ಬೆಂಗಳೂರು:ರಾಜ್ಯದಲ್ಲಿ ಪ್ರಸ್ತುತ 36,71,090 ವಸತಿರಹಿತ ಕುಟುಂಬಗಳಿರುವುದು ವಸತಿ ಇಲಾಖೆ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಮ್​ವೈ) ಅಡಿ ಸಮೀಕ್ಷೆ ನಡೆದಿದೆ.
ರಾಜ್ಯದ ನಗರ ಪ್ರದೇಶದಲ್ಲಿ 11,41,957 ಕುಟುಂಬಗಳು ವಸತಿರಹಿತವಾಗಿದ್ದು, ಗ್ರಾಮೀಣ ಭಾಗದಲ್ಲಿ ಇದರ ಪ್ರಮಾಣ 25,29,133ರಷ್ಟಿದೆ. ನಿವೇಶನ ಮತ್ತು ವಸತಿ ಎರಡನ್ನೂ ಹೊಂದದೇ ಇರುವ 8,45,488 ಕುಟುಂಬಗಳು ನಗರಗಳಲ್ಲಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಮಾಣ 6,55,533ರಷ್ಟಿದೆ. ನಗರಗಳಲ್ಲಿ 2,96,469 ಕುಟುಂಬಗಳಿಗೆ ನಿವೇಶನವಿದ್ದರೂ ಆರ್ಥಿಕ ಸಂಕಷ್ಟದಿಂದ
ಮನೆ ಕಟ್ಟಲು ಸಾಧ್ಯವಾಗಿಲ್ಲ. ಹಳ್ಳಿಗಳಲ್ಲಿ 18,73,600 ಕುಟುಂಬಗಳು ಜಾಗ ಹೊಂದಿದ್ದರೂ, ಹಣಕಾಸಿನ ಸಮಸ್ಯೆಯಿಂದ ಮನೆ ನಿರ್ವಿುಸಲಾಗದೇ ಪರದಾಡುತ್ತಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ನನಸಾಗದ ಕನಸು: ರಾಜ್ಯದ 30 ಜಿಲ್ಲೆಗಳಲ್ಲಿರುವ ನಗರಗಳಲ್ಲಿ 5,65,396 ವಸತಿರಹಿತ ಕುಟುಂಬಗಳನ್ನು ಸರ್ಕಾರ ಆಯ್ಕೆ ಮಾಡಿ ಅನುದಾನ ನೀಡಲು ಮುಂದಾಗಿದ್ದು, ಕಾರಣಾಂತರಗಳಿಂದ 5,76,561 ಕುಟುಂಬಗಳು ಅನುದಾನದಿಂದ ವಂಚಿತವಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ. ವಸತಿ ಇಲಾಖೆಯ ಈ ವಿಳಂಬ ನೀತಿಯಿಂದ ಹಳ್ಳಿಗಾಡಿನ ವಸತಿರಹಿತರ ಕನಸು ಕನಸಾಗಿಯೇ ಉಳಿದಿದೆ. ನಗರ ಪ್ರದೇಶದ ಪೈಕಿ ರಾಜಧಾನಿಯಲ್ಲಿ 1,87,959 ವಸತಿರಹಿತ ಕುಟುಂಬವಿದ್ದರೆ, ಮೈಸೂರು 80,009, ಬೆಳಗಾವಿ 60,087, ಬಳ್ಳಾರಿ 69,405, ವಿಜಯಪುರನಗರದಲ್ಲಿ 61,117 ಕುಟುಂಬಗಳಿಗೆ ಸೂರಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬೆಳಗಾವಿ 2,24,204, ಕಲ್ಬುರ್ಗಿ 1,64,341, ವಿಜಯಪುರ 1,14,290, ರಾಯಚೂರು 1,33,057, ಮೈಸೂರು 1,17,084, ಮಂಡ್ಯ 1,31,026, ತುಮಕೂರಿನಲ್ಲಿ 1,03,846ರಷ್ಟು ವಸತಿರಹಿತ ಕುಟುಂಬಗಳಿವೆ.
ಅನುದಾನ ವಿಳಂಬ: ನಗರ ಪ್ರದೇಶದಲ್ಲಿ ಮನೆ ನಿರ್ವಿುಸುತ್ತಿರುವ ಫಲಾನುಭವಿಗಳಿಗೆ ಸದ್ಯದಲ್ಲೇ ನೆರವು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದರೂ, ಕಾರ್ಯರೂಪಕ್ಕೆ ಬಂದಿಲ್ಲ. ಗ್ರಾಮೀಣ ಪ್ರದೇಶದಲ್ಲಿ 2011ರ ವಸತಿ ರಹಿತರ ಸಮೀಕ್ಷೆಯಲ್ಲಿ ಆಯ್ಕೆಯಾದ ಲಕ್ಷಾಂತರ ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸುವುದು ಬಾಕಿಯಿದೆ. ಆ ಕಾರ್ಯ ಪೂರ್ಣಗೊಂಡ ಬಳಿಕ ಹೊಸ ಸಮೀಕ್ಷೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುದಾನ ಸಿಗುತ್ತಿರುವುದು ವಿಳಂಬವಾಗುತ್ತಿರುವ ಕಾರಣ ಹಲವು ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ಮೊಟಕುಗೊಳಿಸಿದರೆ, ಇನ್ನೂ ಕೆಲವರು ಸರ್ಕಾರದಿಂದ ಅನುದಾನ ಬರುತ್ತದೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.
ಕೇಂದ್ರದಿಂದ 1.5 ಲಕ್ಷ ರೂ. ಧನಸಹಾಯ
2015ರಲ್ಲಿ ಜಾರಿಗೆ ಬಂದ ಪಿಎಂಎವೈ ಯೋಜನೆ 2022ರಲ್ಲಿ ಎಲ್ಲ ಫಲಾನುಭವಿಗಳಿಗೆ ಮನೆ ನಿರ್ವಿುಸುವ ಗುರಿ ಹೊಂದಿದೆ. 2017ರಲ್ಲಿ ವಸತಿ ಇಲಾಖೆ ಅಧಿಕಾರಿಗಳು 30 ಜಿಲ್ಲೆಗಳಲ್ಲಿರುವ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲು ಆರಂಭಿಸಿದ್ದರು. 2019ರಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೆ ಮನೆ ನಿರ್ವಿುಸಲು 1.50 ಲಕ್ಷ ರೂ. ಧನಸಹಾಯ ಒದಗಿಸುತ್ತದೆ.
ಗೋಲ್​ಮಾಲ್!?
ಪಿಎಮ್​ವೈ ಕೇಂದ್ರ ಸರ್ಕಾರದ ಯೋಜನೆಯಾದರೂ ಇದರಲ್ಲಿ ಸಾಕಷ್ಟು ಗೋಲ್‍ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಹಾಗೂ ಪ್ರಭಾವಿಗಳು ಈ ಅವ್ಯವಹಾರದಲ್ಲಿ ಶಾಮೀಲಾಗಿದ್ದು, ಇದರಿಂದಾಗಿ ಅನುದಾನ ಮಂಜೂರಾದರೂ ಫಲಾನುಭವಿಗಳಿಗೆ ಸರಿಯಾಗಿ ಸಿಗುತ್ತಿಲ್ಲ ಎನ್ನಲಾಗಿದೆ. ಕೇಂದ್ರ ಸರ್ಕಾರದಿಂದ ಅನುದಾನ ಬರಬೇಕಾಗಿದೆ. ಮನೆ ನಿರ್ವಿುಸಲು ಆರಂಭಿಸುತ್ತಿದ್ದಂತೆ ಹಂತ-ಹಂತವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅನುದಾನ ಜಮೆ ಮಾಡಲಾಗುತ್ತದೆ. ಒಂದೇ ಹಂತದಲ್ಲಿ ಎಲ್ಲ ಫಲಾನುಭವಿಗಳಿಗೆ ಅನುದಾನ ನೀಡುವುದು ಕಷ್ಟಸಾಧ್ಯ ಎಂಬುದು ವಸತಿ ಇಲಾಖೆ ಅಧಿಕಾರಿಗಳ ವಾದ.
| ಅವಿನಾಶ ಮೂಡಂಬಿಕಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − six =
Remember me
