ಬೆಂಗಳೂರು:ಆಗಸ್ಟ್​ 20ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಲಿದ್ದು, ಕಳೆದ ವರ್ಷವಿದ್ದಷ್ಟೇ ಶುಲ್ಕ ಮತ್ತು ಸೀಟು ಹಂಚಿಕೆ ಅನುಪಾತವನ್ನು ಮುಂದುವರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಇಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌-ಕೆ, ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಸಂಘ ಹಾಗೂ ರಾಜ್ಯ ಮತೀಯ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಕೋವಿಡ್‌ ಮತ್ತು ನೆರೆ ಕಾರಣಕ್ಕೆ ಶುಲ್ಕ ಹೆಚ್ಚಳ ಮಾಡುತ್ತಿಲ್ಲ. ಜತೆಗೆ ಕಳೆದ ವರ್ಷದ ಸೀಟು ಹಂಚಿಕೆ ಪ್ರಮಾಣದಲ್ಲಿಯೇ ಈ ವರ್ಷ ಕೂಡ ಸೀಟು ಹಂಚಿಕೆ ಮಾಡುತ್ತಿದ್ದು, ಇದಕ್ಕೆ ಎಲ್ಲ ಸಂಘಗಳ ಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದರು ಎಂದು ಅವರು ತಿಳಿಸಿದರು.
ಇದನ್ನೂ ಓದಿ;ಇದು ಭಾರಿ ಭಯಾನಕ ಕರೊನಾ; ಈಗಿನದ್ದಕ್ಕಿಂತಲೂ ಹತ್ತು ಮಾರಕ…!
45:30:25 ಅನುಪಾತದಲ್ಲಿ ಹಂಚಿಕೆ:ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಈ ವರ್ಷ ಯಾವುದೇ ಬೇಡಿಕೆಯನ್ನು ಮುಂದಿಟ್ಟಿಲ್ಲ. ಸರ್ಕಾರದ ಪ್ರಸ್ತಾವನೆಯನ್ನೇ ಒಪ್ಪಿಕೊಂಡಿವೆ. ಶೇಕಡಾ 45:30:25ರ ಅನುಪಾತದಲ್ಲಿ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಇದರಲ್ಲಿ ಶೇ. 45ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಿದರೆ ಶೇ.30ರಷ್ಟು ಸೀಟುಗಳನ್ನು ಕಾಮೆಡ್‌-ಕೆಗೆ ಹಂಚಿಕೆ ಮಾಡಲಾಗುತ್ತಿದೆ. ಶೇ.25 ಸೀಟುಗಳನ್ನು ಅನಿವಾಸಿ ಭಾರತೀಯರು/ ಮ್ಯಾನೇಜ್‌ಮೆಂಟ್‌ ಕೋಟಾಗೆ ಮೀಸಲಿಡಲಾಗಿದೆ. ಇನ್ನು, ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕ್ರಮವಾಗಿ ಶೇಕಡಾ 40:30:30ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಶೇ.40 ಸೀಟುಗಳನ್ನು ಸರ್ಕಾರಕ್ಕೆ ಕೊಟ್ಟರೆ ಶೇ. 30 ಸೀಟುಗಳನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ. ಉಳಿದ ಶೇ.30 ಸೀಟುಗಳನ್ನು ಅನಿವಾಸಿ ಭಾರತೀಯರು/ ಮ್ಯಾನೇಜ್‌ಮೆಂಟ್‌ ಕೋಟಾಗೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಶುಲ್ಕದಲ್ಲೂ ಬದಲಾವಣೆ ಇಲ್ಲ:ಸಿಇಟಿ ವಿದ್ಯಾರ್ಥಿಗಳಿಗೆ ತಲಾ 65,360 ರೂ. ಹಾಗೂ ಕಾಮೆಡ್-ಕೆ ವಿದ್ಯಾರ್ಥಿಗಳಿಗೆ 1,43,748 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಇನ್ನೊಂದರಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ 58,806 ರೂ. ಹಾಗೂ ಕಾಮೆಡ್‌-ಕೆ ವಿದ್ಯಾರ್ಥಿಗಳಿಗೆ 2,01,960 ರೂ. ನಿಗದಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಆನ್‌ಲೈನ್‌ ಕೌನ್ಸೆಲಿಂಗ್:‌ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವರ್ಷ ಅಕ್ಟೋಬರ್ ಒಳಗೆ ಆನ್‌ಲೈನ್‌ ಕೌನ್ಸೆಲಿಂಗ್‌ ಮಾಡಲಾಗುವುದು. ವಿದ್ಯಾರ್ಥಿಗಳು ತಾವು ಇದ್ದ ಜಾಗದಿಂದಲೇ ಕೌನ್ಸೆಲಿಂಗ್‌ ಎದುರಿಸಬಹುದು. ಯಾರೂ ಬೆಂಗಳೂರಿನ ತನಕ ಬರುವ ಅಗತ್ಯವಿಲ್ಲ. ಕಾಲೇಜು ಆಯ್ಕೆ ಮಾಡಿಕೊಂಡ ಮೇಲೆ ಆಯಾ ಕಾಲೇಜಿಗೆ ತೆರಳಿ ನಿಗದಿತ ಅವಧಿಯೊಳಗೆ ಪ್ರವೇಶಾತಿ ಪಡೆಯಬೇಕು. ಎರಡು ರೌಂಡ್‌ ಕೌನ್ಸೆಲಿಂಗ್‌ ಮತ್ತು ಒಂದು ಬಾರಿ ವಿಸ್ತರಿತ ಕೌನ್ಸೆಲಿಂಗ್‌ ಇರುತ್ತದೆ. ಇದು ಬಿಟ್ಟು ಹೆಚ್ಚುವರಿ ಸುತ್ತಿನ ಕೌನ್ಸೆಲಿಂಗ್‌ ಈ ಬಾರಿ ನಡೆಸುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ;ಲಸಿಕೆಗಳ ಮೇಲಿನ ಭರವಸೆಯನ್ನೇ ಬುಡಮೇಲು ಮಾಡಲಿದೆ ಕರೊನಾ ವೈರಸ್​ನ ರೂಪಾಂತರ
ಕಾಲೇಜು ಆಡಳಿತ ಮಂಡಳಿಗಳು ಕೂಡ ಭರ್ತಿಯಾಗದ ಸೀಟುಗಳನ್ನು ನಿಗದಿತ ಅವಧಿಯೊಳಗೆ ಸಿಇಟಿಗೆ ವಾಪಸ್‌ ಮಾಡಬೇಕು. ಹಾಗೆ ಮಾಡಿದ 24 ಗಂಟೆಗಳಲ್ಲೇ ಸೀಟುಗಳನ್ನು ಮತ್ತೆ ಕಾಲೇಜುಗಳಿಗೇ ನೀಡಲಾಗುತ್ತದೆ. ಸೀಟ್‌ ಬ್ಲಾಕಿಂಗ್‌ ಗೆ ಅವಕಾಶ ಇಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಸಲಾಗುವುದು. ಈ ಬಾರಿಯ ಸಿಇಟಿ ಕೌನ್ಸೆಲಿಂಗ್‌ ನೀಟ್‌ ಮತ್ತು ಜೆಇಇ ಕೌನ್ಸೆಲಿಂಗ್‌ ನಂತರ ನಡೆಯಲಿದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಪಾಂಡುರಂಗ ಶೆಟ್ಟಿ, ಡಾ.ಹೇಮಚಂದ್ರ ಸಾಗರ್‌, ಸಿ.ಎಂ.ಲಿಂಗಪ್ಪ, ಶಫೀ ಅಹಮದ್‌ ಹಾಜರಿದ್ದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ, ವಿಟಿಯು ಕುಲಪತಿ ಕರಿಸಿದ್ದಪ್ಪ ಅವರು ಆನ್‌ಲೈನ್‌ ಮೂಲಕ ಸಭೆಗೆ ಹಾಜರಾಗಿದ್ದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ರಾಜಾ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ಸಭೆಯಲ್ಲಿದ್ದರು.
https://www.vijayavani.net/toilets-liquor-shops-built-atop-demolished-masjid-in-china/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
