| ಕೀರ್ತಿನಾರಾಯಣ ಸಿ. ಬೆಂಗಳೂರು
ಕಳ್ಳತನ, ದರೋಡೆ, ಸುಲಿಗೆ, ವಂಚನೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಕಣ್ಣಿಗೆ ಕಾಣಿಸದ ಸೈಬರ್ ಅಪರಾಧ ಹೆಚ್ಚುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಸೈಬರ್ ವಂಚಕರ ಪಾಲಾದ ಹಣವನ್ನು ಬ್ಯಾಂಕ್ ಖಾತೆಯಲ್ಲೇ ಫ್ರೀಜ್ ಮಾಡಿ ವಾಪಸ್ ಕೊಡಿಸುವಲ್ಲಿ ಪೊಲೀಸರು ಸ್ವಲ್ಪಮಟ್ಟಿನ ಯಶಸ್ಸು ಕಂಡರೂ ‘ಸೈಬರ್ ಖದೀಮ’ರನ್ನು ಪತ್ತೆಹಚ್ಚಿ ಜೈಲುಶಿಕ್ಷೆ ಕೊಡಿಸುವಲ್ಲಿ ನಿರೀಕ್ಷಿತ ಫಲ ಸಿಗುತ್ತಿಲ್ಲ.
ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್​ಸಿಆರ್​ಬಿ) ಅಂಕಿ-ಅಂಶದ ಪ್ರಕಾರ ದೇಶದಲ್ಲಿ ಸೈಬರ್ ಅಪರಾಧಗಳು ಶೇ.24 ಹೆಚ್ಚಾಗಿವೆ. ಸೈಬರ್ ಕ್ರೖೆಂನಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ದೇಶದ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಪೊಲೀಸರು ಎಷ್ಟೇ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮುಖೇನ ಅರಿವು ಮೂಡಿಸುತ್ತಿದ್ದರೂ ಸೈಬರ್ ಜಾಲಕ್ಕೆ ಸಿಕ್ಕಿಬೀಳುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಸುಶಿಕ್ಷಿತರು, ಶ್ರೀಮಂತ ವ್ಯಕ್ತಿಗಳೇ ವಂಚನೆಗೆ ಒಳಗಾಗುತ್ತಿದ್ದಾರೆ.
ದೇಶದಲ್ಲಿ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 65,893 ಕೇಸ್​ಗಳು ವರದಿಯಾಗಿವೆ. 2023ರಲ್ಲಿ ಬರೀ 11 ತಿಂಗಳಲ್ಲಿ 10.10 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ. ಆದರೆ, ಜೈಲುಶಿಕ್ಷೆಗೆ ಗುರಿಯಾದವರ ಸಂಖ್ಯೆ ನಾಲ್ಕಂಕಿ ದಾಟಿಲ್ಲ. 2021ರಲ್ಲಿ 736 ಮಂದಿ ಹಾಗೂ 2022ರಲ್ಲಿ 1407 ಸೈಬರ್ ಖದೀಮರಿಗಷ್ಟೇ ಜೈಲುಸಜೆಯಾಗಿದೆ. ಕೆಲ ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ಸಿಕ್ಕಿಲ್ಲ. ಮತ್ತೆ ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಸಿಕ್ಕರೂ ಅಪರಾಧ ಸಾಬೀತುಪಡಿಸುವಂತಹ ಸಾಕ್ಷ್ಯಾಧಾರವಿಲ್ಲದೆ ಬಿಡುಗಡೆಯಾಗಿದ್ದಾರೆ. ಇನ್ನೂ ಕೆಲ ಕೇಸ್​ಗಳು ಕೋರ್ಟ್​ಗಳಲ್ಲಿ ವಿಚಾರಣಾ ಹಂತದಲ್ಲಿವೆ.
ಸಮಾಧಾನದ ವಿಚಾರವೆಂದರೆ ವಂಚಕರು ಲಪಟಾಯಿಸುವ ಜನರ ದುಡ್ಡನ್ನು ರಕ್ಷಣೆ ಮಾಡಲು ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್​ನ ಭಾಗವಾಗಿ ಸಿಟಿಜ್ಹೆನ್ ಫೈನಾನ್ಶಿಯಲ್ ಸೈಬರ್ ಫ್ರಾಡ್ಸ್ ರಿಪೋರ್ಟಿಂಗ್ ಆಂಡ್ ಮ್ಯಾನೇಜ್​ವೆುಂಟ್ ಸಿಸ್ಟಂ (ಸಿಎಫ್​ಸಿಎಫ್​ಆರ್​ಎಂಎಸ್) ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಪ್ರಮುಖ ಬ್ಯಾಂಕ್​ಗಳು, ಇ ಕಾಮರ್ಸ್ ಕಂಪನಿಗಳು, ವ್ಯಾಲೆಟ್​ಗಳು, ಕ್ರಿಪ್ಟೋ ಎಕ್ಸ್ ಚೇಂಜ್ ಕಂಪನಿಗಳಿಗೆ ಒಂದೇ ವೇದಿಕೆ ಕಲ್ಪಿಸಿದೆ.
ಸೈಬರ್ ವಂಚನೆಗೆ ಒಳಗಾದ ತಕ್ಷಣವೇ ಸಂತ್ರಸ್ತರು 1930 ಹೆಲ್ಪ್​ಲೈನ್​ಗೆ ಕರೆ ಮಾಡಿ ದೂರು ಕೊಟ್ಟರೆ, ಕೂಡಲೇ ಸಂತ್ರಸ್ತರ ಖಾತೆಯಿಂದ ಸೈಬರ್ ವಂಚಕರ ಖಾತೆಗೆ ವರ್ಗಾವಣೆಯಾದ ಹಣವನ್ನು ಫ್ರೀಜ್ ಮಾಡಲಾಗುತ್ತದೆ. ನಂತರ ಕಾನೂನು ಪ್ರಕ್ರಿಯೆ ಮೂಲಕ ಸಂತ್ರಸ್ತರಿಗೆ ವಾಪಸ್ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ 2021 ಏಪ್ರಿಲ್ 1ರಿಂದ ಇಲ್ಲಿವರೆಗೆ 4 ಲಕ್ಷ ಸೈಬರ್ ಕೇಸ್​ಗಳಲ್ಲಿ ವಂಚಕರು ಲಪಟಾಯಿಸಿದ್ದ 1000 ಕೋಟಿ ರೂ.ಗೂ ಅಧಿಕ ಹಣವನ್ನು ಸಂತ್ರಸ್ತರಿಗೆ ತಲುಪಿಸಲಾಗಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐಸಿಸಿಸಿಸಿ) ಮಾಹಿತಿ ಅನ್ವಯ 2021ರ ಏ.1ರಿಂದ ಈವರೆಗೆ ದೇಶದಲ್ಲಿ 10,300 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿದೆ. ಇದರಲ್ಲಿ ಶೇ.10 ಹಣವನ್ನು ಬ್ಯಾಂಕ್ ಖಾತೆಗಳಲ್ಲೇ ಫ್ರೀಜ್ ಮಾಡಿ, ಸಂತ್ರಸ್ತರಿಗೆ ವಾಪಸ್ ಕೊಡಲಾಗಿದೆ.
ಆರೋಪಿಗಳ ಪತ್ತೆಯಲ್ಲಿ ರಾಜ್ಯ ಹಿಂದೆಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕರ್ನಾಟಕದ ಪೊಲೀಸರು ಹಿಂದೆ ಬಿದ್ದಿರುವ ವಿಚಾರ ಎನ್​ಸಿಆರ್​ಬಿ ವರದಿಯಲ್ಲಿ ಉಲ್ಲೇಖಿಸಿದೆ. ಇದಕ್ಕೆ ತಂತ್ರಜ್ಞಾನ, ಸೌಲಭ್ಯದ ಕೊರತೆ ಎಂದು ಅಧಿಕಾರಿಗಳು ಹೇಳಿದ್ದಾರೆ. 12,556 ಪ್ರಕರಣಗಳಲ್ಲಿ 612 ಪುರುಷರು, 67 ಮಹಿಳಾ ವಂಚಕರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರು 8,249 ಪ್ರಕರಣಗಳಲ್ಲಿ 15 ಮಹಿಳೆಯರು ಸೇರಿ 7,122 ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಕ್ಷೆ ಆಗದಿರಲು ಕಾರಣ
· ದೇಶ ಹಾಗೂ ವಿದೇಶದ ಅಜ್ಞಾತ ಸ್ಥಳದಲ್ಲಿ ಕುಳಿತು ಸೈಬರ್ ಅಪರಾಧ ಎಸಗುವ ವಂಚಕರು.
· ಖದೀಮರನ್ನು ಪತ್ತೆಹಚ್ಚಲು ಬೇಕಾದ ಆಧುನಿಕ ತಂತ್ರಜ್ಞಾನದ ಸೌಲಭ್ಯ ಇಲ್ಲದಿರುವುದು.
· ಹೊರರಾಜ್ಯ ಹಾಗೂ ವಿದೇಶಕ್ಕೆ ತೆರಳಿ ಬಂಧಿಸಲು ಬೇಕಾದ ಸೌಕರ್ಯವನ್ನು ಸರ್ಕಾರ ಕೊಟ್ಟಿಲ್ಲ.
· ಸೈಬರ್ ಅಪರಾಧಗಳ ತನಿಖೆ ಇನ್​ಸ್ಪೆಕ್ಟರ್ ಹಾಗೂ ಅದಕ್ಕಿಂತ ಮೇಲ್ಪಟ್ಟವರೇ ಮಾಡಬೇಕು.
· ಕೆಲ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದರೂ ಸಾಕ್ಷ್ಯಾಧಾರ ಕೊರತೆಯಿಂದ ಬಿಡುಗಡೆ.
· ಮತ್ತೆ ಕೆಲ ಪ್ರಕರಣಗಳಲ್ಲಿ ಬಿಗಿ ನಿಯಮಗಳಿಲ್ಲದ ಕಾರಣ ತಕ್ಷಣವೇ ಜಾಮೀನು ಸಿಗುತ್ತಿರುವುದು.
ಸರ್ಕಾರ ಏನೆಲ್ಲ ಮಾಡಿದೆ?
· ಸೈಬರ್ ಕ್ರೖೆಂ ಹಾಟ್​ಸ್ಪಾಟ್​ಗಳನ್ನು ಆಧರಿಸಿ ಮೇವಾಟ್, ಜಮ್ತಾರಾ, ಅಹಮದಾಬಾದ್, ಹೈದರಾಬಾದ್, ಚಂಡೀಗಢ, ವಿಶಾಖಪಟ್ಟಣಂ, ಗುವಾಹಟಿಯಲ್ಲಿ ಜಂಟಿ ಸೈಬರ್ ಸಮನ್ವಯ ತಂಡಗಳ ರಚನೆ.
· ಆಯಾ ರಾಜ್ಯಗಳ ತನಿಖಾಧಿಕಾರಿಗಳ ನೆರವಿಗೆ ದೆಹಲಿಯಲ್ಲಿ ರಾಷ್ಟ್ರೀಯ ಸೈಬರ್ ಫಾರೆನ್ಸಿಕ್ ಲ್ಯಾಬರೇಟರಿ ಸ್ಥಾಪನೆ. ಜತೆಗೆ 8840 ಮೊಬೈಲ್ ಫಾರೆನ್ಸಿಕ್ ವ್ಯವಸ್ಥೆ ಕಲ್ಪಿಸಲಾಗಿದೆ.
· ಸೈಬರ್ ಕ್ರೖೆಂ ಪ್ರಕರಣಗಳ ತನಿಖಾ ಕ್ರಮಗಳ ತರಬೇತಿಗಾಗಿ ‘ಸೈಟ್ರೖೆನ್’ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಆನ್​ಲೈನ್ ತರಬೇತಿ ನೀಡಲಾಗುತ್ತದೆ.
ಈ ಫೋಟೋದಲ್ಲಿರುವ 3ನೇ ಸಿಂಹವನ್ನು ಪತ್ತೆಹಚ್ಚುವಲ್ಲಿ ಶೇ. 99 ಮಂದಿ ವಿಫಲ! ಸಾಧ್ಯವಾದ್ರೆ ಪತ್ತೆಹಚ್ಚಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
