ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ರಕರಣದ ಸಂಬಂಧ ಬಹಳ ಜನ ವಾದ ಮಂಡನೆ ಮಾಡಿ ದ್ದೀರಿ. ಆದರೆ, ಇದರಲ್ಲಿ ಸಿಎಂ ಪಾತ್ರ ಏನೆಂದು ಯಾರೂ ಹೇಳುತ್ತಿಲ್ಲ. ಸಿಎಂ ಪಾತ್ರದ ಬಗ್ಗೆ ನಿಮ್ಮ ಉತ್ತರವೇನು?
ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ದೂರುದಾರರ ಪರ ವಕೀಲರಿಗೆ ಕೇಳಿದ ಪ್ರಶ್ನೆ ಹೀಗಿತ್ತು. ನ್ಯಾಯಮೂರ್ತಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸಿಎಂ ವಿರುದ್ಧ ಆರೋಪಿಸುವುದಕ್ಕೆ ಏನೂ ಇಲ್ಲ ಎಂದು ಉತ್ತರಿಸಿದರು. ನಂತರ ಮುಖ್ಯಮಂತ್ರಿಗಳ ಪಾತ್ರ, ಕ್ಯಾಬಿನೆಟ್ ನಿರ್ಣಯದ ಬಗ್ಗೆ ವಾದ ಮಂಡಿಸುತ್ತೇನೆ ಎಂದರು.
ಸ್ನೇಹಮಯಿ ಕೃಷ್ಣ ವಕೀಲರ ವಾದ: ದೂರುದಾರರಲ್ಲಿ ಒಬ್ಬರಾದ ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿದ ವಕೀಲರಾದ ಮಣೀಂದರ್ ಸಿಂಗ್, ಮುಡಾ ಅಭಿವೃದ್ಧಿಪಡಿಸಿದ ಭೂಮಿಯನ್ನು ಕಂದಾಯ ಭೂಮಿ ಎಂಬುದಾಗಿ ತೋರಿಸಲಾಗಿದೆ. ಇದರಿಂದ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬರಬೇಕು ಎನ್ನುವುದಷ್ಟೇ ನಮ್ಮ ಧ್ಯೇಯ. ಭೂಮಿ ಸ್ವಾಧೀನವಾಗಿ ಪರಿಹಾರದ ಹಣ ನೀಡಿದರೂ ಮಾಲೀಕರು ಪಡೆದಿಲ್ಲ. 2004ರಲ್ಲಿ ಕೃಷಿ ಜಮೀನು ಎಂದು ನಮೂದಿಸಿ ಸಿಎಂ ಸಂಬಂಧಿ ಕ್ರಯಪತ್ರ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು. ಈ ವೇಳೆ ನ್ಯಾಯಪೀಠ, ಭೂಮಿ ಅಭಿವೃದ್ಧಿಯಾದ ಮೇಲೆ ಹೇಗೆ ಕೃಷಿ ಜಮೀನಾಯಿತು ಎಂದು ಪ್ರಶ್ನಿಸಿತು. ಅದೇ ಈ ಪ್ರಕರಣದಲ್ಲಿ ಮ್ಯಾಜಿಕ್ ಆಗಿದೆ. ಹೀಗಾಗಿ ತನಿಖೆ ನಡೆಯಬೇಕು ಎಂದು ಮಣೀಂದರ್ ಉತ್ತರಿಸಿದರು. ತನಿಖಾಧಿಕಾರಿ ಸಮರ್ಥವಾಗಿದ್ದರೆ ಪ್ರಕರಣ ಭೇದಿಸಬಹುದು. ಕ್ಯಾಬಿನೆಟ್ ಇಂತಹ ಕೃತ್ಯಕ್ಕೆ ಸಮರ್ಥನೆ ನೀಡುತ್ತಿರುವುದು ಸಲ್ಲದು ಎಂದು ವಾದಿಸಿದರು.
ಅಬ್ರಹಾಂ ಪರ ವಕೀಲರ ವಾದ: ಅಬ್ರಹಾಂ ಪರ ವಕೀಲ ರಂಗನಾಥರೆಡ್ಡಿ ವಾದ ಮಂಡಿಸಿ, ಮೊದಲಿಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸದಿದ್ದಕ್ಕೆ ರಾಜ್ಯಪಾಲರ ಅನುಮತಿ ಕೇಳಲಾಯಿತು. ಡಾ.ಅಶೋಕ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಸೆಕ್ಷನ್ 17ಎ ಅನ್ವಯ ಖಾಸಗಿ ದೂರುದಾರರು ಅನುಮತಿ ಪಡೆಯಬಹುದು. ಹೀಗಾಗಿ ರಾಜ್ಯಪಾಲರ ಅನುಮತಿ ಪಡೆದು ದೂರು ದಾಖಲಿಸಲಾಗಿದೆ. 1998ರ ಮೇ 18 ರಂದು ನಿಂಗ ಎಂಬುವರ ಪರವಾಗಿ ಡಿನೋಟಿಫಿಕೇಷನ್ ಆಗಿದೆ. ಆಗ ಮಾಲೀಕ ನಿಂಗ ಜೀವಂತವಾಗಿರಲಿಲ್ಲ. ಪರಿಹಾರ ನಿಗದಿಪಡಿಸಿದ 48 ದಿನಗಳ ಬಳಿಕ ಡಿನೋಟಿಫಿಕೇಷನ್ ಮಾಡಲಾಗಿದೆ. ಮುಡಾ ಹೆಸರಿಗೆ ಕಂದಾಯ ದಾಖಲೆಗಳಿವೆ. 2004ರವರೆಗೆ ಹಲವು ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಕೆಸರೆ ಗ್ರಾಮದ 464 ಸರ್ವೆ ನಂಬರ್ ಅನ್ನು ಖುಷ್ಕಿ ಜಮೀನೆಂದು ಉಲ್ಲೇಖಿಸಿದ್ದಾರೆ. ಅಷ್ಟರಲ್ಲಾಗಲೇ ದೇವನೂರು ಬಡಾವಣೆಯಾಗಿ ನಿವೇಶನ ಹಂಚಲಾಗಿತ್ತು. 2004ರಲ್ಲಿ ಸಿಎಂ ಮೈದುನ ಮಲ್ಲಿಕಾರ್ಜುನಸ್ವಾಮಿ ಎಂಬುವರು ಖರೀದಿಸಿದ್ದು, ಅಸ್ತಿತ್ವವೇ ಇಲ್ಲದ ಕೃಷಿ ಭೂಮಿಗೆ 2005 ಜು.15 ರಂದು ಭೂಪರಿವರ್ತನೆ. ಕೃಷಿಯೇತರ ವಾಸದ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗಿದೆ. ಆಗಿನ ಜಿಲ್ಲಾಧಿಕಾರಿ ಕುಮಾರ್ ನಾಯಕ್ ಭೂ ಪರಿವರ್ತನೆ ವರದಿ ನೀಡಿದ್ದರು ಎಂದು ರಂಗನಾಥರೆಡ್ಡಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಪರ ವಕೀಲ, ಕೃಷಿ ಜಮೀನಿನಲ್ಲಿ ಮುಡಾ ನಿವೇಶನ ಹಂಚಿಕೆ ಮಾಡಿದೆ. ಬೇಕಿದ್ದರೆ ದಾನಪತ್ರವನ್ನು ಅವರು ಪ್ರಶ್ನಿಸಲಿ ಎಂದರು.
ಕ್ಯಾಬಿನೆಟ್​ನ ತಾರತಮ್ಯ ನಿರ್ಣಯ:ಮುಡಾ ಆರೋಪಗಳ ಬಗ್ಗೆ ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. 40-60 ಬದಲು 50-50ಗೆ ನಿಯಮ ಬದಲಾಯಿಸಲಾಗಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಬಹಳ ಪ್ರತಿಷ್ಠಿತ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲಾಗಿದೆ. ಇಷ್ಟೆಲ್ಲಾ ಅಂಶಗಳಿದ್ದರೂ ಕ್ಯಾಬಿನೆಟ್ ತಾರತಮ್ಯಪೂರಿತ ನಿರ್ಣಯ ಕೈಗೊಂಡಿದೆ ಎಂದು ತುಷಾರ್ ಮೆಹ್ತಾ ವಾದಿಸಿದರು.
ಸಿಎಂ ಆಗಿದ್ದಾಗ ನಡೆದ ಹಗರಣ ಆರೋಪವೇ…:ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಭೂಮಿ ಪರಿವರ್ತನೆ ಆದಾಗಲೂ ಡಿಸಿಎಂ ಆಗಿದ್ದರು. 50-50 ಹಂಚಿಕೆ ಕೇಳಿದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು ಎಂದು ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥರೆಡ್ಡಿ ವಾದಿಸಿದರು. ಈ ಬೆಳವಣಿಗೆ ನಡೆದಾಗಲೆಲ್ಲಾ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು ಎನ್ನುವುದು ನಿಮ್ಮ ಆರೋಪವೇ ಎಂದು ನ್ಯಾಯಮೂರ್ತಿ ಪ್ರಶ್ನಿಸಿದಾಗ, ರಂಗನಾಥರೆಡ್ಡಿ ಹೌದು ಎಂದರು. ನಿವೇಶನ ಹಂಚಿಕೆಯಾಗಿದ್ದರಿಂದ ಇವರು ಭೂಮಿಯ ಸ್ವಾಧೀನದಲ್ಲಿ ಇರಲಿಲ್ಲ. ಇಲ್ಲದಿರುವ ಜಮೀನಿಗೆ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ. 2021ರ ಅ.25ಕ್ಕೆ 50-50 ನಿವೇಶನ ಹಂಚಿಕೆಗೆ ಮನವಿ ಸಲ್ಲಿಸಲಾಯಿತು. ಸಿಎಂ ಪುತ್ರನಿದ್ದ ಮುಡಾ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನಂತರ ಸಿಎಂ ಪತ್ನಿ 2021ರ ನ.25 ರಂದು ಹಕ್ಕು ಬಿಡುಗಡೆ ಮಾಡಿದರು. ನಂತರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಯಾವುದೇ ಜಮೀನು ಕಳೆದುಕೊಳ್ಳದೆ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ ಎಂದು ವಾದಿಸಿದರು.
ನಗೆಗಡಲಲ್ಲಿ ತೇಲಿಸಿದ ಮೆಹ್ತಾ:ವಾದ ಮಂಡಿಸುತ್ತಿದ್ದ ತುಷಾರ್ ಮೆಹ್ತಾ, ನ್ಯಾಯಾಲಯದಲ್ಲಿ ಮೂರು ಸಂಗತಿಗಳನ್ನು ಎಂದಿಗೂ ನಂಬದಂತೆ ಶ್ರೇಷ್ಠ ವಕೀಲ ಎಫ್.ಈ.ಸ್ಮಿತ್ ಹೇಳಿದ್ದಾರೆ. ಗೌರವಾನ್ವಿತ ನ್ಯಾಯಮೂರ್ತಿಗಳು, ಲರ್ನಡ್ ಕೌನ್ಸೆಲ್ ಮೈ ಬ್ರದರ್, ಲರ್ನಡ್ ಕೌನ್ಸೆಲ್ ಮೈ ಫ್ರೆಂಡ್, ವಿಥ್ ಪ್ರಫೌಂಡ್ ರೆಸ್ಪೆಕ್ಟ್ ಎಂಬುದನ್ನು ನಂಬಬಾರದು ಎಂದಿದ್ದಾರೆ. ಲರ್ನಡ್ ಕೌನ್ಸೆಲ್ ಮೈ ಬ್ರದರ್ ಎಂದರೆ ಆತನು ವಕೀಲನೂ ಅಲ್ಲ, ಸಹೋದರನೂ ಅಲ್ಲ ಎಂಬ ಅರ್ಥ ನೀಡುತ್ತದೆ. ಲರ್ನಡ್ ಕೌನ್ಸೆಲ್ ಮೈ ಫ್ರೆಂಡ್ ಎಂದರೆ ನಾವು ಸಾಮಾನ್ಯವಾಗಿ ಸ್ನೇಹಿತರು ಅಪರೂಪವಾಗಿ ವಕೀಲರಂತೆ ನೋಡುತ್ತೇವೆ ಎಂಬರ್ಥ ಬರುತ್ತದೆ. ವಿಥ್ ರೆಸ್ಪೆಕ್ಟ್ ಎಂದಾಗ ನ್ಯಾಯಮೂರ್ತಿಗಳಿಗೆ ಅರ್ಥವಾಗಿಲ್ಲ, ವಿಥ್ ಪ್ರಫೌಂಡ್ ರೆಸ್ಪೆಕ್ಟ್ ಎಂದಾಗ ನ್ಯಾಯಮೂರ್ತಿಗಳಿಗೆ ಏನೂ ಅರ್ಥವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಇದು ನನ್ನ ಅಭಿಪ್ರಾಯವಲ್ಲ. ಎಫ್.ಈ.ಸ್ಮಿತ್ ಅವರ ಹೇಳಿಕೆಯಾಗಿದೆ. ಇದನ್ನು ಲಘುವಾಗಿ ತೆಗೆದುಕೊಳ್ಳಬೇಕು ಎನ್ನುತ್ತಿದ್ದಂತೆ ಕಲಾಪ ನಗೆಗಡಲಲ್ಲಿ ತೇಲಾಡಿತು.
ಪತ್ನಿ ಪರ ಪತಿಗೆ ಪವಿತ್ರ ಹೊಣೆಗಾರಿಕೆ :ರಾಜ್ಯಪಾಲರ ಅಧಿಕಾರಕ್ಕೆ ಇತಿಮಿತಿ ಇದೆ. ಅವರು ಇಂತಹ ಸಲಹೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ ಹಿರಿಯ ವಕೀಲ ಸಿಂಘಿ, ಸಿಎಂಗೆ ಮಧ್ಯಂತರ ಪರಿಹಾರ ಹಾಗೂ ಅಸಾಂವಿಧಾನಿಕ ರಾಜ್ಯಪಾಲರ ಆದೇಶ ರದ್ದುಗೊಳಿಸುವಂತೆ ಕೋರಿದರು. ಇದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ ಮೆಹ್ತಾ, ಪತ್ನಿ ಪರವಾಗಿ ಪತಿಗೆ ಪವಿತ್ರವಾದ ಹೊಣೆಗಾರಿಕೆ ಇರುತ್ತದೆ. ಎಲ್ಲ ಲೋಪಗಳನ್ನೂ ಪತಿ ಪತ್ನಿ ಮೇಲೆ ಹೊರಿಸಬಾರದು ಎಂದು ಹೇಳಿದರು.
ಪ್ರತಿಗಳನ್ನು ಯಾರಿಗೂ ಕೊಡಬೇಡಿ….:ರಾಜ್ಯಪಾಲರ ಆದೇಶದ ಒರಿಜಿನಲ್ ಫೈಲ್​ಗಳನ್ನು ತುಷಾರ್ ಮೆಹ್ತಾ ಕೋರ್ಟ್​ಗೆ ಸಲ್ಲಿಸಿದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ಸದ್ಯಕ್ಕೆ ಕಡತಗಳನ್ನು ನನ್ನ ಬಳಿಯೇ ಇಟ್ಟುಕೊಳ್ಳಬಹುದೇ? ಎಂದು ಕೇಳಿದರು. ಆಗಬಹುದು ಎಂದು ಪ್ರತಿಕ್ರಿಯಿಸಿದ ಮೆಹ್ತಾ, ಪ್ರತಿಗಳನ್ನು ಬೇರೆ ಯಾರಿಗೂ ನೀಡದಂತೆ ಸಿಎಂ ಪರ ವಕೀಲರಿಗೆ ಹಾಗೂ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ; ಅ.5ಕ್ಕೆ ಮತದಾನ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 1 =
Remember me
