| ರಮೇಶ್ ಹಂಡ್ರಂಗಿ ಹಾಸನಕಳೆದ 15 ದಿನಗಳಿಂದ ಚರ್ಚೆಯಲ್ಲಿರುವ ಹಾಸನ ಪೆನ್​ಡ್ರೖೆವ್ ವಿಚಾರ ದಿನಕ್ಕೊಂದು ಆಯಾಮ ಪಡೆದು ಕೊಳ್ಳುತ್ತಿದೆ. ಒಂದು ಲಕ್ಷ ಪೆನ್​ಡ್ರೖೆವ್​ಗಳನ್ನು ಜಿಲ್ಲೆಯ ಹಾದಿ ಬೀದಿಯಲ್ಲಿ ಹಂಚಲಾಗಿದೆ ಎಂಬ ಗುಲ್ಲೆದ್ದಿದೆ. ಆದರೆ, ಜಿಲ್ಲೆಯ ಒಬ್ಬರಿಗೂ ಒಂದೇ ಒಂದು ಪೆನ್​ಡ್ರೖೆವ್ ಸಿಕ್ಕಿಲ್ಲ. ಅಷ್ಟೇ ಏಕೆ ಮಾಧ್ಯಮದವರಿಗೂ ಸಿಕ್ಕಿಲ್ಲ. ಅಂದರೆ, ಒಂದು ಲಕ್ಷ ಪೆನ್​ಡ್ರೖೆವ್ ಕಟ್ಟುಕತೆಯೇ ಎನ್ನುವ ಪ್ರಶ್ನೆ ಎದ್ದಿದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ಏ.26ರಂದು ನಡೆಯಿತು. ಅದಕ್ಕೂ ಮುನ್ನ ಏ.22ರ ಸಂಜೆಯಿಂದಲೇ ಕೆಲವರ ವಾಟ್ಸ್ ಆಪ್​ಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಅಶ್ಲೀಲ ವಿಡಿಯೋಗಳು ಹಾಗೂ ಚಿತ್ರಗಳು ಹರಿದಾಡತೊಡಗಿತ್ತು. ಏ.22ರ ಮಧ್ಯಾಹ್ನ ಜಿಲ್ಲೆಯ ಪಾರ್ಕ್​ಗಳಲ್ಲಿ, ರಸ್ತೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಬಸ್ ಸೀಟಿನ ಮೇಲೆ ಪೆನ್​ಡ್ರೖೆವ್​ಗಳನ್ನು ಇಡಲಾಗಿದೆ. ಇದು ಜನರಿಗೆ ಸಿಕ್ಕಿ ವಿಡಿಯೋ ವೈರಲ್ ಆಗಿದೆ ಎಂಬ ಮಾತುಗಳು ಕೇಳತೊಡಗಿತ್ತು. ಹಾಗಾದರೆ ಈ ವಿಡಿಯೋಗಳು ವಾಟ್ಸ್​ಆಪ್​ಗೆ ಬಂದಿದ್ದಾದರೂ ಹೇಗೆ? ಅದನ್ನು ಮೊದಲು ಹಂಚಿಕೆ ಮಾಡಿದವರು ಯಾರು? ಎಂಬುದು ಪ್ರಶ್ನೆಯಾಗಿದೆ.
ತನಿಖೆ ದಾರಿ ತಪ್ಪಿಸುವ ಉದ್ದೇಶವಿತ್ತೆ?:ಪೆನ್​ಡ್ರೖೆವ್ ಎಲ್ಲ ಕಡೆ ಸಿಕ್ಕಿವೆ. ಇದನ್ನು ತೆಗೆದುಕೊಂಡು ವಿಡಿಯೋ ಡೌನ್​ಲೋಡ್ ಮಾಡಿ, ಮೊಬೈಲ್​ಗೆ ಹಾಕಿಕೊಂಡು ಬೇರೆಯವರಿಗೆ ಶೇರ್ ಮಾಡಿದವರು ಯಾರು? ಯಾರಿಗೆ ಶೇರ್ ಮಾಡಿದರು ಎಂಬುದು ತಿಳಿಯುತ್ತಿಲ್ಲ. ತನಿಖಾ ತಂಡ ಪೆನ್​ಡ್ರೖೆವ್ ಹಿಂದೆ ಬೀಳಲಿ ಎಂಬ ಮಾಸ್ಟರ್ ಮೈಂಡ್ ಹೀಗೆ ಕತೆ ಸೃಷ್ಟಿಸಿರಬಹುದೇ ಎಂಬ ಅನುಮಾನವೂ ಕಾಡುತ್ತಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬರಿಗೂ (ಅರಸೀಕೆರೆ- ಬೇಲೂರು ವ್ಯಾಪ್ತಿಯ ಕೆಲ ಮುಖಂಡರ ಹೊರತುಪಡಿಸಿ) ಪೆನ್​ಡ್ರೖೆವ್ ಸಿಕ್ಕಿಲ್ಲ. ಹಾಗಾದರೆ ಈ ಕತೆ ಹೆಣೆದವರು ಯಾರು? ಇದನ್ನು ಜನರ ತಲೆಗೆ ತುಂಬಿದವರು ಯಾರು? ಪೆನ್​ಡ್ರೖೆವ್ ಪ್ರಕರಣ ಎಂದು ದೇಶಾದ್ಯಂತ ಹೇಗೆ ಚರ್ಚೆಗೆ ಬಂತು ಎಂಬುದು ಈಗಲೂ ನಿಗೂಢವಾಗಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಈ ವಿಡಿಯೋಗಳ ಹಂಚಿಕೆ ಹಿಂದೆ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತದೆ.
ನವೀನ್​ಗೌಡಗೆ ವಿಷಯ ತಿಳಿದಿದ್ದು ಹೇಗೆ?:ಬೇಲೂರು ತಾಲೂಕು ನೆಲ್ಕೆಯ ನವೀನ್​ಗೌಡ ಎಂಬಾತ ಫೇಸ್​ಬುಕ್ ಖಾತೆಯಲ್ಲಿ ಏ.22 ಸಂಜೆ 4 ಗಂಟೆಯಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಬಿಡುಗಡೆಗೆ ಕ್ಷಣಗಣನೆ ಎಂಬ ಪೋಸ್ಟ್ ಹಾಕಿದ. ಅದಾದ ಬಳಿಕ ರಾತ್ರಿ 8 ಗಂಟೆಗೆ ವಿಡಿಯೋಗಳು ವಾಟ್ಸ್​ಆಪ್ ಮೂಲಕ ಹರಿದಾಡತೊಡಗಿದವು. ಈ ಸಂಬಂಧ ಪ್ರಜ್ವಲ್
ರೇವಣ್ಣ ಅವರ ಎಲೆಕ್ಷನ್ ಏಜೆಂಟ್ ವಕೀಲ ಪೂರ್ಣಚಂದ್ರ ತೇಜಸ್ವಿ ಅವರು ನವೀನ್​ಗೌಡ ಸೇರಿ ಐವರ ವಿರುದ್ಧ ನಗರದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದರು. ಎಫ್​ಐಆರ್ ದಾಖಲಾದರೂ ಪೊಲೀಸರು ಯಾರನ್ನೂ ಬಂಧಿಸಲಿಲ್ಲ. ಈ ಐವರಲ್ಲಿ ನಾಲ್ವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮೇ 8ರಂದು ನ್ಯಾಯಾಲಯ ಅರ್ಜಿ ತಿರಸ್ಕರಿಸಿದರೂ ಒಬ್ಬರ ಬಂಧನವೂ ಆಗಿಲ್ಲ.
ಪ್ರತ್ಯೇಕ ತಂಡ ರಚನೆ: ವಿಡಿಯೋಗಳನ್ನು ಹಂಚಿಕೆ ಮಾಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ಎಸ್​ಐಟಿ ಪ್ರತ್ಯೇಕ ತಂಡ ರಚಿಸಿದೆ. ತಂಡದಲ್ಲಿ ಹಾಸನ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ, ಹಾಸನ ಸಿಇಎನ್ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಬಿ.ಸಿ.ಜಗದೀಶ್, ಯಸಳೂರು ಠಾಣೆ ಪಿಎಸ್​ಐ ಶ್ರೀನಿವಾಸ್, ಶ್ರವಣಬೆಳಗೊಳ ಠಾಣೆ ಪಿಎಸ್​ಐ ಶಿವಶಂಕರ್, ಕಾನ್​ಸ್ಟೆಬಲ್​ಗಳಾದ ಪ್ರತಾಪ್, ರವಿ ಅವರನ್ನು ನೇಮಕ ಮಾಡಿ ಎಸ್​ಐಟಿ ವಿಶೇಷ ತಂಡದಲ್ಲಿ ವರದಿ ಮಾಡಿಕೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ವ್ಯಂಗ್ಯ : ಸಂಸದ ಪ್ರಜ್ವಲ್ ರೇವಣ್ಣ ಪೆನ್​ಡ್ರೖೆವ್ ಪ್ರಕರಣದ ಭಾಗವಾಗಿರುವ ವಕೀಲ ದೇವರಾಜೇಗೌಡರಿಗೆ ಸಂಬಂಧಿಸಿದ್ದೆನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಪ್ರಶ್ನೆ ಎತ್ತಿದ್ದು, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ. ಬ್ರದರ್ ಸ್ವಾಮಿಯವರಿಗೆ ಮೊದಲೇ ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಬಗ್ಗೆ ತಿಳಿದಿತ್ತು ಎಂಬುದನ್ನು ಸ್ವತಃ ದೇವರಾಜೇಗೌಡ ಒಪ್ಪಿಕೊಂಡಿದ್ದಾರೆ. ನಾನು 2 ತಿಂಗಳ ಹಿಂದೆಯೇ ಫೋನ್ ಮೂಲಕ ಬ್ರದರ್ ಸ್ವಾಮಿಯವರನ್ನು ಮಾತಾಡಿಸಿದ್ದೆ, ಡ್ರೖೆವರ್ ಕಾರ್ತಿಕ್​ನ ಜಮೀನು ವಿವಾದವನ್ನು ಬಗೆಹರಿಸಲು ಹೇಳಿದ್ದೆ ಎಂದು ಹೇಳಿದ್ದಾರೆ ದೇವರಾಜೇಗೌಡ. ವಿಷಯ ಮೊದಲೇ ತಿಳಿದಿದ್ದರೂ ಬ್ರದರ್ ಸ್ವಾಮಿಗಳು ಏಕೆ ಸುಮ್ಮನಿದ್ದರು? ಎಂದು ಕುಮಾರಸ್ವಾಮಿಯವರನ್ನು ಕಾಂಗ್ರೆಸ್ ಪ್ರಶ್ನಿಸಿದೆ. ರೇವಣ್ಣ ಕುಟುಂಬದ ಹಗರಣ ಹೊರಗೆ ಬಂದರೆ ಬರಲಿ ಎಂಬ ಧೋರಣೆಯಲ್ಲಿದ್ದರೆ? ಮಹಿಳೆಯರಿಗಾದ ಅನ್ಯಾಯದ ಬಗ್ಗೆ ಕಾಳಜಿ ಬರಲಿಲ್ಲವೇ? ಎಂದು ಕುಟುಕಿದೆ.
ನಿರೀಕ್ಷಣಾ ಜಾಮೀನು ಮೊರೆ?
ಬೆಂಗಳೂರು: ಲೈಂಗಿಕ ಹಗರಣದಲ್ಲಿ ಸಿಲುಕಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈಗಾಗಲೇ ಮೂರು ಪ್ರತ್ಯೇಕ ಎಫ್​ಐಆರ್ ದಾಖಲಾಗಿದ್ದು, 3ನೇ ಕೇಸಿನಲ್ಲಿ ಕಠಿಣ ಸೆಕ್ಷನ್ ವಿಧಿಸಿರುವುದನ್ನು ಗಮನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಂದರ ಮೇಲೊಂದು ಎಫ್​ಐಆರ್ ದಾಖಲಾಗುತ್ತಿವೆ.
ಸಿಐಡಿ ಸೈಬರ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿರುವ 3ನೇ ಎಫ್​ಐಆರ್​ನಲ್ಲಿ ಐಪಿಸಿ 376(2), 354(ಎ), 354(ಬಿ), 354(ಸಿ) ಹಾಗೂ 506 ವಿಧಿಸಲಾಗಿದೆ. ಈ ಮೂಲಕ ಪ್ರಜ್ವಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಅಂದರೆ, 376(2)ಅತ್ಯಾಚಾರದ ವೇಳೆ ದೈಹಿಕವಾಗಿ ಘಾಸಿಗೊಳಿಸುವುದು ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ, 354(ಎ) ಲೈಂಗಿಕ ದೌರ್ಜನ್ಯಕ್ಕೆ 3 ವರ್ಷ, 354(ಬಿ) ಮಹಿಳೆಯ ವಿವಸ್ತ್ರಗೊಳಿಸಲು ಬಲಪ್ರಯೋಗ 3 ರಿಂದ 7 ವರ್ಷಗಳವರೆಗೆ ಶಿಕ್ಷೆ, 354(ಸಿ) ಮಹಿಳೆಯ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸುವುದು, ವೀಕ್ಷಿಸುವುದು 3 ರಿಂದ 7 ವರ್ಷಗಳವರೆಗೆ ಮತ್ತು 506 ಬೆದರಿಕೆ ಹಾಕುವುದು 7 ವರ್ಷ ಜೈಲು ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ. ವಿದೇಶದಲ್ಲಿ ಇರುವ ಪ್ರಜ್ವಲ್ ರೇವಣ್ಣ, ಮೇ 15ಕ್ಕೆ ಹಿಂತಿರುಗಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಎಸ್​ಐಟಿ ಅಧಿಕಾರಿಗಳ ತಂಡವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದೆ. ಇದರ ನಡುವೆ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಕೋರ್ಟ್ ಮೊರೆ ಹೋಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಜಡ್ಜ್ ಮುಂದೆ ಹೇಳಿಕೆ ದಾಖಲು:ಅಪಹರಣಕ್ಕೆ ಒಳಗಾಗಿದ್ದ ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಪ್ರಜ್ವಲ್ ರೇವಣ್ಣ ಮೇಲೆ ಎಸ್​ಐಟಿ ಅಧಿಕಾರಿಗಳು 3ನೇ ಎಫ್​ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಸಂತ್ರಸ್ತೆ ಕಡೆಯಿಂದ ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ್ದು, ಪ್ರಜ್ವಲ್​ಗೆ ದಿನೇ ದಿನೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ.
ಬಸವನಗುಡಿ ಮನೆ ಮಹಜರ್:ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಪ್ರಕರಣ ಸಂಬಂಧ ಸಂತ್ರಸ್ತೆಯನ್ನು ಬಸವನಗುಡಿಯಲ್ಲಿ ಇರುವ ಎಚ್.ಡಿ.ರೇವಣ್ಣ ಮನೆಗೆ ಕರೆತಂದು ಮಹಜರ್ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಂತ್ರಸ್ತೆಯೊಂದಿಗೆ ಬಂದ ಎಸ್​ಐಟಿ ತಂಡ ಸುಧೀರ್ಘವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಜತೆಗೆ ಮಹಜರ್ ಪ್ರಕ್ರಿಯೆ ನಡೆಸಿದೆ.
ಏ.22ರಂದು ನಾನು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತಲೇ ಇರಲಿಲ್ಲ. ಅಂದೇ ನಾನು ದೂರು ನೀಡಿದ್ದ ವ್ಯಕ್ತಿಗಳನ್ನು ಬಂಧಿಸಿ ವಿಚಾರಿಸಿದ್ದರೆ ವಿಡಿಯೋಗಳನ್ನು ಹಂಚಿಕೆ ಮಾಡಿದವರು ಯಾರು, ವಿಡಿಯೋ ಕೊಟ್ಟವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು.
| ಪೂರ್ಣಚಂದ್ರ ತೇಜಸ್ವಿ ವಕೀಲ, ಪ್ರಜ್ವಲ್ ರೇವಣ್ಣ ಚುನಾವಣಾ ಏಜೆಂಟ್
ನಿತ್ಯಾನಂದ ಇರುವ ಜಾಗ ಸೇರಲು ಸಂಸದ ಪ್ರಜ್ವಲ್ ರೇವಣ್ಣ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಹತ್ತು ವರ್ಷದಲ್ಲಿ ನೀರವ್ ಮೋದಿ, ವಿಜಯ ಮಲ್ಯ ಯಾರನ್ನೂ ಭಾರತಕ್ಕೆ ಕರೆ ತರಲಿಲ್ಲ. ಪ್ರಜ್ವಲ್ ರೇವಣ್ಣನ ವಿಚಾರದಲ್ಲೂ ಇದೇ ಆಗಲಿದೆ.
| ಎಂ.ಲಕ್ಷ್ಮಣ್ ಕೆಪಿಸಿಸಿ ವಕ್ತಾರ
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ ದೇವರಾಜೇಗೌಡ ಪೊಲೀಸರ ವಶಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 11 =
Remember me
