ಶಿವಾನಂದ ತಗಡೂರು ಬೆಂಗಳೂರುಬಿಜೆಪಿಯಲ್ಲಿ ನಾನಾ ಕಾರಣಗಳಿಗಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವವರು ಒಂದೆಡೆಯಾದರೆ, ಆಂತರಿಕ ವೈಮನಸ್ಸು ಮತ್ತು ಮುಸುಕಿನ ಗುದ್ದಾಟ ಮಾಡುತ್ತಿರುವವರು ಮತ್ತೊಂದು ಕಡೆ. ಇವರೆಲ್ಲರಿಗೂ ಕಡಿವಾಣ ಹಾಕುವುದಾಗಿ ಹೇಳಿದ್ದ ಹೈಕಮಾಂಡ್ ನಿರ್ಲಕ್ಷ್ಯವಹಿಸಿ ದಿನ ದೂಡುತ್ತಿದೆ.
ಮುಡಾ ಮತ್ತು ವಾಲ್ಮೀಕಿ ಹಗರಣಗಳನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಹೋರಾಟ ಮಾಡಿದ್ದಲ್ಲದೆ, ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರೂ, ತಮ್ಮದೇ ಪಕ್ಷದ ಕೆಲ ಮುಖಂಡರ ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಬುದ್ದಿ ಹೇಳಬೇಕಾದ ಹೈಕಮಾಂಡ್ ಮೌನವಾಗಿಯೇ ಎಲ್ಲವನ್ನು ಸಹಿಸಿಕೊಳ್ಳುವ ಮೂಲಕ ಅಶಿಸ್ತಿಗೂ ಪರೋಕ್ಷವಾಗಿ ಬೆಂಬಲ ನೀಡಿದೆ ಎಂಬುದು ಪಕ್ಷದ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.
ಶಾಸಕರಾದ ಬಸನಗೌಡ ಯತ್ನಾಳ್, ರಮೇಶ್ ಜಾರಕಿಹೊಳಿ, ಯೋಗೇಶ್ವರ್, ಬಿ.ಪಿ.ಹರೀಶ್ ಸೇರಿ ಮಾಜಿ ಶಾಸಕರ ಜತೆಗೆ ಪ್ರತ್ಯೇಕ ಸಭೆಗಳನ್ನು ಮಾಡಿ ಪರ್ಯಾಯವಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರೂ, ಹೀಗೇಕೆ ಮಾಡಿದಿರಿ? ಎಂದು ಕನಿಷ್ಠ ಒಂದು ನೋಟಿಸ್ ಕೊಡುವ ಕೆಲಸವನ್ನು ಹೈಕಮಾಂಡ್ ಮಾಡಲಿಲ್ಲ. ಪಕ್ಷ ಕಟ್ಟುವವರನ್ನೇ ಸದಾ ಟೀಕೆ ಮಾಡುತ್ತಿರುವುದರಿಂದ ಕಾರ್ಯಕರ್ತರು ಮತ್ತು ಮುಖಂಡರು ಮುಜುಗರ ಅನುಭವಿಸುವಂತಾಗಿದೆ. ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರೂ ವರಿಷ್ಠರ ಗಮನಕ್ಕೆ ತಂದರೂ ಕ್ರಮ ಆಗಿಲ್ಲ. ಆ ಕಾರಣಕ್ಕಾಗಿಯೇ ಅವರೂ ಮೌನಕ್ಕೆ ಜಾರಿದ್ದಾರೆ ಎಂಬ ಅಭಿಪ್ರಾಯಗಳು ಪಕ್ಷದೊಳಗಿವೆ.
ರಾಜ್ಯ ನಾಯಕತ್ವದ ಬಗ್ಗೆಯೇ ಟೀಕೆ ಮಾಡಿದ್ದನ್ನು ಸಹಿಸಿಕೊಳ್ಳುವುದು ಹೇಗೆ? ಹಾಗಾದರೆ ಹೈಕಮಾಂಡ್ ತೀರ್ವನಿಸಿ ಜವಾಬ್ದಾರಿ ವಹಿಸಿರುವುದು ಈ ಟೀಕಾಕಾರರಿಗೆ ನೆಪ ಮಾತ್ರವೇ? ಇವರಿಗೆ ಜವಾಬ್ದಾರಿ ಇಲ್ಲವೆ? ಇವರು ಪಕ್ಷದ ಚೌಕಟ್ಟಿನಲ್ಲಿ ಶಿಸ್ತಿನ ಕ್ರಮಕ್ಕೆ ಅರ್ಹರಲ್ಲವೇ? ಹೋಗಲಿ, ಅವರು ಮಾಡುತ್ತಿರುವುದು ಸರಿ. ನೀವು ಸರಿಯಿಲ್ಲ ಎಂದಾದರೂ ಹೇಳಿದರೆ ನಾವೂ ಪಕ್ಷಕ್ಕಾಗಿ ರಿಸ್ಕ್ ತೆಗೆದುಕೊಳ್ಳುವುದು ತಪು್ಪತ್ತದೆ. ಅವರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಿಸಿ ನೋಡಲಿ. ಹೀಗೆ ಬಿಟ್ಟರೆ, ಪಕ್ಷಕ್ಕಾಗುವ ಡ್ಯಾಮೇಜ್ ಕಂಟ್ರೋಲ್ ಮಾಡುವವರು ಯಾರು? ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.
ವಿಧಾನಸಭೆ ಚುನಾವಣೆ ಹಿನ್ನೆಡೆ ಕಹಿ ಘಟನೆಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎಂಬ ಸಂದೇಶ ನೀಡಿ, ಯುವ ನಾಯಕ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಅಧ್ಯಕ್ಷ ಪಕ್ಷ ಕಟ್ಟಿದ ಮೇಲೆ ಎಲ್ಲವೂ ತಹಬದಿಗೆ ಬರಲಿದೆ ಎಂದು ಹೈಕಮಾಂಡ್ ನಿರೀಕ್ಷಿಸಿತ್ತು. ಈ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಜಯೇಂದ್ರ ಬಿರುಸಿನ ಹೆಜ್ಜೆ ಇಟ್ಟರು. ರಾಜ್ಯಾದ್ಯಂತ ಪ್ರವಾಸ ಮಾಡಿ ಹಲವು ಹೋರಾಟ ರೂಪಿಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ಸೇರಿ ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರ ವಿರುದ್ಧವೇ ಟೀಕೆ ಮಾಡಿ ಕಾಂಗ್ರೆಸ್​ನವರನ್ನು ಖುಷಿಪಡಿಸುವುದು, ವಿಧಾನಸಭೆಯಲ್ಲಿ ಸ್ವಪಕ್ಷದ ನಾಯಕರ ವಿರುದ್ಧವೇ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸಿಗರ ಎದುರು ಪಕ್ಷವನ್ನು ನಗೆಪಾಟಲಿಗೀಡು ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೂ ಗಮನಕ್ಕೆ ತಂದಿದ್ದೇವೆ. ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದನ್ನು ಬಿಟ್ಟರೆ ಏನೂ ಆಗಲಿಲ್ಲ ಎಂದು ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಸ್ತಿನ ಪಕ್ಷದೊಳಗೆ ಅಶಿಸ್ತು ಮನೆ ಮಾಡಿದೆ. ವಿಧಾನಸಭೆ, ಲೋಕಸಭೆ ಚುನಾವಣೆಯಿಂದ ಹಿಡಿದು ಈ ತನಕ ಸ್ವಪಕ್ಷೀಯರ ಟೀಕೆಯಿಂದಲೇ ಪಕ್ಷ ಮುಜುಗರ ಅನುಭವಿಸುತ್ತಿದೆ. ಈ ಬಗ್ಗೆ ಹೈಕಮಾಂಡ್ ಗಂಭೀರ ಕ್ರಮ ಕೈಗೊಳ್ಳುವುದು ಸೂಕ್ತ.
| ಹೆಸರು ಹೇಳಿಕೊಳ್ಳದ ಬಿಜೆಪಿ ಕಾರ್ಯಕರ್ತರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
