಡಿಶಾಗೆ ತೆರಳಿ ಕೋಲ್ಕತ್ತಾ ತಲುಪಿದ್ದ. ಅಬ್ದುಲ್ ಮತೀನ್ ತಾಹಾ ಪ್ರತ್ಯೇಕ ಮಾರ್ಗವಾಗಿ ತಮಿಳುನಾಡು ಮೂಲಕ ಕೋಲ್ಕತ್ತಾಗೆ ತೆರಳಿದ್ದ. ಇಬ್ಬರು ಸಂಪರ್ಕದಲ್ಲಿ ಇದ್ದುಕೊಂಡು ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದರು.
ಕ್ಯಾಪ್ ನೀಡಿದ ಸುಳಿವು:ಸಿಸಿ ಕ್ಯಾಮರಾ ದೃಶ್ಯಾವಳಿಗಳಲ್ಲಿದ್ದ ಶಂಕಿತನಿಗೂ ತಲೆಮರೆಸಿಕೊಂಡಿದ್ದ ಮುಸಾವಿರ್ ಭಾವಚಿತ್ರಕ್ಕೂ ತಾಳೆಯಾಗಿತ್ತು. ಅಲ್ಲದೆ ಕೆಫೆಗೆ ಬಾಂಬ್ ಇಡಲು ಬಂದಾಗ ಮುಸಾವಿರ್ ಧರಿಸಿದ್ದ ಕ್ಯಾಪ್ ಸಹ ಆತನ ಗುರುತು ಪತ್ತೆಗೆ ಮಹತ್ವದ ಸುಳಿವು ನೀಡಿತ್ತು. ಕ್ಯಾಪ್ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಚೆನ್ನೈ ನಗರದ ಮಾಲ್​ನಲ್ಲಿ ಖರೀದಿಸಿರುವುದು ಬೆಳಕಿಗೆ ಬಂದಿತ್ತು. ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಮುಸಾವಿರ್ ಮತ್ತು ಮತೀನ್ ಜೊತೆಯಲ್ಲಿ ಇರುವುದು ಖಚಿತವಾಗಿತ್ತು. ಇದಕ್ಕೂ ಮೊದಲು ವಿದೇಶದಲ್ಲಿ ಅಡಗಿಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆಗಳು ಊಹಿಸಿದ್ದವು. ಕೆಫೆ ಕೃತ್ಯದಲ್ಲಿ ಈ ಇಬ್ಬರ ಪಾತ್ರ ಖಚಿತವಾದ ಬಳಿಕ ಎನ್​ಐಎ, ಶಂಕಿತರ ಸುಳಿವು ನೀಡಿದರೆ 10 ಲಕ್ಷ ರೂ. ಬಹುಮಾನ ಘೊಷಿಸಿತ್ತು.
ಗುರುತು ಪತ್ತೆಯಾಗಿದ್ದು ಹೇಗೆ? :ಪ್ರತಿಯೊಂದು ಹಂತದಲ್ಲಿಯೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಮೊದಲು ಮುಸಾವಿರ್ ಗುರುತು ಪತ್ತೆಹಚ್ಚಿದ್ದರು. ಪ್ರಾರ್ಥನಾ ಮಂದಿರಲ್ಲಿ ಸಿಕ್ಕ ಕ್ಯಾಪ್​ನ ಜಾಡು ಹಿಡಿದಾಗ ಜನವರಿಯಲ್ಲಿ ಚೆನ್ನೈನ ಮಾಲ್​ನಲ್ಲಿ ಖರೀದಿಸಿರುವುದು ತಿಳಿದಿತ್ತು. ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಇಬ್ಬರು ಜತೆಯಲ್ಲಿರುವುದು ಕಂಡಿತ್ತು. ಹೀಗಾಗಿ ಇವರು ಕೆಫೆ ಸ್ಪೋಟಕ್ಕೆ ಮಾಸ್ಟರ್​ವೆುೖಂಡ್​ಗಳು ಎಂಬುದು ದೃಢವಾಗಿತ್ತು. ಇದರ ಸುಳಿವಿನ ಮೇರೆಗೆ ಕರ್ನಾಟಕ, ಕೇರಳ, ಉತ್ತರಪ್ರದೇಶ ಮತ್ತು ತಮಿಳುನಾಡು ಸೇರಿ 18 ಸ್ಥಳಗಳಲ್ಲಿ ಶಿವಮೊಗ್ಗ ಮಾದರಿ ಐಸಿಸ್ ಸಂಪರ್ಕದಲ್ಲಿ ಶಂಕಿತರ ಮನೆಗಳ ಮೇಲೆ ಎನ್​ಐಎ ದಾಳಿ ನಡೆಸಿತ್ತು. ಚಿಕ್ಕಮಗಳೂರು ಜಿಲ್ಲೆ ಕಳಸದ ಮುಸಾವೀಲ್ ಷರೀಫ್​ನನ್ನು ಬಂಧಿಸಿದ್ದರು. ತೀವ್ರ ವಿಚಾರಣೆ ನಡೆಸಿದಾಗ ಸಿಮ್ ಕಾರ್ಡ್ ಮತ್ತು ಸ್ಪೋಟಕ ವಸ್ತುಗಳ ಸರಬರಾಜು ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದೇ ವೇಳೆ ಶಿವಮೊಗ್ಗ ಮಾದರಿ ಐಸಿಸ್ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ ಮಾಝು ಮುನೀರ್ ಕೊಠಡಿ ಮೇಲೆ ಎನ್​ಐಎ ದಾಳಿ ನಡೆಸಿದಾಗ ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್​ಗಳು ಪತ್ತೆಯಾಗಿದ್ದವು. ಅಲ್ಲದೆ, ಮುಸಾವೀಲ್ ಮತ್ತು ತಾಹಾ ಬಳಸುತ್ತಿದ್ದ ಕೋಡ್ ವರ್ಡ್​ಗಳ ಮಾಹಿತಿಯನ್ನೂ ಕಲೆ ಹಾಕಿದ್ದರು.
ಎಐಸಿಸಿ ಅಧ್ಯಕ್ಷ ಖರ್ಗೆ ಅಳಿಯ ಕಲಬುರಗಿ ಕಾಂಗ್ರೆಸ್ ಅಭ್ಯರ್ಥಿ ‘ರಾಧಾಕೃಷ್ಣ ದೊಡ್ಡಮನಿ’ ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
