ಉತ್ತಮ ಇಳುವರಿ ಅನುಮಾನ:ರಾಯಚೂರು ಜಿಲ್ಲೆಯಲ್ಲಿ ಶೇ.63.35 ಬಿತ್ತನೆಯಾಗಿದ್ದು, ತುಂಗಭದ್ರಾ ಜಲಾಶಯದಿಂದ ಕೆಲವು ದಿನಗಳ ಹಿಂದೆ ಕಾಲುವೆಗೆ ನೀರು ಹರಿಸಿದ್ದರಿಂದ ರೈತರು ಇನ್ನೂ ಭತ್ತ ನಾಟಿ ನಡೆಸುತ್ತಿದ್ದಾರೆ. ಆದರೆ ಒಣ ಭೂಮಿ ಪ್ರದೇಶದ ರೈತರು ಸಮರ್ಪಕ ಮಳೆಯಿಲ್ಲದೆ ಚಿಂತೆಗೀಡಾಗಿದ್ದಾರೆ. ತಡವಾಗಿ ಬಿತ್ತನೆ ಮಾಡಿರುವುದರಿಂದ ಉತ್ತಮ ಇಳುವರಿ ಸಾಧ್ಯತೆ ಕಡಿಮೆಯಿದೆ. ಅಕ್ಕಪಕ್ಕದಲ್ಲಿ ಎರಡು ನದಿಗಳಿದ್ದರೂ ಜಿಲ್ಲೆಯಲ್ಲಿ ನಿರ್ವಹಣೆ ಕೊರತೆಯಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.
ಬಳ್ಳಾರಿಯಲ್ಲಿ ಬಿಸಿಲೇ ಅಧಿಕ:ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1.73 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ 50,737 ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಮಳೆ ಕೊರತೆ ವಿಪರೀತ ಕಾಡುತ್ತಿದ್ದು, ಶೇ.30 ಮಳೆ ಅಭಾವ ಆಗಿದೆ. ಕಳೆದ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು. ಈ ವರ್ಷ ಮುಂಗಾರು ದುರ್ಬಲ ಆಗಿದ್ದರಿಂದ ಕೆನಾಲ್​ನಲ್ಲಿ ನೀರು ಹರಿಸುವುದು ವಿಳಂಬವಾಗಿದ್ದರಿಂದ ಭತ್ತ ನಾಟಿ ಸೇರಿದಂತೆ ಬಿತ್ತನೆ ಕಾರ್ಯ ಕೂಡ ಆಮೆಗತಿಯಲ್ಲಿ ಸಾಗಿದೆ.
ಬಿತ್ತನೆ ಕಾರ್ಯವೇ ಮುಗಿದಿಲ್ಲ:ಕೋಲಾರ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳು ಆರಂಭಗೊಂಡರೂ ಮಳೆ ಬಾರದಿರುವುದರಿಂದ ಈವರೆಗೆ ಕೇವಲ ಶೇ.20 ಮಾತ್ರ ಮುಂಗಾರು ಬಿತ್ತನೆಯಾಗಿದೆ. ರಾಗಿ ಬಿತ್ತನೆಗೆ ಆ.20ರವರೆಗೆ ಅವಧಿ ಇದ್ದು ರೈತರು ವರುಣನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ಬಿತ್ತನೆಯಾಗಿರುವ ನೆಲಗಡಲೆ, ತೊಗರಿ, ಅಲಸಂದೆ, ಜೋಳ ಹಾಗೂ ಸಿರಿಧಾನ್ಯ ಬೆಳೆಗಳು ಅರ್ಧ ಅಡಿಯಷ್ಟು ಬೆಳೆದಿದ್ದು, ಮಳೆಯಿಲ್ಲದೆ ಒಣಗುತ್ತಿವೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆಯಾಗದಿರುವುದರಿಂದ ಹೊಲಗಳಲ್ಲಿ ಬಿತ್ತನೆ ಮಾಡಿರುವ ರಾಗಿ ಪೈರುಗಳು ಒಣಗುತ್ತಿವೆ.
ಅನಿಯಂತ್ರಿತ ಲೋಡ್​ಶೆಡ್ಡಿಂಗ್:ತುಮಕೂರು ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು ಸುಮಾರು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ರಾಗಿ ಹಾಗೂ ಶೇಂಗಾ ಬೆಳೆ ಒಣಗಲಾರಂಭಿಸಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ ಹಾಗೂ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಅನಿಯಂತ್ರಿತ ಲೋಡ್ ಶೆಡ್ಡಿಂಗ್ ಜಿಲ್ಲೆಯಲ್ಲೆಡೆ ಜಾರಿಯಲ್ಲಿದ್ದು, ತೀವ್ರ ತೊಂದರೆಯಾಗಿದೆ.
ಮೈಸೂರಲ್ಲಿ ಜಲಕ್ಷಾಮದ ಆತಂಕ:ಮೈಸೂರು ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಆದರೆ, ಮಳೆಯ ಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಎದುರಾಗುವ ಪರಿಸ್ಥಿತಿ ನಿರ್ವಣವಾಗುವುದು ನಿಶ್ಚಿತ. ಜಿಲ್ಲೆಯಲ್ಲಿ ಮುಂಗಾರು ದುರ್ಬಲಗೊಂಡಿದ್ದು, ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಗುರಿಗಿಂತ ಶೇ.52 ಮಳೆ ಕೊರತೆ ಕಂಡುಬಂದಿದೆ. ಜಿಲ್ಲೆಯ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ತಮಿಳುನಾಡಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಜಿಲ್ಲೆಯಲ್ಲಿ ಕೃಷಿ ಚುಟುವಟಿಕೆ ಕೈಗೊಳ್ಳಲು ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ತೀರ್ವನಿಸಲಾಗಿದೆ.
ಕೃಷಿ ಬಳಕೆಗೆ ನೀರಿಲ್ಲ:ಹಾಸನ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಇಲ್ಲಿಯವರೆಗೂ ಭರ್ತಿಯಾಗಿಲ್ಲ. ಸದ್ಯಕ್ಕೆ ಜಲಾಶಯದಲ್ಲಿರುವ ನೀರು ವರ್ಷಪೂರ್ತಿ ಕುಡಿಯಲು ಹಾಗೂ ಕೆರೆ-ಕಟ್ಟೆಗಳನ್ನು ತುಂಬಿಸಲು ಸಾಕಾಗಬಹುದೇ ಹೊರತು, ಕೃಷಿ ಬಳಕೆಗೆ ನೀಡಲು ಆಗ್ಙುವುದಿಲ್ಲ. ಕಳೆದ ನಾಲ್ಕು ದಿನಗಳಿಂದ ಕುಡಿಯುವ ಉದ್ದೇಶಕ್ಕೆ ಮಾತ್ರ ನಾಲೆಗಳ ಮೂಲಕ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಯಗಚಿ ಜಲಾಶಯ, ವಾಟೆಹೊಳೆ ಜಲಾಶಯಗಳು ಭರ್ತಿಯಾಗಿದ್ದು, ನಾಲೆಗಳಿಗೆ ನೀರು ಹರಿಸಲಾಗುತ್ತಿದೆ.
ಬಾಡುತ್ತಿದೆ ರೈತರ ಬದುಕು:ವಿಜಯನಗರ ಜಿಲ್ಲೆಯಲ್ಲಿ 2.93 ಲಕ್ಷ ಹೆಕ್ಟೇರ್ ಗುರಿಯಲ್ಲಿ ಶೇ.85 ಬಿತ್ತನೆಯಾಗಿದೆ. ಈಗಾಗಲೆ ಭೂಮಿಯಿಂದ ಮೇಲೆದ್ದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಜುಲೈನಲ್ಲಿ ಉತ್ತಮ ಮಳೆಯಾಗಿದ್ದರಿಂದ ನಿರೀಕ್ಷೆಗೂ ಮೀರಿ ಬಿತ್ತನೆಯಾಗಿದೆ. ಆದರೆ ಕಳೆದ ಒಂದು ವಾರದಿಂದ ಮಳೆಯ ಸುಳಿವಿಲ್ಲ. ಸೂರ್ಯನ ಪ್ರಖರ ಹೆಚ್ಚಿ, ಭೂಮಿಯ ತೇವಾಂಶವೂ ಕಡಿಮೆಯಾಗುತಿದೆ. ಇನ್ನೂ ಒಂದು ವಾರ ಇದೇ ವಾತಾವರಣ ಮುಂದುವರಿದರೆ, ಬೆಳೆಗಳು ಬಾಡುತ್ತವೆ.
ಕೊಡಗಲ್ಲಿ ಮೇವಿಗೂ ತತ್ವಾರ:ಕೊಡಗು ಜಿಲ್ಲೆಯಲ್ಲಿ ಇಷ್ಟೊತ್ತಿಗಾಗಲೇ ಅಬ್ಬರಿಸುತ್ತಿರಬೇಕಾಗಿದ್ದ ಮಳೆರಾಯ ಶಾಂತವಾಗಿದ್ದಾನೆ. ಜಿಲ್ಲೆಯಲ್ಲಿ ಜಾನುವಾರುಗಳ ಮೇವಿನ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ರೈತಾಪಿ ವರ್ಗದ ಆತಂಕಕ್ಕೆ ಕಾರಣವಾಗಿದೆ. ಈ ವರ್ಷ ವಾಡಿಕೆಗಿಂತ ಸುಮಾರು ಶೇ. 50 ಮಳೆ ಕಡಿಮೆಯಾಗಿದೆ. ಭತ್ತದ ಕೃಷಿಗೆ ಹೆಚ್ಚು ನೀರು ಬೇಕಿರುವುದರಿಂದ ಈ ಬಾರಿ ಭತ್ತ ಬೆಳೆಯುವುದು ಕಷ್ಟವಾಗಲಿದೆ. ಕಾಫಿ ಮತ್ತು ಕರಿಮೆಣಸಿಗೆ ಸದ್ಯದ ಮಟ್ಟಿಗೆ ಈಗಿರುವ ತೇವಾಂಶ ಸಾಕು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಮಸ್ಯೆ ಆಗಲಿದೆ.
ಲಿಂಗನಮಕ್ಕಿ ಅರ್ಧ ಮಾತ್ರ ಭರ್ತಿ:ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಮಳೆ ಸಂಪೂರ್ಣ ಕಡಿಮೆಯಾಗಿದೆ. 1,819 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯ ಭಾನುವಾರಕ್ಕೆ 1,790.70 ಅಡಿಗೆ ತಲುಪಿದೆ. ಶರಾವತಿ ಕಣಿವೆ ವಿದ್ಯುದಾಗಾರಗಳಿಂದ ಪ್ರತಿನಿತ್ಯ 26 ಮಿಲಿಯನ್ ಯೂನಿಟ್ ಉತ್ಪಾದನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 54 ಸಾವಿರ ಹೆಕ್ಟೇರ್​ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು ಹಲವೆಡೆ ನೀರಿಲ್ಲದೆ ಬೆಳೆ ಒಣಗುತ್ತಿದೆ. ಭತ್ತ ನಾಟಿ ಶುರುವಾಗಿದ್ದು ಜಮೀನುಗಳಲ್ಲಿ ನೀರಿಲ್ಲದ ಕಾರಣ ರೈತರು ಬೋರ್​ವೆಲ್​ಗಳನ್ನು ಆಶ್ರಯಿಸಿದ್ದಾರೆ. 1.14 ಲಕ್ಷ ಹೆಕ್ಟೇರ್​ನಲ್ಲಿ ಅಡಕೆ ಇದ್ದು ಎಲೆಚುಕ್ಕೆ ರೋಗ ಬಾಧಿಸುತ್ತಿದೆ. ಮಳೆ ಕೊರತೆ ಇದ್ದರೂ ಕುಡಿಯುವ ನೀರಿಗೆ ತೊಂದರೆ ಇಲ್ಲ.
ಕೃಷಿ ಚಟುವಟಿಕೆಗೆ ಹಿನ್ನೆಡೆ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಮುಂಚಿತವಾಗಿ ಬಿತ್ತನೆಯಾಗಿರುವ ಬೆಳೆಗಳು ತೇವಾಂಶವಿಲ್ಲದೆ ಸೊರಗುತ್ತಿವೆ. ಈವರೆಗೆ ಶೇ.53 ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಜೋಳ, ತೊಗರಿ ಬೆಳೆಗಳು ಒಣಗುತ್ತಿವೆ. ಮಲೆನಾಡು ಭಾಗದಲ್ಲಿ ಅಡಕೆ, ಕಾಳುಮೆಣಸು, ಕಾಫಿ ಕೃಷಿ ಮುಖ್ಯವಾಗಿದ್ದು, ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ವಿವಿಧ ರೋಗಗಳು ಕಾಡುತ್ತಿವೆ.
ಅರ್ಧಕ್ಕರ್ಧ ಬಿತ್ತನೆಯೇ ಆಗಿಲ್ಲ:ಧಾರವಾಡ, ಗದಗ ಜಿಲ್ಲೆಯಲ್ಲಿ ಮುಂಗಾರಿನ ಪ್ರಮುಖ ಹೆಸರು ಬೆಳೆಯನ್ನು ಅರ್ಧಕ್ಕರ್ಧ ಭಾಗದಲ್ಲಿ ಬಿತ್ತನೆ ಮಾಡಲೇ ಇಲ್ಲ. ಉಳಿದ ಕಡೆ ಬೆಳೆ ಕೈಗೆ ಬರುತ್ತದೆ ಎಂದು ನಿರೀಕ್ಷಿಸುವ ಸಮಯದಲ್ಲೇ ಮಳೆ ಕೈಕೊಟ್ಟಿದೆ. ಇನ್ನೂ ಒಂದು ವಾರ ಮಳೆ ಬಾರದೇ ಇದ್ದಲ್ಲಿ ಬೆಳೆಗಳು ಒಣಗಿಹೋಗುವ ಅಪಾಯವಿದೆ.
ಕಲಬುರಗಿಯಲ್ಲಿ ಹುಸಿಯಾದ ನಿರೀಕ್ಷೆ:ಕಲಬುರಗಿ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಆದರೆ ಕಳೆದ ತಿಂಗಳು ಸುರಿದ ನಿರಂತರ ಮಳೆಯಿಂದಾಗಿ ಬಿತ್ತನೆಗೆ ಅನುವು ಆಗಿದೆ. 15 ದಿನಗಳಿಂದ ಮಳೆ ಕಾಣೆಯಾಗಿದ್ದು, ಬಿತ್ತನೆಯಾಗಿರುವ ಬೆಳೆಗಳಿಗೆ ತುರ್ತು ಮಳೆ ಬೇಕಿದೆ. ಮಳೆ ಬರದಿದ್ದರೆ ಬೆಳೆಗಳು ಬಾಡುವ ಆತಂಕ ಕಾಡುತ್ತಿದೆ.
ಅಡಕೆ ಬೆಳೆ ಕೊಳೆರೋಗ ಹೆಚ್ಚಳ:ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಾಗ ಮಳೆ-ಬಿಸಿಲಿನ ಆಟ ನಡೆದಿದೆ. ಪ್ರಮುಖ ಅಡಕೆ ಬೆಳೆಗೆ ಕೊಳೆರೋಗ ಹೆಚ್ಚುತ್ತಿದೆ. ಭತ್ತ ಬೆಳೆದಿರುವ ರೈತರು ಅನುಕೂಲಕರ ಮಳೆಗಾಗಿ ಕಾಯುತ್ತಿದ್ದಾರೆ. ಸದ್ಯ ಮಳೆಯಾಗದೇ ಇದ್ದಲ್ಲಿ ಭತ್ತದ ಇಳುವರಿ ಮೇಲೆ ಭಾರಿ ದುಷ್ಪರಿಣಾಮವಾಗಲಿದೆ.
ಮೊಳಕೆ ಹಂತದಲ್ಲೆ ಮೊಟಕು:ಬೆಳಗಾವಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.61 ಮಳೆ ಕೊರತೆಯಾಗಿದೆ. 7.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹಾಕಿಕೊಳ್ಳಲಾಗಿತ್ತು. ಮಳೆ ಅಭಾವದಿಂದಾಗಿ ಶೇ.48 ಬಿತ್ತನೆಯಾಗಿದೆ. ಆದರೆ, ಭೂಮಿಯಲ್ಲಿ ನೀರಿನ ತೇವಾಂಶ ಕಡಿಮೆ ಇರುವುದರಿಂದ ಬೆಳೆಗಳು ಮೊಳಕೆ ಹಂತದಲ್ಲೇ ನೀರಿಲ್ಲದೆ ಒಣಗುತ್ತಿವೆ.
ಭತ್ತ ಬೆಳೆದವರಿಗೆ ಬವಣೆ:ಮುಂಗಾರು ಮಳೆ ಪ್ರಮಾಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.33, ಉಡುಪಿ ಜಿಲ್ಲೆಯಲ್ಲಿ ಶೇ.29 ಕುಸಿದಿದೆ. ಆಗಸ್ಟ್​ನಲ್ಲಿ ಮಳೆ ಕಡಿಮೆಯಾಗಿ ಬೇಸಿಗೆಯ ವಾತಾವರಣ ಸೃಷ್ಟಿಯಾಗಿದೆ. ಭತ್ತದ ಬೆಳೆಗೆ ಮಳೆ ಕೊರತೆಯಿಂದ ತೀವ್ರ ಹೊಡೆತ ಬಿದ್ದಿದೆ. ಈ ಬಾರಿ ಮಳೆ ವಿಳಂಬದಿಂದ ಬೇಸಾಯ ಕೂಡ ವಿಳಂಬವಾಗಿ ನಡೆದಿದೆ. ಬಿತ್ತನೆ ಕಾರ್ಯ ಪೂರ್ಣಗೊಂಡು ನೇಜಿ ನೆಟ್ಟ ಬಳಿಕ ಮತ್ತೆ ಮಳೆ ಕೈ ಕೊಟ್ಟಿದೆ. ಇದರಿಂದಾಗಿ ಗದ್ದೆಗೆ ನೀರಿನ ಕೊರತೆ ಎದುರಾಗಿದೆ. ಬಹಳಷ್ಟು ಕಡೆಗಳಲ್ಲಿ ಕೆರೆ, ಬಾವಿಗಳಿಂದ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಮಳೆ ಕೊರತೆಯಿಂದ ಕರಾವಳಿಯಲ್ಲಿ ಹಡಿಲು ಗದ್ದೆಗಳಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದಾಗ ಈ ಬಾರಿ ಬೇಸಾಯ ಕಡಿಮೆಯಾಗಿದೆ.
ನದಿ ನೀರು ಆಸರೆ:ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.40ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಗೋವಿನಜೋಳ, ಸೂರ್ಯಕಾಂತಿ, ಕಬ್ಬು ಸೇರಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ವಿಳಂಬದಿಂದಾಗಿ ಮುಂಗಾರು ಆರಂಭದಲ್ಲಿ ಬಿತ್ತನೆ ಹೇಳಿಕೊಳ್ಳುವಷ್ಟು ಆಗಿರಲಿಲ್ಲ. ಜುಲೈ ತಿಂಗಳಲ್ಲಿ ಸುರಿದ ಮಳೆ ಒಣಗಿ ಹೋಗುತ್ತಿದ್ದ ಕೆಲವು ಬೆಳೆಗಳಿಗೆ ಮರುಜೀವ ನೀಡಿದೆ. ಇದೇ ಮಳೆ ನಂಬಿ ಅನೇಕ ರೈತರು ವಿವಿಧ ಬೆಳೆಗಳ ಬಿತ್ತನೆ ಕೈಗೊಂಡಿದ್ದು, ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಕಟ್ಟು ಪದ್ಧತಿಯಲ್ಲಿ ಕೆಆರ್​ಎಸ್​ನಿಂದ ನೀರು:ಕೆಆರ್​ಎಸ್ ಡ್ಯಾಂ ಅವಲಂಬಿತ ಜಿಲ್ಲೆಗಳ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಇನ್ನು ಬಿತ್ತನೆ ನಡೆಯುತ್ತಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಅರೆ ಖುಷ್ಕಿ ಬೆಳೆಯನ್ನಷ್ಟೇ ಹಾಕುವಂತೆ ಕಾವೇರಿ ನೀರಾವರಿ ನಿಗಮ ಸೂಚನೆ ನೀಡಿದೆ. ಸದ್ಯಕ್ಕೆ ರೈತರಿಗೆ ಅನುಕೂಲವಾಗುವಂತೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುತ್ತಿದೆ.
ಇಳುವರಿ ಮೇಲೆ ಪರಿಣಾಮ:ಭದ್ರಾ ಜಲಾಶಯದಲ್ಲಿ 167 ಅಡಿ ನೀರಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಭತ್ತ, ಕಬ್ಬು ಮೊದಲಾದ ಬೆಳೆಗೆ ತೊಂದರೆ ಇಲ್ಲ. 1.24 ಲಕ್ಷ ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾದ ಜಿಲ್ಲೆಯ ಪ್ರಧಾನ ಬೆಳೆ ಮೆಕ್ಕೆಜೋಳಕ್ಕೆ ನಿರೀಕ್ಷಿತ ಮಳೆಯಾಗದಿದ್ದಲ್ಲಿ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈವರೆಗೂ ಶೇ.90 ಬಿತ್ತನೆಯಾಗಿದೆ. ಸದ್ಯಕ್ಕೆ ತೇವಾಂಶ ಇರುವ ಕಾರಣ ತೊಂದರೆ ಇಲ್ಲ. ಆಗಸ್ಟ್ ನಂತರ ಮಳೆ ಕೈಕೊಟ್ಟಿದ್ದು, ಹೀಗೆ ಮುಂದುವರಿದರೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರದಲ್ಲಿ ನೀರಿಗೆ ಹಾಹಾಕಾರ:ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿಯೇ ಮಳೆಯ ಅಭಾವದಿಂದ ಕುಡಿಯುವ ನೀರಿನ ಹಾಹಾಕಾರದ ಸಮಸ್ಯೆ ಹೆಚ್ಚುತ್ತಿದೆ. ಈಗಾಗಲೆ 21 ಗ್ರಾಮಗಳಲ್ಲಿ ಹಾಹಾಕಾರವಿದ್ದು, ಮುಂದಿನ ವಾರದಲ್ಲಿ 57 ಗ್ರಾಮಗಳಲ್ಲಿ ಸಮಸ್ಯೆ ಕಂಡು ಬರುತ್ತದೆ ಎಂಬುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ. ಈ ಬಾರಿ ಮಳೆಯ ಅಭಾವ ಉಂಟಾಗಿದೆ. ನಿಧಾನವಾಗಿ ಕೆರೆ-ಕುಂಟೆಗಳಲ್ಲಿ ನೀರಿನ ಸಂಗ್ರಹ ಕುಸಿಯುತ್ತಿದೆ. 1,48,000 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು ಪ್ರಸ್ತುತ ಶೇ.48 ಮಾತ್ರ ಸಾಧನೆಯಾಗಿದೆ.
ಬೆಳೆ ನಷ್ಟದ ಭಯ:ಕೊಪ್ಪಳ ಜಿಲ್ಲೆಯಲ್ಲಿ 3.08 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈವರೆಗೆ ಶೇ.84 ಗುರಿ ತಲುಪಲಾಗಿದೆ. ಮೆಕ್ಕೆಜೋಳ, ಸಜ್ಜೆ, ತೊಗರಿ, ಭತ್ತ, ಶೇಂಗಾ ಬೆಳೆಗಳನ್ನು ಪ್ರಮುಖವಾಗಿ ಬಿತ್ತನೆ ಮಾಡಿದ್ದು, ಮಳೆ ಕೊರತೆ ಮುಂದುವರಿದಲ್ಲಿ ಬೆಳೆ ನಷ್ಟವಾಗಲಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಭತ್ತ ಬೆಳೆಗೆ ಯಾವುದೇ ಆತಂಕವಿಲ್ಲ. ಸದ್ಯ ಮಳೆಯಾಗಿದ್ದು ಕುಡಿವ ನೀರಿನ ಅಭಾವವಿಲ್ಲ. ಆದರೆ, 16 ಖಾಸಗಿ ಬೋರ್​ವೆಲ್​ಗಳನ್ನ ಬಾಡಿಗೆ ಪಡೆದು ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರಿನ ಮೂಲ ಕಾರಣ ಹೊಸದಾಗಿ 200 ಬೋರ್​ವೆಲ್ ಕೊರೆಸಲಾಗಿದೆ.
ವಿಐಪಿ ವಾಹನಗಳಲ್ಲಿನ್ನು ಸೈರನ್ ಬದಲು ಶಂಖನಾದ?; ಕೊಳಲು, ತಬಲಾ ಶಬ್ದ ಅಳವಡಿಕೆಗೆ ಚಿಂತನೆ ಎಂದ ಗಡ್ಕರಿ

‘ಕರಾಳ ಶನಿವಾರ: 37 ಜನರ ಸಾವು..’ ಎಂದು ಕಿವಿಮಾತು ಹೇಳಿದ ಅಲೋಕ್​ ಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 1 =
Remember me
