|ಕೀರ್ತಿನಾರಾಯಣ ಸಿ.ಬೆಂಗಳೂರು
ಉಗ್ರರ ವಿರುದ್ಧದ ಕಾರ್ಯಾಚರಣೆಗೆಂದೇ ರಾಜ್ಯದಲ್ಲಿ 3 ಪ್ರತ್ಯೇಕ ಘಟಕಗಳಿದ್ದರೂ ತನಿಖಾ ಬಲ, ಅಗತ್ಯ ಮೂಲಸೌಕರ್ಯ ಕೊರತೆಯಿಂದಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ. ಇನ್ನೊಂದೆಡೆ, ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಉಗ್ರ ಚಟುವಟಿಕೆಗೆ ಸಂಬಂಧಿಸಿದ ಕರ್ನಾಟಕದ ಪ್ರಕರಣಗಳಲ್ಲಿ 5 ವರ್ಷದಲ್ಲಿ 31 ಮಂದಿಗೆ ಜೈಲು ಶಿಕ್ಷೆ ಹಾಗೂ 305 ಶಂಕಿತ ಉಗ್ರರ ವಿರುದ್ಧ ಆರೋಪ ದೃಢಪಡಿಸಿ ಚಾರ್ಜ್​ಶೀಟ್ ಸಲ್ಲಿಸುವ ಮೂಲಕ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸುವಲ್ಲಿ ಸಫಲವಾಗಿರುವುದು ಕೊಂಚ ಸಮಾಧಾನಕರ ವಿಷಯ.
ಪ್ರತಿಬಾರಿಯೂ ದೆಹಲಿ, ಚೆನ್ನೈ ಎನ್​ಐಎ ತಂಡಗಳು ಹಾಗೂ ದೇಶದ ಇತರ ರಾಜ್ಯಗಳ ಉಗ್ರ ನಿಗ್ರಹ ಪಡೆಗಳು ರಾಜ್ಯದಲ್ಲಿ ಉಗ್ರರ ಬೇಟೆಯಾಡಿ, ಸಂಭವನೀಯ ದಾಳಿ ತಡೆದಿವೆ. ಕರ್ನಾಟಕದಲ್ಲಿರುವ ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ), ಗುಪ್ತದಳ (ಐಬಿ) ಹಾಗೂ ಹೊಸದಾಗಿ ಸ್ಥಾಪಿತವಾಗಿರುವ ಸ್ಪೆಷಲ್ ವೆಪನ್ ಆಂಡ್ ಟ್ಯಾಕ್ಟಿಕ್ಸ್ (ಸ್ವಾ್ಯಟ್) ಪಡೆಗಳಿಗೆ ಪೂರ್ಣಪ್ರಮಾಣದ ತನಿಖಾ ಬಲ ಹಾಗೂ ಅಗತ್ಯ ಮೂಲಸೌಕರ್ಯ ಸಿಗುತ್ತಿಲ್ಲ. ಇದರಿಂದಾಗಿ ಮೂರೂ ಘಟಕಗಳು ‘ನಾಮ್ೇವಾಸ್ತೆ’ ಎಂಬಂತೆ ಅಸ್ತಿತ್ವದಲ್ಲಿವೆ. ಇದು ಕಾನೂನು ಬಾಹಿರ ಕೃತ್ಯವೆಸಗುವವರಿಗೆ ವರದಾನವಾಗಿದೆ. 2016ರಿಂದ 2021ರ ಜುಲೈ 29ರವರೆಗೆ ಕರ್ನಾಟಕದಲ್ಲಿನ ಉಗ್ರ ಕೃತ್ಯ ಸಂಬಂಧಿತ 15 ಕೇಸ್​ಗಳ ತನಿಖೆಯನ್ನು ಎನ್​ಐಎ ನಡೆಸುತ್ತಿದೆ. ಇದರಲ್ಲಿ ಬಲವಾದ ಸಾಕ್ಷ್ಯಾಧಾರ ಒದಗಿಸುವುದರೊಂದಿಗೆ 31 ಆರೋಪಿಗಳಿಗೆ ಜೈಲು ಶಿಕ್ಷೆ ಕೊಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಲ್ಲದೇ ಒಟ್ಟಾರೆ 15 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, 305 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿರುವುದು ಎನ್​ಐಎ ತನಿಖಾ ಸಾಮರ್ಥ್ಯ ತೆರೆದಿಟ್ಟಿದೆ. ಕರ್ನಾಟಕ ಉಗ್ರರ ಸ್ಲೀಪರ್ ಸೆಲ್ ಆಗಿದೆ ಎಂಬುದು ಈವರೆಗೆ ದಾಖಲಾಗಿರುವ ಪ್ರಕರಣಗಳು ಹಾಗೂ ಶಂಕಿತರ ಬಂಧನದಿಂದ ರುಜುವಾತಾಗಿದೆ. ಆದ್ದರಿಂದ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳ ಮೇಲೆ ಕಣ್ಣಿಡಲು ಹಾಗೂ ಹತ್ತಿಕ್ಕಲು ಪ್ರತ್ಯೇಕ ತನಿಖಾ ಘಟಕ ಸ್ಥಾಪಿಸಿ, ಎನ್​ಐಎ ಮಾದರಿ ತರಬೇತಿ ಕೊಟ್ಟು ಸನ್ನದ್ಧಗೊಳಿಸ ಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಗೌಪ್ಯತೆ ಭೇದಿಸದ ಗುಪ್ತದಳ:ಸಿಎಂ ಅಧೀನದಲ್ಲಿ ಕೆಲಸ ಮಾಡುವ ಗುಪ್ತದಳ ‘ರಹಸ್ಯ’ ಮಾಹಿತಿ ಭೇದಿಸುವಲ್ಲಿ ವಿಫಲವಾಗಿದೆ. ಮಾಧ್ಯಮಗಳಲ್ಲಿ ಬರುವ ಬ್ರೇಕಿಂಗ್ ನ್ಯೂಸ್ ಹಾಗೂ ಪತ್ರಕರ್ತರು ನೀಡುವ ಮಾಹಿತಿಯನ್ನೇ ರಹಸ್ಯ ಮಾಹಿತಿ ಎಂದು ವರದಿ ಒಪ್ಪಿಸಲಷ್ಟೇ ಗುಪ್ತದಳದ ಅಧಿಕಾರಿಗಳು ಸೀಮಿತವಾಗಿದ್ದಾರೆ. 2020ರ ಪೊಲೀಸ್ ಸಂಶೋಧನೆ ಹಾಗೂ ಅಭಿವೃದ್ಧಿ ಬ್ಯೂರೋ (ಬಿಪಿಆರ್ ಆಂಡ್ ಡಿ) ಮಾಹಿತಿ ಪ್ರಕಾರ ರಾಜ್ಯ ಗುಪ್ತದಳಕ್ಕೆ 1286 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 777 ಹುದ್ದೆಗಳಷ್ಟೇ ಭರ್ತಿಯಾಗಿದ್ದು, ಇನ್ನೂ 509 ಹುದ್ದೆಗಳು ಖಾಲಿ ಉಳಿದಿವೆ. ಖಾಲಿ ಹುದ್ದೆಗಳ ಭರ್ತಿ ಮಾಡುವ ಜತೆಗೆ ಅಗತ್ಯ ಸೌಲಭ್ಯ ಕೊಟ್ಟು ಬಲಪಡಿಸಬೇಕಿದೆ.
ಐಎಸ್​ಡಿಗೆ ತನಿಖೆಯ ಸ್ವಾತಂತ್ರ್ಯ ಇಲ್ಲ:ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ಉದ್ದೇಶದಿಂದ 2008ರ ಡಿ.12ರಂದು ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ) ರಾಜ್ಯದಲ್ಲಿ ಸ್ಥಾಪನೆಯಾಗಿದೆ. ಆದರೆ, ಸದ್ಯ ಗೌಪ್ಯ ಮಾಹಿತಿ ಸಂಗ್ರಹಿಸಲಷ್ಟೇ ಸೀಮಿತವಾಗಿದೆ. ಸ್ವತಂತ್ರವಾಗಿ ಎಫ್​ಐಆರ್ ದಾಖಲಿಸುವ ಮತ್ತು ತನಿಖೆ ನಡೆಸುವ ಅಧಿಕಾರ ಇಲ್ಲ. ಸ್ವತಂತ್ರ ತನಿಖೆಗೆ ಅನುಮತಿ ಕೊಡುವಂತೆ ಸರ್ಕಾರಕ್ಕೆ ಈ ಹಿಂದಿನ ಹಲವು ಅಧಿಕಾರಿಗಳು ಮನವಿ ಮಾಡಿದ್ದರೂ ಸಮ್ಮತಿ ಸಿಕ್ಕಿಲ್ಲ.
5 ವರ್ಷದಲ್ಲಿ 670 ಮಂದಿಗೆ ಶಿಕ್ಷೆ:ಕಳೆದ 5 ವರ್ಷದಲ್ಲಿ (2016ರಿಂದ 2021ರ ಜು.29ರವರೆಗೆ) ಎನ್​ಐಎ ಅಧಿಕಾರಿಗಳು ದೇಶದ 30 ರಾಜ್ಯಗಳಲ್ಲಿ ಉಗ್ರರಿಗೆ ಸಂಬಂಧಿಸಿದ 288 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದರಲ್ಲಿ 670 ಆರೋಪಿಗಳಿಗೆ ಜೈಲು ಶಿಕ್ಷೆ ಕೊಡಿಸುವಲ್ಲಿ ಎನ್​ಐಎ ಯಶಸ್ವಿಯಾಗಿದ್ದು, 1412 ಆರೋಪಿಗಳ ವಿರುದ್ಧದ ಆರೋಪ ಸಾಕ್ಷ್ಯಸಮೇತ ಸಾಬೀತಾಗಿದೆ. ಎಲ್ಲ ಪ್ರಕರಣಗಳಲ್ಲೂ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಕರ್ನಾಟಕದಲ್ಲಿ 7 ತಿಂಗಳಲ್ಲಿ 2 ಪ್ರಕರಣ ದಾಖಲಿಸಿದ್ದು, ಒಬ್ಬನಿಗೆ ಜೈಲು ಶಿಕ್ಷೆಯಾಗಿದೆ. 250 ಆರೋಪಿಗಳ ವಿರುದ್ಧದ ಆರೋಪ ಕೋರ್ಟ್ ವಿಚಾರಣೆಯಲ್ಲಿ ದೃಢಪಟ್ಟಿದೆ.
ಮುಂಬೈ ಎಟಿಎಸ್ ಬೆಸ್ಟ್:ಮಹಾರಾಷ್ಟ್ರ, ಗುಜರಾತ್, ಆಂಧ್ರ, ರಾಜಸ್ಥಾನ, ಜಾರ್ಖಂಡ್ ಇನ್ನಿತರ ರಾಜ್ಯ ಗಳಲ್ಲಿರುವಂತೆ ಸಂಪೂರ್ಣ ಸಾಮರ್ಥ್ಯದ ಪ್ರತ್ಯೇಕ ಭಯೋತ್ಪಾದಕ ನಿಗ್ರಹ ದಳ ಕರ್ನಾಟಕಕ್ಕೂ ಬೇಕಿದೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ ಮಹಾರಾಷ್ಟ್ರ ಎಟಿಎಸ್ ಬಲಾಢ್ಯವಾಗಿದೆ. ದೇಶದಲ್ಲಿ ಸಕ್ರಿಯವಾಗಿರುವ ಎಲ್ಲ ಉಗ್ರ ಸಂಘಟನೆಗಳು, ಅದರ ಸದಸ್ಯರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ಬಾಂಬ್ ಸ್ಫೋಟ ಪ್ರಕರಣಗಳು, ಬಂಧಿತ ಉಗ್ರರು ಮತ್ತು ತನಿಖಾ ಪ್ರಗತಿಯನ್ನು ದಾಖಲು ಮಾಡಿದ್ದಾರೆ.
ಬೆಂಗಳೂರಿಗಾಗಿ ಸ್ವಾ್ಯಟ್ ಟೀಂ:ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆ ಹತ್ತಿಕ್ಕಲು ಬೆಂಗಳೂರು ಭದ್ರತೆ ಮತ್ತು ಸುರಕ್ಷತೆಗೆ ಸೀಮಿತವಾಗಿ ಸ್ವಾ್ಯಟ್ ಪಡೆ ರಚಿಸಲಾಗಿದೆ. ಮೊದಲ ಹಂತದಲ್ಲಿ ಸಿಎಆರ್ ಘಟಕಗಳಿಂದ 8 ಆರ್​ಎಸ್​ಐ ಮತ್ತು 120 ಸಿಬ್ಬಂದಿ ಆಯ್ಕೆ ಮಾಡಿ ನಾಲ್ಕು ತಂಡಗಳಾಗಿ ರಚಿಸಿ, ಆಧುನಿಕ ಸಲಕರಣೆಗಳ ಬಳಕೆಯ ತರಬೇತಿ ನೀಡಿ ಸನ್ನದ್ಧಗೊಳಿಸಲಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಆದರೆ, ಈ ತಂಡವು ಸೂಕ್ಷ್ಮ ಪ್ರದೇಶಗಳಲ್ಲಿ ಮಾಕ್ ಡ್ರಿಲ್ ಮಾಡಲಷ್ಟೇ ಸೀಮಿತವಾಗಲಿದ್ದು, ಬೇರ್ಯಾವುದೇ ರೀತಿಯ ತನಿಖಾ ಬಲವಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eighteen =
Remember me
