ಬೆಂಗಳೂರು:ಕರೊನಾ ಸೋಂಕಿನ ಕಷ್ಟ ಕಾಲದಲ್ಲಿ ಸಾರಿಗೆ ನೌಕರರು ವೇತನವಿಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗುತ್ತಿದೆ. ಮುಷ್ಕರದಲ್ಲಿ ಪಾಲ್ಗೊಂಡ ನೌಕರರಿಗೆ ಏಪ್ರಿಲ್ ತಿಂಗಳ 10 ದಿನದ ವೇತನ ಮಾತ್ರ ದೊರೆಯುವ ಸಾಧ್ಯತೆಯಿದೆ.
6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಏ.7ರಿಂದ 21ರವರೆಗೆ ಮುಷ್ಕರ ನಡೆಸಿದ್ದರು. 60 ಸಾವಿರಕ್ಕೂ ಹೆಚ್ಚಿನ ನೌಕರರು ಮುಷ್ಕರದಲ್ಲಿ ಪಾಲ್ಗೊಂಡು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಹದಗೆಡುವಂತೆ ಮಾಡಿದ್ದರು. ಹೀಗೆ ಕೆಲಸಕ್ಕೆ ಹಾಜರಾಗದ ನೌಕರರಿಗೆ ವೇತನ ನೀಡುವುದಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ತಿಳಿಸಿದ್ದವು. ಅದರಂತೆ ಮುಷ್ಕರದ ನಡುವೆಯೂ ಕೆಲಸಕ್ಕೆ ಹಾಜರಾಗಿ ಬಸ್ ಸೇವೆ ನೀಡಿದ್ದ ನೌಕರರಿಗೆ ವೇತನ ಪಾವತಿ ಮಾಡಿ, ಉಳಿದವರಿಗೆ ವೇತನ ನೀಡದಿರಲು ನಿಗಮಗಳು ನಿರ್ಧರಿಸಿವೆ. ಜತೆಗೆ ಇದೀಗ ವಾರಾಂತ್ಯ ಕರ್ಫ್ಯೂ ಮತ್ತು ಜನತಾ ಕರ್ಫ್ಯೂ ಜಾರಿಯಾಗಿ ಸಾರಿಗೆ ಸೇವೆ ಸ್ತಬ್ಧವಾಗಿದೆ. ಹೀಗಾಗಿ ಸಾರಿಗೆ ನೌಕರರಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಸಾರಿಗೆ ನೌಕರರಿಗೆ ಏಪ್ರಿಲ್ ತಿಂಗಳ ವೇತನ ದೊರೆಯದ ಪರಿಸ್ಥಿತಿ ಎದುರಾಗಿದೆ.
10 ದಿನದ ವೇತನ: ಸಾರಿಗೆ ನೌಕರರು ಮುಷ್ಕರ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಮೊದಲ 6 ದಿನಗಳು ಕೆಲಸಕ್ಕೆ ಹಾಜರಾಗಿ ಆನಂತರ ಕರ್ತವ್ಯಕ್ಕೆ ಗೈರಾಗಿದ್ದರು. ಅದಾದ ನಂತರ ಏ.21ರಂದು ಮುಷ್ಕರ ಹಿಂಪಡೆದ ನಂತರ ಏ.22ರಿಂದ ಕೆಲಸಕ್ಕೆ ಹಾಜರಾಗಿದ್ದರು. ಆದರೆ, ಏ.24 ಮತ್ತು 25ರಂದು ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದ ಕಾರಣ ಪೂರ್ಣ ಪ್ರಮಾಣದಲ್ಲಿ ಬಸ್​ಗಳ ಸಂಚಾರ ಮಾಡಲಿಲ್ಲ. ಹಾಗೆಯೇ, ಏ.27ರ ರಾತ್ರಿ 9ರಿಂದ 14 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದ ಕಾರಣ, ಬಿಎಂಟಿಸಿಯ 150 ಬಸ್​ಗಳನ್ನು ಹೊರತುಪಡಿಸಿ ನಾಲ್ಕೂ ನಿಗಮಗಳ ಉಳಿದೆಲ್ಲ ಬಸ್​ಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸಾರಿಗೆ ನೌಕರರು ಏಪ್ರಿಲ್​ನಲ್ಲಿ 10 ದಿನ ಮಾತ್ರ ಕೆಲಸ ಮಾಡಿದ್ದಾರೆ. ಅಷ್ಟು ದಿನದ ವೇತನ ಮಾತ್ರ ನೌಕರರಿಗೆ ದೊರೆಯಲಿದೆ.
ಕರುಣೆ ತೋರುವುದು ಅನುಮಾನ: 2020ರಲ್ಲಿ ಲಾಕ್​ಡೌನ್ ಸೇರಿ ಕರೊನಾ ಕಾರಣದಿಂದಾಗಿ 2 ತಿಂಗಳಿಗೂ ಹೆಚ್ಚಿನ ಅವಧಿ ಬಸ್ ಸಂಚಾರ ಮಾಡಿರಲಿಲ್ಲ. ಆದರೂ, ಸರ್ಕಾರದಿಂದ 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ವಿಶೇಷ ಅನುದಾನ ಪಡೆದು ನೌಕರರಿಗೆ ವೇತನ ಪಾವತಿಸಲಾಗಿತ್ತು. ಈ ಬಾರಿ ಮುಷ್ಕರದ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಮುಷ್ಕರ ಕೈಬಿಡುವಂತೆ ನೌಕರರಲ್ಲಿ ಮನವಿ ಮಾಡಿದ್ದರು. ಆದರೆ, ನೌಕರರು ಅದಕ್ಕೆ ಬಗ್ಗದೆ ಮುಂದುವರಿಸಿದ್ದರು. ಅದು ಸಿಎಂಗೆ ಬೇಸರ ತರಿಸಿದ್ದು, ಸಾರಿಗೆ ನೌಕರರ ವೇತನ ನೀಡುವುದಕ್ಕೆ ಸರ್ಕಾರದಿಂದ ನೆರವು ನೀಡುವುದು ಅನುಮಾನ ಎನ್ನಲಾಗುತ್ತಿದೆ.
ಕೆಲಸ ಕಳೆದುಕೊಂಡವರು ಅತಂತ್ರ
ಸಾರಿಗೆ ನೌಕರರಿಗೆ ವೇತನ ಸಿಗುವುದಿಲ್ಲ ಎಂಬ ಚಿಂತೆ ಒಂದೆಡೆಯಾದರೆ, ಮುಷ್ಕರದ ಸಂದರ್ಭದಲ್ಲಿ ವಜಾ ಮತ್ತು ಅಮಾನತಾದ ನೌಕರರಿಗೆ ಭವಿಷ್ಯದ ಚಿಂತೆ ಕಾಡತೊಡಗಿದೆ. ಸಾರಿಗೆ ನೌಕರರ ಬೇಡಿಕೆ ಕುರಿತು ಪ್ರಕರಣ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆಯಾದರೂ, ಕೆಲಸ ಕಳೆದುಕೊಂಡ ನೌಕರರಿಗೆ ಪರಿಹಾರ ಏನು ಎಂಬುದು ಹೈಕೋರ್ಟ್​ನಲ್ಲಿ ನಿರ್ಧಾರವಾಗಿಲ್ಲ. ಅದರ ನಡುವೆಯೇ ಜನತಾ ಕರ್ಫ್ಯೂ ಜಾರಿಯಾಗಿರುವ ಕಾರಣ, ಅವರ ಕೆಲಸ ಸದ್ಯಕ್ಕೆ ವಾಪಸ್ ಸಿಗುವುದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seventeen =
Remember me
