ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಹೊರತುಪಡಿಸಿ ರಾಜ್ಯದ 421 ಪದವಿ ಕಾಲೇಜುಗಳಿಗೆ ಹಲವು ವರ್ಷಗಳಿಂದ ಕಾಯಂ ಪ್ರಾಂಶುಪಾಲರೇ ಇಲ್ಲ!
ಈಗ ಯುಜಿಸಿ ನಿಯಮ ಅನ್ವಯಿಸಿ, ರಾಷ್ಟ್ರ ಮಟ್ಟದಲ್ಲಿ ಅರ್ಜಿ ಆಹ್ವಾನಿಸಿ ಹುದ್ದೆ ಭರ್ತಿಯ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದ್ದು, ಪ್ರಾಂಶುಪಾಲರಾಗುವ ಕನಸು ಕಾಣುತ್ತಿದ್ದ ಸ್ಥಳೀಯರಲ್ಲಿ ಅವಕಾಶ ವಂಚಿತವಾಗುವ ಆತಂಕ ಶುರುವಾಗಿದೆ.
ಖಾಲಿ ಇರುವ ಹುದ್ದೆಗಳ ಪೈಕಿ 310 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿ 2 ತಿಂಗಳ ಹಿಂದೆಯೇ ಸಚಿವ ಸಂಪುಟ ಒಪ್ಪಿಗೆ ನೀಡಿದ್ದರೂ ನೇಮಕ ಪ್ರಕ್ರಿಯೆ ನನೆಗುದಿ ಬಿದ್ದಿದೆ. ಈ ಹುದ್ದೆಗಳ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆಯು ಯಾವ ರಾಜ್ಯಗಳೂ ಇದುವರೆಗೆ ಅನುಸರಿಸದ ಯುಜಿಸಿ ಮಾನದಂಡಗಳನ್ನು ಅಳವಡಿಸಿ ನೇಮಕ ಪ್ರಕ್ರಿಯೆ ನಡೆಸಲು ತಯಾರಿ ನಡೆಸಿದೆ.
ಕಾಯಂ ಪ್ರಾಂಶುಪಾಲರಿಲ್ಲದೆ ಬಹುತೇಕ ಕಾಲೇಜುಗಳಲ್ಲಿ ಆಡಳಿತ ಶಿಸ್ತು ಹದಗೆಟ್ಟಿದೆ. ಅನುಭವ ಕೊರತೆಯಿಂದ ಸುಧಾರಣಾ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. 2009 ಮತ್ತು ಕೆಲವು ಕಡೆ 2017ರಲ್ಲಿ ನೇಮಕಗೊಂಡ ಸೇವಾ ಪೂರ್ವ ಅವಧಿ ಘೋಷಣೆಯಾಗದ ಪ್ರಾಧ್ಯಾಪಕರೂ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ.
ಸಮಸ್ಯೆ ಏನು?:ರಾಷ್ಟ್ರ ಮಟ್ಟದಲ್ಲಿ ಅರ್ಜಿ ಆಹ್ವಾನಿಸಿ ನೇಮಕ ಮಾಡುವುದರಿಂದ ಅನ್ಯಭಾಷಿಕರಿಗೆ ಮಣೆ ಹಾಕಿದಂತಾಗುತ್ತದೆ. ಹೊರ ರಾಜ್ಯದವರಿಗೆ ಅವಕಾಶ ಮಾಡಿಕೊಟ್ಟರೆ ಸ್ಥಳೀಯ ಭಾಷಾ ಸಂವಹನ ಸಮಸ್ಯೆ ಎದುರಾಗುತ್ತದೆ.
ವಿದ್ಯಾರ್ಥಿಗಳ ಪಾಲಕರು, ಕಾಲೇಜು ಅಭಿವೃದ್ಧಿ ಸಮಿತಿಗಳೊಂದಿಗೆ ವ್ಯವಹರಿಸಲು ಭಾಷಾ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಬೇರೆ ಯಾವ ರಾಜ್ಯಗಳೂ ಈ ನಿಯಮ ಅಳವಡಿಸಿ ನೇಮಕ ಮಾಡಿದ ಉದಾಹರಣೆ ಇಲ್ಲ. ಹೀಗಿರುವಾಗ ನಮ್ಮ ರಾಜ್ಯದಲ್ಲೇಕೆ ಎಂಬ ಪ್ರಶ್ನೆಯೂ ತಲೆ ಎತ್ತಿದೆ. ಜತೆಗೆ ಖಾಸಗಿ ಅನುದಾನಿತ ಕಾಲೇಜು ಪ್ರಾಧ್ಯಾಪಕರು ಈ ಹುದ್ದೆಗಳಿಗೆ ಆಯ್ಕೆಯಾದರೆ ಅವರ ಮೇಲೆ ಸರ್ಕಾರದ ನಿಯಂತ್ರಣ ಕಷ್ಟ ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.
ಗೊಂದಲದ ಗೂಡು
ಈ ನಡುವೆ ಪ್ರಾಂಶುಪಾಲರ ಹುದ್ದೆ ಗಿಟ್ಟಿಸಿಕೊಳ್ಳಲು ಪೈಪೋಟಿ ಕೂಡ ಶುರುವಾಗಿದೆ. ಪಿಎಚ್​ಡಿ ಮಾಡಿದವರಿಗೆ ಆದ್ಯತೆ ನೀಡಬೇಕೆಂದು ಪಿಎಚ್​ಡಿ ಪದವಿ ಪಡೆದ ಪ್ರ್ರಾಧ್ಯಾಪಕರ ಸಂಘಟನೆ ಬೇಡಿಕೆ ಇಟ್ಟಿದೆ. ಸೇವಾ ಜ್ಯೇಷ್ಠತೆ ಆಧರಿಸಿ ನೇಮಕ ಮಾಡಿ, ಪಿಎಚ್​ಡಿ ಹಾಗೂ ಸೇವಾ ಜ್ಯೇಷ್ಠತೆ 50/50 ಪರಿಗಣಿಸಿ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದವರನ್ನೂ ಪರಿಗಣಿಸಿ… ಹೀಗೆ ವಿವಿಧ ಗುಂಪುಗಳು ಒಂದೊಂದು ರೀತಿಯಲ್ಲಿ ಒತ್ತಡ ಹಾಕುತ್ತಿವೆ.
ಇದರಿಂದಾಗಿ ಪ್ರಾಂಶುಪಾಲರ ಹುದ್ದೆ ಭರ್ತಿ ಗೊಂದಲದ ಗೂಡಾಗಿದೆ. ಪದವಿ ಕಾಲೇಜು ಪ್ರಾಂಶುಪಾಲರ ಹುದ್ದೆಗೆ ಯುಜಿಸಿ ಆಲ್ ಇಂಡಿಯಾ ಸೆಲೆಕ್ಷನ್ ಎಂಬ ನಿಯಮ ಮಾಡಿದ್ದರೂ ಇದುವರೆಗೆ ಯಾವುದೇ ರಾಜ್ಯ ಪಾಲಿಸಿಲ್ಲ. ಆಯಾ ರಾಜ್ಯಗಳಿಗೇ ಸೀಮಿತಗೊಳಿಸಿ ನೇಮಕ ಮಾಡಿಕೊಂಡಿವೆ. ನಮ್ಮ ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಬೇಕು ಎಂಬ ವಾದವೂ ಇದೆ.
ಏನಾದ್ರೂ ಮಾಡಿ, ನೇಮಕ ಮಾಡಿ
2014ರಲ್ಲಿ ಸೇವಾ ಜ್ಯೇಷ್ಠತೆ ಆಧರಿಸಿ ಅನ್ಯ ಕಾರ್ಯ ನಿಮಿತ್ತ (ಒಒಡಿ)ದಡಿ ಪ್ರಾಂಶುಪಾಲರ ಹುದ್ದೆಗೆ ಕೌನ್ಸೆಲಿಂಗ್ ಮೂಲಕ ನೇಮಕ ಮಾಡಲಾಗಿತ್ತು. ಈಗ ಅದನ್ನು ಮಾಡಲೂ ಸರ್ಕಾರ ಸಿದ್ಧವಿಲ್ಲ. ಕಾರಣ ಕಾಲೇಜು ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಮಾನದಂಡ ಯಾವುದೇ ಆಗಲಿ ಕೂಡಲೇ ಕಾಯಂ ಪ್ರಾಂಶುಪಾಲರನ್ನು ನೇಮಕ ಮಾಡಬೇಕೆಂಬುದು ವಿದ್ಯಾರ್ಥಿ ಸಂಘಟನೆಗಳ ಆಗ್ರಹ.
ಎರಡು ತಿಂಗಳ ಹಿಂದೆಯೇ ಸಚಿವ ಸಂಪುಟ ಹಾಗೂ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದರೂ ಹುದ್ದೆ ಭರ್ತಿ ಮಾಡದೆ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ. ಯುಜಿಸಿ ನಿಯಮದಡಿಯಲ್ಲೇ ಕೆಲ ಅಗತ್ಯ ಬದಲಾವಣೆಯೊಂದಿಗೆ ಪ್ರಾಂಶುಪಾಲರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
| ಡಾ.ಟಿ.ಎಂ. ಮಂಜುನಾಥ್ ಅಧ್ಯಕ್ಷ, ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ
| ವಿಲಾಸ ಮೇಲಗಿರಿ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 7 =
Remember me
