| ಗಂಗಾಧರ್ ಬೈರಾಪಟ್ಟಣ ರಾಮನಗರದೇಶದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆಯುವ ರಾಜ್ಯ ಕರ್ನಾಟಕದಲ್ಲಿ ರೇಷ್ಮೆ ಇಲಾಖೆಗೆ ಗರ ಬಡಿದಿದ್ದು, ಸಿಬ್ಬಂದಿ ಕೊರತೆಯಿಂದ ರೇಷ್ಮೆ ಕೃಷಿಯನ್ನೇ ನಂಬಿರುವ ಲಕ್ಷಾಂತರ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ವಿಶ್ವದಲ್ಲಿಯೇ ರೇಷ್ಮೆ ಉತ್ಪಾದನೆಯಲ್ಲಿ ಚೀನಾ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಕರ್ನಾಟಕ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಆದರೆ, ಶೇ.75 ಸಿಬ್ಬಂದಿ ಕೊರತೆ ಹಾಗೂ ಇರುವ ಸಿಬ್ಬಂದಿಯೂ ಬಹುತೇಕ 55 ವರ್ಷ ದಾಟಿದವರೇ ಇರುವ ಕಾರಣ, ಚೀನಾ ದೇಶಕ್ಕೆ ಪೈಪೋಟಿ ನೀಡುವ ಯತ್ನಕ್ಕೆ ಹಿನ್ನಡೆ ಆಗುತ್ತಿದೆ.
ರಾಜ್ಯದ ರೇಷ್ಮೆ ಕೃಷಿ ಇಲಾಖೆಗೆ ಒಟ್ಟು 4299 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಈಗ 3014 ಹುದ್ದೆಗಳು ಖಾಲಿ ಉಳಿದಿವೆ. ಇವುಗಳನ್ನು ಭರ್ತಿ ಮಾಡಲು ಸರ್ಕಾರ ಹೆಚ್ಚಿನ ಗಮನ ಹರಿಸದ ಕಾರಣ, ರಾಜ್ಯದ ಪ್ರಮುಖ ಉದ್ಯೋಗದಾತ ಕ್ಷೇತ್ರವಾಗಿರುವ ರೇಷ್ಮೆ ಕೃಷಿ ಇಲಾಖೆ ಕಾರ್ಯ ಚಟುವಟಿಕೆಗೆ ಪೆಟ್ಟು ಬಿದ್ದಿದೆ. ಪ್ರಮುಖವಾಗಿ ರೈತರೊಂದಿಗೆ ಕೆಲಸ ಮಾಡಬೇಕಾದ ರೇಷ್ಮೆ ಸಹಾಯಕ ನಿರ್ದೇಶಕರು, ವಿಸ್ತರಣಾಧಿಕಾರಿಗಳು, ನಿರೀಕ್ಷಕರು, ಪ್ರದರ್ಶಕರು, ಪ್ರವರ್ತಕರ ಒಟ್ಟು 2241 ಹುದ್ದೆಗಳು ಖಾಲಿ ಉಳಿದಿದ್ದು, ಇರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಿದೆ.
ವಯಸ್ಸಾದವರ ಇಲಾಖೆ!: ರಾಜ್ಯದ ಕೀರ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರೇಷ್ಮೆ ಇಲಾಖೆ ಸದ್ಯಕ್ಕೆ ವಯಸ್ಸಾದವರ ಇಲಾಖೆಯಾಗಿ ಮಾರ್ಪಟ್ಟಿದೆ. ಕಾರಣವೆಂದರೆ ಕಳೆದ 13 ವರ್ಷಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರಗಳು ನಿರ್ಲಕ್ವ್ಯಹಿಸಿವೆ. 2010ರಲ್ಲಿ 29 ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿದ್ದು ಬಿಟ್ಟರೆ, ಇಲ್ಲಿಯವರೆಗೂ ಒಂದೇ ಒಂದು ಹುದ್ದೆಯನ್ನು ಇಲಾಖೆ ಭರ್ತಿ ಮಾಡಿಲ್ಲ. ಇದರ ಪರಿಣಾಮ ರೇಷ್ಮೆ ಇಲಾಖೆಯಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಸಿಬ್ಬಂದಿ ವಯಸ್ಸು 55 ವರ್ಷಗಳನ್ನು ದಾಟಿದೆ.
ಉದ್ಯೋಗದಾತ ಇಲಾಖೆ:ರೇಷ್ಮೆ ಇಲಾಖೆ ಉದ್ಯೋಗದಾತ ಇಲಾಖೆಯಾಗಿದೆ. ರೇಷ್ಮೆ ಕೃಷಿ ಹಾಗೂ ನಂತರ ಕಾರ್ಯಗಳಲ್ಲಿ ರಾಜ್ಯದ ಸುಮಾರು 12 ಲಕ್ಷ ಕುಟುಂಬಗಳು ನೇರವಾಗಿ ಇಲ್ಲವೇ ಪರೋಕ್ಷವಾಗಿ ತೊಡಗಿಸಿಕೊಂಡಿವೆ. ಅದರಲ್ಲೂ ರೇಷ್ಮೆ ಕೃಷಿ ಮತ್ತು ನಂತರದ ಗುಡಿ ಕೈಗಾರಿಕೆಯಲ್ಲಿ ಗ್ರಾಮೀಣ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಇಂತಹ ಇಲಾಖೆ ಸಿಬ್ಬಂದಿ ಕೊರತೆಯಿಂದಾಗಿ ಹಂತ ಹಂತವಾಗಿ ಬಲ ಕಳೆದುಕೊಳ್ಳುತ್ತಿದೆ.
ರಾಜ್ಯವೇ ಫಸ್ಟ್:ದೇಶದಲ್ಲಿ ರಾಜ್ಯವೇ ಪ್ರಥಮ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಉತ್ಪಾದನೆಯಲ್ಲಿ ಸರಾಸರಿ ಶೇ.40 ಪಾಲು ರಾಜ್ಯದ್ದೇ ಆಗಿದೆ. ದೇಶದಲ್ಲಿ ಒಟ್ಟಾರೆ 2.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ಇದರಲ್ಲಿ ರಾಜ್ಯದಲ್ಲಿಯೇ 1.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತದೆ. ನಂತರದ ಸ್ಥಾನ ಕ್ರಮವಾಗಿ ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳು ಹೊಂದಿವೆ. ಇನ್ನು ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 11823 ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆ ಆಗುತ್ತಿದೆ.
ಹೆಚ್ಚುತ್ತಿದೆ ಪ್ರದೇಶ:ರಾಜ್ಯದಲ್ಲಿ ರೇಷ್ಮೆ ಉತ್ಪಾದನೆ ಪ್ರದೇಶ ಮೊದಲು ದಕ್ಷಿಣ ಕರ್ನಾಟಕ ಭಾಗದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಾಗಿ ಆಗುತ್ತಿತ್ತು. ಆದರೆ ಈಗ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ರೇಷ್ಮೆ ಉತ್ಪಾದನೆ ಮಾಡಲಾಗುತ್ತಿದೆ.
ವಾರ್ಷಿಕ ಸುಮಾರು 8-9 ಮೆಟ್ರಿಕ್ ಟನ್ ರೇಷ್ಮೆಯನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಕಡಿಮೆಗೊಳಿಸಿ ದೇಶದಲ್ಲಿಯೇ ಗುಣಮಟ್ಟದ ರೇಷ್ಮೆ ಬೆಳೆಗೆ ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಇತ್ತೀಚಿಗೆ ಬೈವೋಲ್ಟಿನ್ ರೇಷ್ಮೆ ಬೆಳೆಯಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಆದರೆ ಸಿಬ್ಬಂದಿ ಕೊರತೆ ಇದಕ್ಕೆ ದೊಡ್ಡ ಹೊಡೆತ ನೀಡಿದೆ.

ಯಾವುದೇ ಸೌಲಭ್ಯ ಇಲ್ಲ:ರೇಷ್ಮೆ ಇಲಾಖೆಯಲ್ಲಿ ಒಟ್ಟು 4299 ಮಂಜೂರಾದ ಹುದ್ದೆಗಳು ಇವೆ. ಇವುಗಳಲ್ಲಿ 1285 ಹುದ್ದೆಗಳು ಭರ್ತಿಯಾಗಿದ್ದು, 3014 ಹುದ್ದೆಗಳು ಖಾಲಿ ಇವೆ. ಇತ್ತೀಚೆಗೆ ಇಲಾಖೆ ಪುನಾರಚನೆ ಹೆಸರಲ್ಲಿ 4299 ಇದ್ದ ಮಂಜೂರಾತಿ ಹುದ್ದೆಗಳನ್ನು 2695ಕ್ಕೆ ಇಳಿಕೆ ಮಾಡಲಾಗಿತ್ತು. ಆದರೆ ಇದರ ವಿರುದ್ಧ ಕೆಲವು ಸಿಬ್ಬಂದಿ ಕೋರ್ಟ್ ಮೊರೆ ಹೋದ ಕಾರಣ, ಇಲಾಖೆ ಪುನರಾಚನೆಯಂತೆ ಹುದ್ದೆಗಳ ಸಂಖ್ಯೆ ಕಡಿಮೆಯೂ ಆಗಿಲ್ಲ, ನಂತರ ನೇಮಕಾತಿಯೂ ಆಗಿಲ್ಲ, ಇರುವ ಸಿಬ್ಬಂದಿಯಲ್ಲಿ ಬಹುತೇಕರಿಗೆ ಬಡ್ತಿಯೂ ಸಿಕ್ಕಿಲ್ಲ.
ರೇಷ್ಮೆ ಇಲಾಖೆ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿರುವ ಕ್ಷೇತ್ರ. ಇಲಾಖೆಯನ್ನು ಬಲಗೊಳಿಸದಿದ್ದರೆ ಖಂಡಿತವಾಗಿ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಇಲಾಖೆ ಮುಚ್ಚಿದರೆ ಗ್ರಾಮೀಣ ಭಾಗದ ಲಕ್ಷಾಂತರ ಕುಟುಂಬಗಳ ಬದುಕು ಬೀದಿಗೆ ಬೀಳುತ್ತದೆ. ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು.
| ಕೆ.ರವಿ, ಕಾರ್ಯದರ್ಶಿ,ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿ ರಾಮನಗರ
ಸಾಂಪ್ರದಾಯಿಕವಾಗಿ ರೇಷ್ಮೆ ಬೆಳೆಯುವ ಪ್ರದೇಶದಲ್ಲಿ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ. ಇದರ ಹೊರತಾಗಿ ಬೇರೆ ಕಡೆಗಳಲ್ಲಿ ಸಿಬ್ಬಂದಿ ಕೊರತೆ ಇಲ್ಲ. ರಾಮನಗರ ಮತ್ತು ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಸಚಿವರು ಸಹ ಗಮನ ಹರಿಸಿದ್ದು ಅತಿ ಶೀಘ್ರವೇ ಪರಿಹಾರ ಸಿಗಲಿದೆ.
| ಎಂ.ಬಿ.ರಾಜೇಶ್​ಗೌಡ, ಆಯುಕ್ತರು, ರೇಷ್ಮೆ ಇಲಾಖೆ

ರಾಜಧಾನಿಯಲ್ಲಿ ಬಸ್​ ನಿಲ್ದಾಣಗಳೇ ನಾಪತ್ತೆ!; ಒಂದು ತಿಂಗಳ ಬಳಿಕ ದೂರು ದಾಖಲು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
