| ಶ್ರೀಕಾಂತ್ ಶೇಷಾದ್ರಿ ಬೆಳಗಾವಿ
ಗಡಿ ಕ್ಯಾತೆ ವಿರುದ್ಧ ಖಡಕ್ ನಿರ್ಣಯ, ಎಸ್ಸಿ, ಎಸ್ಟಿ ಮೀಸಲು ವಿಧೇಯಕ ಮಂಡನೆ, ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಫೋಟೋ ಅನಾವರಣ, ಸಭಾಪತಿ ಚುನಾವಣೆಯಂತಹ ಪ್ರಮುಖ ಘಟನೆಗಳಿಗೆ ಸಾಕ್ಷಿಯಾದ ಬೆಳಗಾವಿ ಚಳಿಗಾಲದ ವಿಧಾನಮಂಡಲ ಅಧಿವೇಶನದ ಪೂರ್ವಾರ್ಧ ಪೂರ್ಣಗೊಂಡಿದ್ದು, ಉಳಿದಿರುವ ಐದು ದಿನದ ಉತ್ತರಾರ್ಧದ ಕಲಾಪದಲ್ಲಿ ಬೆಟ್ಟದಷ್ಟು ವಿಚಾರಗಳು ಬರಬೇಕಿದೆ.
ಡಿ.19ರಂದು ಆರಂಭವಾದ ಕಲಾಪದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚರ್ಚೆಗಳು ನಡೆದಿಲ್ಲ. ಒಂದೆರೆಡು ಸಣ್ಣ ಪ್ರಕರಣ ಹೊರತುಪಡಿಸಿ ಕಲಾಪ ಸಾಂಗೋಪಾಸಾಂಗವಾಗಿ ಮುಕ್ತಾಯವಾಯಿತು. ಸರ್ಕಾರ ಮತ್ತು ಪ್ರತಿಪಕ್ಷದ ನಡುವೆ ಏರಿದ ದನಿಯ ಜಟಾಪಟಿಯೂ ನಡೆಯಲಿಲ್ಲ. ಆಡಳಿತ ಹಾಗೂ ಪ್ರತಿಪಕ್ಷಗಳಿಗೆ ಆಸಕ್ತಿಯೇ ಇರಲಿಲ್ಲವೆಂಬುದು ಐದು ದಿನಗಳಲ್ಲಿ ಕಂಡುಬಂತು. ಇನ್ನೊಂದು ಮಹತ್ವದ ಸಂಗತಿ ಎಂದರೆ ಕಲಾಪದ ಹೊರತಾಗಿ ನಡೆದ ಬೆಳವಣಿಗೆ ಸಾಕಷ್ಟು ಮಹತ್ವ ಪಡೆದುಕೊಂಡಿತು. ಸರ್ಕಾರದ ನೀತಿ ನಿರ್ಧಾರಗಳ ಬಗೆಗಿನ ಚರ್ಚೆಗಳು, ಪ್ರತಿಪಕ್ಷದ ನಡೆ ಗಮನ ಸೆಳೆಯಿತು.
ಅಧಿವೇಶನ ಆರಂಭಕ್ಕೆ ಮುನ್ನ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಫೋಟೋವನ್ನು ವಿಧಾನಸಭೆ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು. ಇದು ಕಾಂಗ್ರೆಸ್- ಬಿಜೆಪಿ ನಡುವೆ ಹೊಯ್ದಾಟಕ್ಕೆ ಕಾರಣವಾಗಬಹುದೆಂಬ ಲೆಕ್ಕಾಚಾರವಿತ್ತು. ಆದರೆ, ಕಾಂಗ್ರೆಸ್ ದೂರದೃಷ್ಟಿಯ ಲೆಕ್ಕಾಚಾರದಲ್ಲಿ ಪರೋಕ್ಷ ಪ್ರತಿಭಟನೆ ನಡೆಸಿ ವಿಷಯವನ್ನು ಮುಗಿಸಿತು. ಕಾಂಗ್ರೆಸ್ ನಡೆ ಬಿಜೆಪಿಗೆ ಖುಷಿ ತರಲಿಲ್ಲ. ಸಾವರ್ಕರ್ ಫೋಟೋ ಹಾಕಿದ ಖುಷಿ ಬಿಟ್ಟರೆ, ಕಾಂಗ್ರೆಸ್ ಹಣಿಯುವ ಲೆಕ್ಕಾಚಾರ ಫಲ ಕೊಡಲಿಲ್ಲ. ಇದೇ ವೇಳೆ ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಸರ್ಧಾರ್ ಪಟೇಲರು, ವಿವೇಕಾನಂದರ ಫೋಟೋವೂ ಅನಾವರಣಗೊಂಡಿದ್ದು, ಕೈ ನಾಯಕರು ಇದರಿಂದ ದೂರ ಉಳಿದದ್ದೂ ಗಮನಾರ್ಹ ಸಂಗತಿ. ಆದರಿಲ್ಲಿ ಕಾಂಗ್ರೆಸ್ ವಿವಿಧ ಜಾತಿಯ ನಾಯಕರ ಪೋಟೋ ಹಾಕುವಂತೆ ಒತ್ತಾಯಿಸುವ ಮೂಲಕ ಆ ಸಮುದಾಯಗಳನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುವ ಜಾಣ ನಡೆ ಪ್ರದರ್ಶನ ಮಾಡಿತು. ಆದ್ದರಿಂದಲೇ ಬಿಜೆಪಿ ಸಹ ಸಾವರ್ಕರ್ ಪೋಟೋದ ಖುಷಿಯನ್ನು ಸಂಭ್ರಮಿಸಲು ಸಾಧ್ಯವಾಗಲಿಲ್ಲ.
ಎರಡನೇ ದಿನ ಎಸ್ಸಿ, ಎಸ್ಟಿ ಮೀಸಲು ಸಂಬಂಧ ಸರ್ಕಾರ ವಿಧೇಯಕ ಮಂಡನೆ ಮಾಡುವ ಮೂಲಕ ದೊಡ್ಡ ಹೆಜ್ಜೆ ದಾಖಲಿಸಿತು. ಈ ವಿಷಯ ಯಾವ ರೂಪದಲ್ಲಿ ಅಂತ್ಯಕಾಣುತ್ತದೋ ಗೊತ್ತಿಲ್ಲ, ರೈತರ ಸಮಸ್ಯೆ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡಿ ರೈತಾಪಿ ಸಮುದಾಯದ ಗಮನ ಸೆಳೆಯ ಬೇಕೆಂದಿದ್ದ ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಚಾರದಲ್ಲಿ ನಿಲುವಳಿ ಮಂಡಿಸಿ ತನ್ನ ಆಲೋಚನೆ ಬದಲಿಸಿತಾದರೂ ಪ್ರಯತ್ನ ಫಲ ಕೊಡಲಿಲ್ಲ. ಇನ್ನು ಮಹಾರಾಷ್ಟ್ರದ ಗಡಿ ಖ್ಯಾತೆ ವಿರೋಧಿಸಿ ನಡೆದ ಚರ್ಚೆ ಹಾಗೂ ಸರ್ಕಾರದ ಖಂಡನಾ ನಿರ್ಣಯವನ್ನು ಪಕ್ಷಾತೀತವಾಗಿ ಬೆಂಬಲಿಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದು ಗಮನಾರ್ಹ ಸಂಗತಿಯಾಗಿದೆ.
ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯೊಳಗಿನ ಅಸಮಾಧಾನ ಹೊಗೆ ಕಾಣಿಸಿತು. ಬಸವರಾಜ ಹೊರಟ್ಟಿ ಪಕ್ಷಕ್ಕೆ ಕರೆತಂದು, ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು, ಈಗ ಸಭಾಪತಿ ಸ್ಥಾನಕ್ಕೆ ಮರು ಆಯ್ಕೆ ಮಾಡಿಕೊಟ್ಟ ಬಗ್ಗೆ ಬಿಜೆಪಿಯ ಅನೇಕ ಶಾಸಕರು ಅಸಮಾಧಾನ ಹೊರಹಾಕಿದ ಬೆಳವಣಿಗೆಯೂ ನಡೆಯಿತು.
ಇದೇ ವೇಳೆ ಮೀಸಲು ವಿಚಾರ ಅಧಿವೇಶನ ನಡೆಯುವ ಹೊತ್ತಲ್ಲಿ ದೊಡ್ಡ ಚರ್ಚಾ ವಿಷಯವಾಗಿದೆ. ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ವಿಧೇಯಕ ಮಂಡನೆಯಾಗು ತ್ತಿದ್ದಂತೆ ಹೊರಗೆ ಪಂಚಸಾಲಿ ಹೋರಾಟ ದೊಡ್ಡ ಸದ್ದುಮಾಡಿತು. ಒಕ್ಕಲಿಗರೂ ಸಹ ಸುಮ್ಮನೆ ಕೂರದೇ ತಮ್ಮ ಬೇಡಿಕೆ ಈಡೇರಿಸಲು ಸಭೆಗಳನ್ನು ನಡೆಸಿ, ನಾಡಿಗೆ ಅನ್ನಕೊಡುವ ಒಕ್ಕಲಿಗರ ಮೀಸಲು ಬೇಡಿಕೆ ಈಡೇರಿಸಿ ಎಂಬ ದನಿ ಎತ್ತಿದರು. ಹಾಗೆಯೇ ವಿವಿಧ ಸಮುದಾಯಗಳೂ ಕೂಡ ಒತ್ತಡ ತರುವ ತಂತ್ರ ನಡೆಸಿದವು.
ಅಂದಹಾಗೆ ಅಧಿವೇಶನ ನಡೆದ ಐದು ದಿನಗಳಲ್ಲಿ ಎರಡು ಜಟಾಪಟಿಯಿಂದ ಕಲಾಪ ಹಾಳಾಯಿತು. ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸುತ್ತಿದ್ದ ಶಾಸಕರನ್ನು ಗದರಿದರೆಂದು ಸಚಿವರ ವಿರುದ್ಧ ಕಾಂಗ್ರೆಸ್ ಧರಣಿ ನಡೆಸಿದ ಪರಿಣಾಮ ಅರ್ಧ ದಿನ ಕಲಾಪವನ್ನು ನುಂಗಿಹಾಕಿತು. ಅದೇ ರೀತಿ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಹೇಳಿಕೆ ಖಂಡಿಸಿ ಕೈ ಸದಸ್ಯರು ಸಭಾಪತಿ ಪೀಠದ ಮುಂದೆ ಧರಣಿ ನಡೆಸಿ ಕಲಾಪಕ್ಕೆ ಅಡ್ಡಿಮಾಡಿದರು. ಈ ಎರಡು ಘಟನೆ ಹೊರತುಪಡಿಸಿ ಮೊದಲಾರ್ಧ ಅಡೆತಡೆ ಇಲ್ಲದೇ ಸಂಪನ್ನಗೊಂಡಿದೆ.
ಮುಜುಗರ ತಂದ ಸ್ಪೀಕರ್​ಆಕ್ರೋಶ:ಸದನ ನಡೆಸುವಲ್ಲಿ ಸರ್ಕಾರದ ನಿರಾಸಕ್ತಿ, ಸಚಿವರ ಗೈರು ಹಾಜರಿಯ ಬಗ್ಗೆ ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿ ಅಧಿವೇಶನವನ್ನೇ ಮುಂದೂಡಿದ್ದರಿಂದ ಸರ್ಕಾರ ಹಾಗೂ ಆಡಳಿತ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಯಿತು. ಹಿಂದೆ ಯಾವ ಅಧಿವೇಶನದಲ್ಲಿಯೂ ಈ ರೀತಿ ಆಗಿರಲಿಲ್ಲ.
ಸೋಮವಾರದಿಂದ ಕಾವು:ರೈತರ ವಿಚಾರವಾಗಿ ಸರ್ಕಾರವನ್ನು ಹಣಿಯಲು ಪ್ರತಿಪಕ್ಷ ಸಿದ್ಧತೆ ಮಾಡಿಕೊಂಡಿದೆ. ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲವಾಗಿ ಸದನದೊಳಗೆ ಒತ್ತಡ ತರಲು ಕಾಂಗ್ರೆಸ್ ಮುಂದಾಗಿದೆ. ಜತೆಗೆ ಮತದಾರರ ಪಟ್ಟಿ ಅಕ್ರಮ ಮುಂದಿಟ್ಟು ದಾಖಲೆ ಬಿಡುಗಡೆ ಮಾಡಿ ಸಚಿವರ ರಾಜೀನಾಮೆಗೆ ಪಟ್ಟು ಹಿಡಿಯಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.
ಜಾತಿ ಗಣತಿ ವರದಿಗೆ ಶೀಘ್ರ ಅಂತಿಮರೂಪ:ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ-2015 (ಜಾತಿ ಗಣತಿ)ರ ವರದಿಗೆ ಶೀಘ್ರವೇ ಅಂತಿಮರೂಪ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ ಮೇಲ್ಮನೆಗೆ ಭರವಸೆ ನೀಡಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕೆ.ಪಿ.ನಂಜುಂಡಿ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂತರಾಜ್ ವರದಿಗೆ ಅಂದಿನ ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದಿರುವ ಕುರಿತು ಹಾಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರದ ನಿರ್ದೇಶನ ಕೋರಿದ್ದು, ಈ ವಿಷಯ ಪರಿಶೀಲನೆಯಲ್ಲಿದೆ ಎಂದರು. ಈ ಉತ್ತರಕ್ಕೆ ಕೆ.ಪಿ.ನಂಜುಂಡಿ ಅಸಮಾಧಾನ ವ್ಯಕ್ತಪಡಿಸಿ, ಎರಡು ವರ್ಷಗಳ ಹಿಂದೆಯೂ ಸದನದಲ್ಲಿ ಇದೇ ರೀತಿ ಉತ್ತರ ಕೊಟ್ಟಿದ್ದಿರಿ. ಈ ವರದಿ ಬಗ್ಗೆ ಏನಾದರೂ ಭಯವಿದೆಯೇ? ಇಲ್ಲವಾದಾದರೆ ವಿಳಂಬಕ್ಕೆ ಕಾರಣವೇನು? ಎಂದು ಕೇಳಿದರು. ‘ವಿಶ್ವಕರ್ಮ ಸೇರಿ ಕುಲಕಸುಬು ಅವಲಂಬಿತ 197 ಜಾತಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. 162 ಕೋಟಿ ರೂ. ಖರ್ಚು ಮಾಡಿ ತರಿಸಿಕೊಂಡ ವರದಿ ಬಿಡುಗಡೆ ಮಾಡಿ’ ಎಂದವರು ಒತ್ತಾಯಿಸಿದರೆ, ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಹಮತ ವ್ಯಕ್ತಪಡಿಸಿದರು. ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಸದಸ್ಯರ ಭಾವನೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ರ್ಚಚಿಸಿ, ಸದರಿ ವರದಿಗೆ ಅಂತಿಮ ರೂಪ ನೀಡಲಾಗುವುದು ಎಂದು ಪುನರುಚ್ಚರಿಸಿದರು.
ರೈತ ಉತ್ಪಾದಕ ಕಂಪನಿಗೆ ಕೃಷಿಯಂತ್ರಧಾರೆ ಕೇಂದ್ರ?:ಸಣ್ಣ, ಅತಿಸಣ್ಣ ರೈತರಿಗೆ ಅನುಕೂಲವಾಗಲೆಂದು ತೆರೆದಿರುವ ಕೃಷಿ ಯಂತ್ರಧಾರೆ ಕೇಂದ್ರಗಳ ನಿರ್ವಹಣೆಯನ್ನು ರೈತ ಉತ್ಪಾದಕ ಕಂಪನಿ (ಎಫ್​ಪಿಒ)ಗಳಿಗೆ ಒಪ್ಪಿಸುವ ಚಿಂತನೆಯಿದೆ ಎಂದು ವಿಧಾನ ಪರಿಷತ್​ನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಶುಕ್ರವಾರ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ತುಳಸಿ ಮುನಿರಾಜುಗೌಡ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 689 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರು ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, ಅವಧಿ ಮುಗಿದವುಗಳ ಪೈಕಿ 167 ಕಂಪನಿಗಳು ನಿರ್ವಹಣೆ ಅಸಾಧ್ಯವೆಂದು ತಿಳಿಸಿ ಪತ್ರ ಬರೆದಿವೆ. ಈ ಕೇಂದ್ರಗಳ ನಿರ್ವಹಣಾ ವೆಚ್ಚದಲ್ಲಿ ಸರ್ಕಾರ ಶೇಕಡ 70 ಹಾಗೂ ಜವಾಬ್ದಾರಿ ಹೊತ್ತ ಕಂಪನಿಗಳು ಶೇ.30 ಭರಿಸುತ್ತವೆ. ಆದರೆ ಶೇ.80:20 ಅನುಪಾತ ನಿಗದಿಪಡಿಸಲು ಕಂಪನಿಗಳು ಕೋರಿದ್ದು, ಆರ್ಥಿಕ ಇಲಾಖೆ ಒಪ್ಪದ ಕಾರಣ ಹಿಂದೇಟು ಹಾಕುತ್ತಿವೆ ಎಂದರು.
ಪರ್ಯಾಯ ವ್ಯವಸ್ಥೆ:ಕೃಷಿ ಯಂತ್ರೋಪಕರಣಗಳ ಖರೀದಿಗೆ ಶಕ್ತರಲ್ಲದ ರೈತರಿಗೆ ಯಂತ್ರಧಾರೆ ಕೇಂದ್ರಗಳು ಆಸರೆಯಾಗಿದ್ದು, ಖಾಸಗಿ ಕಂಪನಿಗಳು ಹಿಂಜರಿದರೂ ರೈತರಿಗೆ ತೊಂದರೆಯಾಗದಂತೆ ಎಫ್​ಪಿಒಗೆ ಒಪ್ಪಿಸಬೇಕೆಂದಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು. ಯೋಜನೆಗಾಗಿ 20 ಕೋಟಿ ರೂ. ಅನುದಾನ ಲಭ್ಯವಿದೆ. ಪ್ರಗತಿಪರ ರೈತರ ಹೆಸರುಗಳನ್ನು ಕೃಷಿಯಂತ್ರಧಾರೆ ಕೇಂದ್ರಗಳ ನಿರ್ವಹಣೆಗೆ ಪರಿಗಣಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಭರವಸೆ ನೀಡಿದರು.
ಬೆಳಗಾವಿ:ಹೊರ ದೇಶಗಳಿಗೆ ಗೋಮಾಂಸ ರಫ್ತು ಮಾಡುವ ಕಂಪನಿಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ಮೊದಲು ನಿಷೇಧಿಸಲಿ ಎಂದು ವಿಧಾನ ಪರಿಷತ್​ನ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಸವಾಲು ಹಾಕಿದ್ದಾರೆ. ಸುವರ್ಣಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊರದೇಶಗಳಿಗೆ ಗೋಮಾಂಸ ರಫ್ತು ಮಾಡುವ ಕಂಪೆನಿಗಳೆಲ್ಲವೂ ಬಿಜೆಪಿಗರಿಗೆ ಹತ್ತಿರದವೇ ಆಗಿರುವುದರಿಂದ ಅವುಗಳಿಗೆ ಪ್ರಮಾಣ ಪತ್ರ ನಿಷೇಧಿಸುವಂತೆ ಒತ್ತಾಯಿಸುವ ಧೈರ್ಯ ಇಲ್ಲಿನ ಬಿಜೆಪಿಗರಿಗೆ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ರಾಜ್ಯದಲ್ಲಿ ಆಹಾರ ಪದಾರ್ಥಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸುವಂತೆ ಖಾಸಗಿ ವಿಧೇಯಕವೊಂದನ್ನು ಬಿಜೆಪಿ ಶಾಸಕರು ಮಂಡಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಮೊದಲು ರಫ್ತು ನಿಷೇಧಕ್ಕೆ ಅವರದೇ ಪಕ್ಷದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಿ ಎಂದು ಚುಚ್ಚಿದರು. ವಧಾಗಾರಗಳಲ್ಲಿ ಜಾನುವಾರುಗಳನ್ನು ವಧೆ ಮಾಡುವುದಕ್ಕೆ ಸಂಬಂಧಿಸಿದಂತೆ ಸುಧಾರಣೆ ಮಾಡಬಹುದೇ ಹೊರತು ಹಲಾಲ್ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಗಂಡನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಮಹಿಳೆ!

ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
