ಬೆಂಗಳೂರು: ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ದೊಡ್ಡ ಪ್ರಮಾಣದ ವರ್ಗಾವರ್ಗಿ ಪ್ರಕ್ರಿಯೆ ನಡೆದಿದ್ದು, ಸರ್ಕಾರಿ ಶಾಲೆಗಳನ್ನೇ ಮುಚ್ಚಬೇಕಾದ ಭೀತಿ ಮೂಡಿದೆ.
ಅಂತರವಿಭಾಗ ವರ್ಗಾವಣೆ ಲಾಭ ಪಡೆದ ಸಾವಿರಾರು ಶಿಕ್ಷಕರು ಸ್ವಂತ ಜಿಲ್ಲೆಗೆ ವರ್ಗಾವಣೆ ಆಗಿದ್ದು, ನೂರಾರು ಶಾಲೆಗಳು ಕಾಯಂ ಶಿಕ್ಷಕರಿಲ್ಲದೆ ಬೆರಳೆಣಿಕೆಯಷ್ಟು ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಹೊಡೆತ ಬಿದ್ದಿದ್ದು, ಅದರಲ್ಲೂ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದ ಶಾಲೆಗಳನ್ನು ಬಿಸಿಯೂಟಕ್ಕಷ್ಟೇ ತೆರೆದಿಡಬೇಕಾದ ದುಃಸ್ಥಿತಿಯ ಆತಂಕ ವ್ಯಕ್ತವಾಗಿದೆ.
ಆ.11ಕ್ಕೆ ಪ್ರಕ್ರಿಯೆ ಪೂರ್ಣ:ಪ್ರಾಥಮಿಕ, ಪ್ರೌಢ ಶಾಲೆಗಳ ಸಹಶಿಕ್ಷಕರ ತಾಲೂಕು, ಜಿಲ್ಲೆ, ವಿಭಾಗೀಯ, ನಂತರ ಅಂತರ ವಿಭಾಗದ ವರ್ಗಾವಣೆಗೆ ಕೌನ್ಸೆಲಿಂಗ್ ಚಾಲ್ತಿಯಲ್ಲಿದೆ. ಆ.11ಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ ಅಂತರವಿಭಾಗೀಯ ವರ್ಗಾವಣೆ ಜತೆಗೆ ಚಾಲನಾ (ಮೂವ್​ವೆುಂಟ್) ಆದೇಶ ಪಡೆದ ಅನೇಕ ಶಿಕ್ಷಕರು, ಕರ್ತವ್ಯದಿಂದ ಬಿಡುಗಡೆಯಾಗಿ ಬಯಸಿದ ಜಿಲ್ಲೆ, ಸ್ಥಳಕ್ಕೆ ತೆರಳಿದ್ದಾರೆ.
ದೊಡ್ಡ ಪಲ್ಲಟ:ಈ ಬೆಳವಣಿಗೆಯ ನಂತರ ಸರ್ಕಾರಿ ಶಾಲೆಗಳಲ್ಲಿ ದೊಡ್ಡ ಪಲ್ಲಟವಾಗಿದೆ. ಕಲ್ಯಾಣ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಗಡಿಗಳಿಗೆ ಹೊಂದಿಕೊಂಡ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಪೂರ್ಣ ಪ್ರಮಾಣದ ವರ್ಗಾವಣೆ ಮುಗಿದ ಬಳಿಕ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಮತ್ತಷ್ಟು ಕ್ಷೋಭೆ, ಕಟು ವಾಸ್ತವದ ಸ್ಥಿತಿ ಹೊರಬೀಳಲಿದೆ ಎಂಬ ದಿಗಿಲು ವ್ಯಕ್ತವಾಗಿದೆ.
ತೆರೆದ ಫ್ಲಡ್​ಗೇಟ್!:ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸರ್ಕಾರಿ ಶಾಲೆಗಳ ಸಿಂಹಪಾಲು ಹುದ್ದೆಗಳನ್ನು ರಾಜ್ಯದ ದಕ್ಷಿಣದ ಭಾಗದ ಜಿಲ್ಲೆಗಳ ಶಿಕ್ಷಕರು ಅರ್ಹತೆ, ಪ್ರತಿಭೆ ಆಧಾರದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಹಿಂದುಳಿದ ಕಲ್ಯಾಣ ಕರ್ನಾಟಕದ ಶಿಕ್ಷಕ ಹುದ್ದೆಗಳಿಗೆ ಮುಂದುವರಿದ ಜಿಲ್ಲೆಯ ಅಭ್ಯರ್ಥಿಗಳು ನೇಮಕವಾಗುವುದು, ಒಂದು ವರ್ಷದ ನಂತರ ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿ ಮತ್ತೆ ಆ ಹುದ್ದೆ ಖಾಲಿ ಉಳಿಯುತ್ತಿದ್ದವು. ಈ ಪರಿಪಾಠ ತಪ್ಪಿಸಲು ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷರಾಗಿದ್ದ ಎಚ್.ಕೆ. ಪಾಟೀಲ್ ಮಹತ್ವದ ಶಿಫಾರಸು ಮಾಡಿದರು. ಶಿಕ್ಷಕರ ಹುದ್ದೆಗೆ ನೇಮಕವಾದ ಸ್ಥಳದಿಂದ ಕನಿಷ್ಠ ಐದು ವರ್ಷಗಳ ತನಕ ಬೇರೆ ತಾಲೂಕು ಅಥವಾ ಜಿಲ್ಲೆಗೆ ವರ್ಗಾವಣೆಯಾಗುವಂತಿಲ್ಲ ಎಂಬ ನಿರ್ಬಂಧ ವಿಧಿಸುವ ಶಿಫಾರಸು ಆದೇಶವಾಯಿತು. ವರ್ಗಾವಣೆಗೆ ಅವಕಾಶ ಕೊಟ್ಟಾಗಲೂ ಶೇ.25ಕ್ಕಿಂತ ಹೆಚ್ಚು ಹುದ್ದೆಗಳ ಖಾಲಿಯಿದ್ದರೆ ಶೇ.2ರ ಮಿತಿ ಮೀರಬಾರದೆಂಬ ಷರತ್ತು ಹೊರ ಜಿಲ್ಲೆಗಳ ಶಿಕ್ಷಕರಿಗೆ ಕಬ್ಬಿಣದ ಕಡಲೆಯಾಗಿತ್ತು.
ಆದರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಶಿಕ್ಷಕರ ವಿಷಯದಲ್ಲಿ ಉದಾರತೆ ತೋರಿಸಿ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆಗೆ ಅಸ್ತು ಎಂದರು. ಅಭಿವೃದ್ಧಿ ಹೊಂದಿದ ಮಲೆನಾಡು, ಕಲ್ಯಾಣ ಕರ್ನಾಟಕ ಮತ್ತು ಆರ್ಥಿಕವಾಗಿ ಹಿಂದುಳಿದ 43 ತಾಲೂಕುಗಳಲ್ಲಿ ಶೇ.25ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಿದ್ದರೂ ವರ್ಗಾವಣೆಗೆ ಅವಕಾಶ ಕಲ್ಪಿಸಿದರು. ಯಾವುದೇ ಮಿತಿ ನಿಗದಿ ಪಡಿಸದಿದ್ದರೂ 10 ರಿಂದ 15 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು ಎಂಬ ನಿರ್ಬಂಧ ವಿಧಿಸಲಾಯಿತು. ಇಷ್ಟಾಗಿದ್ದೇ ತಡ, ಶಿಕ್ಷಕರ ವರ್ಗಾವಣೆಯ ಫ್ಲಡ್​ಗೇಟ್ ತೆರೆದಿದ್ದು, 15-16 ಹೆಚ್ಚು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರು ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ.
ತಕರಾರಿಲ್ಲ, ಪರ್ಯಾಯ ವ್ಯವಸ್ಥೆ ಬೇಕಲ್ಲ:ಸ್ವಂತ ಊರು, ಮನೆ ಬಿಟ್ಟು ದೂರದ ಜಿಲ್ಲೆಗಳಲ್ಲಿ ದಶಕಗಳ ಕಾಲ ಶಿಕ್ಷಕರಾಗಿದ್ದವರು ಸ್ವಂತ ಜಿಲ್ಲೆಗೆ ಕೋರಿಕೆಯಂತೆ ವರ್ಗಾವಣೆ ಆಗಿರುವುದಕ್ಕೆ ತಕರಾರಿಲ್ಲ. ಆದರೆ, ತೆರವಾಗುವ ಹುದ್ದೆಗಳ ಭರ್ತಿ, ಪರ್ಯಾಯ ವ್ಯವಸ್ಥೆ ಬೇಕಲ್ಲ. ಹೊಸದಾಗಿ 13,352 ಶಿಕ್ಷಕರ ನೇಮಕ ವ್ಯಾಜ್ಯದಿಂದ ನನೆಗುದಿಗೆ ಬಿದ್ದಿದ್ದು, ವಾಸ್ತವಾಂಶ ಗೊತ್ತಿದ್ದೂ ಶೈಕ್ಷಣಿಕ ವರ್ಷದ ನಡುವೆ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದಕ್ಕೆ ಎಸ್​ಡಿಎಂಸಿಯವರು, ಶಿಕ್ಷಣ ತಜ್ಞರು ಆಕ್ಷೇಪಿಸಿದ್ದಾರೆ.
ಬಡ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿಯಿದ್ದರೆ ಎಜಿ ಮುಖಾಂತರ ತುರ್ತಾಗಿ ಕೋರ್ಟ್ ಮುಂದೆ ಹೋಗಬೇಕಿತ್ತು. ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟು 13,362 ಹೊಸ ಶಿಕ್ಷಕರ ನೇಮಕಕ್ಕೆ ಅನುಮತಿ ಪಡೆದಿದ್ದರೆ ಸಮಸ್ಯೆಯಾಗುತ್ತಿದ್ದಿಲ್ಲ. ನನಗೆ ಗೊತ್ತಿರುವ ಪ್ರಕಾರ ಈ ವ್ಯಾಜ್ಯದ ಬಗ್ಗೆ ಎಜಿ ಜತೆ ಸರ್ಕಾರ ರ್ಚಚಿಸಿಲ್ಲ, ಸಂಬಳ ನೀಡಲು ಹಣವಿಲ್ಲವೆಂಬ ಕಾರಣಕ್ಕೆ ಹೊಸ ಶಿಕ್ಷಕರ ನೇಮಕಕ್ಕೆ ವಿಳಂಬ ಮಾಡುತ್ತಿದೆ.
| ಬಿ.ಸಿ.ನಾಗೇಶ್, ಮಾಜಿ ಶಿಕ್ಷಣ ಸಚಿವ
ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಅವೈಜ್ಞಾನಿಕ. ದೇವದುರ್ಗ, ಕನಕಪುರ, ಸೊರಬ ಇತ್ಯಾದಿ ತಾಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಮಕ್ಕಳ ಹಿತರಕ್ಷಣೆಯನ್ನೇ ಸರ್ಕಾರ ನಿರ್ಲಕ್ಷಿಸಿದೆ.
| ವಿ.ಪಿ.ನಿರಂಜನಾರಾಧ್ಯ ಶಾಲಾ ಶಿಕ್ಷಣ ತಜ್ಞ
ವರ್ಗಾವಣೆ ಬಯಸಿದವರು:ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರು- 4,022, ಪ್ರೌಢ ಶಾಲೆಯ 964, ಪ್ರೌ.ಶಾ. ಮುಖ್ಯಶಿಕ್ಷಕರು ಹಾಗೂ ತತ್ಸಮಾನ ವೃಂದದ ಶಿಕ್ಷಕರು 267 ಒಳಗೊಂಡು 5,253 ಶಿಕ್ಷಕರ ವರ್ಗಾವಣೆಯಾಗುತ್ತಿದೆ. ರಾಜ್ಯಮಟ್ಟದ ಬದಲು ಜಿಲ್ಲಾಮಟ್ಟದಲ್ಲಿ ಅಂತರ ವಿಭಾಗ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ಶೂನ್ಯ ಶಿಕ್ಷಕರು!:ಲಭ್ಯ ಮಾಹಿತಿ ಪ್ರಕಾರ ಶಿಕ್ಷಣದಲ್ಲಿ ಏಷ್ಯಾಖಂಡದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದೇವದುರ್ಗ ತಾಲೂಕಿನ 100 ಶಾಲೆಗಳಲ್ಲಿ ಕಾಯಂ ಶಿಕ್ಷಕರ ಸಂಖ್ಯೆ ಶೂನ್ಯಕ್ಕೆ ಇಳಿಯಲಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುತ್ತಿರುವ ಕನಕಪುರ ಕ್ಷೇತ್ರದಲ್ಲಿ 88, ಅಷ್ಟೇ ಏಕೆ, ಸ್ವತಃ ಶಿಕ್ಷಣ ಸಚಿವರು ಪ್ರತಿನಿಧಿಸುತ್ತಿರುವ ಸೊರಬ ಕ್ಷೇತ್ರದಲ್ಲಿ 52 ಶಾಲೆಗಳು ಶೂನ್ಯ ಸಂಪಾದಿಸಲಿವೆ. ಚಾಲ್ತಿ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಕಟು ವಾಸ್ತವ ಕಣ್ಣಿಗೆ ರಾಚಲಿದೆ.
ಕಳವಾದ ಮೊಬೈಲ್‌ಫೋನ್ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ!

ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!

ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
