ನಾಥ ಸಂಪ್ರದಾಯದ ಅತ್ಯಂತ ಪ್ರಸಿದ್ಧ ಶ್ರದ್ಧಾಕೇಂದ್ರವಾಗಿರುವ ಆದಿಚುಂಚನಗಿರಿ ಮಠದ ಉರಿ ಗದ್ದುಗೆಯು ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಬೆಳಕು ನೀಡುತ್ತದೆ. ಶ್ರೀ ಮಠದ ಪೀಠಾಧ್ಯಕ್ಷರಾಗಿರುವ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಧಾರ್ವಿುಕ ಮತ್ತು ಆಧ್ಯಾತ್ಮಿಕ ಶಕ್ತಿಕೇಂದ್ರವಾಗಿ ರೂಪಿಸಿದ್ದಾರೆ.
| ಆನಂದಚಂದ್ರ
ದೇಶದ ಪ್ರತಿಷ್ಠಿತ ಧಾರ್ವಿುಕ ಕೇಂದ್ರ ಮತ್ತು ನಾಥ ಸಂಪ್ರದಾಯದ ಪ್ರಸಿದ್ಧ ಶ್ರದ್ಧಾಕೇಂದ್ರ ಎಂಬ ಖ್ಯಾತಿ ಪಡೆದಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕಳೆದ ಐವತ್ತು ವರ್ಷಗಳಲ್ಲಿ ಬೆಳೆದ ರೀತಿ ಆಸ್ತಿಕರಿಗೆ, ಶ್ರೀಮಠದ ಭಕ್ತರಿಗೆ ಪವಾಡಸದೃಶವಾಗಿ ಕಂಡಿದೆ. ಮಠದ ಶಿಷ್ಯರು ಅಪಾರವಾಗಿದ್ದರೂ, ಶ್ರೀಮಠದ ಇತಿಹಾಸ ಪುರಾಣ ಪ್ರಸಿದ್ಧವಾಗಿದ್ದರೂ ಕೆಲವು ದಶಕಗಳ ಹಿಂದೆ ಅದರ ಕೀರ್ತಿ, ಶಕ್ತಿ ಸೀಮಿತವಾಗಿತ್ತು ಮತ್ತು ಅದರ ಭೌತಿಕ ರೂಪ ಕೂಡ ಕಿರಿದಾಗಿತ್ತು. ಯಾವತ್ತು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಪ್ಪತ್ತೊಂದನೆಯ ಪೀಠಾಧ್ಯಕ್ಷರಾಗಿ ಜಗದ್ಗುರು ಡಾ. ಬಾಲಗಂಗಾಧರನಾಥ ಸ್ವಾಮೀಜಿ ಶ್ರೀಮಠಕ್ಕೆ ಪದಾರ್ಪಣೆ ಮಾಡಿದರೋ, ಅವರ ಹಸ್ತಗುಣ ಅದೇನು ಮೋಡಿ ಮಾಡಿತೋ ಕೆಲವೇ ವರ್ಷಗಳಲ್ಲಿ ಚುಂಚನಗಿರಿ ಕ್ಷೇತ್ರ ಅಧ್ಯಾತ್ಮ, ಅನ್ನ, ಆಶ್ರಯ, ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಕಂಡಿತು. ಈ ಭೌತಿಕ ಪ್ರಗತಿ ಮತ್ತು ಧಾರ್ವಿುಕ ಶಕ್ತಿ ಸಂಚಯದ ಹಿಂದೆ ಮಹಾಗುರುಗಳ ಅಪಾರ ಶ್ರಮ, ತ್ಯಾಗ, ಸಂಘಟನಾ ಸಾಮರ್ಥ್ಯ, ತಪಸ್ಸು ಕೆಲಸ ಮಾಡಿದೆ. ನೋಡನೋಡುತ್ತಲೇ ನೂರಾರು ಶಾಲಾಕಾಲೇಜುಗಳು, ವೈದ್ಯಕೀಯ ಮಹಾವಿದ್ಯಾಲಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ನರ್ಸಿಂಗ್-ಡಿಪ್ಲೊಮಾ- ಶಿಕ್ಷಣ ಮಹಾವಿದ್ಯಾಲಯಗಳು ಎದ್ದು ನಿಂತವು. ಸಾವಿರಾರು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ, ಆಶ್ರಯ, ಪ್ರಸಾದ ನೀಡಿ ಸನ್ಮಾರ್ಗದಲ್ಲಿ ಬೆಳೆಯಲು ಮಾರ್ಗದರ್ಶನ ಮಾಡಿದರು. ಅವರ ತಪೋಬಲದ ಫಲವಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದೇಶವಿದೇಶಗಳಲ್ಲಿ ಶಿಷ್ಯರು, ಭಕ್ತರು, ಶ್ರದ್ಧಾಳುಗಳನ್ನು ಹೊಂದಿತು; ಮಣ್ಣುಕಲ್ಲಿನ ಚುಂಚನಗಿರಿ ಚಿನ್ನದಗಿರಿ ಎಂದೇ ಖ್ಯಾತಿ ಪಡೆಯಿತು. ಇಂತಹ ಸಿದ್ಧಪುರುಷರಾಗಿದ್ದ ಭೈರವೈಕ್ಯ ಜಗದ್ಗುರು ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ವರ್ಷವಿದು. ಅವರ ಉತ್ತರಾಧಿಕಾರಿ ಮತ್ತು ಶ್ರೀಪೀಠಾಧ್ಯಕ್ಷರಾದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಹನ್ನೊಂದನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಫೆ.19ರಂದು ಆರಂಭವಾಗಿದ್ದು, ಫೆ.20ರಂದು ವಿಜ್ಞಾನ-ತಂತ್ರಜ್ಞಾನ ಕುರಿತು ವಿದ್ವತ್ಪೂರ್ಣ ಉಪನ್ಯಾಸಗಳು, ವಿಜ್ಞಾನ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ‘ವಿಜ್ಞಾತಂ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಲಿದೆ. ಈ ವರ್ಷದ ವಿಜ್ಞಾತಂ ಪ್ರಶಸ್ತಿಯನ್ನು ಇಸ್ರೋದ ಅಧ್ಯಕ್ಷರಾದ ಡಾ. ಎಸ್. ಸೋಮನಾಥ್ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ವಿಚಾರ ಮತ್ತು ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವ ಪ್ರಯತ್ನ ಈ ಲೇಖನ.
1997ರಲ್ಲಿ ಎಂ.ಟೆಕ್. ಪದವಿ ನಂತರ ಬಾಲ್ಯದಿಂದಲೂ ಇದ್ದ ಸಂನ್ಯಾಸದ ಹಂಬಲದಿಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿಷ್ಯರಾಗಿ, ಬಾಲಗಂಗಾಧರನಾಥ ಸ್ವಾಮೀಜಿಯವರ ಕೃಪೆಗೆ ಪಾತ್ರರಾಗಿ ದೀಕ್ಷೆ ಪಡೆದರು. ನಿರ್ಮಲಾನಂದನಾಥ ಸ್ವಾಮೀಜಿಯವರ ರೂಪದಲ್ಲಿ ಮರುಹುಟ್ಟು ಹೊಂದಿ ರಾಮನಗರದ ಅರ್ಚಕರಹಳ್ಳಿಯ ಅಂಧರಶಾಲೆಯ ನಿರ್ವಹಣೆ, ನಂತರ ಬಾನಂದೂರಿನ ಶಾಖಾಮಠದ ಉಸ್ತುವಾರಿ ವಹಿಸಿದ್ದ ಶ್ರೀಗಳು 1998ರಲ್ಲಿ ಚಿಕ್ಕಬಳ್ಳಾಪುರ ಶಾಖಾಮಠದ ಜವಾಬ್ದಾರಿ ವಹಿಸಿಕೊಂಡರು. ಆ ವೇಳೆಗೆ ಅಲ್ಲಿ ಶಾಖಾಮಠದ ಜೊತೆಗೆ ತಾಂತ್ರಿಕ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿತ್ತು. ಸ್ವಾಮೀಜಿ ಯಾವ ಅಮೃತಗಳಿಗೆಯಲ್ಲಿ ಅಲ್ಲಿಗೆ ಪ್ರವೇಶ ಮಾಡಿದರೊ ಅಲ್ಲಿ ಅಭಿವೃದ್ಧಿ ಪರ್ವವೇ ಶುರುವಾಯಿತು. ಮಾಲೂರು, ಗೌರಿಬಿದನೂರು, ಶಿಡ್ಲಘಟ್ಟ, ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಪೂರ್ವದಿಂದ ಹಿಡಿದು ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಸುಸಜ್ಜಿತ ಕಟ್ಟಡದಲ್ಲಿ ಎಲ್ಲ ರೀತಿಯ ಮೂಲಸೌಕರ್ಯ ಮತ್ತು ಶೈಕ್ಷಣಿಕ ಅಗತ್ಯಗಳೊಂದಿಗೆ ತಲೆಯೆತ್ತಿ ನಿಂತವು.
ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಈಗ ತಾಂತ್ರಿಕ ಮಹಾವಿದ್ಯಾಲಯ ಇರುವ ಆವರಣದ ಎದುರು ಒಂದು ಚಿಕ್ಕ ಕಲ್ಲಿನ ಮಂಟಪವೇ ಆ ಕಾಲಕ್ಕೆ ವೀರಾಂಜನೇಯಸ್ವಾಮಿಯ ಗುಡಿಯಾಗಿತ್ತು. ಸ್ವಾಮೀಜಿ ಪ್ರವಾಸ ಹೊರಡುವ ಮುನ್ನ ಮತ್ತು ಹಿಂದಿರುಗಿದ ನಂತರ ಆಂಜನೇಯಸ್ವಾಮಿಗೆ ನಮಸ್ಕರಿಸಿ ಮುಂದಿನ ಕಾರ್ಯಕ್ಕೆ ತೆರಳುತ್ತಿದ್ದರು. ಈ ಗುಡಿಗೆ ಚಾರಿತ್ರಿಕ ಹಿನ್ನೆಲೆ ಕೂಡ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಮಾರ್ಗದಲ್ಲಿ ಹೋಗುವ ಸಂದರ್ಭದಲ್ಲಿ ವೀರಾಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದ್ದರಂತೆ. ಆ ಪುಟ್ಟ ಗುಡಿಯಿದ್ದ ಸ್ಥಳದಲ್ಲಿ ಸ್ವಾಮೀಜಿ ತಮ್ಮ ಸಂಕಲ್ಪಬಲ ಮತ್ತು ಭಕ್ತರ ಸಹಕಾರದಿಂದ ಬೃಹತ್ ದೇವಾಲಯ ಸಂಕೀರ್ಣವನ್ನು ನಿರ್ಮಾಣ ಮಾಡಿ ಅಲ್ಲಿ ಧಾರ್ವಿುಕ ಪರಿಸರವನ್ನು ಮೂಡಿಸಿದ್ದಾರೆ.
ಶ್ರೀಗಳ ಕಾರ್ಯಕ್ಷಮತೆ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾದೃಷ್ಟಿಗೆ ಬಿದ್ದು 2011ರಲ್ಲಿ ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಯಾಗಿ ನಿಯುಕ್ತರಾದರು. ಚಿಕ್ಕಬಳ್ಳಾಪುರ ಶಾಖಾಮಠದ ಉಸ್ತುವಾರಿಯ ಜೊತೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಯಾಗಿ ಎರಡೂ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದರು. ಅಲ್ಲದೆ, ಆದಿಚುಂಚನಗಿರಿಗೆ ಆಗಮಿಸುತ್ತಿದ್ದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯವನ್ನು ವಿಸ್ತರಿಸುವ ಮತ್ತು ಆಧುನೀಕರಿಸುವ ಕಾರ್ಯವನ್ನು ಪೂರ್ಣ ಗೊಳಿಸಿದರು. ಈ ವೇಳೆಗೆ ಬಾಲಗಂಗಾಧರನಾಥ ಸ್ವಾಮೀಜಿಯವರ ಆರೋಗ್ಯ ಕ್ಷೀಣಿಸಿತ್ತು ಮತ್ತು ಮುಂದಿನ ಪೀಠಾಧ್ಯಕ್ಷರು ಯಾರು ಎಂಬ ಚಿಂತನೆ ನಡೆದಾಗ ಶ್ರೀಗಳು ತಮ್ಮ ಸಂಕಲ್ಪ ಮತ್ತು ಇಚ್ಛೆಯಂತೆ ನಿರ್ಮಲಾನಂದನಾಥ ಸ್ವಾಮೀಜಿ ಹೆಸರನ್ನು ಉಯಿಲಿನಲ್ಲಿ ದಾಖಲಿಸಿದ ಅಲ್ಪಕಾಲದಲ್ಲಿಯೇ ಭೈರವೈಕ್ಯರಾದರು. ಶ್ರೀಗಳ ಉಯಿಲು ಮತ್ತು ಭಕ್ತರ ನಿರೀಕ್ಷೆಯಂತೆ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಪ್ಪತ್ತೆರಡನೆಯ ಪೀಠಾಧ್ಯಕ್ಷರಾಗಿ ಭಕ್ತಲೋಕದ ಮನಸ್ಸನ್ನು ಸೂರೆಗೊಂಡರು.
ಬೃಹತ್ ಮತ್ತು ಮಹತ್ ಎರಡೂ ರೀತಿಯಲ್ಲಿ ಬೆಳೆದಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸದೆ ಅದನ್ನು ವಿಸ್ತರಿಸುವ ಮತ್ತು ಉನ್ನತೀಕರಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಠವನ್ನು ಭೌತಿಕವಾಗಿ ಮಾತ್ರ ಅಭಿವೃದ್ಧಿ ಪಡಿಸದೆ ವಿಜ್ಞಾನ, ತಂತ್ರಜ್ಞಾನ ಮತ್ತು ಆಧುನಿಕತೆಯ ಸ್ಪರ್ಶ ನೀಡಿದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು ಶ್ರೀಮಠದೊಂದಿಗೆ ಬಾಂಧವ್ಯ ಹೊಂದುವಂತೆ ಮಾಡಿ ಎಲ್ಲರೂ ಇತ್ತ ತಿರುಗಿ ಬೆರಗಿನಿಂದ ಚುಂಚನಗಿರಿ ಶಿಖರವನ್ನು ತಲೆಯೆತ್ತಿ ನೋಡುವಂತೆ ಮಾಡಿದ ಶ್ರೇಯಸ್ಸು ಪೂಜ್ಯರದು. ಈ ಸತ್ಕಾರ್ಯದಲ್ಲಿ ಶ್ರೀಮಠದ ಎಲ್ಲ ಶಾಖಾಮಠಗಳ ಸ್ವಾಮೀಜಿಗಳ ಪೂರ್ಣ ಸಹಕಾರ, ದುಡಿಮೆಯೂ ಇದೆ; ಭಕ್ತಿ, ತ್ಯಾಗ, ಧಾರ್ವಿುಕ ಶ್ರದ್ಧೆಯನ್ನು ಧಾರೆಯೆರೆದ ಭಕ್ತರೂ ಇದ್ದಾರೆ.
ಇಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಐದು ನೂರಕ್ಕೂ ಹೆಚ್ಚು ವಿವಿಧ ರೀತಿಯ ಶಿಕ್ಷಣ ನೀಡುವ ಶಾಲಾ, ಕಾಲೇಜುಗಳನ್ನು ಹೊಂದಿದ್ದು ಅದರಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಮೂರು ವೈದ್ಯಕೀಯ ಮಹಾವಿದ್ಯಾಲಯಗಳು, ಐದು ತಾಂತ್ರಿಕ ವಿದ್ಯಾಲಯಗಳು, ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳು, ಅಂಧರ ಶಾಲೆ, ವೃದ್ಧಾಶ್ರಮ, ಗೋಶಾಲೆ, ವೇದ-ಸಂಸ್ಕೃತ ಶಿಕ್ಷಣ ನೀಡುವ ಗುರುಕುಲ, ದುರ್ಬಲ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪ್ರಸಾದನಿಲಯಗಳು, ದುಡಿಯುವ ಮಹಿಳೆಯರ ಹಾಸ್ಟೆಲ್, ವಿದ್ಯಾರ್ಥಿನಿಯರ ಹಾಸ್ಟೆಲ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ಶಿಕ್ಷಣ ನೀಡಲು ಪ್ರತ್ಯೇಕ ತಪಸ್ ಶಾಲೆ, ಯುಪಿಎಸ್​ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವವರಿಗೆ ದೆಹಲಿಯಲ್ಲಿ ಆಶ್ರಯ- ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ನವೀನ ಮಾದರಿಯ ಪ್ರಯೋಗಗಳು ನಡೆಯುತ್ತಿವೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ನೊಯ್ಡಾದಲ್ಲಿ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿ ನಿಂತಿವೆ. ಜೊತೆಗೆ ಹಲವಾರು ಶಾಖಾಮಠಗಳು ಕರ್ನಾಟಕ, ತಮಿಳುನಾಡು, ನವದೆಹಲಿ, ಕಾಶಿ, ನೈಮಿಷಾರಣ್ಯ, ಚಿತ್ರಕೂಟ, ಅಯೋಧ್ಯೆ ಮತ್ತು ಅಮೆರಿಕದ ನ್ಯೂಜೆರ್ಸಿಯಲ್ಲಿವೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜೊತೆಗೆ ವ್ಯಕ್ತಿತ್ವ ವಿಕಸನ ಹೊಂದಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ತರಬೇತಿ ನೀಡಲಾಗುತ್ತಿದೆ. ಸಂಗೀತ, ವಾದ್ಯ, ಅಭಿನಯದಲ್ಲಿ ಆಸಕ್ತಿ ಇರುವವರನ್ನು ಗುರುತಿಸಿ ಸಮರ್ಥರಿಂದ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ನಿರ್ಮಲಾನಂದನಾಥ ಸ್ವಾಮೀಜಿ ಶ್ರೀಮಠದ ಪೀಠಾಧ್ಯಕ್ಷರಾದ ನಂತರ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ ತಾಲ್ಲೂಕಿನಲ್ಲಿ ಶಾಲೆ ಮತ್ತು ಸಮುದಾಯ ಭವನ ನಿರ್ವಣ, ಮೈಸೂರಿನಲ್ಲಿ ಶಾಖಾಮಠ ನಿರ್ವಣ, ಮಾಯಸಂದ್ರದಲ್ಲಿ ಕಾಲೇಜ್ ಕ್ಯಾಂಪಸ್, ಬೆಂಗಳೂರಿನ ಮಹಾಲಕ್ಷ್ಮಿಪುರಂನಲ್ಲಿ ಹೊಸ ತಾಂತ್ರಿಕ ವಿದ್ಯಾಲಯ ಸ್ಥಾಪನೆಯಾಗಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ಗಂಗಾಧರೇಶ್ವರ, ಕಾಲಭೈರವ ಮತ್ತು ಆಂಜನೇಯ ಸ್ವಾಮಿ ದೇವರ ಬೃಹತ್ ದೇವಾಲಯ ಸಂಕೀರ್ಣ ನಿರ್ವಣಗೊಳ್ಳುತ್ತಿದೆ. ಅಷ್ಟೇ ಅಲ್ಲ, ಬಿ.ಜಿ.ನಗರದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯನ್ನು ನೂರಾ ಐವತ್ತು ಹಾಸಿಗೆಗಳಿಂದ ಮುನ್ನೂರು ಹಾಸಿಗೆಗಳಿಗೆ ಉನ್ನತೀಕರಿಸಿ ಗ್ರಾಮೀಣ ಪ್ರದೇಶದ ಜನರಿಗೆ ಕಡಿಮೆ ಖರ್ಚಿನಲ್ಲಿ ಕ್ಯಾನ್ಸರ್, ಹೃದ್ರೋಗ, ಕಿಡ್ನಿ ಕಸಿ, ಚರ್ಮರೋಗ, ಹೆರಿಗೆ ಮತ್ತು ಮೂಳೆಗೆ ಸಂಬಂಧಿಸಿದ ಕಾಯಿಲೆಗೆ ಉತ್ತಮ ಚಿಕಿತ್ಸೆ ನೀಡಲು ಅತ್ಯಾಧುನಿಕ ಯಂತ್ರಗಳಿಂದ ಸಜ್ಜುಗೊಳಿಸಲಾಗಿದೆ ಹಾಗೂ ಆಸ್ಪತ್ರೆಯ ಕಟ್ಟಡವನ್ನು ಎರಡು ಪಟ್ಟು ವಿಸ್ತರಿಸಲಾಗಿದೆ.
ಕರೊನಾ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ಸಂದರ್ಭ, ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನೂರಾರು ಕರೊನಾ ರೋಗಿಗಳು ನಿತ್ಯ ದಾಖಲಾಗುತ್ತಿದ್ದರು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ಸ್ವಾಮೀಜಿ ಕರೊನಾ ರೋಗಿಗಳ ವಾರ್ಡ್​ಗೆ ಖುದ್ದಾಗಿ ಭೇಟಿ ನೀಡಿ, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು, ಯೋಗಕ್ಷೇಮದ ಹೊಣೆಹೊತ್ತಿದ್ದು ಅವರ ಜೀವಪರ ಕಾಳಜಿಗೆ ನಿದರ್ಶನ. ತಮಿಳುನಾಡು, ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಜನರು ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದವರ ನೆರವಿಗೆ ಧಾವಿಸಿದ ಸ್ವಾಮೀಜಿ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಸಂತ್ರಸ್ತರಿಗೆ ಅಗತ್ಯವಾದ ಆಹಾರ ಸಾಮಗ್ರಿಗಳು, ಬಟ್ಟೆ, ವೈದ್ಯಕೀಯ ಸೌಲಭ್ಯ ಕಲ್ಪಿಸಿದರು. ಅಸ್ಸಾಂ ಮತ್ತು ಒಡಿಶಾ ರಾಜ್ಯಗಳಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಪಾಲಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಶ್ರೀಮಠದಲ್ಲಿ ಆಶ್ರಯ ಒದಗಿಸಿದರು.
ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಅಧ್ಯಾತ್ಮ, ಅನ್ನದಾಸೋಹದ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ನಿರ್ಮಲಾನಂದನಾಥ ಸ್ವಾಮೀಜಿ ಅಖಿಲ ಭಾರತ ಹಿಂದೂ ಆಚಾರ್ಯ ಮಹಾಸಭೆಯ ಸಂಚಾಲಕರೂ ಹೌದು. ಸ್ವಾಮೀಜಿಯವರು ಅಬುದಾಬಿಯಲ್ಲಿ ನಿರ್ವಣಗೊಂಡಿರುವ ಬೃಹತ್ ಸ್ವಾಮಿನಾರಾಯಣ ದೇವಾಲಯದ ಉದ್ಘಾಟನೆಗೆ ಕರ್ನಾಟಕದಿಂದ ಆಹ್ವಾನಿತರಾದ ಏಕಮಾತ್ರ ಪೀಠಾಧಿಪತಿಗಳು. ಬಾಲಗಂಗಾಧರನಾಥ ಸ್ವಾಮೀಜಿ ಆದಿಚುಂಚನಗಿರಿಯನ್ನು ಚಿನ್ನದಗಿರಿಯಾಗಿಸಿದರು, ಅವರ ಉತ್ತರಾಧಿಕಾರಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಚಿನ್ನದಗಿರಿಗೆ ಕಂಪು ನೀಡಿ ಅದರ ಪ್ರಭೆ ಮತ್ತು ಪರಿಮಳವನ್ನು ಆಸ್ತಿಕರು ಆನಂದಿಸುವಂತೆ ಮಾಡಿದರು. ಇಂತಹ ಪೂಜ್ಯ ಸ್ವಾಮೀಜಿ ನೂರ್ಕಾಲ ಶ್ರೀಮಠವನ್ನು ಮುನ್ನಡೆಸುತ್ತಿರಲಿ ಎಂಬುದು ಭಕ್ತರ ಹಂಬಲವಾಗಿದೆ.
ನೀನು ಯಾವ… ನಟ ದರ್ಶನ್ ಆಡಿದ ಆ ಒಂದು ಮಾತಿಗೆ​ ಕೆರಳಿ ಕೆಂಡವಾದ ಅಹೋರಾತ್ರ, ಅಶ್ಲೀಲ ಪದ ಬಳಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 3 =
Remember me
