|ವಿಲಾಸ ಮೇಲಗಿರಿಬೆಂಗಳೂರು
ಕೋವಿಡ್ ಕಾರಣ ಕಳೆದ ಮೂರು ಶೈಕ್ಷಣಿಕ ಸಾಲುಗಳಿಂದ ಶಾಲೆಗಳು ಸ್ಥಗಿತಗೊಂಡು ವಿದ್ಯಾರ್ಥಿಗಳು ಕಲಿಕಾ ನಿರಂತರತೆ ಕಾಯ್ದುಕೊಳ್ಳಲು ಹಿನ್ನಡೆಯಾಗಿದೆ. ಈಗ ಕರೊನಾ ತಗ್ಗಿದ್ದು, ಶಾಲೆಗಳು ಸೋಮವಾರ (ಮೇ 16) ಆರಂಭವಾಗಿವೆ. ಆದರೆ, ಮಕ್ಕಳಿಗೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಇದು ಮಕ್ಕಳ ಸಂಭ್ರಮಕ್ಕೆ ದೊಡ್ಡ ಅಡ್ಡಿಯಾಗಿದೆ.
ಮಕ್ಕಳನ್ನು ಆಕರ್ಷಿಸಲು ಶಾಲಾ ಪ್ರಾರಂಭೋತ್ಸವ ನಡೆಸಲಾಗುತ್ತದೆ. ಶಾಲೆಗಳನ್ನು ಒಪ್ಪ ಓರಣ ಮಾಡಿ ಮಕ್ಕಳನ್ನು ಬರಮಾಡಿಕೊಳ್ಳಲಾಗುತ್ತದೆ. ಹಬ್ಬದ ಸಂಭ್ರಮ ಸೃಷ್ಟಿಸಿ ಸಿಹಿ ಅಡುಗೆ ಬಡಿಸಲಾಗುತ್ತದೆ. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಆದರೆ, ಮಕ್ಕಳಿಗೆ ಸಮವಸ್ತ್ರಗಳಿಲ್ಲ, ಸಮರ್ಪಕ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಕಲಿಕಾ ಹಾಳೆಗಳಿಲ್ಲ, ಎಲ್ಲಕ್ಕೂ ಮಿಗಿಲಾಗಿ ಮಳೆ, ಗಾಳಿ, ಚಂಡಮಾರುತಗಳಿಂದ ಹಾನಿಗೀಡಾದ ಕಟ್ಟಡಗಳ ದುರಸ್ತಿಯಾಗಿಲ್ಲ! ಕೆಲಕಡೆ ಪೀಠೋಪ ಕರಣಗಳಿಲ್ಲ. ಕೆಲವೆಡೆ ಬಿಸಿಯೂಟಕ್ಕೆ ಅಡುಗೆ ಎಣ್ಣೆ ಕೊರತೆ ಇದೆ. ಈ ಎಲ್ಲ ಇಲ್ಲಗಳು ಈ ಬಾರಿ ಶಾಲಾ ಪ್ರಾರಂಭೋತ್ಸವದ ಸಂಭ್ರಮಕ್ಕೆ ಅಡ್ಡಿ ಉಂಟು ಮಾಡಿರುವುದು ಸುಳ್ಳಲ್ಲ.
ಶಿಥಿಲಾವಸ್ಥೆಯಲ್ಲಿ ಕಟ್ಟಡಗಳು:ರಾಜ್ಯದಲ್ಲಿ ಅಂದಾಜು 22 ಸಾವಿರ ಕಿರಿಯ ಪ್ರಾಥಮಿಕ ಮತ್ತು 24 ಸಾವಿರ ಶಾಲೆಗಳಿವೆ. ಈ ಶಾಲೆಗಳಲ್ಲಿ ಸುಮಾರು 70 ಲಕ್ಷ ಮಕ್ಕಳು ಕಲಿಯುತ್ತಾರೆ. ಈ ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
ಜೀವ ಭಯದಲ್ಲಿ ಶಿಕ್ಷಕರು, ಮಕ್ಕಳು:ಮಳೆ, ಗಾಳಿ, ಚಂಡ ಮಾರುತಗಳಿಂದ ಮಲೆನಾಡು, ಕರಾವಳಿ, ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಸ್ರಾರು ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಅನೇಕ ಕಡೆ ಹೆಂಚುಗಳು ಮಗುಚಿ ಬಿದ್ದು, ಬಯಲು ಆಲಯವಾಗಿವೆ. ಈ ಶಾಲಾ ಕಟ್ಟಡಗಳ ದುರಸ್ತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ ಬಹುತೇಕ ಕಡೆ ದುಸ್ಥಿತಿಗಳಲ್ಲಿರುವ ಶಾಲೆಗಳ ದುರಸ್ತಿ ಮತ್ತು ನಿರ್ವಹಣೆ ಸಾಧ್ಯವಾಗಿಲ್ಲ. ಶತಮಾನ ಪೂರೈಸಿದ ಅನೇಕ ಶಾಲಾ ಕಟ್ಟಡಗಳಿದ್ದು, ತುರ್ತಾಗಿ ದುರಸ್ತಿ, ನವೀರಕಣಗೊಳ್ಳುವ ಅವಶ್ಯಕತೆ ಇದೆ. ಆದರೆ, ಅನುದಾನದ ಕೊರತೆಯಿಂದ ಮಕ್ಕಳು ಶಿಥಿಲ ಕಟ್ಟಡಗಳಲ್ಲಿ ಜೀವ ಭಯದಿಂದ ಪಾಠ ಕೇಳಬೇಕಾದ ಅನಿರ್ವಾಯತೆ ಇದೆ.
ಶೇ.48 ಪಠ್ಯಪುಸ್ತಕ ಕೊರತೆ:ಶಾಲೆ ಪ್ರಾರಂಭ ಎಂದರೆ ಮಕ್ಕಳು ಮತ್ತು ಪೋಷಕರು ಪಠ್ಯಪುಸ್ತಕಗಳನ್ನು ನಿರೀಕ್ಷಿಸುತ್ತಾರೆ. ಈ ಮೊದಲೆಲ್ಲ ಶಾಲಾ ಪ್ರಾರಂಭೋತ್ಸವದ ವೇಳೆಗೆ ಕೆಲವೇ ಕೆಲವು ಶೀರ್ಷಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲ ಪಠ್ಯಪುಸ್ತಕಗಳು ಮಕ್ಕಳ ಕೈಸೇರುತ್ತಿದ್ದವು. ಆದರೆ, ಈ ಬಾರಿ ಶೇ.52 ಪಠ್ಯ ಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿ ಹಂತಕ್ಕೆ ತಲುಪಿವೆ. ಶೇ.36 ಪಠ್ಯ ಶಾಲಾ ಮಟ್ಟ ಮುಟ್ಟಿವೆ. ಮುದ್ರಣ ಕಾಗದ ಕೊರತೆಯಿಂದ 527 ಶೀರ್ಷಿಕೆಗಳ ಪೈಕಿ ಶೇ.65ರಿಂದ 70 ಪಠ್ಯ ಮುದ್ರಣ ಕಂಡಿವೆ. ಹಾಗಾಗಿ ಶಾಲಾ ಆರಂಭದ ದಿನ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಕೈಸೇರುವುದಿಲ್ಲ.
ಆದರೆ ಪಠ್ಯಪುಸ್ತಕ ಪೂರೈಕೆ ವಿಳಂಬಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೊಡುವ ಸಮರ್ಥನೆಯೇ ಬೇರೆ. ಸೋಮವಾರ ಶಾಲೆ ಆರಂಭವಾದರೂ ಕೋವಿಡ್​ನಿಂದ ಉಂಟಾದ ಕಲಿಕಾ ಕೊರತೆ ನೀಗಿಸಲು ಸರ್ಕಾರ ಆರಂಭದ 15 ದಿನ ಪೂರ್ಣ ಪ್ರಮಾಣದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುತ್ತದೆ. ಈ ಕಲಿಕಾ ಚೇತರಿಕೆ ಕಾರ್ಯಕ್ರಮ ಪೂರ್ಣಗೊಳ್ಳುವ ವೇಳೆಗೆ ಎಲ್ಲ ಪಠ್ಯವನ್ನೂ ಶಾಲೆಗಳಿಗೆ ಒದಗಿಸಲಾಗುವುದು ಎಂಬುದು ಅಧಿಕಾರಿಗಳ ಸಮರ್ಥನೆ.
ಕಲಿಕಾ ಹಾಳೆಗೂ ಬರ:ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಕಲಿಕಾ ಹಾಳೆ ಬೇಕು. ಆದರೆ, ಈ ಕಲಿಕಾ ಹಾಳೆಯನ್ನು ಮುದ್ರಿಸಿಕೊಟ್ಟಿಲ್ಲ. ಇಲಾಖಾ ವೆಬ್​ಸೈಟ್​ನಲ್ಲಿ ಈ ಕಲಿಕಾ ಹಾಳೆಯನ್ನು ಡೌನ್​ಲೋಡ್ ಮಾಡಿಕೊಂಡು ಜೆರಾಕ್ಸ್ ಮಾಡಿಸಿ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಸೂಚಿಸಲಾಗಿದೆ. ಎಷ್ಟೋ ಕಡೆ ಜೆರಾಕ್ಸ್ ಮಾಡಿಸಲು ದುಡ್ಡಿಗೆ ಪರದಾಡುವ ಸ್ಥಿತಿ ಇದೆ. ಕಳೆದ ವರ್ಷ ಕೂಡ ಕಲಿಕಾ ಹಾಳೆಯನ್ನು ಶಿಕ್ಷಕರು ಸ್ವಂತ ದುಡ್ಡು ಕೊಟ್ಟು ಜೆರಾಕ್ಸ್ ಮಾಡಿಸಿಕೊಟ್ಟ ಉದಾಹರಣೆಗಳೂ ಉಂಟು.
ಪ್ರಾರಂಭೋತ್ಸವದ ಎರಡು ದಿನ ಮುನ್ನ ಶಾಲಾ ಸ್ವಚ್ಛತಾ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುತ್ತದೆ. ಶಾಲಾ ಕೊಠಡಿ, ಶೌಚಗೃಹ, ಅಡುಗೆ ಕೋಣೆ, ಹೊರಾಂಗಣಗಳನ್ನು ಶುಚಿಗೊಳಿಸಲಾಗುತ್ತದೆ. ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ. ಆದರೆ, ಅನೇಕ ಕಡೆ ಶಿಕ್ಷಕರು ತಾವೇ ಖುದ್ದು ಮತ್ತೆ ಕೆಲವು ಕಡೆ ಕೂಲಿ ಕಾರ್ವಿುಕರನ್ನು ಬಳಸಿಕೊಂಡು ಸ್ವಚ್ಛತೆ ನೆರವೇರಿಸಿದ್ದಾರೆ. ಇದಕ್ಕೆ ಸರ್ಕಾರ ಯಾವುದೇ ಪ್ರತ್ಯೇಕ ಅನುದಾನ ನೀಡಿಲ್ಲ.

ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ವರದಿ ತರಿಸಿಕೊಳ್ಳಲಾಗಿದೆ. ಎ, ಬಿ, ಸಿ, ಡಿ ಎಂದು ವರ್ಗೀಕರಿಸ ಲಾಗಿದೆ. ಅವುಗಳಲ್ಲಿ ಡಿ ಕೆಟಗೆರಿಯಲ್ಲಿ ಯಲ್ಲಿರುವ ಶಾಲೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು.
|ಬಿ.ಸಿ. ನಾಗೇಶಶಿಕ್ಷಣ ಸಚಿವ
ಈಗಾಗಲೆ ಶೇ.65-70 ಪುಸ್ತಕ ಮುದ್ರಣವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಹಂತಕ್ಕೆ ಶೇ.52 ಪುಸ್ತಕ ತಲುಪಿವೆ. ಮುದ್ರಣ ಕಾಗದದ ಕೊರತೆ ಕಾರಣ ಪಠ್ಯಪುಸ್ತಕ ಪೂರೈಕೆ ವಿಳಂಬವಾಗಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ತಲುಪಿಸುತ್ತೇವೆ. ಶಾಲಾರಂಭದ ದಿನಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯುತ್ತದೆ. ಹಾಗಾಗಿ ಪಠ್ಯಪುಸ್ತಕದ ಸಮಸ್ಯೆ ತಲೆದೋರುವುದಿಲ್ಲ.
|ಎಂ.ಪಿ.ಮಾದೇಗೌಡನಿರ್ದೇಶಕ, ಕರ್ನಾಟಕ ಪಠ್ಯಪುಸ್ತಕ ಸಂಘ
ಅತಿಥಿ ಶಿಕ್ಷಕರಿಗೆ ತರಬೇತಿ ಇಲ್ಲ!:ಶಿಕ್ಷಕರ ಕೊರತೆ ಕಾರಣ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಲಾ ಆರಂಭದಲ್ಲೇ 22 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದೆ. ಆದರೆ, ಕಲಿಕಾ ಚೇತರಿಕೆ ಕಾರ್ಯಕ್ರಮ ನಿರ್ವಹಿಸಲು ಅತಿಥಿ ಶಿಕ್ಷಕರಿಗೆ ತರಬೇತಿ ಇಲ್ಲ. ಕಾಯಂ ಶಿಕ್ಷಕರಿಗೆ ತರಬೇತಿ ನೀಡಿರುವುದರಿಂದ ಕಲಿಕಾ ಚೇತರಿಕೆ ಸುಲಭವಾಗುತ್ತದೆ. ಅತಿಥಿ ಶಿಕ್ಷಕರಿಂದ ಈ ಕಾರ್ಯಕ್ರಮ ಅನುಷ್ಠಾನ ಕಷ್ಟ ಸಾಧ್ಯ ಎಂಬ ಅಭಿಪ್ರಾಯ ಶೈಕ್ಷಣಿಕ ವಲಯದಲ್ಲಿ ವ್ಯಕ್ತವಾಗಿದೆ.
ವಿವಾದಕ್ಕೆ ಕಾರಣವಾಯ್ತು ಸೊಳ್ಳೆ ಸಾಯಿಸುವ ಬ್ಯಾಟ್​!; ಐಎಎಸ್​ ಅಧಿಕಾರಿ ವಿರುದ್ಧ ಕ್ರಿಕೆಟಿಗನ ಅಸಮಾಧಾನ

‘ವೀ ಆರ್​ ವಿದ್​ ಯೂ VR..’ ಅಂದ್ರು ಸಲ್ಮಾನ್​ ಖಾನ್​; ಬಹಿರಂಗವಾಯ್ತು ಬಿಗ್​ ಅಸೋಸಿಯೇಷನ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
