ರಾಜ್ಯದಲ್ಲಿ ಉತ್ಪತ್ತಿಯಾಗುವ ತೆರಿಗೆಯಲ್ಲಿ ದೊಡ್ಡ ಪ್ರಮಾಣದ ಹಣವನ್ನು ತನ್ನ ಬೊಕ್ಕಸಕ್ಕೆ ಬಸಿದುಕೊಳ್ಳುತ್ತಿರುವ ಕೇಂದ್ರ ಸರ್ಕಾರ, ರಾಜ್ಯಕ್ಕೆ ನೀಡಬೇಕಾದ ಪಾಲು ನೀಡಲು ಸತಾಯಿಸುತ್ತಿದೆ. ಇದರಿಂದಾಗಿ ಬಜೆಟ್ ರೂಪಿಸಲು ಪರದಾಡಬೇಕಾದ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ.
ತೆರಿಗೆ ಸಂಗ್ರಹ ಮತ್ತು ಆದಾಯ ಗಳಿಕೆಯಲ್ಲಿ ತೀವ್ರ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಜಿಎಸ್​ಟಿ ಕೂಡ ಮಾರಕವಾಗಿದೆ. ಹಣಕಾಸು ಇಲಾಖೆ ಅಂದಾಜಿನ ಪ್ರಕಾರ, ಈ ವರ್ಷ 22 ಸಾವಿರ ಕೋಟಿ ರೂ. ಕೊರತೆ ಉಂಟಾಗುವ ಸಾಧ್ಯತೆಗಳಿವೆ.
ಜಿಎಸ್​ಟಿಯಲ್ಲಿ ಸಂಗ್ರಹವಾಗುವ ಹಣದಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡುವುದಲ್ಲದೆ, ಪ್ರೋತ್ಸಾಹ ರೂಪದಲ್ಲಿ ಹೆಚ್ಚುವರಿ ನೆರವು ನೀಡಬೇಕು. ಪ್ರೋತ್ಸಾಹದ ನೆರವಿರಲಿ, ತನ್ನ ಪಾಲಿನ ಕೋಟಾದಲ್ಲಿ ನೀಡಬೇಕಾಗಿರುವ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯಬೇಕಾದ ಪರಿಸ್ಥಿತಿ ರಾಜ್ಯಕ್ಕೆ ಬಂದೊದಗಿದೆ.
ರಾಜ್ಯ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಶೇ.51 ಲಭ್ಯವಾಗುತ್ತಿದ್ದರೆ, ಕೇಂದ್ರ ತೆರಿಗೆ ಪಾಲಿನಿಂದ ಶೇ.17 ಹಣ ರಾಜ್ಯಕ್ಕೆ ಬರುತ್ತಿದೆ. ಇದಲ್ಲದೆ, ಸಹಾಯಧನ ರೂಪದಲ್ಲಿ ಶೇ.6 ನೆರವು ರಾಜ್ಯಕ್ಕೆ ದಕ್ಕುತ್ತಿದೆ. ಇನ್ನುಳಿದ ಶೇ.21 ಸಾಲದಿಂದ ಸಿಗುತ್ತಿದೆ. ಜಿಎಸ್​ಟಿ ಸಂಗ್ರಹದಲ್ಲಿ ಈ ವರ್ಷ ರಾಜ್ಯಕ್ಕೆ 17 ಸಾವಿರ ಕೋಟಿ ರೂ. ಬರಬೇಕು. ಮಾರ್ಚ್ ಬಂದರೂ, ಇನ್ನು 6 ಸಾವಿರ ಕೋಟಿ ರೂ. ಬಾಕಿ ಬರುವುದಿದೆ.
ಆರ್ಥಿಕ ಸ್ಥಿತಿ ಗತಿ ನೋಡುವುದಾದರೆ, ಕಳೆದ ವರ್ಷ ಮಂಡಿಸಲಾಗಿದ್ದ 2.14 ಲಕ್ಷ ಕೋಟಿ ರೂ. ಬಜೆಟ್ ಗಾತ್ರವನ್ನು ಈ ಬಾರಿ ದಾಟುವುದು ಕಷ್ಟ ಎನ್ನುವ ಸ್ಥಿತಿ ಇದೆ. ಸಾಲ ಮಾಡಿಯಾದರೂ ಬಜೆಟ್ ಗಾತ್ರ ಉಳಿಸಿಕೊಳ್ಳಬೇಕು ಎಂಬ ಸಿಎಂ ಕಟ್ಟಾಜ್ಞೆ ಹಿನ್ನೆಲೆ ಹಣಕಾಸು ಇಲಾಖೆ ಸರ್ಕಸ್ ನಡೆಸುತ್ತಿದೆ. ಇನ್ನೊಂದೆಡೆ, ತೆರಿಗೆ ಸಂಗ್ರಹದಲ್ಲಿ ಸಾಕಷ್ಟು ಹಿನ್ನೆಡೆ ಅನುಭವಿಸಿರುವ ರಾಜ್ಯಕ್ಕೆ ಮಾರ್ಚ್ ತಿಂಗಳು ಬಂದರೂ ತೆರಿಗೆ ಸಂಗ್ರಹದಲ್ಲಿಯೂ 2 ಸಾವಿರ ಕೋಟಿ ರೂ. ಹಿನ್ನೆಡೆಯಾಗುವ ಸಾಧ್ಯತೆ ಇದೆ. ಮಾರ್ಚ್ ಹೊತ್ತಿಗೆ ಈ ತೆರಿಗೆ ಸಂಗ್ರಹ ಗಣನೀಯವಾಗಿ ಏರಿಕೆ ಆಗಬಲ್ಲದು ಎನ್ನುವ ನಿರೀಕ್ಷೆ ಇದ್ದರೂ, ಪೂರ್ಣ ಪ್ರಮಾಣದಲ್ಲಿ ಫಲಪ್ರಧವಾಗುವ ಲಕ್ಷಣಗಳಿಲ್ಲ. ಜಿಎಸ್​ಟಿ ಬಂದಮೇಲೆ ರಾಜ್ಯದ ತೆರಿಗೆ ಸಂಗ್ರಹದಲ್ಲಿಯೂ ಏರಿಳಿತಗಳು ಉಂಟಾಗಿರುವುದು ಸವಾಲಾಗಿದೆ.
ಆರ್ಥಿಕ ಶಿಸ್ತಿಗೆ ಶಿಕ್ಷೆ
ಉತ್ತಮ ಹಣಕಾಸು ನಿರ್ವಹಣೆ ತೋರಿದರೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ನೀಡಬೇಕಾಗಿತ್ತು. ಆದರೆ ರಾಜ್ಯದ ಮಟ್ಟಿಗೆ ಉಲ್ಟಾ ಆಗಿದೆ. ಅದೇ ಕಾರಣಕ್ಕೆ ರಾಜ್ಯಕ್ಕೆ ನೀಡಬೇಕಾದ ಪಾಲು ಕುಸಿದಿದೆ, ಇದರಿಂದ ಪ್ರತಿ ವರ್ಷ 10 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ ಆರ್ಥಿಕ ಶಿಸ್ತು ಕಾಪಾಡಿದ ಪರಿಣಾಮ 50 ಸಾವಿರ ಕೋಟಿ ರೂ. ಕಳೆದುಕೊಳ್ಳುತ್ತಿದೆ.
14ನೇ ಹಣಕಾಸು ಯೋಜನೆಯಲ್ಲಿ ರಾಜ್ಯದಿಂದ ಕೇಂದ್ರ ಸರ್ಕಾರ ಸಂಗ್ರಹಿಸಿದ ಒಟ್ಟು ತೆರಿಗೆ ಹಣದಲ್ಲಿ ಶೇ.4.5 ಮತ್ತೆ ರಾಜ್ಯಕ್ಕೆ ನೆರವಿನ ರೂಪದಲ್ಲಿ ನೀಡಲಾಗುತ್ತಿತ್ತು. ಆ ಕಾರಣಕ್ಕೆ ಹೆಚ್ಚಿನ ಅಭಿವೃದ್ಧಿ ಮತ್ತಿತರ ಕಾರ್ಯಕ್ರಮ ಕೈಗೊಳ್ಳಲು ಅನುಕೂಲವಾಗುತ್ತಿತ್ತು. ಈಗ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ದಕ್ಕಬೇಕಾದ ಪಾಲಿನ ಪ್ರಮಾಣ 3.65ಕ್ಕೆ ಕಡಿಮೆ ಮಾಡಲಾಗಿದೆ.
ತೆರಿಗೆ ಸಂಗ್ರಹ
ಬಜೆಟ್​ನಲ್ಲಿ ರಾಜ್ಯದಿಂದ 1.06 ಲಕ್ಷ ಕೋಟಿ ರೂ. ಸಂಗ್ರಹವಾದರೆ, ಕೇಂದ್ರದಿಂದ 36 ಸಾವಿರ ಕೋಟಿ ರೂ. ಬರುತ್ತದೆ. ತೆರಿಗೆಯೇತರ ರಾಜಸ್ವ 8 ಸಾವಿರ ಕೋಟಿ ರೂ. ಬರಲಿದೆ. ಈ ವರ್ಷ ರಾಜ್ಯದ ತೆರಿಗೆ ಪ್ರಮಾಣ ಏರಿಕೆ ಆಗುವುದು ಕಷ್ಟ ಎನ್ನುತ್ತಿದೆ ಹಣಕಾಸು ಇಲಾಖೆ. ತೆರಿಗೆ ಹಣ ಸರ್ಕಾರದ ಖಜಾನೆ ಸೇರದೆ ಹೋದರೆ, ನಾಡಿನ ಅಭಿವೃದ್ಧಿ ನಿರೀಕ್ಷೆ ಮಾಡುವುದಾದರೂ ಹೇಗೆ? 5 ಬಾರಿ ಬಜೆಟ್ ಮಂಡನೆ ಮಾಡಿರುವ ಸಿಎಂ ಬಿಎಸ್​ವೈ ಆರ್ಥಿಕ ಸಂಕಷ್ಟಗಳ ನಡುವೆ 6ನೇ ಬಜೆಟ್ ಯಾವ ರೀತಿ ಮಂಡನೆ ಮಾಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
ಕೇಂದ್ರದ ಸಹಾಯಧನ
ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಾನಾ ರೂಪದಲ್ಲಿ ಶೇ.6 ಸಹಾಯಧನ ಲಭ್ಯವಿದೆ. ಜನಸಂಖ್ಯೆಗೆ ಅನುಗುಣವಾಗಿ ಈ ನೆರವು ನೀಡುವ ಯೋಜನೆಗೂ ಕತ್ತರಿ ಬಿದ್ದಿದೆ. ಪಡಿತರ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಅಕ್ಕಿ ಮತ್ತಿತರ ಪದಾರ್ಥಗಳನ್ನು ನೀಡುತ್ತಿದೆ. ಗ್ಯಾಸ್ ಸಿಲಿಂಡರ್, ರಸಗೊಬ್ಬರ ಸೇರಿ ನಾನಾ ಸಬ್ಸಿಡಿಯಲ್ಲಿ ಕಡಿತ ಮಾಡಲಾಗಿದ್ದು, ಅದರ ಪರಿಣಾಮವೂ ರಾಜ್ಯದ ಮೇಲೆ ಬಿದ್ದಿದೆ. ರಾಜ್ಯದಲ್ಲಿ ಉತ್ಪತ್ತಿಯಾಗುತ್ತಿರುವ ಶೇ.51 ತೆರಿಗೆ ಹಣವನ್ನೇ ನಂಬಿಕೊಂಡು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರಾಜ್ಯದ ಪಾಲಿನ ತೆರಿಗೆಗೂ ಕುತ್ತು
ಜಿಎಸ್​ಟಿ ಜಾರಿಗೂ ಮುನ್ನ ನೀರಾವರಿ ಸೇರಿ ರಾಜ್ಯದ ಹಲವು ಯೋಜನೆಗಳಿಗೆ ಕೇಂದ್ರದ ನೆರವು ನಿರೀಕ್ಷೆ ಮಾಡುತ್ತಿರಲಿಲ್ಲ. ಜಿಎಸ್​ಟಿ ರಾಜ್ಯದ ಪಾಲಿನ ತೆರಿಗೆ ಹಣಕ್ಕೂ ಕುತ್ತು ತಂದ ಬಳಿಕ ಎಲ್ಲ ಯೋಜನೆಗಳಿಗೂ ಕೇಂದ್ರದ ಮುಂದೆ ಕೈ ಚಾಚಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಪರಿಣಾಮವಾಗಿ ಕೇಂದ್ರದ ನೆರವಿನಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಯೋಜನೆಗಳಿಗೆ ಜಿಎಸ್​ಟಿ ಮಾರಕವಾಗಿದೆ.
ಸಾಲ ಪ್ರಮಾಣ ಹಿಗ್ಗಿಸುವ ಅನಿವಾರ್ಯ
ರಾಜ್ಯದಲ್ಲಿ ಸೃಷ್ಟಿಯಾಗುವ ಒಟ್ಟು ಆಸ್ತಿ ಸಂಪನ್ಮೂಲದ ಆಧಾರದ ಮೇಲೆಯೇ ಸಾಲ ಮಾಡಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಸಾಲದ ಪ್ರಮಾಣ ಜಿಎಸ್​ಡಿಪಿಯ ಶೇ.25 ಗಡಿ ರೇಖೆ ದಾಟುವಂತಿಲ್ಲ. ಈಗಾಗಲೇ ರಾಜ್ಯ ಸರ್ಕಾರದ ಬಜೆಟ್​ನಲ್ಲಿ ಶೇ.21 ಸಾಲವೇ ಇದೆ. ಬಜೆಟ್ ಗಾತ್ರವನ್ನು ಹೆಚ್ಚಿಸಲು ಸರ್ಕಸ್ ಮಾಡಿದರೆ ಸಾಲದ ಪ್ರಮಾಣವನ್ನು ಇನ್ನಷ್ಟು ಹಿಗ್ಗಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸಿಲುಕಿದೆ.
ಕೊಟ್ಟು ತೆಗೆದುಕೊಳ್ಳುವ ಸ್ಥಿತಿ
ತೆರಿಗೆ ಹಣ ಕೇಂದ್ರದ ಬದಲು ಮೊದಲಿದ್ದಂತೆ ರಾಜ್ಯದ ಖಜಾನೆಯನ್ನು ಭರ್ತಿ ಮಾಡುವಂತೆ ಇದ್ದಿದ್ದರೆ, ಪ್ರವಾಹ ಸಂದರ್ಭದಲ್ಲಿ ಹೆಚ್ಚಿನ ನೆರವಿಗೆ ಕೇಂದ್ರದ ಕಡೆಗೆ ಮುಖ ಮಾಡಿ ಕಾಯಬೇಕಾಗಿರಲಿಲ್ಲ. ಈಗ ಕೇಂದ್ರಕ್ಕೆ ಮೊದಲು ತೆರಿಗೆ ರೂಪದಲ್ಲಿ ಸಂದಾಯವಾದ ಹಣದಲ್ಲಿ ಪಾಲು ಕೇಳಿ ಪಡೆದುಕೊಳ್ಳಬೇಕಾಗಿರುವ ಕಾರಣ ಸಮಸ್ಯೆಗಳು ಹೆಚ್ಚಿವೆ.
ನೆರೆಗೆ ಬಂದಿದ್ದು 1800 ಕೋಟಿ ರೂಪಾಯಿ
ರಾಜ್ಯಕ್ಕೆ ನೆರೆ ಬಂದು ಅಪಾರ ನಷ್ಟ ಸಂಭವಿಸಿದ ಸಂದರ್ಭ 50 ಸಾವಿರ ಕೋಟಿ ರೂ. ನೆರವು ನೀಡಬೇಕು ಎಂಬ ಅಹವಾಲು ಬರಬರುತ್ತಾ ಕರಗಿ ಹೋಗಿ ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ 36 ಸಾವಿರ ಕೋಟಿಗೆ ಬಂದು ನಿಂತಿತು. ಇದರಿಂದ 3800 ಕೋಟಿ ರೂ. ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿ ಕೇವಲ 1800 ಕೋಟಿ ರೂ. ಮಾತ್ರ ಸಿಕ್ಕಿದೆ. ರಾಜ್ಯ ಸರ್ಕಾರ ಮಾತ್ರ ಈಗಲೂ ಕೇಂದ್ರ ಸರ್ಕಾರದ ಕಡೆಗೆ ಮುಖ ಮಾಡಿ ನಿಂತಿದೆ. ಆದರೆ, ಅಲ್ಲಿಂದ ನಿರೀಕ್ಷಿಸಿದಷ್ಟು ಹಣ ಮಾತ್ರ ಬರುವ ಲಕ್ಷಣಗಳಿಲ್ಲ.
ಜಿಎಸ್​ಟಿ ಬಂದಮೇಲೆ ನಮ್ಮ ತೆರಿಗೆ ಹಣ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರದ ಖಜಾನೆ ಸೇರುತ್ತಿದೆ. ಅಲ್ಲಿಂದ ರಾಜ್ಯಕ್ಕೆ ಬರಬೇಕಾಗಿರುವ ಪಾಲನ್ನು ಕೇಂದ್ರ ಕಾಲ ಕಾಲಕ್ಕೆ ಸರಿಯಾಗಿ ನೀಡುತ್ತಿಲ್ಲ. ಇದು ರಾಜ್ಯದ ಹಲವು ಯೋಜನೆಗಳಿಗೆ ಹಿನ್ನೆಡೆಯಾಗಲು ಕಾರಣ. ಪರಿಸ್ಥಿತಿ ಹೀಗೆ ಮುಂದುವರಿದರೆ, ನಾಡಿನ ಅಭಿವೃದ್ಧಿಗೆ ಇನ್ನಷ್ಟು ಮಾರಕ ಪೆಟ್ಟು ಬೀಳಲಿದೆ.
| ಶಿವಕುಮಾರ್ ಮಾಜಿ ಅಧ್ಯಕ್ಷ, ಎಫ್​ಕೆಸಿಸಿಐ
| ಶಿವಾನಂದ ತಗಡೂರು ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
