ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನೂರಾರು ಪ್ರಾಧ್ಯಾಪಕರು ಕೆಲಸವಿಲ್ಲದೆ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದಾರೆ. ಪದವಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಕಾರಣ ಪ್ರಾಧ್ಯಾಪಕರಿಗೆ ಕಾರ್ಯಭಾರವಿಲ್ಲದಾಗಿದೆ. ನಗರ ಪ್ರದೇಶ, ವಿಶೇಷವಾಗಿ ಬೆಂಗಳೂರಿನಲ್ಲಿರುವ ಸ್ಥಾನ ಭದ್ರಪಡಿಸಿಕೊಳ್ಳಲು ಕೇಂದ್ರ ಪಠ್ಯೇತರ ವಿಷಯ (ನಾನ್ ಕೋರ್ ಸಬ್ಜೆಕ್ಟ್) ನೆಪ ಸೇರಿ ನಾನಾ ತಂತ ಅನುಸರಿಸಿದ್ದಾರೆ!
ಮೈಸೂರು, ಬೆಳಗಾವಿ, ಕಲಬುರಗಿ, ಮಂಗಳೂರು, ಶಿವಮೊಗ್ಗ ಮತ್ತಿತರ ವಿಭಾಗಗಳಲ್ಲಿ ಈಗಾಗಲೇ ಕಾರ್ಯ ಭಾರವಿಲ್ಲದ ಪ್ರಾಧ್ಯಾಪಕರ ಪಟ್ಟಿ ಸಿದ್ಧಪಡಿಸಿ ಕಾರ್ಯ ಬಾಹುಳ್ಯವಿರುವ ಕಾಲೇಜುಗಳಿಗೆ ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಪಟ್ಟಿ ಸಿದ್ಧಗೊಂಡಿದ್ದರೂ ರಾಜಕೀಯ ಒತ್ತಡ ಮತ್ತು ನಾನ್​ಕೋರ್ ವಿಷಯ ನೆಪದಲ್ಲಿ ನಿಯೋಜನೆಗೆ ತಡೆ ಒಡ್ಡಲಾಗಿದೆ. ಮೈಸೂರು ವಿಭಾಗದಲ್ಲಿ 17 ಪ್ರಾಧ್ಯಾಪಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ನಿಯೋಜಿಸಲಾಗಿದೆ. ಕೆಲವರನ್ನು ಪೂರ್ಣಕಾಲಿಕವಾಗಿ, ಮತ್ತೆ ಕೆಲವರನ್ನು ಅವಶ್ಯಕತೆಗೆ ಅನುಗುಣವಾಗಿ ವಾರದಲ್ಲಿ 3-4 ದಿನಗಳ ಅವಧಿಗೆ ಕಳುಹಿಸಲಾಗಿದೆ.
1 ಗಂಟೆ ಕೆಲಸವೂ ಇಲ್ಲ!:ಬೆಂಗಳೂರಿನಲ್ಲಿ 21 ಸರ್ಕಾರಿ ಪದವಿ ಕಾಲೇಜುಗಳಿದ್ದು, 33 ಪ್ರಾಧ್ಯಾಪಕರಿಗೆ ಒಂದೇ ಒಂದು ಗಂಟೆ ಕೆಲಸವಿಲ್ಲ. 39 ಪ್ರಾಧ್ಯಾಪಕರಿಗೆ ವಾರಕ್ಕೆ 16 ಗಂಟೆಗಿಂತಲೂ ಕಡಿಮೆ ಕಾರ್ಯಭಾರವಿದೆ. ಅಲ್ಲದೆ, ರಾಜ್ಯದಲ್ಲಿ 500-600 ಪ್ರಾಧ್ಯಾಪಕರಿಗೆ ಯುಜಿಸಿ ನಿರ್ದಿಷ್ಟ ಪಡಿಸಿದಷ್ಟು ಗಂಟೆ ಬೋಧನೆಗೆ ಅವಕಾಶವಿಲ್ಲ.
ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳ ಕಾಯಂ ಪ್ರಾಧ್ಯಾಪಕರು ಕ್ರಿಯೇಟಿವಿಟಿ ಆಂಡ್ ಇನ್ನೊವೇಷನ್, ಎಂಟರ್​ಪ್ರನರ್​ಶಿಪ್ ಆಂಡ್ ಡೆವಲಪ್​ವೆುಂಟ್, ಪರ್ಸನಾಲಿಟಿ ಡೆವಲಪ್​ವೆುಂಟ್, ಸೈನ್ಸ್ ಅಂಡ್ ಸೊಸೈಟಿ… ಇಂತಹ ನಾನ್​ಕೋರ್ ವಿಷಯ ಬೋಧನೆ ಮಾಡಿ ಕಾರ್ಯಭಾರ ತೋರಿಸುತ್ತಿದ್ದಾರೆ. ಯಾವ ನಾನ್​ಕೋರ್ ವಿಷಯವನ್ನು ಯಾರು ಬೋಧಿಸಬೇಕು ಎಂಬ ನಿಯಮವಿದ್ದರೂ ಪಾಲನೆಯಾಗಿಲ್ಲ. ಇದೆಲ್ಲ ಗೊತ್ತಿದ್ದೂ ಕಾಲೇಜು ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ.
ನಾನಾ ಚರ್ಚೆ:ಲಕ್ಷ ಲಕ್ಷ ಸಂಬಳ ಕೊಟ್ಟು ನಾನ್​ಕೋರ್ ಸಬ್ಜೆಕ್ಟ್ ಬೋಧನೆ ಮಾಡಲು ಪ್ರಾಧ್ಯಾಪಕರನ್ನು ಇಟ್ಟುಕೊಳ್ಳಬೇಕೆ? ಇಂತಹ ವಿಷಯಗಳ ಬೋಧನೆಗೆ ಅತಿಥಿ ಉಪನ್ಯಾಸಕರು ಸಾಕೆ? ಎಂಬ ಗಂಭೀರ ಚರ್ಚೆ ಈಗ ಆಯುಕ್ತರ ವಲಯದಲ್ಲಿ ನಡೆಯುತ್ತಿದೆ.
ವರ್ಗಾವಣೆಗೆ ಸುಲಭದ ದಾರಿ:ಬೇರೆ ಬೇರೆ ಕಡೆಗಳಿಂದ ಬೆಂಗಳೂರಿಗೆ ನಿಯೋಜನೆಗೊಂಡವರು ವರ್ಗಾವಣೆ ಸಂದರ್ಭ ಮೂಲ ಸ್ಥಳ ತೋರಿಸಿ ಕೌನ್ಸೆಲಿಂಗ್​ನಲ್ಲಿ ಮತ್ತೆ ನಗರ ಪ್ರದೇಶಗಳಿಗೆ ವರ್ಗ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರಾಧ್ಯಾಪಕರೇ ಇಲ್ಲದಂತಾಗಿದೆ. ಈ ಬಗ್ಗೆ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಪತ್ರ ಬರೆದು ಸರಿಪಡಿಸು ವಂತೆ ಮಾಡಿದ ಮನವಿಗೂ ಕವಡೆ ಕಿಮ್ಮತ್ತೂ ಸಿಕ್ಕಿಲ್ಲ.
ಉತ್ತರದಲ್ಲಿ ಪ್ರಾಧ್ಯಾಪಕರೇ ಇಲ್ಲ
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಪಾಠ ಮಾಡಲು ಕಾಯಂ ಪ್ರಾಧ್ಯಾಪಕರೇ ಇಲ್ಲ. ಕೆಲವೆಡೆ ಅತಿಥಿ ಉಪನ್ಯಾಸಕರೂ ಸಿಗುತ್ತಿಲ್ಲ. 2017ರಲ್ಲಿ ‘ಸಿ’ ವಲಯದಡಿ ನೇಮಕಗೊಂಡವರ ಪೈಕಿ 650-700 ಮಂದಿ ಮೈತ್ರಿ ಸರ್ಕಾರದಲ್ಲಿ 3-4 ತಿಂಗಳಲ್ಲೇ ಉತ್ತರ, ಕಲ್ಯಾಣ ಕರ್ನಾಟಕದಿಂದ ನಿಯೋಜನೆ ನೆಪದಲ್ಲಿ ಕಾಲು ಕಿತ್ತಿದ್ದಾರೆ.
ಪಾಠಕ್ಕೊಂದು ಸಂಬಳಕ್ಕಿನ್ನೊಂದು
ಕೆಲವು ಪ್ರಾಧ್ಯಾಪಕರು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸಂಬಳ ಪಡೆದು ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಪಾಠ ಮಾಡುವ ವಿಚಿತ್ರ ಪ್ರಕರಣಗಳೂ ಇವೆ. ವಿಶ್ವವಿದ್ಯಾಲಯ ಬೋಧಕರನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲವೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು. ಆದರೆ, ಕಾರ್ಯಭಾರವಿಲ್ಲದ ಪ್ರಾಧ್ಯಾಪಕರಿಗೆ ಬೆಂಗಳೂರಿನಲ್ಲೇ ಠಿಕಾಣಿ ಹೂಡಲು ಮಹಾರಾಣಿ ಕ್ಲಸ್ಟರ್ ವಿವಿ ಆಸರೆಯಾಗಿದೆ.
ರಾಜಕೀಯ ಒತ್ತಡ?
ರಾಜ್ಯದ ಹಲವು ಪದವಿ ಕಾಲೇಜುಗಳಲ್ಲಿ ನೂರಾರು ಪ್ರಾಧ್ಯಾಪಕರಿಗೆ ಕಾರ್ಯಭಾರವಿಲ್ಲದಿದ್ದರೂ ಲಕ್ಷ ಲಕ್ಷ ಸಂಬಳ ಪಡೆಯುವ ಸ್ಥಿತಿಯಿದೆ. ಇನ್ನೊಂದೆಡೆ ಅನೇಕ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆಯಿದೆ. ಆದ್ದರಿಂದ ಕಾರ್ಯಭಾರವಿಲ್ಲದ ಪ್ರಾಧ್ಯಾಪಕರನ್ನು ಫೆ.15ರ ಒಳಗಾಗಿ ಕಾರ್ಯಭಾರವಿರುವ ಕಾಲೇಜುಗಳಿಗೆ ನಿಯೋಜನೆ ಮಾಡಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೇಳಿದ್ದರು. ಅದ್ಯಾವ ಒತ್ತಡವೋ ಏನೋ ಮಾರ್ಚ್ 15 ಹತ್ತಿರ ಬಂದರೂ ನಿಯೋಜನೆ ಮಾಡಿಲ್ಲ.
| ವಿಲಾಸ ಮೇಲಗಿರಿ ಬೆಂಗಳೂರು
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + 16 =
Remember me
